ADVERTISEMENT

ನಾನು ಹುಟ್ಟಿದ ದಿನವೇ ‘ಸ್ವರ ಸತ್ಕಾರ’ ಗೃಹ ಪ್ರವೇಶ ಆಗಿದ್ದು: ಶ್ಯಾಮಲಾ ಜಿ.ಭಾವೆ

ವಿದುಷಿ ಶ್ಯಾಮಲಾ ಜಿ.ಭಾವೆ ಮನದ ಮಾತು

ಪ್ರಜಾವಾಣಿ ವಿಶೇಷ
Published 22 ಮೇ 2020, 6:12 IST
Last Updated 22 ಮೇ 2020, 6:12 IST
ಉಭಯ ಗಾನ ವಿಶಾರದೆ ಶ್ಯಾಮಲಾ ಜಿ.ಭಾವೆ (ಪ್ರಜಾವಾಣಿ ಚಿತ್ರ: ರಂಜು ಪಿ.)
ಉಭಯ ಗಾನ ವಿಶಾರದೆ ಶ್ಯಾಮಲಾ ಜಿ.ಭಾವೆ (ಪ್ರಜಾವಾಣಿ ಚಿತ್ರ: ರಂಜು ಪಿ.)   

ಶ್ಯಾಮಲಾ ಜಿ.ಭಾವೆ ಅವರು ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಪ್ರಕಾರಗಳಲ್ಲಿ ಪ್ರಕಾಂಡ ಪಾಂಡಿತ್ಯ ಪಡೆದವರು. ಈಗ ಅವರಿಗೆ 75 ವರ್ಷ. ಹಾಡುವ ಹುಮ್ಮಸ್ಸಿಗೆ 15. ಮೂರನೇ ವಯಸ್ಸಿಗೇ ಬಂದೀಶ್‌ಗಳನ್ನು ಗುನುಗುತ್ತಿದ್ದ ಶ್ಯಾಮಲಾ, 12ರ ವಯಸ್ಸಿನಲ್ಲಿ ‘ಉಭಯ ಗಾನ ವಿಶಾರದೆ’ ಬಿರುದು ಪಡೆದವರು. ಹುಟ್ಟಿದ್ದು ಮರಾಠಿ ಕುಟುಂಬದಲ್ಲಾದರೂ ಉಸಿರು ಕನ್ನಡ. ಬೆಂಗಳೂರಿನ ಬಗ್ಗೆ ಮಾತನಾಡುತ್ತಿದ್ದರೆ ಭಾವುಕರಾಗುತ್ತಾರೆ.

ಈ ಬರಹವು 'ಪ್ರಜಾವಾಣಿ' ಬೆಂಗಳೂರು ಮೆಟ್ರೊ ಪುರವಣಿಯಲ್ಲಿ ಅಕ್ಟೋಬರ್ 10, 2016ರಂದು 'ಬೆಂಗಳೂರು, ನಿನಗೆ ನಾನು ಸದಾ ಆಭಾರಿ' ಶೀರ್ಷಿಕೆಯಡಿ ಪ್ರಕಟವಾಗಿತ್ತು.

---

ADVERTISEMENT

ಬೆಂಗಳೂರು ನನ್ನ ಕರ್ಮಭೂಮಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ. ಈಗ ಸಿಲಿಕಾನ್‌ ಸಿಟಿ ಆಗಿದೆ ಬಿಡಿ ಈ ಬೆಂಗಳೂರು. ಒಂದು ಮಗುವಿನ ಶೈಶವದಿಂದ ಹಿಡಿದು ಪ್ರತಿ ಹಂತದ ಬೆಳವಣಿಗೆಯನ್ನೂ ಕಾಣುವ ಹಾಗೆ ಬೆಂಗಳೂರಿನ ಇಷ್ಟು ವರ್ಷಗಳ ಏಳುಬೀಳುಗಳನ್ನು ನಾನು ಖುದ್ದಾಗಿ ಕಂಡಿದ್ದೇನೆ.

ಮರಾಠಿ ನಮ್ಮ ಮಾತೃಭಾಷೆಯೇ ಆದರೂ ನಾನು ಅಪ್ಪಟ ಕನ್ನಡಿಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ಓದಿದ್ದು ಶೇಷಾದ್ರಿಪುರದ ಸರ್ಕಾರಿ ಶಾಲೆಯಲ್ಲಿ.

ನನ್ನ ಅಪ್ಪ ಗೋವಿಂದ ವಿಠಲ ಭಾವೆ, ಅಮ್ಮ ಲಕ್ಷ್ಮೀ ಗೋವಿಂದ ಭಾವೆ ಅವರು 1930ರಲ್ಲಿ ಮಹಾರಾಷ್ಟ್ರದಿಂದ ಬೆಂಗಳೂರಿಗೆ ವಲಸೆ ಬಂದವರು. ಮಲ್ಲೇಶ್ವರ ಏಳನೇ ಅಡ್ಡರಸ್ತೆಯಲ್ಲಿ ಬಾಡಿಗೆ ಮನೆ ಹಿಡಿದರು. ಬಾಡಿಗೆ ಎಷ್ಟು ಗೊತ್ತೇ? ಒಂಬತ್ತು ರೂಪಾಯಿ! ಆಗ ಮಲ್ಲೇಶ್ವರ ಥೇಟ್‌ ಕಾಡಿನಂತಿತ್ತು. ಅಲ್ಲಿಯೇ 1931ರಲ್ಲಿ ಅಲ್ಲಿಯೇ ಸರಸ್ವತಿ ಸಂಗೀತ ಪಾಠಶಾಲೆ ಆರಂಭಿಸಿದರು. ತಂದೆ ಮತ್ತು ತಾಯಿ ಪಕ್ಕಾ ಗುರುಕುಲ ಶೈಲಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು.

ಶ್ಯಾಮಲಾ ಜಿ.ಭಾವೆ ಅವರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಇರಿಸಲಾಗಿದೆ.

ನನಗೂ ಮನೆಗೂ 75

1941ರ ಮಾರ್ಚ್‌ 14ರ ಹೋಳಿ ಹಬ್ಬದಂದು ನಾನು ಹುಟ್ಟಿದ್ದು. ಆಗ ಈ ಕಡೆ ಹೋಳಿ ಹಬ್ಬದ ಸಂಭ್ರಮ ಈಗಿನಂತಿರಲಿಲ್ಲ. ನಾವು ಈಗ ಇರುವ ಶೇಷಾದ್ರಿಪುರದ ನೆಹರೂ ವೃತ್ತದ ಈ ಮನೆಯ ನಿರ್ಮಾಣ ಅದೇ ಹೊತ್ತಲ್ಲಿ ಮುಗಿದು ಗೃಹಪ್ರವೇಶ ಆಗಿದ್ದೂ ಆಗಲೇ. ಹಾಗಾಗಿ ಈ ಮನೆಗೂ ನನ್ನಷ್ಟೇ ವಯಸ್ಸು... ಹ್ಹಹ್ಹಹ್ಹ... ನಮ್ಮ ಮನೆಯ ಹೆಸರು ‘ಸ್ವರ ಸತ್ಕಾರ’.

ನಾನು ಮೂರೂವರೆ ವರ್ಷಕ್ಕೇ ಹಿಂದೂಸ್ತಾನಿ ಆಲಾಪ್‌ಗಳನ್ನು ನನ್ನ ಪಾಡಿಗೆ ಆಲಾಪಿಸುತ್ತಿದ್ದೆನಂತೆ. ತೊದಲು ಮಾತು ಆಡುವ ವಯಸ್ಸಿನಲ್ಲಿ ನಾನು ಉದ್ದುದ್ದ ಆಲಾಪನೆ ಮಾಡುವುದನ್ನು ಕಂಡು ನಡುವಯಸ್ಸಿನ ವಿದ್ಯಾರ್ಥಿಗಳು ಬೆರಗಾಗುತ್ತಿದ್ದರಂತೆ.

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮರಾಠಿ ಭಾಷೆಗಳಲ್ಲಿ ನಾನು ಮಾತನಾಡುವಷ್ಟೇ ಸರಾಗವಾಗಿ ಹಾಡುತ್ತೇನೆ. ದಕ್ಷಿಣ ಮತ್ತು ಉತ್ತರ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಹಾಡಿದ್ದೇನೆ. ನಮ್ಮ ಕರ್ನಾಟಕದ ಯಾವ ಹಳ್ಳಿಯೂ ಉಳಿದಿಲ್ಲವೇನೊ?
ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ, ಕೆಂಗಲ್‌ ಹನುಮಂತಯ್ಯ, ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ, ಲಾಲ್‌ ಬಹಾದ್ದೂರ್‌ ಶಾಸ್ತ್ರಿ, ಇಂಗ್ಲೆಂಡ್‌ನ ರಾಣಿ ಎರಡನೇ ಎಲಿಜಬೆತ್‌, ಅಮೆರಿಕದ ರಕ್ಷಣಾ ಕಾರ್ಯದರ್ಶಿ, ಚೀನಾದ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿ... ಹೀಗೆ ಗಣ್ಯಾತಿಗಣ್ಯರ ಮುಂದೆ ಹಾಡುವ ಅವಕಾಶ, ಬೆಂಗಳೂರು ನನಗೆ ಕೊಟ್ಟ ಕೊಡುಗೆಗಳಲ್ಲಿ ಒಂದು.

ಹತ್ತಾರು ದೇಶಗಳಿಗೆ ಕಛೇರಿಗಾಗಿ ಹೋಗಿ ಬಂದಿದ್ದೇನೆ. ಯಾವುದೇ ಊರಿಗೆ, ವಿದೇಶಕ್ಕೆ ಹೋಗಿ ಬಂದರೂ ಮಕ್ಕಳನ್ನು ಬಿಟ್ಟು ಬಂದ ತಾಯಿಯಂತೆ ಬೆಂಗಳೂರಿಗಾಗಿ ಹಂಬಲಿಸುತ್ತೇನೆ. ಇದೇ ನನ್ನ ತವರು ಅನ್ನೋ ಭಾವನೆ.

ಹಳೆಯ ದೇವಸ್ಥಾನಗಳಲ್ಲಿ...

ನಾನು ಮೂಲತಃ ಕೃಷ್ಣಭಕ್ತೆ. ಇಸ್ಕಾನ್‌ಗೂ ನನಗೂ ಗಾಢ ಸಂಬಂಧವಿರುವುದಕ್ಕೆ ಇದೂ ಕಾರಣ. ಅವರು ನನ್ನನ್ನು ‘ಆಸ್ಥಾನ ವಿದುಷಿ’ ಎಂದು ಗೌರವಿಸಿದ್ದಾರೆ. ಆದರೆ ಬೆಂಗಳೂರಿನ ಹಳೆಯ ದೇವಸ್ಥಾನಗಳಿಗೆ ಹೋಗುವುದು ಈಗಲೂ ನನಗಿಷ್ಟ. ಗುರುದ್ವಾರ, ಮಸೀದಿ, ಚರ್ಚ್‌ಗಳಿಗೂ ಹೋಗಿದ್ದೇನೆ, ಹಾಡಿದ್ದೇನೆ.

ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ, ಕುಮಾರಕೃಪಾ ರಸ್ತೆಯಲ್ಲಿರುವ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶೇಷಾದ್ರಿಪುರ ಕಾಲೇಜಿನ ಹಿಂಭಾಗದ ಆಂಜನೇಯ ದೇವಸ್ಥಾನಕ್ಕೆ ಪ್ರತಿದಿನ ಹೋಗುತ್ತಿದ್ದೆ.

ಈ ಚಿತ್ರಕಲಾ ಪರಿಷತ್ತು (ಸಿಕೆಪಿ) ಇದೆಯಲ್ಲ? ನಂಜುಂಡರಾವ್‌ ಅವರು ಶುರು ಮಾಡಿದಾಗ ಅದು ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಇತ್ತು. ಅವರ ನೇತೃತ್ವದ ಯುವ ಕಲಾವಿದರ ಕೂಟ (ಗಿಲ್ಡ್‌) 1960ರಿಂದ 65ರವರೆಗೂ ತುಂಬಾ ಚುರುಕಾಗಿತ್ತು. ಸಿಕೆಪಿಯಂತೆ ಈ ಗಿಲ್ಡ್‌ಗೂ ನಾನು ಟ್ರಸ್ಟಿಯಾಗಿದ್ದೆ.

ಪರಂಪರೆ ಕೊಂಡಿಯಂಥ ಕೋಣೆ

ಈಗ ನಾವು ಮನೆಯನ್ನು ತುಂಬಾನೆ ವಿಸ್ತರಿಸಿಕೊಂಡಿದ್ದೇವೆ. ಆಗ ಇಷ್ಟು ದೊಡ್ಡದಿರಲಿಲ್ಲ. ಹಜಾರಕ್ಕೆ ಬಂದ ತಕ್ಷಣ ಎಡಭಾಗದಲ್ಲಿ ಕಾಣುವ ಕೋಣೆಯಿದೆಯಲ್ಲ? ಅದು ಬಹಳ ವಿಶೇಷವಾದದ್ದು.

ಸಂಗೀತ, ಸಾಹಿತ್ಯ ಕ್ಷೇತ್ರದ ದಿಗ್ಗಜರು, ರಾಜಕಾರಣಿಗಳು, ದೇಶ–ವಿದೇಶದ ಗಣ್ಯರು ನಮ್ಮ ಮನೆಗೆ ಬಂದಾಗ ಆ ಕೋಣೆಯಲ್ಲೇ ಹಾಡಿ, ಹಾಡಿಸಿ ಆನಂದಿಸುತ್ತಿದ್ದರು. ನನ್ನ ನೂರಾರು ವಿದ್ಯಾರ್ಥಿಗಳು ಯಾವುದಾದರೂ ಸ್ಪರ್ಧೆಗೆ ಹೋಗುವಾಗ ಅದೇ ಕೋಣೆಯಲ್ಲಿ ಕುಳಿತು ರಿಯಾಜ್‌ ಮಾಡಿ ಹೋಗುತ್ತಿದ್ದರು.

ಅದಕ್ಕಿಂತಲೂ ಹೆಚ್ಚಾಗಿ ನನ್ನ ತಂದೆ ಮತ್ತು ತಾಯಿ ಸಂಗೀತ ಪಾಠ ಹೇಳಿಕೊಡುತ್ತಿದ್ದ ಜಾಗ ಅದು. ಅಲ್ಲಿ ಕುಳಿತರೆ ಒಂಥರಾ ಖುಷಿ. ನನಗೆ ಹೊಸ ಚೈತನ್ಯ ತುಂಬುವ ಜಾಗವದು. ಪರಂಪರೆಯ ಕೊಂಡಿ ಎಂದೇ ನಾನು ಗುರುತಿಸುತ್ತೇನೆ.

ಬೆಂಗಳೂರು ನನ್ನ ಕರ್ಮಭೂಮಿ. ಬಹುಶಃ ಜಗತ್ತಿನ ಬೇರೆ ಯಾವುದೇ ಭಾಗದಲ್ಲಿ ನಾನು ನೆಲೆಸಿದ್ದರೂ ಇಷ್ಟೊಂದು ಕಂಫರ್ಟ್‌ ಫೀಲ್‌ ಆಗುತ್ತಿರಲಿಲ್ಲ ಅನಿಸುತ್ತದೆ. ಹಿಂದೆ ಅನೇಕ ಸರ್ಕಾರಗಳು ನನಗೆ ರಾಜ್ಯದ ಸಾಂಸ್ಕೃತಿಕ ರಾಯಭಾರಿಯ ಸ್ಥಾನಮಾನ ಕೊಟ್ಟಿದ್ದವು. ಬೆಂಗಳೂರಿಗೆ ನಾನೆಷ್ಟು ಆಭಾರಿಯಾಗಿದ್ದರೂ ಕಡಿಮೆಯೇ.

‘ಉಭಯ ಗಾನ ವಿಶಾರದೆ’ ಎಂದ ವಿಶ್ವೇಶ್ವರಯ್ಯ!

ಸರ್‌ ಎಂ.ವಿಶ್ವೇಶ್ವರಯ್ಯ ಅವರು ಮತ್ತು ನನ್ನ ತಂದೆ ‘ಹೋಗೋ ಬಾರೋ’ ಸ್ನೇಹಿತರು. ಅವರಿಬ್ಬರೂ ದಿನಾ ಜೊತೆಯಲ್ಲೇ ವಾಕಿಂಗ್‌ ಹೋಗ್ತಿದ್ದರು. ಪುರುಸೊತ್ತಿನಲ್ಲಿ ಬಂದಾಗ ನನ್ನನ್ನು ಕರೆದು ಬಂದೀಶ್‌ ಹಾಡು, ಒಂದು ಆಲಾಪ್‌ ಮಾಡು ಅಂತ ಹೇಳೋರು. ನಾನೂ ಸಿಕ್ಕಿದ್ದೇ ಅವಕಾಶ ಅಂತ ಹಾಡೋಳು.

ನನ್ನ ಬದುಕಿನಲ್ಲಿ ಕೆಲವು ಅವಿಸ್ಮರಣೀಯ ಸಂದರ್ಭಗಳಿವೆ. ನನಗೆ ಆಗ 12ನೇ ವಯಸ್ಸು. ಬೆಂಗಳೂರಿನ ಟೌನ್‌ ಹಾಲ್‌ನಲ್ಲಿ ಒಂದು ಕಾರ್ಯಕ್ರಮ. ನನ್ನ ಹಾಡುಗಾರಿಕೆ ಇತ್ತು. ಅಂದಿನ ಹಾಡು ಕೇಳಿ ವಿಶ್ವೇಶ್ವರಯ್ಯ ಅವರು ನನ್ನನ್ನು ಕರೆದು ತೊಡೆಯ ಮೇಲೆ ಕೂರಿಸಿಕೊಂಡು ತಂದೆಯನ್ನು ಪಕ್ಕಕ್ಕೆ ಕರೆದು, ‘ನಿನ್ನ ಮಗಳು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡುವ ಸಾಮರ್ಥ್ಯ ಹೊಂದಿದ್ದಾಳೆ. ಅವಳಿಗೆ ಚೆನ್ನಾಗಿ ಸಂಗೀತ ಶಿಕ್ಷಣ ಕೊಡಿಸುತ್ತೇನೆ ಎಂದು ಮಾತು ಕೊಡು’ ಎಂದು ಕೇಳಿದರು. ತಂದೆ ಮಾತುಕೊಟ್ಟರು.

ವಿಶ್ವೇಶ್ವರಯ್ಯ ಅವರು ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡೇ ‘ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡರಲ್ಲೂ ಈ ವಯಸ್ಸಿಗೇ ಪಾಂಡಿತ್ಯ ಪ್ರದರ್ಶಿಸಬಲ್ಲ ಶ್ಯಾಮಲಾ ಇವತ್ತಿನಿಂದ ‘ಉಭಯ ಗಾನ ವಿಶಾರದೆ’. ನಿನ್ನ ಹೆಸರಿನೊಂದಿಗೆ ‘ಭಾವೆ’ಯಷ್ಟೇ ಕಡ್ಡಾಯವಾಗಿ ಬಳಸಬೇಕು’ ಎಂದು ಮೈಕ್‌ನಲ್ಲಿ ಪ್ರಕಟಿಸಿದರು.

ಅದೇ ವರ್ಷ ದೆಹಲಿಯಲ್ಲಿ ಅಖಿಲ ಭಾರತ ಮಕ್ಕಳ ಸಂಗೀತ ಸಮ್ಮೇಳನ ನಡೆದಿತ್ತು. ದಕ್ಷಿಣ ಭಾರತದಿಂದ ನಾನೊಬ್ಬಳೇ. ಪ್ರತಿನಿಧಿಗಳಿಗೆ ತಲಾ ಎಂಟು ನಿಮಿಷ ಹಾಡುವ ಅವಕಾಶ ಇತ್ತು. ನಾನು ಸಂಸ್ಕೃತದ ಶ್ಲೋಕ ಹಾಡಿದೆ. ವೇದಿಕೆಯ ಮುಂದೆ ಆಸೀನರಾಗಿದ್ದ ಆಗಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‌ ಅವರು, ಇನ್ನೊಂದು ಹಾಡು ಅಂದರು. ಹಾಡಿದೆ. ಮತ್ತೊಂದು... ಮತ್ತೂ ಒಂದು... 27 ನಿಮಿಷ ಹಾಡಿಸಿದರು. ಇದು ಬದುಕಿನ ಅವಿಸ್ಮರಣೀಯವಾದ ಮತ್ತೊಂದು ಸಂದರ್ಭ.

‘ಪೈಸಾ ಬಿಸಾಕು’ ಜಾಯಮಾನ

ನಮ್ಮ ಕಾಲದಲ್ಲಿ ಸಂಗೀತ ಕಲಿಕೆ ಒಂದು ತಪಸ್ಸಿನಂತಿತ್ತು. ಈಗ ಅದೂ ಕಮರ್ಷಿಯಲ್‌ ಆಗಿದೆ. ನನ್ನಮ್ಮ, ನನ್ನಪ್ಪ ಬರೀ ಐದು ನಿಮಿಷ ತಡವಾಗಿ ಬಂದ ವಿದ್ಯಾರ್ಥಿಗಳನ್ನೂ ಸೇರಿಸಿಕೊಳ್ಳುತ್ತಿರಲಿಲ್ಲ. ಅಲ್ಲದೆ ಅವರಿಗಾಗಿ ಪ್ರತ್ಯೇಕ ಪಾಠವನ್ನೂ ಮಾಡುತ್ತಿರಲಿಲ್ಲ.
ಈಗಿನ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಗೈರುಹಾಜರಾಗಿ, ‘ಬರಲು ಪುರುಸೊತ್ತೇ ಆಗ್ಲಿಲ್ಲ ಅದೊಂಚೂರು ಹೇಳಿ, ಈ ಪಾಠ ಪುನರಾವರ್ತಿಸಿ’ ಎಂದು ಎಗ್ಗಿಲ್ಲದೆ ಕೇಳುತ್ತಾರೆ. ಯಾಕಪ್ಪಾ/ ಯಾಕಮ್ಮಾ ಎಂದು ಪ್ರಶ್ನಿಸಿದರೆ, ‘ದುಡ್ಡು ಕೊಡೋಲ್ವಾ’ ಎಂಬ ಭಾವ ವ್ಯಕ್ತಪಡಿಸುತ್ತಾರೆ. ಈಗಿನದು ಪೈಸಾ ಬಿಸಾಕು, ಮಜಾ ಸಾಕು ಅನ್ನುವ ಜಾಯಮಾನ.

ಅರ್ಧ ರಾತ್ರೀಲಿ ತಳ್ಳೋ ಗಾಡಿಯ ಇಡ್ಲಿ– ವಡೆ

ಬೇರೆ ಊರಿಗೆ ಕಛೇರಿಗೆ ಹೋಗಿ ಬಂದಾಗ ತಡರಾತ್ರಿ ಆಗುತ್ತಿತ್ತು. ಆನಂದ ರಾವ್‌ ವೃತ್ತದ ಬಳಿ ಒಂದು ದಂಪತಿ ತಡರಾತ್ರಿವರೆಗೂ ತಳ್ಳೋ ಗಾಡಿಯಲ್ಲಿ ಇಡ್ಲಿ ವಡೆ ಮಾರುತ್ತಿದ್ದರು. ಬಿಸಿಬಿಸಿಯಾಗಿ ತಟ್ಟೆಗೆ ಹಾಕುತ್ತಿದ್ದರು. ಆ ಸಾಂಬಾರು, ಚಟ್ನಿ, ಅದರ ಮೇಲೆ ಅವರು ಸುರಿಯುತ್ತಿದ್ದ ತುಪ್ಪ.. ವ್ಹಾವ್‌... ಈಗಲೂ ಬಾಯಲ್ಲಿ ನೀರೂರುತ್ತದೆ.

ಅದು ಎಷ್ಟು ಇಷ್ಟವಾಗುತ್ತಿತ್ತೆಂದರೆ, ‘ರಾತ್ರಿ ಅಡುಗೆ ಮಾಡೋದು ಬೇಡ, ಅಲ್ಲೇ ಹೋಗಿ ತಿಂದ್ಕೊಂಡು ಬರೋಣ’ ಎಂದು ಅಮ್ಮನನ್ನೂ ಕರೆದುಕೊಂಡು ಹೋಗುವುದು ರೂಢಿಯಾಗಿಬಿಟ್ಟಿತು. ಹಾಗೆ ಹೋಗುವಾಗ ಮನೆಯಿಂದ ತುಪ್ಪ ತೆಗೆದುಕೊಂಡು ಹೋಗುತ್ತಿದ್ದೆವು.

ನಾನು ದೊಡ್ಡ ತಿಂಡಿಪೋತಿ. ಏನೇ ತಿಂದರೂ ರುಚಿಕಟ್ಟಾಗಿ ಇರಬೇಕು, ತಿಂದ ಮೇಲೆ ಮನಸ್ಸು ಪ್ರಫುಲ್ಲವಾಗಬೇಕು. ಆಗಿನ ಮೆಜೆಸ್ಟಿಕ್‌ ಚಿತ್ರಮಂದಿರ ಬಳಿಯ ‘ಸುಖಸಾಗರ್‌’ ಹೋಟೆಲ್‌ನ ಗುಜರಾತಿ ಊಟ, ಎಂಟಿಆರ್‌ ಊಟ, ವುಡ್‌ಲ್ಯಾಂಡ್ಸ್‌ನಲ್ಲಿ ಸಿಗುವ ಪಕ್ಕಾ ಬ್ರಾಹ್ಮಣರ ಊಟ, ವಿದ್ಯಾರ್ಥಿ ಭವನದ ಮಸಾಲೆ ದೋಸೆ (ಅಲ್ಲಿನ ಯಾವ ದೋಸೆನೂ ಬಿಟ್ಟಿಲ್ಲ...) ಆ ರುಚಿಗೆ ಅವುಗಳೇ ಸಾಟಿ ಬಿಡಿ. ಈಗ, ಶೇಷಾದ್ರಿಪುರದ ‘ಗುಲ್ಲು ಚಾಟ್ಸ್‌’ನಲ್ಲಿ ಪಾನಿಪೂರಿ ಬಹಳ ಇಷ್ಟವಾಗುತ್ತದೆ. ಎಂಟಿಆರ್‌ಗೆ ಈಗಲೂ ಹೋಗುವುದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.