ADVERTISEMENT

ಕನ್ನಡಾಭಿಮಾನಿಯ ಕನ್ನಡ ಕಹಳೆ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 19:45 IST
Last Updated 31 ಅಕ್ಟೋಬರ್ 2019, 19:45 IST
ರಾಮಚಂದ್ರ
ರಾಮಚಂದ್ರ   

ನಗರದ ಅತ್ಯಂತ ಹಳೆಯ ಬಡಾವಣೆ ಚಾಮರಾಜಪೇಟೆ ಎರಡನೇ ಅಡ್ಡರಸ್ತೆಯಲ್ಲೊಂದು ತಿಂಡಿ ಕೇಂದ್ರವಿದೆ. ಹೋಟೆಲ್‌ ಎಂದುಕೊಂಡು ಒಳಹೊಕ್ಕರೆ, ಕನ್ನಡದ ಸೊಗಡು ಇಲ್ಲಿ ಕಾಣಸಿಗುತ್ತದೆ. ಕನ್ನಡದ ಮೇಲಿನ ಕೃ. ವೆಂ. ರಾಮಚಂದ್ರ ಅವರ ಅಪಾರ ಪ್ರೀತಿ ‘ಕನ್ನಡ ತಿಂಡಿ ಕೇಂದ್ರ’ ಆರಂಭಕ್ಕೆ ನಾಂದಿ.

ಕಾಯಕವೇ ಕೈಲಾಸವೆಂದು ನಂಬಿ ನಡೆಯುತ್ತಿದ್ದಾರೆ. ಮಧ್ಯಮ ವರ್ಗದ ನೆಚ್ಚಿನ ತಾಣವಾದ ಈ ಕನ್ನಡ ತಿಂಡಿ ಕೇಂದ್ರದಲ್ಲಿ ಆಟೋ ಚಾಲಕರು, ಸೇಲ್ಸ್ ಮ್ಯಾನ್ ಇಲ್ಲಿನ ಖಾಯಂ ಗಿರಾಕಿಗಳು. ಶುಚಿ- ರುಚಿಯಾದ ತಿನಿಸುಗಳು ಕಡಿಮೆ ಬೆಲೆಗೆ ದೊರೆಯುತ್ತದೆ; ಮನೆರುಚಿಯಂತಿರುತ್ತದೆ– 30 ರೂಪಾಯಿಗೆ ಇಲ್ಲಿ ಹೊಟ್ಟೆ ತುಂಬ ಊಟ ಮಾಡಬಹುದು ಎನ್ನುವುದು ಇಲ್ಲಿನ ವಿಶೇಷ.

ಕನ್ನಡದ ರುಚಿ ಹಂಚುವ ಕಾಯಕ
ಹೋಟೆಲ್‌ ಜೊತೆಜೊತೆಗೆ ಕನ್ನಡದ ರುಚಿ ಹಂಚುವ ಕಾಯಕವನ್ನು ಮಾಡುತ್ತಿದ್ದಾರೆ ಕನ್ನಡದ ಕಟ್ಟಾಳು ರಾಮಚಂದ್ರ. ಕನ್ನಡ ಓದುವ ಆಸಕ್ತಿಯನ್ನು ಹೆಚ್ಚು ಮಾಡಬೇಕು ಎಂದು ಹೋಟೆಲ್‍ನಲ್ಲಿ ಕನ್ನಡ ಪುಸ್ತಕಗಳು ಮತ್ತು ಪತ್ರಿಕೆಗಳನ್ನು ಉಚಿತವಾಗಿ ನೀಡುತ್ತಾರೆ.

ADVERTISEMENT

ಇಲ್ಲಿನ ತಿಂಡಿಗಳಿಗೆ ಕನ್ನಡ ಸಾಹಿತಿಗಳ ಹೆಸರನ್ನಿಟ್ಟಿದ್ದು, ವಿಶೇಷ ಬಗೆಯ ಮೆನು ನೋಡಿ ಮಕ್ಕಳು ಕೂಡ ಆಕರ್ಷಿತರಾಗಿದ್ದಾರೆ.ರಾಮಚಂದ್ರ ಅವರ ಕೆಲಸಕ್ಕೆ ಅಶ್ವಥನಾರಾಯಣ ಮತ್ತು ಬಾಣಸಿಗರಾದ ಆನಂದ್ ಮತ್ತು ರತ್ನಾಕರ್ ಬೆಂಬಲವಾಗಿದ್ದಾರೆ.

ಇದಿಷ್ಟೇ ಅಲ್ಲ, ಈಗ ‘ಅಂಗಾಂಗ ದಾನ’ದ ಬಗ್ಗೆಯೂ ರಾಮಚಂದ್ರ ಜಾಗೃತಿ ಮೂಡಿಸುತ್ತಿದ್ದಾರೆ. ಮರಣಾ ನಂತರ ಅಂಗಾಂಗ ದಾನದ ಬಗ್ಗೆ ನಾಗರಿಕರಲ್ಲಿ ಅರಿವನ್ನುಂಟು ಮಾಡುವ ಆಂದೋಲನದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಬಾರಿ ವಿಶಿಷ್ಟವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ತಿಂಡಿ ಕೇಂದ್ರ ಸಿದ್ಧವಾಗಿದೆ. ಉತ್ತಮವಾಗಿ ಸಾರ್ವಜನಿಕ ಸೇವೆಸಲ್ಲಿಸಿದ ಪೌರ ಕಾರ್ಮಿಕರು , ಆಟೋಚಾಲಕರು , ಪತ್ರಿಕಾ ವಿತರಕರು, ಬೆ.ವಿ.ಕಂ ಹಾಗೂ ಜಲಮಂಡಳಿ ನೌಕರರು ಹಾಗೂ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಸಿಬ್ಬಂದಿಗೆ ಗೌರವ ಸಮರ್ಪಿಸುವ ಮೂಲಕ ರಾಜ್ಯೋತ್ಸವವನ್ನು ಆಚರಿಸಲಿದ್ದಾರೆ.

ಕನ್ನಡ ತಿಂಡಿಕೇಂದ್ರದಲ್ಲಿ ಕನ್ನಡ ರಾಜ್ಯೋತ್ಸವ: ಸಹಕಾರಿ ಸಂತ ಹಾಗೂ ನಾಡಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ. ಅಧ್ಯಕ್ಷತೆ– ಕೃ. ವೆಂ. ಅಶ್ವಥನಾರಾಯಣ, ಅತಿಥಿ– ನಳಿನಿ ಶಿವಶಂಕರ್‌, ಸಹಕಾರಿ ಸಂತ ಪ್ರಶಸ್ತಿ ಪುರಸ್ಕೃತರು– ಕೆ. ರಾಮಕೃಷ್ಣ, ನಾಡಭೂಷಣ ಪ್ರಶಸ್ತಿ ಪುರಸ್ಕೃತರು– ಎಂ.ಆರ್‌. ಶಿವಶಂಕರ್, ಎಂ.ವಿ. ಶಂಕರನಾರಾಯಣ, ಅನಿಲ್‌ಕುಮಾರ್‌ ಜಮದಗ್ನಿ, ಕಲ್ಗುಂಡಿ ನವೀನ್‌, ನ.ಶ್ರೀ. ಸುಧೀಂದ್ರ ರಾವ್, ಎನ್ .ಮಾಲಿನಿ, ಮುರಳಿಧರ, ನಾಗೇಂದ್ರ ಜೋಯಿಸ್‌. ಸ್ಥಳ– ಕನ್ನಡದ ತಿಂಡಿ ಕೇಂದ್ರ, ಚಾಮರಾಜಪೇಟೆ, ಬೆಳಿಗ್ಗೆ 11.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.