ಕನ್ನಡ ಮೈತ್ರಿ ಟ್ರಸ್ಟ್ ಹಾಗೂ ಕನ್ನಡ ನಿತ್ಯೋತ್ಸವ.ಕಾಮ್ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ‘ಕನ್ನಡ ನಿತ್ಯೋತ್ಸವ ವರ್ಷ– ಸ್ಪಿರಿಟ್ ಆಫ್ ಕನ್ನಡ ಬೆಂಗಳೂರು’ ಎಂಬ ಹೆಸರಿನಲ್ಲಿ ವಿಶಿಷ್ಟವಾಗಿ ಆಚರಿಸುತ್ತಿದೆ. ‘ನಾನು ಕನ್ನಡದಲ್ಲಿ ಮಾತನಾಡಲು ಹೆಮ್ಮೆ ಪಡುತ್ತೇನೆ..,’ ಎಂಬುದು ಈ ಕಾರ್ಯಕ್ರಮದ ಧ್ಯೇಯವಾಕ್ಯ.
ಕನ್ನಡಿಗರು ಮತ್ತು ಕನ್ನಡೇತರರ ನಡುವೆ ಸಂಪರ್ಕ-ಸೇತುವಾಗಿ ಕಾರ್ಯನಿರ್ವಹಿಸಲು, ಕನ್ನಡನಾಡು-ನುಡಿ, ಸಂಸ್ಕೃತಿ ಪರಂಪರೆಗಳ ಹಿರಿಮೆ-ಗರಿಮೆಗಳನ್ನು ಪರಿಚಯಿಸಲು ಹಾಗೂ ಸ್ನೇಹದ ನೆಲೆಯಲ್ಲಿ ಅನ್ಯಭಾಷಿಕರನ್ನು ಕನ್ನಡದ ಮುಖ್ಯ ವಾಹಿನಿಗೆ ಕರೆತರಬೇಕೆಂಬ ಉದ್ದೇಶದಿಂದ ‘ಕನ್ನಡ ಮೈತ್ರಿ ಟ್ರಸ್ಟ್’ ಅನ್ನು ಎನ್. ರವಿಶಂಕರ್ ಅವರು ಆರಂಭಿಸಿದ್ದಾರೆ. ಈಗ ಈ ಸಂಸ್ಥೆ ಕನ್ನಡನಿತ್ಯೋತ್ಸವ.ಕಾಮ್ ಸಹಯೋಗದೊಂದಿಗೆ ನಗರದಲ್ಲಿ ಕನ್ನಡ ಬಾರದವರು ಕನ್ನಡವನ್ನು ಸ್ವಯಂ ಸ್ಪೂರ್ತಿಯಿಂದ ಕಲಿಯುವಂತೆ ಪ್ರೇರೇಪಿಸುವ ಒಂದು ವಿಶಿಷ್ಟವಾದ ಯೋಜನೆಯನ್ನು ಆರಂಭಿಸಿದೆ.
ಈ ಯೋಜನೆಯು 2019ರ ನ.1 ರಿಂದ ಆರಂಭಗೊಂಡು 30 ನವೆಂಬರ್ 2020 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಯೋಜನೆಯಲ್ಲಿ ಪರಭಾಷಿಕರು ಮಾತ್ರವಲ್ಲದೆ ಕನ್ನಡಪರ ಸಂಘ-ಸಂಸ್ಥೆಗಳು, ಕನ್ನಡಿಗರೆಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಬಹುದಾಗಿದೆ. ಒಂದು ವರ್ಷದ ಅವಧಿಯಲ್ಲಿ ಬೆಂಗಳೂರಿನ ಸುಮಾರು 5 ಲಕ್ಷ ಮಂದಿ ಕನ್ನಡೇತರರಿಗೆ ಕನಿಷ್ಟ ‘ಮಾತನಾಡುವ ಕನ್ನಡ’ವನ್ನು ಕಲಿಸುವ ಗುರಿ ಹೊಂದಿದೆ.
ಈ ಗುರಿಯನ್ನು ತಲುಪಲು ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಬ್ಬರಂತೆ ನಮ್ಮ ನಾಡಿನ ಹೆಸರಾಂತ ಗಣ್ಯರೋರ್ವರನ್ನು ‘ಮುಖ್ಯ ಸ್ಪೂರ್ತಿದಾಯಕ ವ್ಯಕ್ತಿ’ ಎಂದು ನೇಮಿಸಲಾಗುವುದು. ಹೀಗೆ ನಿಯೋಜಿತರಾದ ಮುಖ್ಯ ಸ್ಪೂರ್ತಿದಾಯಕ ವ್ಯಕ್ತಿಗಳು ತಮ್ಮ ಅಡಿಯಲ್ಲಿ ಐವರು ‘ಸ್ಪೂರ್ತಿದಾಯಕ ವ್ಯಕ್ತಿ’ ಗಳನ್ನು ನೇಮಿಸುತ್ತಾರೆ. ಈ ಐವರಲ್ಲಿ ತಲಾ ಒಬ್ಬರು ತಮ್ಮ ಅಡಿಯಲ್ಲಿ ಮತ್ತೆ ಐವರು ಸ್ಪೂರ್ತಿದಾಯಕ ವ್ಯಕ್ತಿಗಳನ್ನು ನೇಮಿಸುತ್ತಾರೆ. ಹೀಗೆಯೇ ಇದೊಂದು ಸರಣಿ ರೂಪದಲ್ಲಿ ಸಂಘಟನಾತ್ಮಕವಾಗಿ ಬೆಳೆದು, ಒಂದು ನಿರ್ದಿಷ್ಟ ಕ್ಷೇತ್ರದ ಮುಖ್ಯ ಸ್ಪೂರ್ತಿದಾಯಕ ವ್ಯಕ್ತಿಯ ಅಡಿಯಲ್ಲಿ ಎಷ್ಟು ಮಂದಿ ಬೇಕಾದರೂ ನೇಮಕಗೊಳ್ಳಬಹುದು.
ಹೀಗೆ ನೇಮಕಗೊಂಡ ಪ್ರತಿಯೊಬ್ಬ ಸ್ಪೂರ್ತಿದಾಯಕ ವ್ಯಕ್ತಿಯೂ ಕನಿಷ್ಠ 10 ಮಂದಿ ಕನ್ನಡ ಬಾರದವರನ್ನು ಕನ್ನಡ ಕಲಿಯುವಂತೆ ಪ್ರೇರೇಪಿಸಬೇಕು. ಅವರನ್ನು ಈ ಯೋಜನೆಯಲ್ಲಿ ನಿಗದಿತ ಅರ್ಜಿ ನಮೂನೆಯ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು. ಒಟ್ಟಾರೆ ನಡೆಯುವ ಈ ಪ್ರಕ್ರಿಯೆಯಲ್ಲಿ ನೋಂದಾಯಿತರಾದ ಕನ್ನಡ ಬಾರದವರಿಗೆ ಅವರು ಇಚ್ಚಿಸಿದ ರೀತಿಯಲ್ಲಿ, ಅನುಕೂಲಕ್ಕೆ ತಕ್ಕಂತೆ ಕನ್ನಡವನ್ನು ವ್ಯವಸ್ಥಿತವಾಗಿ ಕೇಂದ್ರದ ಮೂಲಕ ಕಲಿಸಲಾಗುತ್ತದೆ ಎಂದು ಕನ್ನಡನಿತ್ಯೋತ್ಸವ. ಕಾಮ್ ಸಿಇಒ ನವೀನ್ ಬಿಲ್ಲವ ಮಾಹಿತಿ ನೀಡಿದರು.
ವಾಟ್ಸ್ ಆಫ್, ದೂರವಾಣಿ ಕರೆ, ಕಲಿಕಾ ಕೇಂದ್ರಗಳ ಮೂಲಕ ನಿಯೋಜಿತ ಸಂಪನ್ಮೂಲ ವ್ಯಕ್ತಿಗಳುಕನ್ನಡವನ್ನು ಕಲಿಸುತ್ತಾರೆ. ಕನ್ನಡ ಕಲಿಯುವ ಆಸಕ್ತಿ ಉಳ್ಳವರಿಂದ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ.
ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಮುಂದಿನ ವರ್ಷದ ಕನ್ನಡ ರಾಜ್ಯೋತ್ಸವಕ್ಕೆ ಪ್ರತಿ ಕ್ಷೇತ್ರದ ‘ಮುಖ್ಯ ಸ್ಪೂರ್ತಿದಾಯಕ ವ್ಯಕ್ತಿ’ಗಳಿಗೆ ‘ಸ್ಪಿರಿಟ್ ಆಫ್ ಕನ್ನಡ ಆದರ್ಶ ವ್ಯಕ್ತಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಅತಿ ಹೆಚ್ಚು ಕನ್ನಡ ಬಾರದವರನ್ನು ಕನ್ನಡ ಕಲಿಯುವ ಆಕಾಂಕ್ಷಿಗಳನ್ನಾಗಿಸಿ ಅವರ ಹೆಸರುಗಳನ್ನು ನೋಂದಾಯಿಸುವ ಪ್ರತಿ ಕ್ಷೇತ್ರದ ಐದು ಮಂದಿ ಸಾಧಕರಿಗೆ ‘ಸ್ಪಿರಿಟ್ ಆಫ್ ಕನ್ನಡ ಪ್ರೇರಣಾ ವ್ಯಕ್ತಿ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಗಮನಾರ್ಹ ಕನ್ನಡ ಕಲಿಕಾ ಸಾಧನೆ ಮಾಡಿದ ಕನ್ನಡೇತರರಿಗೆ ‘ಸ್ಪಿರಿಟ್ ಆಫ್ ಕನ್ನಡ ಬೆಂಗಳೂರು’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ವಿವರಗಳಿಗೆ– # 10, ಚಿಕ್ಕಣ್ಣ ಕಾಂಪ್ಲೆಕ್ಸ್, ಒರಾಯನ್ ಈಸ್ಟ್ ಮಾಲ್ ಎದುರು, ಮಾರುತಿ ಸೇವಾನಗರ, ಬಾಣಸವಾಡಿ ಮುಖ್ಯರಸ್ತೆ. ಮೊ: 9480080886, 8951856685, 9110275499
website: www.kannadanithyotsava.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.