ADVERTISEMENT

ಹಾಡಿನ ಶ್ರುತಿಯಲ್ಲಿ ‘ಲಯ’ವಾಗುವ ಒತ್ತಡ

ಜಕ್ಕಣಕ್ಕಿ ಎಂ ದಯಾನಂದ
Published 11 ಸೆಪ್ಟೆಂಬರ್ 2018, 19:30 IST
Last Updated 11 ಸೆಪ್ಟೆಂಬರ್ 2018, 19:30 IST
ಇಂದು ನಾಗರಾಜ್‌
ಇಂದು ನಾಗರಾಜ್‌   

‘ಅಯ್ಯೋ! ಟೆನ್ಷನ್‌, ಟೆನ್ಷನ್‌’ ಎಂದು ಯಾಕೆ ಅಷ್ಟು ತಲೆಕೆಡಿಸಿಕೊಳ್ಳುತ್ತೀರಿ. ಇದಕ್ಕೊಂದು ಸಿಂಪಲ್ಲಾದ ಉಪಾಯ ಇದೆ. ಅದುವೇ ನಿಮಗಿಷ್ಟದ ಹಾಡು ಕೇಳೋದು. ನನ್ನ ಎಷ್ಟೋ ಸ್ನೇಹಿತರು ಇಂತಹ ಉಪಾಯದ ಮೊರೆ ಹೋಗಿದ್ದಾರೆ. ಈಗಂತೂ ಯಾವ ಹಾಡಾದರೂ ಆನ್‌ಲೈನ್‌ನಲ್ಲಿ ಸಿಗುತ್ತದೆ. ಒತ್ತಡ ಅನ್ನೋರೆಲ್ಲ ಸಮಯ ಸಿಕ್ಕಾಗಲೆಲ್ಲ ಯೋಗ ಮಾಡಿದರೆ, ಒಳ್ಳೆಯ ಫಿಲ್ಮ್‌ ನೋಡಿದರೆ, ಇಲ್ಲವೇ ಯಾವುದಾದರೊಂದು ಮನರಂಜನೆಯ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮನಸ್ಸು ಹಗುರಾಗುತ್ತದೆ. ಕಲಾಪ್ರಕಾರಗಳೇ ಹಾಗೆ, ಅವು ಮನುಷ್ಯನಿಗೆ ಚೈತನ್ಯವನ್ನು ತಂದು ಕೊಡುತ್ತವೆ. ಮನಸ್ಸನ್ನು ರಿಫ್ರೆಶ್‌ ಮಾಡುತ್ತವೆ. ಕೆಟ್ಟದ್ದರ ಕಡೆ ಸಾಗುವ ಮನಸ್ಸನ್ನು ಸರಿಯಾದ ದಿಕ್ಕಿಗೆ ಹರಿಸುತ್ತವೆ. ಇಲ್ಲದಿದ್ದರೆ ಜಡ್ಡುಗಟ್ಟಿದ ಮನಸ್ಸು ಒತ್ತಡದ ರೀತಿಯಲ್ಲೇ ಯೋಚನೆ ಮಾಡುತ್ತದೆ. ‍ಏನು ಮಾಡುವುದು – ಎಂಬ ಪ್ರಶ್ನೆಗಳೇ ಎದುರಾಗುತ್ತಿದ್ದರೆ ಅವು ಒತ್ತಡವನ್ನು ಹೆಚ್ಚಿಸುತ್ತದೆ.

‘ದೊಡ್ಡ ಕೆಲಸದಲ್ಲಿರುವವರಿಗೇ ಒತ್ತಡ ಹೆಚ್ಚು’ ಎಂಬುದು ಈಗ ಜನಜನಿತವಾಗಿಬಿಟ್ಟಿದೆ. ಯಾರಿಗೆ ಕೆಲಸ ಇರುವುದಿಲ್ಲ. ಬೇಬಿ ಸಿಟ್ಟಿಂಗ್‌ ಹೋಗುವ ಮಗುವಿಗೂ ಈಗ ಪ್ರಾಜೆಕ್ಟ್‌ ಕೊಡ್ತಾರೆ. ಮಹಾನಗರಗಳಲ್ಲಂತೂ ಕೆಲಸಕ್ಕೆ ಹೋಗೋರು ಬೆಳಿಗ್ಗೆ ಬೇಗ ಮನೆ ಬಿಡುತ್ತಾರೆ, ರಾತ್ರಿ ತಡವಾಗಿ ಮನೆ ತಲುಪುತ್ತಾರೆ. ಆಫೀಸ್‌ನಲ್ಲೇ ಹೆಚ್ಚಿನ ಸಮಯ ಕಳೆಯುತ್ತಾರೆ. ಇಲ್ಲೇ ನೋಡಿ ನಾವು ಒತ್ತಡವನ್ನು ತಂದುಕೊಳ್ಳುವುದು. ವಾರಾಂತ್ಯದ ದಿನಗಳಲ್ಲೂ ದುಡಿಯುತ್ತಾರೆ. ತಪ್ಪಿಸಿಕೊಳ್ಳಲು ಸಾಧ್ಯವಾಗದಿರುವಷ್ಟು ಕೆಲಸವನ್ನು ಅಂಟಿಸಿಕೊಂಡಿರುತ್ತಾರೆ. ಇವೆಲ್ಲವೂ ಒತ್ತಡಕ್ಕೆ ಕಾರಣವೇ. ಅಲ್ಲಿಗೆ ಕಾರಣ ತಿಳಿದ ನಂತರ ಪರಿಹಾರವೂ ಸುಲಭವೇ.

ಒತ್ತಡ ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಅದು ನಮ್ಮ ಮೆದುಳಿನ ಮೂಲೆಯಲ್ಲಿ, ಆಲೋಚನೆಯ ಕೊನೆಯಲ್ಲಿ ಸದಾ ಹರಿದಾಡುತ್ತಿರುತ್ತದೆ. ಅದನ್ನು ನಾವೇ ಬಿಡಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು. ನಮ್ಮ ತಲೆಯ ಒಳಗೆ ಏನಿದೆ ಎಂದು ಯಾರಿಗೂ ಕಾಣಲಾರದು. ಆದ್ದರಿಂದ ಒತ್ತಡವನ್ನು ನಿಭಾಯಿಸುವ ತಂತ್ರಗಳನ್ನು ನಾವೇ ಕಂಡುಕೊಳ್ಳಬೇಕು. ಇನ್ಯಾರೊ ಬಂದು ನಮ್ಮನ್ನು ಖುಷಿಪಡಿಸುತ್ತಾರೆ ಎಂದು ಕಾದು ಕುಳಿತರೆ ಏನೂ ಪ್ರಯೋಜನವಾಗುವುದಿಲ್ಲ.

ADVERTISEMENT

ನಗರದ ಜನರ ಜೀವನಶೈಲಿಯಿಂದಲೇ ಒತ್ತಡ ಹೆಚ್ಚುತ್ತದೆ. ರಾತ್ರಿ ಎಷ್ಟೋ ಗಂಟೆಗೆ ಮಲಗುತ್ತಾರೆ. ಇಲ್ಲಿ ನಿದ್ರೆ ಮಾಡುವ ಅವಧಿ ಕಡಿಮೆಯಾಗಿದೆ. ಊಟ–ತಿಂಡಿಯನ್ನೂ ಸರಿಯಾಗಿ ತಿನ್ನಲು ಸಮಯವಿಲ್ಲ. ನಗರದಲ್ಲಿ ಕೆಲಸ ಮಾಡುವವರು ಮನರಂಜನೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಎಲ್ಲಿ ಸಮಯವಿದೆ ಎಂದು ನನ್ನನ್ನು ಕೇಳುತ್ತಾರೆ. ಅಂತಹವರು ಕಚೇರಿಗೆ ಹೋಗುವಾಗ ಮತ್ತು ಬರುವಾಗ ಎಫ್‌.ಎಂ.ನಿಂದಲೇ ಹಾಡು ಕೇಳಬಹುದಲ್ಲವೆ?

ಎಲೆಕ್ಟ್ರಾನಿಕ್‌ ಮೀಡಿಯಾಗಳಿಂದಲೇ ಇಂದು ಒತ್ತಡ ಹೆಚ್ಚಾಗಿದೆ. ಅನೇಕ ಜನರು ಫೋನ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್ ಆಗಿದ್ದಾರೆ. ಒಮ್ಮೆ ಇದರ ಒಳ ಹೊಕ್ಕರೆ ಹೊರಗೆ ಬರುವುದೇ ಇಲ್ಲ. ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ನಲ್ಲೇ ಮುಳುಗಿ ಹೋಗಿರುತ್ತಾರೆ. ಇದು ಮೆದುಳಿನ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ. ಅದು ದೇಹದ ಮೇಲೂ ಪರಿಣಾಮ ಬೀರುತ್ತದೆ.

ನಮ್ಮ ಕ್ಷೇತ್ರದಲ್ಲಂತೂ ಒತ್ತಡ ಕಡಿಮೆಯೇ. ಈ ವಿಷಯದಲ್ಲಿ ಗಾಯಕರು ಅದೃಷ್ಟವಂತರು. ಯಾವುದಾದರೂ ಕಾರ್ಯಕ್ರಮ ನೀಡಲು ದೂರದೂರಿಗೆ ಹೋಗಬೇಕಿರುವುದರಿಂದ ದೈಹಿಕವಾಗಿ ಶ್ರಮವಾಗುತ್ತೆ ಅಷ್ಟೇ. ಕೆಲವು ಬಾರಿ ಆಹಾರದ ವ್ಯತ್ಯಾಸವಾಗಬಹುದು. ಅಲ್ಲಿನ ಹವಾಮಾನದಿಂದ ಸ್ವಲ್ಪ ತೊಂದರೆಯಾಗಬಹುದು. ಆದರೆ ಮಾನಸಿಕವಾಗಿ ಅಷ್ಟೊಂದು ಒತ್ತಡ ಇರಲ್ಲ. ಏಕೆಂದರೆ ನಾವು ಹಾಡ್ತಾ ಇರ್ತೀವಿ; ಅದೂ ಇಷ್ಟಪಟ್ಟು!

ನಾನು ಎಲ್ಲ ಕೆಲಸಗಳನ್ನು ಪ್ಲಾನ್ ಮಾಡಿಕೊಳ್ಳುತ್ತೇನೆ. ಮೊದಲೇ ಕಾರ್ಯಕ್ರಮ ನಿಗದಿಯಾಗಿದ್ದರೆ ಅದನ್ನೆಲ್ಲ ಒಂದು ಕಡೆ ನೋಟ್‌ ಮಾಡಿಟ್ಟುಕೊಳ್ಳುತ್ತೇನೆ. ಇಲ್ಲದಿದ್ದರೆ ಮರೆತುಹೋಗಿ ಆ ದಿನ ಅವಸರಪಡಬೇಕಾಗುತ್ತದೆ. ಇಷ್ಟು ಗಂಟೆಗೆ ಹೊರಟರೆ, ಇಷ್ಟು ಹೊತ್ತಿಗೆ ತಲುಪಬಹುದು – ಎಂದು ಯೋಜನೆ ಮಾಡಿಕೊಳ್ಳುತ್ತೇನೆ.

ನನ್ನ ಹಾಡು ಕೇಳಲು ಜನ ಇರುವುದರಿಂದಲೇ ನಾವು ಬೆಳೆಯೋದು. ಅಭಿಮಾನಿಗಳಿಂದಲೇ ಹೆಸರು ಬರುತ್ತೆ. ನನ್ನ ತಂದೆ–ತಾಯಿಯೇ ನನಗೆ ಸಂಗೀತಗುರುಗಳು.

ಹೊಸತನ್ನು ಕಲಿಯಲು ನನಗೆ ತುಂಬಾನೇ ಇಷ್ಟ. ಕಲಿಕೆಯಲ್ಲಿ ಸಾಕಷ್ಟು ಆಸಕ್ತಿ ವಹಿಸುತ್ತೇನೆ. ಕರ್ನಾಟಕಸಂಗೀತ, ಪಾಶ್ಚಾತ್ಯ ಸಂಗೀತ, ಜಾನಪದ ಸಂಗೀತ – ಎಲ್ಲವನ್ನೂ ನಾನು ಇಷ್ಟಪಟ್ಟು ಕಲಿಯುತ್ತೇನೆ. ಏನಾದರೂ ಕಲಿಯಬೇಕು ಎಂದು ನಿರ್ಧರಿಸಿದರೆ ಅದು ಪೂರ್ತಿ ದಕ್ಕುವವರೆಗೂ ಬಿಡುವುದಿಲ್ಲ. ಈ ವಿಷಯದಲ್ಲಿ ಶಿಸ್ತನ್ನು ರೂಢಿಸಿಕೊಂಡಿದ್ದೇನೆ.

ಗಾಯನ ಕ್ಷೇತ್ರದಲ್ಲಿ ನಾವು ಅನುಭವವನ್ನು ಗಳಿಸುತ್ತಾ ಹೋದಂತೆ ಎಂತಹುದೇ ವೇದಿಕೆಯನ್ನು ಎದುರಿಸುವ ಧೈರ್ಯ–ಆತ್ಮವಿಶ್ವಾಸಗಳು ಬರುತ್ತವೆ. ಕೆಲವು ಬಾರಿ ಹಬ್ಬ ಮತ್ತು ಇತರೆ ಉತ್ಸವಗಳ ವೇಳೆ
ಹೆಚ್ಚು ಕಾರ್ಯಕ್ರಮವಿದ್ದಾಗ ಸ್ವಲ್ಪ ಒತ್ತಡವಾಗುತ್ತದೆ. ಅದನ್ನು ಬಿಟ್ಟರೆ ನಾನು ಒತ್ತಡಕ್ಕೆ ಎಂದೂ ಸಿಲುಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.