ಮುನಿರತ್ನಂ ನಿರ್ಮಾಣ ಮತ್ತು ನಾಗಣ್ಣ ನಿರ್ದೇಶನದ’ಕುರುಕ್ಷೇತ್ರ’ ಸಿನಿಮಾಧ್ವನಿಸುರುಳಿ ಬಿಡುಗಡೆಗೆ ಭಾನುವಾರ (ಜುಲೈ 7) ಕೋರಮಂಗಲದ ಕ್ರೀಡಾಂಗಣದಲ್ಲಿ ಜನಸಾಗರವೇ ಅಲ್ಲಿ ನೆರೆದಿತ್ತು.
‘ಪೌರಾಣಿಕ ಚಲನಚಿತ್ರ ಮಾಡಬೇಕೆಂದು ಚಿಂತನೆ ಮೂಡಿದಾಗ ಮೊದಲು ನೆನಪಿಗೆ ಬಂದದ್ದು ಕುರುಕ್ಷೇತ್ರ. ಹೀಗಾಗಿ ಕುರುಕ್ಷೇತ್ರಕ್ಕೆ ಸಿನಿಮಾ ರೂಪ ನೀಡುವ ಕೆಲಸ ಪ್ರಾರಂಭವಾಯಿತು. ಬಾಹುಬಲಿ ಸಿನಿಮಾಕ್ಕಿಂತ ನಮ್ಮ ಚಿತ್ರ ಖಂಡಿತ ಚೆನ್ನಾಗಿದೆ. ಸಿನಿ ರಸಿಕರು ಸಿನಿಮಾವನ್ನು ಗೆಲ್ಲಿಸಬೇಕು’ ಎಂಬ ಭರವಸೆಯ ಮಾತುಗಳನ್ನು ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಕರತಾಡನ.
ಐದು ಭಾಷೆಗಳಲ್ಲಿ ಚಿತ್ರ ಬಿಡುಗಡೆ
ಸತತ ಮೂರು ವರ್ಷಗಳ ಶ್ರಮದ ಫಲವಾಗಿ ಕುರುಕ್ಷೇತ್ರ ಸಿನಿಮಾ ರೂಪ ಪಡೆದಿದೆ. ರಾಕ್‌ಲೈನ್ ವೆಂಕಟೇಶ್ ಐದು ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಹೊಣೆ ಹೊತ್ತಿದ್ದಾರೆ. ಇದು ಅಧಿಕ ಬಜೆಟ್ ಸಿನಿಮಾ. ಕನ್ನಡ, ಮಲಯಾಳಂ, ಹಿಂದಿ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಮೂಡಿಬರಲಿದೆ.
ಆಗಸ್ಟ್ 2ರಂದು ಸಿನಿಮಾ ಬಿಡುಗಡೆ
ಮೂರು ವರ್ಷಗಳ ಕಾಲರಾಮೂಜಿ ಫಿಲಂ ಸಿಟಿಯಲ್ಲಿ ಸಂಪೂರ್ಣ ಚಿತ್ರೀಕರಣಗೊಂಡ ಕುರುಕ್ಷೇತ್ರ ಸಿನಿಮಾ ಆಗಸ್ಟ್ 2ರಂದು ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. 3ಡಿ ಪರಿಣಾಮದಲ್ಲೂ ಚಿತ್ರ ವೀಕ್ಷಿಸಬಹುದು.
ನಾಗೇಂದ್ರ ಗೀತ ರಚನೆ/ಹರಿಕೃಷ್ಣ ಸಂಗೀತ
ಡಾ.ವಿ.ನಾಗೇಂದ್ರ ಪ್ರಸಾದ್ ರಚಿಸಿರುವ ಕುರುಕ್ಷೇತ್ರ ಸಿನಿಮಾದ ’ಸಾಹೋರೆ ಸಾಹೊ’ ಹಾಡು ಕರ್ನಾಟಕದಾದ್ಯಂತ ಅಭಿಮಾನಿಗಳನ್ನು ರಂಜಿಸುತ್ತಿದೆ. ’ಕನ್ನಡ ನಾಟಕ ಪರಂಪರೆಯಲ್ಲಿ ದ್ರಾವಿಡ ಭಾಷೆಯಲ್ಲಿ ಸಾಹೋರೆ ಸಾಹೊ ಪದ ಹೆಚ್ಚಾಗಿ ಬಳಕೆಯಾಗುತ್ತಿತ್ತು, ನನಗೆ ಕುರುಕ್ಷೇತ್ರ ಸಿನಿಮಾದಲ್ಲಿ ಈ ಪದವನ್ನು ಬಳಕೆಮಾಡಬೇಕು ಎನಿಸಿದಾಗ ಅದಕ್ಕೆ ತಕ್ಕ ಸಂಗೀತದ ಮೆರುಗು ನೀಡಿದ್ದು ವಿ. ಹರಿಕೃಷ್ಣ. ನಟ ದರ್ಶನ್ ಅವರ ಸಿನಿಮಾಗಳಲ್ಲಿಯೂ ಬಹುತೇಕ ಹಾಡುಗಳನ್ನು ನಾನೇ ಬರೆದಿದ್ದೇನೆ. ಎಲ್ಲಾ ಹಾಡುಗಳು ಯಶಸ್ಸನ್ನು ಕಂಡಿವೆ’ ಎನ್ನುತ್ತಾರೆ ವಿ.ನಾಗೇಂದ್ರ ಪ್ರಸಾದ್.
ವಿ.ಹರಿಕೃಷ್ಣ ಅವರು ದರ್ಶನ್ ಅಭಿನಯದ 50 ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಪೌರಾಣಿಕ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದುಇದೇ ಮೊದಲು.
ದೀಪ ಬೆಳಗಿದ ಅಭಿಮಾನಿಗಳು
‘ಕುರುಕ್ಷೇತ್ರ ನನ್ನ ಹೆಗ್ಗುರುತು ಚಿತ್ರವಾಗಿದೆ. ಅಭಿಮಾನಿಗಳು ನನಗೆ ಸೋಲು ನೀಡಿಲ್ಲ. ಅಭಿಮಾನಿಗಳು ಈ ಸಿನಿಮಾ ಗೆಲ್ಲಿಸುವ ಬಹು ನಿರೀಕ್ಷೆಯಿದೆ’ ಎಂದು ನಟ ದರ್ಶನ್ ಹೇಳುತ್ತಿದ್ದಂತೆ ಅಭಿಮಾನಿಗಳು ಚಪ್ಪಾಳೆಯೊಂದಿಗೆ ಪ್ರೋತ್ಸಾಹ ನೀಡಿದರು.
ಕುರುಕ್ಷೇತ್ರ ಸಿನಿಮಾದ ಕಿರುಚಿತ್ರವನ್ನು ವೇದಿಕೆಯಲ್ಲಿ ದರ್ಶನ್ ಸಮ್ಮುಖದಲ್ಲಿ ಪ್ರದರ್ಶಿಸಲಾಯಿತು. ಈ ವೇಳೆ ದರ್ಶನ್ ಅಭಿಮಾನಿಗಳು ತಮ್ಮ ಮೊಬೈಲ್ ಬ್ಯಾಟರಿ ದೀಪ ಬೆಳಗಿಸಿ ಸಂಭ್ರಮಿಸಿದರು.
ಪೊಲೀಸರೊಂದಿಗೆ ಅಭಿಮಾನಿಗಳ ಜಟಾಪಟಿ
ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದ ದರ್ಶನ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಎಂಟ್ರೀ ಪಡೆಯಲು ಕಾತುರದಿಂದ ಕಾದಿದ್ದರು. ಪಾಸ್ ಹೊಂದಿದ್ದರೂ ಜನ ಸಮೂಹಕ್ಕೆ ಪ್ರವೇಶ ನೀಡಲು ಪೊಲೀಸರು ಅವಕಾಶ ಮಾಡಿಕೊಡಲಿಲ್ಲ. ಇದರಿಂದ ಅಭಿಮಾನಿಗಳು ಹಾಗೂ ಪೊಲೀಸರ ನಡುವೆ ಜಟಾಪಟಿ ನಡೆಯಿತು. ಮಾತಿನ ಚಕಾಮಕಿಯೂ ನಡೆಯಿತು. ಅಭಿಮಾನಿಗಳು ಪೊಲೀಸರ ವಿರುದ್ಧ ದಿಕ್ಕಾರವನ್ನೂ ಕೂಗಿದರು. ಮಹಿಳೆಯರು ಹಾಗೂ ಮಕ್ಕಳು ತುಂಬ ಪರದಾಡುವಂತಾಯಿತು. ಇದರಿಂದ ಬೇಸರಗೊಂಡ ಕೆಲವರು ಮನೆಗೆ ಹಿಂದಿರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.