ADVERTISEMENT

ಹಿರಿಯ ಮಹಿಳಾ ಸೌಂದರ್ಯ ಸ್ಪರ್ಧೆ: ಬೆಂಗಳೂರು ಮಹಿಳೆಗೆ ಕಿರೀಟ

ಥಾಯ್ಲೆಂಡ್‌‌ನಲ್ಲಿ ನಡೆದ 30 ರಿಂದ 40 ವರ್ಷದೊಳಗಿನ ಅವಿವಾಹಿತ ಮಹಿಳೆಯರ ಸೌಂದರ್ಯ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 19:30 IST
Last Updated 13 ಡಿಸೆಂಬರ್ 2019, 19:30 IST
ಅತಿಥಿಗಳ ಜೊತೆ ರೂಪದರ್ಶಿಯರು
ಅತಿಥಿಗಳ ಜೊತೆ ರೂಪದರ್ಶಿಯರು   

ಈಗ ಫ್ಯಾಷನ್‌ ಲೋಕದ ಟ್ರೆಂಡ್‌ ಬದಲಾಗಿದೆ. ಮೊದಲೆಲ್ಲಾ 25 ವರ್ಷಕ್ಕಿಂತ ಕಡಿಮೆ ಇರುವವರಿಗೆ ಮಾತ್ರ ಫ್ಯಾಷನ್‌ ಲೋಕದಲ್ಲಿ ಅವಕಾಶಗಳಿದ್ದವು. ಆದರೆ ಈಗ ಮಧ್ಯವಯಸ್ಕ ಮಹಿಳೆಯರಿಗೂ ಇಲ್ಲಿ ಅನೇಕ ಅವಕಾಶಗಳಿದ್ದು, ಸೌಂದರ್ಯ ಹಾಗೂ ಪ್ರತಿಭೆ ಪ್ರದರ್ಶನಕ್ಕೆ ಅವಕಾಶಗಳು ಹೇರಳವಾಗಿವೆ.

ಇದಕ್ಕೆ ಉದಾಹರಣೆ ಮಹಾಲಕ್ಷ್ಮೀ ಲೇಔಟ್‌ನ ಆಶಾ. ಈಚೆಗೆ ಥಾಯ್ಲೆಂಡ್‌ನಲ್ಲಿ ನಡೆದ ‘ಮಿಸ್‌ ಬ್ಯೂಟಿ’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ವಿಜೇತೆಯಾಗಿ ಹೊರಹೊಮ್ಮಿದ್ದಾರೆ. ಆಶಾ 30ರಿಂದ 40 ವರ್ಷದ ಅವಿವಾಹಿತ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಈ ಸ್ಪರ್ಧೆಗೆ ದುಬೈ, ಸಿಂಗಪುರ, ಥಾಯ್ಲೆಂಡ್‌, ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದರು.

ಆಶಾ ಅವರು ಬ್ಯುಸಿನೆಸ್‌ವುಮೆನ್‌. ಪೀಣ್ಯದಲ್ಲಿ ‘ಕಾರೊನೆಟ್‌ ಎಕ್ಸ್‌ಪೋರ್ಟ್‌ ಆ್ಯಂಡ್‌ ಇಂಪೋರ್ಟ್‌’ ಎಂಬ ಸ್ವಂತ ಕಂಪೆನಿಯನ್ನು ಹೊಂದಿದ್ದಾರೆ. ಅವರಿಗೆ ಸಣ್ಣವಯಸ್ಸಿನಿಂದಲೂ ರೂಪದರ್ಶಿಯಾಗುವ ಹಂಬಲವಿತ್ತು. ಆದರೆ ಕಾಲೇಜು, ಓದು ಇದರ ನಡುವೆ ಅವರಿಗೆ ಮಾಡೆಲಿಂಗ್‌ ಮಾಡುವ ಅವಕಾಶ ಹಾಗೂ ಸಮಯವೂ ಲಭಿಸಿರಲಿಲ್ಲ. ಓದು ಮುಗಿಸಿದ ಬಳಿಕ ವ್ಯವಹಾರ ಆರಂಭಿಸಿದ ಅವರು, ಅದರಲ್ಲೇ ಮುಂದುವರಿದಿದ್ದರು.

ADVERTISEMENT

ಆದರೆ ಅವರ ಸುಪ್ತ ಮನಸ್ಸಿನಲ್ಲಿ ಮಾಡೆಲಿಂಗ್‌, ಫ್ಯಾಷನ್‌ ಲೋಕದ ಬಗೆಗಿನ ಕುತೂಹಲ ಹಾಗೇ ಉಳಿದಿತ್ತು. ಈಚೆಗೆ ಮಧ್ಯವಯಸ್ಕ ಮಹಿಳೆಯರು ಸಹ ಮಾಡೆಲಿಂಗ್‌, ಸೌಂದರ್ಯ ಸ್ಪರ್ಧೆಯಲ್ಲಿ ಗುರುತಿಸಿಕೊಳ್ಳುವುದು ಟ್ರೆಂಡ್‌ ಆಗಿರುವುದನ್ನು ಗಮನಿಸಿದ ಅವರು, ತಮ್ಮ ಸ್ನೇಹಿತರೊಬ್ಬರ ಬಳಿ ಈ ಬಗ್ಗೆ ಚರ್ಚಿಸಿದ್ದರು. ಆಗ ಅವರಿಗೆ ‘ಬುಕ್‌ ಮೈ ಕಾರ್ಬೋ’ ಆಯೋಜಿಸಿದ ‘ಮಿಸ್‌ ಬ್ಯೂಟಿ’ ಸ್ಪರ್ಧೆಯ ಬಗ್ಗೆ ಮಾಹಿತಿ ಗೊತ್ತಾಗಿತ್ತು.

‘ಇದು ಸೌಂದರ್ಯ, ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ. ಸ್ಪರ್ಧೆಯಲ್ಲಿ ಪ್ರತಿಭಾ ಪ್ರದರ್ಶನದ ಸುತ್ತು, ವಸ್ತ್ರವಿನ್ಯಾಸ ಸುತ್ತು, ಸಾಂಪ್ರದಾಯಿಕ ಸುತ್ತು, ಕ್ರಿಯೇಟಿವ್‌ ವರ್ಕ್‌ ಹೀಗೆ ಅನೇಕ ಸುತ್ತುಗಳಿದ್ದವು. ಸಾಂಪ್ರದಾಯಿಕ ಸುತ್ತಿನಲ್ಲಿ ನಾನು ಲಕ್ಷ್ಮೀ ಅವತಾರದಲ್ಲಿ ಕಾಣಿಸಿಕೊಂಡಿದ್ದೆ. ಇದಕ್ಕೆ ತೀರ್ಪುಗಾರರಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು’ ಎನ್ನುತ್ತಾರೆ ಆಶಾ.

‘ಮಿಸ್‌ ಬ್ಯೂಟಿ ವಿತ್‌ ಪರ್ಪಸ್‌’ ಹಾಗೂ ‘ವುಮೆನ್‌ ವರ್ಲ್ಡ್‌ ಸೂಪರ್‌ ಮಾಡೆಲ್‌ ಗ್ಲೋಬಲ್‌’ ಎಂಬ ಪ್ರಶಸ್ತಿಗಳನ್ನು ಆಶಾ ಬಾಚಿಕೊಂಡಿದ್ದಾರೆ.

ಈ ಸ್ಪರ್ಧೆಗೂ ತೆರಳುವ ಮುನ್ನ ಆಶಾ, ಫಿಟ್‌ನೆಸ್‌ಗಾಗಿ ನಾಲ್ಕೈದು ತಿಂಗಳ ಕಾಲ ಕಠಿಣ ಆಹಾರ, ಪಥ್ಯ ಅನುಸರಿಸಿದ್ದರು. ವ್ಯಾಯಾಮ ಕ್ರಮಗಳನ್ನೂ ರೂಢಿಸಿಕೊಂಡಿದ್ದಾರೆ. ‘ತುಪ್ಪ, ಸಕ್ಕರೆಯನ್ನು ಸಂಪೂರ್ಣ ತ್ಯಜಿಸಿದ್ದೇನೆ. ಜೋಳದ ರೊಟ್ಟಿ, ಚಪಾತಿ, ರಾಗಿ ರೊಟ್ಟಿ, ತಾಜಾ ಹಣ್ಣುಗಳು, ಬೂದುಗುಂಬಳಕಾಯಿ ಜ್ಯೂಸ್‌, ಕಷಾಯ, ಒಣಹಣ್ಣುಗಳು ಇಷ್ಟೇ ನನ್ನ ಆಹಾರಪಟ್ಟಿಯಲ್ಲಿತ್ತು. ಅನ್ನವನ್ನು ಮುಟ್ಟುತ್ತಲೇ ಇರಲಿಲ್ಲ’ ಎಂದು ಹೇಳಿದ್ದಾರೆ.

‘ಭವಿಷ್ಯದಲ್ಲಿ ವ್ಯಾಪಾರ, ವ್ಯವಹಾರ ಎಂದು ಹೆಚ್ಚು ತಲೆಕೆಡಿಸಿಕೊಳ್ಳದೇ, ನನ್ನ ಕನಸುಗಳನ್ನು ಸಾಕಾರ ಮಾಡಿಕೊಳ್ಳುತ್ತೇನೆ. ಉತ್ಪನ್ನಗಳ ಜಾಹೀರಾತಿನಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೇನೆ’ ಎಂದು ಹೇಳುವ ಅವರಿಗೆ ಫ್ಯಾಷನ್‌ ಲೋಕದಲ್ಲಿ ಗುರುತಿಸಿಕೊಳ್ಳುವ ಇಚ್ಛೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.