ಕೆ. ಆರ್. ಮಾರುಕಟ್ಟೆ ಹಾಗೂ ಶಿವಾಜಿನಗರದ ರಸೆಲ್ ಮಾರುಕಟ್ಟೆಗಳಲ್ಲಿ ವಾರಾಂತ್ಯದಲ್ಲಿ ಜನವೋ ಜನ. ಫುಟ್‌ಪಾತ್‌ಗಳೆಲ್ಲ ‘ಹೌಸ್‌ಫುಲ್’ ಎನ್ನುವಂಥ ವಾತಾವರಣ. ಸಿಕ್ಕ ರಸ್ತೆಗಳಲ್ಲೆಲ್ಲ ವ್ಯಾಪಾರದ್ದೇ ಭರಾಟೆ. ಎರಡು ತಿಂಗಳ ಹಿಂದೆಯಷ್ಟೇ ಬೆಂಗಳೂರು ಮಹಾನಗರ ಪಾಲಿಕೆಯವರು ಎರಡೂ ಮಾರುಕಟ್ಟೆ ಪ್ರಾಂಗಣದ ಒತ್ತುವರಿಯನ್ನು ತೆರವು ಮಾಡಿ ಬ್ಯಾರಿಕೇಡ್ ಹಾಕಿದ್ದರು. ಆದರೇನಂತೆ ಪಟ್ಟು ಬಿಡದ ವ್ಯಾಪಾರಿಗಳು ಮತ್ತೆ ದಾಂಗುಡಿ ಇಟ್ಟಿದ್ದಾರೆ.
ರಸೆಲ್ ಮಾರುಕಟ್ಟೆಯ ನಾಲ್ಕೂ ದಿಕ್ಕಿನ ರಸ್ತೆಗಳು ಮತ್ತೆ ಕಳೆಗಟ್ಟಿವೆ. ಬಟ್ಟೆ, ಹೂ–ಹಣ್ಣು, ಪಾದರಕ್ಷೆ, ಆಟಿಕೆ ಸೇರಿದಂತೆ ಎಲ್ಲ ರೀತಿಯ ಸಾಮಗ್ರಿಗಳೂ ಫುಟ್‌ಪಾತ್ ದಾಟಿಕೊಂಡು ಅರ್ಧರಸ್ತೆಗಿಳಿದಿವೆ. ವಾಹನಗಳು ಓಡಾಡುವುದಿರಲಿ, ಗ್ರಾಹಕರೂ ಕಾಲಿಡದಂಥ ಪರಿಸ್ಥಿತಿ. ದೊಡ್ಡ ವಾಹನಗಳಿಗೆ ಜಾಗವೇ ಇಲ್ಲವೆನ್ನುವ ಹಾಗಾಗಿದೆ.
ಕೆ.ಆರ್. ಮಾರುಕಟ್ಟೆಯ ಸ್ಥಿತಿಯೂ ಭಿನ್ನವೇನಿಲ್ಲ. ಮಾರುಕಟ್ಟೆಯ ನೆಲಮಹಡಿ ಯಲ್ಲಿರುವ ಪಾರ್ಕಿಂಗ್ ಜಾಗಕ್ಕೆ ಹೋಗುವ ರಸ್ತೆಯನ್ನು ಹೊರತುಪಡಿಸಿದರೆ, ಉಳಿದ ಕಡೆಯಲ್ಲೆಲ್ಲ ವ್ಯಾಪಾರಿಗಳು ಠಿಕಾಣಿ ಹೂಡಿದ್ದಾರೆ. ರಸ್ತೆಯನ್ನು ಹುಡುಕುವುದಷ್ಟೇ ಬಾಕಿ. ತರಕಾರಿ, ಸೊಪ್ಪು, ಹೂವು, ಹಣ್ಣು, ಎಲೆ, ಪೂಜಾ ಸಾಮಗ್ರಿ ಮಾರಾಟಗಾರರು ನಡುರಸ್ತೆಯಲ್ಲೇ ದೈನದಿಂನ ವ್ಯಾಪಾರ ಶುರುಹಚ್ಚಿಕೊಂಡಿದ್ದಾರೆ.
ತೆರವು ಮಾಡಿದ್ದು ಏಕೆ?
ಒಂದು ವೇಳೆ ಅಗ್ನಿ ಅವಘಡಗಳು ಸಂಭವಿಸಿದರೆ ಅದನ್ನು ನಿಗ್ರಹಿಸಲು ಅನುಕೂಲವಾಗುವಂತೆ ಮಾರುಕಟ್ಟೆಗಳ ಪ್ರಾಂಗಣಗಳನ್ನು ಒತ್ತುವರಿದಾರರಿಂದ ಮುಕ್ತಗೊಳಿಸಲಾಗಿತ್ತು. ಅಗ್ನಿಶಾಮಕ ವಾಹನ ಹಾಗೂ ಆ್ಯಂಬುಲೆನ್ಸ್ ವಾಹನಗಳು ಸುಲಭವಾಗಿ ಮಾರುಕಟ್ಟೆಯನ್ನು ತಲುಪಲು ನೆರವಾಗುವಂತೆ ನಾಲ್ಕೂ ದಿಕ್ಕಿನಲ್ಲಿ ರಸ್ತೆಗಳನ್ನು ಖಾಲಿ ಮಾಡಿಸಲಾಗಿತ್ತು. ರಂಜಾನ್ ಮಾಸ ಆರಂಭಕ್ಕೆ ಒಂದು ವಾರ ಬಾಕಿಯಿದ್ದಾಗ ರಸೆಲ್ ಮಾರುಕಟ್ಟೆಯ ಸುತ್ತಮುತ್ತ ಅನಧಿಕೃತವಾಗಿ ಅಂಗಡಿ ಹೂಡಿ ವ್ಯಾಪಾರ ಮಾಡುತ್ತಿದ್ದ ವರ್ತಕರಿಗೆ ಆಘಾತ ಕಾದಿತ್ತು.
ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರ ನೆರವಿನಿಂದ ಪಾಲಿಕೆ ಅಧಿಕಾರಿಗಳು ರಸ್ತೆಯನ್ನು ಖಾಲಿ ಮಾಡಿಸಿದ್ದರು. ರಸ್ತೆಯುದ್ದಕ್ಕೂ ಇದ್ದ ಅಂಗಡಿಯವರು ನೆರಳಿಗೆಂದು ನಿರ್ಮಿಸಿಕೊಂಡಿದ್ದ ಕಮಾನುಗಳು, ನಾಮಫಲಕಗಳು ಬುಲ್ಡೋಜರ್‌ಗಳಿಗೆ ಆಹಾರವಾಗಿದ್ದವು. ವ್ಯಾಪಾರಿಗಳ ಯಾವ ಮಾತಿಗೂ ಸೊಪ್ಪು ಹಾಕದ ಅಧಿಕಾರಿಗಳು ಕ್ಷಣಾರ್ಧದಲ್ಲಿ ಮಾರ್ಗವನ್ನು ಮುಕ್ತಗೊಳಿಸಿದ್ದರು. ಮಾರುಕಟ್ಟೆಯ ಸಮೀಪದಲ್ಲಿದ್ದ ಪಾರ್ಕಿಂಗ್ ಜಾಗವೂ ಖಾಲಿಯಾಯಿತು.ಮಾರುಕಟ್ಟೆ ಹಾಗೂ ಅದಕ್ಕೆ ಹೊಂದಿಕೊಂಡ ರಸ್ತೆ ಮತ್ತು ಫುಟ್‌ಪಾತ್‌ಗಳ ಮೇಲೆ ನೆಲೆ ಕಂಡುಕೊಂಡ್ಡಿದ್ದ ವ್ಯಾಪಾರಿಗಳು, ಪಾರ್ಕಿಂಗ್ ನೋಡಿಕೊಳ್ಳುವವರು, ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿತ್ತು. ಈ ಘಟನೆಗೂ ಮುನ್ನ ಕೆ.ಆರ್. ಮಾರುಕಟ್ಟೆಯಲ್ಲೂ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿದ್ದರು.
ತೆರವು ಕಾರ್ಯಾಚರಣೆಯನ್ನು ಪಾಲಿಕೆ ಸಮರ್ಥಿಸಿಕೊಂಡಿತ್ತು. ‘ಬೆಂಕಿ ಅನಾಹುತ ಸಂಭವಿಸಿ, ಅಮಾಯಕ ಜೀವಗಳು ಬಲಿಯಾಗಬಾರದು ಎಂಬುದು ನಮ್ಮ ಕಳಕಳಿ. ಒಂದು ವೇಳೆ ಅನಾಹುತವಾದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನೇ ದೂರುತ್ತಾರೆ. ಮುನ್ನೆಚ್ಚರಿಕೆಯಾಗಿ ತೆಗೆದುಕೊಂಡ ಈ ಕ್ರಮ ಸರಿಯಾಗಿದೆ’ ಎಂದುಬಿಬಿಎಂಪಿ ವಿಶೇಷ ಆಯುಕ್ತ ಎಸ್.ಜಿ. ರವೀಂದ್ರ ಸಮರ್ಥಿಸಿಕೊಂಡಿದ್ದರು.
ಪಾಲಿಕೆ ಕಾರ್ಯಾಚರಣೆ ನಡೆಸಿ ಎರಡು ತಿಂಗಳು ಕಳೆದಿವೆಯಷ್ಟೇ. ಆದರೆ ಮಾರುಕಟ್ಟೆಗಳು ತಮ್ಮ ಮೂಲ ಸ್ವರೂಪಕ್ಕೆ ಮರಳಿವೆ. ಎಂದಿನಂತೆ ಕೊಳಚೆ, ತಿಪ್ಪೆಗುಂಡಿ, ಗಬ್ಬು ವಾಸನೆ ಮೇಳೈಸಿವೆ. ಇದಾವುದನ್ನೂ ಲೆಕ್ಕಿಸದ ಗ್ರಾಹಕರೂ ನಿತ್ಯದಂತೆ ಖರೀದಿಗೆ ಬರುತ್ತಿದ್ದಾರೆ.ಮಳೆ ಬಂದಿದ್ದರಿಂದ ರಸ್ತೆಗಳು ಕೊಚ್ಚೆಯಂತಾಗಿವೆ. ಬೀಡಾಡಿ ದನಗಳು ಆರಾಮವಾಗಿ ಓಡಾಡಿಕೊಂಡಿವೆ. ಇಂತಹ ಪರಿಸ್ಥಿತಿಯಲ್ಲೇ ಹಲವು ವ್ಯಾಪಾರಸ್ಥರು ವ್ಯಾಪಾರ ಮುಂದುವರಿಸಿದ್ದಾರೆ.
ಹಾಗಾದರೆ ಪಾಲಿಕೆ ಮಾಡಿದ್ದ ತೆರವು ಕಾರ್ಯಾಚರಣೆ ಹಾಗೂ ಆ ಬಳಿಕ ವಿಧಿಸಿದ್ದ ನಿರ್ಬಂಧಗಳು ಎಲ್ಲಿ ಹೋದವು. ಮಾರುಕಟ್ಟೆಗಳು ಯಥಾಸ್ಥಿತಿಗೆ ಬರಲು ಏನು ಕಾರಣ ಎಂದು ರಸೆಲ್ ಮಾರುಕಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಪೇದೆಯೊಬ್ಬರನ್ನು ಪ್ರಶ್ನಿಸಿದರೆ ಅವರು ಹೇಳಿದ್ದೇ ಬೇರೆ. ‘ನಾನಿಲ್ಲಿ ಡ್ಯೂಟಿಗೆ ಬಂದು ನಾಲ್ಕು ದಿನಗಳಾಗಿವೆ. ಹಿಂದೆ ಏನಾಗಿತ್ತು ಎಂದು ಗೊತ್ತಿಲ್ಲ. ಖಾಲಿ ಮಾಡಿಸಲು ಸೂಚಿಸಿದರೆ ಅರ್ಧಗಂಟೆಯಲ್ಲಿ ಮಾಡಿಸುತ್ತೇವೆ. ನಮ್ಮ ಕಾರ್ಯಕ್ಕೆ ಸೂಕ್ತ ಬೆಂಬಲವೂ ಬೇಕು’ ಎಂದು ಉತ್ತರಿಸಿದರು.
ಸದ್ಯದಲ್ಲೇ ಎನ್‌ಒಸಿ ಸಿಗಲಿದೆ: ಬಿಬಿಎಂಪಿ
ಎರಡೂ ಮಾರುಕಟ್ಟೆಗಳಲ್ಲಿ ಒತ್ತುವರಿದಾರರನ್ನು ಕೋರ್ಟ್ ಆದೇಶದ ಮೇರೆಗೆ ಪಾಲಿಕೆ ವತಿಯಿಂದ ತೆರವುಗೊಳಿಸಲಾಗಿದೆ. ವ್ಯಾಪಾರಿಗಳು ಮತ್ತೆ ಅನಧಿಕೃತವಾಗಿ ಅಂಗಡಿ ಹಾಕಿಕೊಂಡು ವ್ಯಾಪಾರ ಮಾಡದಂತೆ ತಡೆಯಬೇಕಾದ್ದು ಪೊಲೀಸರು ಕರ್ತವ್ಯ. ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎನ್ನುತ್ತಾರೆ ಬಿಬಿಎಂಪಿ ವಿಶೇಷ ಆಯುಕ್ತರಾದ (ಮಾರುಕಟ್ಟೆ) ಎಸ್.ಜಿ.ರವೀಂದ್ರ.
‘ನಿತ್ಯ ನಿಗಾ ವಹಿಸುವ ಸಲುವಾಗಿ ಕೆ.ಆರ್. ಮಾರುಕಟ್ಟೆಯಲ್ಲಿ ಪೊಲೀಸರಿಗೆ ಸ್ಥಳವನ್ನೂ ನೀಡಲಾಗಿದೆ. ಪ್ರತೀ ಬಾರಿ ಆಯುಕ್ತರೇ ಸ್ಥಳಕ್ಕೆ ತೆರಳಿ ತೆರವುಗೊಳಿಸುವುದು ಆಗದ ಮಾತು. ಕೋರ್ಟ್ ಕೇಳಿರುವ 23 ಅಂಶಗಳಲ್ಲಿ ಈವರೆಗೆ ಕೆಲವನ್ನು ಪಾಲಿಸಲಾಗಿದೆ. ಅಗ್ನಿ ಅಗಘಡ ಸಂಭವಿಸಿದಾಗ ಅದನ್ನು ನಿರ್ವಹಿಸಲು ಬೇಕಾದ ವ್ಯವಸ್ಥೆಗಳನ್ನು ಮಾರುಕಟ್ಟೆ ಸಂಕೀರ್ಣದಲ್ಲಿ ಕಲ್ಪಿಸಬೇಕಿದೆ. ಮಾರುಕಟ್ಟೆಯಲ್ಲಿ ಇರುವ ಅಗ್ನಿಶಾಮಕ ಉಪಕರಣಗಳು ಕಾರ್ಯ ನಿರ್ವಹಿಸಲು ಎಷ್ಟು ಸಮರ್ಥವಾಗಿವೆಎಂಬ ಬಗ್ಗೆ ಸಮಗ್ರ ಆಡಿಟ್ ಆಗಬೇಕಾದ ಅಗತ್ಯವಿದೆ’ ಎನ್ನುತ್ತಾರೆ ಅವರು.
‘ನ್ಯಾಯಾಲಯ ಪ್ರಸ್ತಾಪಿಸಿರುವ 23 ಅಂಶಗಳ ಪೈಕಿ ಅಗ್ನಿ ಅವಘಡ ನಿರ್ವಹಣೆ ಪ್ರಮುಖವಾದುದು. ಅಗ್ನಿಶಾಮಕ ಇಲಾಖೆಯಿಂದ ಇನ್ನಷ್ಟೇ ಎನ್‌ಒಸಿ ಸಿಗಬೇಕಿದೆ. ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಅಗ್ನಿಶಾಮಕ ವ್ಯವಸ್ಥೆಗಳಲ್ಲಿ ಮಾರುಕಟ್ಟೆ ಸಂಕೀರ್ಣದಲ್ಲಿ ಅಳವಡಿಸಲಾಗುವುದು. ಕೋರ್ಟ್ ಕೇಳಿರುವ ಎಲ್ಲ ಅಂಶಗಳನ್ನೂ ಒಂದೊಂದಾಗಿ ಪೂರ್ತಿಗೊಳಿಸಲಾಗುತ್ತಿದೆ. ಇದಕ್ಕೆ ಸುಮಾರು ಆರು ತಿಂಗಳು ಸಮಯ ಹಿಡಿಯಬಹುದು’ ಎಂದು ರವೀಂದ್ರ ಅವರು ಹೇಳಿದರು.
ಪೂರಕ ಮಾಹಿತಿ: ಸಂಗೀತಾ ಗೊಂಧಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.