ಸಂಚಾರ ನಿಯಮ ಉಲ್ಲಂಘನೆಗೆ ಪರಿಷ್ಕೃತ ದಂಡ ಜಾರಿಯಾದ ನಂತರ ರಸ್ತೆಗಳಲ್ಲಿ ವಿಚಿತ್ರ ಪ್ರಹಸನ ನಡೆಯುತ್ತಿವೆ. ಟ್ರಾಫಿಕ್ ಪೊಲೀಸರು ಮತ್ತು ವಾಹನ ಚಾಲಕರು ನಡು ರಸ್ತೆಯಲ್ಲಿಯೇ ನಡೆಸುವ ಮಾರಾಮಾರಿ ಪ್ರಸಂಗಗಳು ನೆಟ್ಟಿಗರಿಗೆ ಆಹಾರವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತರಹೇವಾರಿ ಮೀಮ್, ವಿಡಿಯೊ, ಟ್ರೋಲ್‌ಗಳು ನಗೆಯ ಬುಗ್ಗೆ ಉಕ್ಕಿಸುತ್ತವೆ. ಅಂಥ ಒಂದಷ್ಟು ಹಾಸ್ಯಸಂಗತಿಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
ವಿದ್ಯಮಾನಗಳಿಗೆ ಅನುಸಾರ ಆಕರ್ಷಕ ಜಾಹೀರಾತು ಪ್ರಕಟಿಸುವುದರಲ್ಲಿ ಅಮುಲ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ. ಈ ಬಾರಿಕಿಂಗ್ಸ್ ಮದ್ಯ ಸಂಸ್ಥೆಯ ಅರ್ಥಗರ್ಭಿತ ಜಾಹೀರಾತು ಎಲ್ಲರ ಗಮನ ಸೆಳೆಯುತ್ತಿದೆ.
‘ಯಾವಾಗಲೂ ಜಾನಿ ವಾಕ್ ಮಾಡುತ್ತಾನೆ. ಅದಕ್ಕೂ ಕಾರಣ ಇದೆ’ ಎಂದು ಜಾನಿ ವಾಕರ್ ಮದ್ಯದ ಜಾಹೀರಾತು ಫಲಕದಲ್ಲಿ ಕುಡಿದು ವಾಹನ ಚಲಾಯಿಸಬೇಡಿ ಎಂಬ ಸಂದೇಶವಿದೆ.
ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಸವಾರನೊಬ್ಬ ಬೆತ್ತಲೆಯಾಗಿ ಮನೆಗೆ ಹೋಗುತ್ತಿರುವ ಚಿತ್ರದ ಒಕ್ಕಣಿಕೆ ಮಜವಾಗಿದೆ. ‘ಫೈನ್ ಕಟ್ಟಿ ಮನೆಗೆ ಮರಳುತ್ತಿರುವ ಸವಾರ‘ಎಂಬ ಶೀರ್ಷಿಕೆಯನ್ನು ಈ ಚಿತ್ರಕ್ಕೆ ನೀಡಲಾಗಿದೆ.
ದಂಡ ಕಟ್ಟಲು ಹಣವಿಲ್ಲದೆ ಚಾಲಕನೊಬ್ಬ ಲಾರಿಯಲ್ಲಿದ್ದ ಒಂದು ಗೋಣಿ ಚೀಲ ಈರುಳ್ಳಿಯನ್ನು ಪೊಲೀಸರಿಗೆ ನೀಡಿ ಋಣಮುಕ್ತನಾಗುವ ಚಿತ್ರ ವೈರಲ್ ಆಗಿದೆ. ಅಂತಹ ಮತ್ತೊಂದಿಷ್ಟು ಝಲಕುಗಳು ಇಲ್ಲಿವೆ. ಓದಿ ಆನಂದಿಸಿ...
***
ಇಸ್ರೊ ಹಾರಿಸಿದ ಚಂದ್ರಯಾನ –2 ಉಪಗ್ರಹದ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿದುಕೊಂಡು ಚಂದ್ರನ ಅಂಗಳದಲ್ಲಿ ನಿಂತಿದೆ. ಕೈಯಲ್ಲಿ ರಶೀದಿ ಪುಸ್ತಕ ಹಿಡಿದ ಟ್ರಾಫಿಕ್ ಪೇದೆಯೊಬ್ಬರು ಚಂದ್ರನ ಅಂಗಳದಲ್ಲೂ ಪ್ರತ್ಯಕ್ಷರಾಗುತ್ತಾರೆ! ಸಿಗ್ನಲ್ ಜಂಪ್ (ಸಂಪರ್ಕ ಕಡಿದುಕೊಂಡ) ಅಪರಾಧಕ್ಕಾಗಿ ವಿಕ್ರಮ್ ಲ್ಯಾಂಡರ್‌ಗೆ ₹15 ಸಾವಿರ ದಂಡ ವಿಧಿಸುತ್ತಾರೆ.
***
ಹೆಲ್ಮೆಟ್ ಧರಿಸಿದ ಗುಂಡ ನೇರವಾಗಿ ಟ್ರಾಫಿಕ್ ಪೊಲೀಸ್ ಬಳಿ ಬಂದವನೆ ಕೈಯಲ್ಲಿದ್ದ ಫೈಲ್ ಮುಂದಿಡುತ್ತಾನೆ.
ಗುಂಡ: ಸರ್... ಇದು ತಗೋರಿ ಡ್ರೈವಿಂಗ್ ಲೈಸೆನ್ಸ್,ಆರ್.ಸಿ. ಬುಕ್, ಇನ್ಶೂರೆನ್ಸ್, ಇದು ಮಾಲಿನ್ಯ ರಹಿತ ಪ್ರಮಾಣ ಪತ್ರ, ಸರಿಯಾಗಿ ನೋಡ್ರಿ ಹೆಲ್ಮೆಟ್ ಕೂಡ ಹಾಕೀನ್ರಿ... ಎಲ್ಲಾ ಸರಿಯಾಗಿದಾವಲ್ಲ ಒಂದ್ಸಲ ನೋಡ್ರಿ...
ಟ್ರಾಫಿಕ್ ಪೊಲೀಸ್: ಎಲ್ಲಾ ಕರೆಕ್ಟಾಗಿ ಅದಾವಪಾ, ಆದ್ರ ಗಾಡಿ ಎಲ್ಲೈತಿ?
ಗುಂಡ: ನಿಮ್ಮನ್ನ ದೂರದಿಂದ ನೋಡಿ, ಗಾಡಿ ಅಲ್ಲೇ ನಿಲ್ಲಿಸಿ ಬಂದೇನ್ರಿ ಸರ್.. ಚೆಕ್ ಮಾಡಿ ಹೇಳ್ರಿ.. ಎಲ್ಲಾ ಕಾಗದ ಪತ್ರ ಸರಿಯಾಗಿ ಅದಾವ ಅಂದ್ರ ಗಾಡಿ ತಗೊಂಡ್ ಬರ್ತೀನಿ! ಪೊಲೀಸ್ ಪೇದೆ ನಿಂತಲ್ಲೇ ಮೂರ್ಛೆ ಹೋದ!!!
***
ವಾಹನ ತಡೆದ ಟ್ರಾಫಿಕ್ ಪೊಲೀಸ್ ಪೇದೆಯ ಕೈಗೆಗೆ ಸವಾರ ಗತ್ತಿನಿಂದಲೇ ಎಲ್ಲ ದಾಖಲೆ ನೀಡುತ್ತಾನೆ. ದಾಖಲೆ ಪರೀಕ್ಷಿಸುವ ಪೊಲೀಸ್, ವಾಹನ ದಾಖಲೆ ಸರಿಯಾಗಿವೆ. ತಲೆಯ ಮೇಲೆ ಹೆಲ್ಮೆಟ್ ಕೂಡ ಇದೆ. ಆದ್ರೂ, ಎರಡು ಸಾವಿರ ರೂಪಾಯಿ ದಂಡ ಕಟ್ಟು ಎನ್ನುತ್ತಾನೆ. ಯಾಕೆ ಎಂದು ವಾಹನ ಸವಾರ ಪ್ರಶ್ನಿಸುತ್ತಾನೆ.
ಆಗ ಪೊಲೀಸ್ ಪೇದೆ, ‘ಎಲ್ಲ ದಾಖಲೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಟ್ಟಿದ್ದೀಯಾ. ಪ್ಲಾಸ್ಟಿಕ್ ಚೀಲ ಬಳಸುವಂತಿಲ್ಲ. ಅದಕ್ಕೆ ಈ ದಂಡ‘ ಎನ್ನುತ್ತಾನೆ! ಈಗ ಮೂರ್ಛೆ ಹೋಗುವ ಸರದಿ ವಾಹನ ಸವಾರನದ್ದು!!!
***
ಹೊಸ ದಂಡ ನಿಯಮ ಪರಿಷ್ಕರಣೆಯಾದ ನಂತರ ಮದುವೆ ಗಂಡುಗಳ ‘ರೇಟ್’ ಕೂಡ ಬದಲಾಗಿದೆ. ವರಗಳ ರೇಟ್ ಬೋರ್ಡ್ ಈ ರೀತಿ ಇದೆ.ವೈದ್ಯರಾದರೆ ₹50 ಲಕ್ಷ, ಎಂಜಿನಿಯರ್‌ಗೆ ₹30 ಲಕ್ಷ ಮತ್ತು ಟ್ರಾಫಿಕ್ ಪೊಲೀಸ್ ವರನ ರೇಟ್ ₹1 ಕೋಟಿ!!!
ಮುಸುಕು ಹೊದ್ದು ಮಲಗಿದ ವ್ಯಕ್ತಿಯನ್ನು ತಟ್ಟಿ ಎಬ್ಬಿಸಿದರೂ ಆತ ನಿದ್ದೆ ಕಣ್ಣಲ್ಲೂ ಹೆಲ್ಮೆಟ್ ಧರಿಸುತ್ತಾನೆ. ಲೈಸನ್ಸ್, ಆರ್.ಸಿ. ಬುಕ್, ವಿಮೆ ದಾಖಲೆ ತೋರಿಸಿ ಮತ್ತೆ ಮುಸುಕು ಹೊದ್ದು ಮಲಗುತ್ತಾನೆ. ಹಿನ್ನೆಲೆಯಲ್ಲಿ ದೊಡ್ಡ ನಗು ಹೊರಡುತ್ತದೆ!
***
‘2019ರ ಪೋಷಕರು’ ಎಂಬ ಹೆಸರಿನ ಮೀಮ್‌ನಲ್ಲಿ ‘ತ್ರೀ ಈಡಿಯಟ್ಸ್’ ಸಿನಿಮಾದ ಚಿತ್ರ ಬಳಸಿಕೊಳ್ಳಲಾಗಿದೆ. ಅದರಲ್ಲಿ ಪೋಷಕರು ತಮ್ಮ ಮಗ ಡಾಕ್ಟರ್, ಎಂಜಿನಿಯರ್ ಆಗಲಿ ಎಂದು ಬಯಸುವ ಬದಲು, ‘ನಮ್ಮ ಮಗ ದೊಡ್ಡವನಾದ ಮೇಲೆ ಟ್ರಾಫಿಕ್ ಪೊಲೀಸ್ ಆಗುತ್ತಾನೆ’ ಎಂದು ಹೇಳುತ್ತಾರೆ. ಟ್ರಾಫಿಕ್ ದಂಡದ ಜತೆ ಪೋಷಕರ ಮನಸ್ಥಿತಿಯೂ ಬದಲಾಗಿದೆ.
***
ದ್ವಿಚಕ್ರ ವಾಹನ ಸವಾರರು ತಮ್ಮ ವಾಹನ ಮತ್ತು ಹೆಲ್ಮೆಟ್ ಮೇಲೆ ಎಲ್ಲ ಸಂಚಾರ ದಾಖಲೆ ಅಂಟಿಸಿಕೊಂಡು ರಸ್ತೆಗೆ ಇಳಿಯುತ್ತಿರುವ ಚಿತ್ರಗಳು ಹೊಸ ಟ್ರೆಂಡ್ ಹುಟ್ಟು ಹಾಕಿವೆ.ಡಿ.ಎಲ್, ಹೆಲ್ಮೆಟ್, ನಂಬರ್ ಪ್ಲೇಟ್, ನೋಂದಣಿ, ನೋ ಪಾರ್ಕಿಂಗ್, ಸಿಗ್ನಲ್ ಜಂಪ್ ಇತ್ಯಾದಿ ಜಂಜಾಟಗಳಿಂದ ದೂರವಾಗಬೇಕೆ? ಹಾಗಾದರೆ ಸೈಕಲ್ ಬಳಸಿ ಎಂಬ ಸಂದೇಶವೊಂದು ಗಮನ ಸೆಳೆಯುತ್ತದೆ.
***
ದಾವಣಗೆರೆಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ಟ್ರಾಫಿಕ್ ಪೊಲೀಸರನ್ನು ತಲೆಯಿಂದ ಗುದ್ದಿ ಕೆಡವಿದ ನಂತರ ಅವರ ಮೇಲೆ ಕಲ್ಲು ಎತ್ತಿ ಹಾಕಲು ಹೊರಟ ಹಳೆಯ ವಿಡಿಯೊ ಕೂಡ ಮತ್ತೊಮ್ಮೆ ಹರಿದಾಡುತ್ತಿದೆ. ಅದೇ ರೀತಿ ಉತ್ತರ ಭಾರತ ಮತ್ತು ದಕ್ಷಿಣ ರಾಜ್ಯಗಳಲ್ಲಿ ಈ ಹಿಂದೆ ನಡೆದಿದ್ದ ಟ್ರಾಫಿಕ್ ಹಾಸ್ಯ ಘಟನೆಗಳು ಈಗ ಮತ್ತೆ ಮರುಜೀವ ಪಡೆದುಕೊಂಡಿವೆ.
ಉತ್ತರ ಭಾರತದಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿ ಬೀಳುವ ವಾಹನ ಸವಾರರ ವೀರಾವೇಶಗಳು ಸಖತ್ ಮಜಾ ನೀಡುತ್ತವೆ. ಕೊಚ್ಚಿಯಲ್ಲಿ ಮುಚ್ಚಿದ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಹೊರಟ ದ್ವಿಚಕ್ರ ವಾಹನ ಸವಾರನ ಎದೆಯ ಅಂಗಿಯನ್ನು ಪೊಲೀಸ್ ಪೇದೆ ಹಿಡಿಯುತ್ತಾನೆ. ಮೊದಲೇ ಸಿಟ್ಟಿನಲ್ಲಿದ್ದ ವಾಹನ ಸವಾರ, ಪೊಲೀಸ್ ಪೇದೆಯ ಮುಖ, ಮೋತಿ ನೋಡದೆ ಚಪ್ಪಲಿಯಿಂದ ಇಕ್ಕುತ್ತಾನೆ.
ವಾಹನ ಅಡ್ಡಗಟ್ಟಿ ಮೈಮೇಲೆ ಬೀಳುವ ಪೊಲೀಸರನ್ನು ಅಜಾನಬಾಹು ಸರ್ದಾರ್‌ಜಿ ಯುವಕನೊಬ್ಬ ‘ಡಬ್ಲ್ಯೂಡಬ್ಲ್ಯೂಎಫ್’ ರೀತಿ ಚೆನ್ನಾಗಿ ಜಜ್ಜಿ ಹಾಕಿ ಬೈಕ್ ಹತ್ತಿ ಹೊರಡುತ್ತಾನೆ.ಪೊಲೀಸರು ಬೈಕ್ ಮುಂದಿನ ಗಾಲಿಗೆ ಹಾಕಿದ್ದ ಲಾಕ್ ಅನ್ನು ಸವಾರ ಪೊಲೀಸರ ಮುಂದೆಯೇ ಕಲ್ಲಿನಿಂದ ಜಜ್ಜಿ ಒಡೆಯುತ್ತಾನೆ. ಸವಾರನ ವೀರಾವೇಶ ಕಂಡು ಪೊಲೀಸರು ಬೆಚ್ಚಿ ಬೀಳುತ್ತಾರೆ.
***
ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರನ್ನು ಕಂಡ ವಾಹನ ಚಾಲಕರು ಬಂದ ದಾರಿಯಲ್ಲಿಯೇ ವೇಗವಾಗಿ ಹಿಂದಿರುಗಿ ಪರಾರಿಯಾಗುವ ಚಾಲಕರು. ಅವರನ್ನು ಬೆನ್ನತ್ತಿ ಓಡುವ ಪೊಲೀಸರು. ಸಿಕ್ಕಿಬಿದ್ದು ದಂಡ ಹಾಕದಂತೆ ಪೊಲೀಸರನ್ನು ಪರಿಪರಿಯಾಗಿ ಅಂಗಲಾಚುವ ವಾಹನ ಸವಾರರು...ಇಂತಹ ಅನೇಕ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಡೆಮಾಕ್ರಸಿ ಕಣ್ರಯ್ಯಾ!
ಗುಜರಾತ್ ಸರ್ಕಾರ ವಾಹನಗಳ ಮೇಲೆ ವಿಧಿಸಿರುವ ದುಬಾರಿ ದಂಡ ಕಡಿತಗೊಳಿಸಿದೆ. ನಮ್ಮಲ್ಲಿ ಯಾವೊಬ್ಬ ರಾಜಕಾರಣಿ ಇದರ ಬಗ್ಗೆ ಸೊಲ್ಲೆತ್ತಿಲ್ಲ, ಜನಸಮೂಹ ಕೂಡ ಭಯದಲ್ಲೇ ಇದ್ದಂತಿದೆ.
‘ನಮ್ಮದು ಡೆಮಾಕ್ರಸಿ ಕಣ್ರಯ್ಯಾ, ನಾವೇ ಸರ್ಕಾರಗಳನ್ನ ಆಯ್ಕೆ ಮಾಡೋದು, ಜೋರಾಗಿ ಧ್ವನಿ ಎತ್ತಲಿಕ್ಕೆ ಯಾರಿಗೂ ಸಾಧ್ಯವಿಲ್ಲವಾ?’ ಎಂದುಎಂ.ಬಿ. ಶ್ರೀನಿವಾಸಗೌಡ ಎಂಬುವವರು ಪ್ರಶ್ನಿಸಿದ್ದಾರೆ.ದಂಡಗಳು ಸಾಂಕೇತಿಕವಾಗಿರಬೇಕೇ ಹೊರತು ಜನಸಾಮಾನ್ಯರನ್ನ ಆತ್ಮಹತ್ಯೆಗೆ ದೂಡುವಂತಿರಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರೋಡ್ ಕಿಸೀ ಕೆ ಬಾಪ್ ಕಾ ನಹಿ!
‘ರೋಡ್ ಕಿಸೀ ಕೆ ಬಾಪ್ ಕಾ ನಹಿ ಹೈ’ ಎಂಬ ವಿಡಿಯೊದಲ್ಲಿ ಟ್ರಾಫಿಕ್ ಪೊಲೀಸ್ ಪಾತ್ರದಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ಸಂಚಾರ ನಿಯಮ ಉಲ್ಲಂಘಿಸುವ ಚಾಲಕರಿಗೆ ‘ಈ ರಸ್ತೆ ನಿನ್ನ ಅಪ್ಪನದಲ್ಲ’ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.ವಾಹನ ಚಾಲಕರಿಗೆ ನಿಯಮ ಪಾಲಿಸುವಂತೆ ತಿಳಿ ಹೇಳಿ ದಂಡದ ರಶೀದಿ ಹರಿಯುತ್ತಾರೆ.
ಅಚ್ಛೇ ದಿನ್ ಬಂದಿವೆ ನೋಡಿ!
ಜನರ ಜೇಬು ಖಾಲಿ ಮಾಡಿರುವ ಸರ್ಕಾರವೂ ದಂಡದ ಹೆಸರಲ್ಲಿ ಜನರನ್ನು ಹಗಲು ದರೋಡೆ ಮಾಡುತ್ತಿದೆ. ಅಚ್ಛೇ ದಿನ್ ಹೇಗಿವೆ ನೋಡಿ ಎಂದು ಕೆಲವರು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು ದುಬಾರಿ ದಂಡವನ್ನು ವಾಹನ ಸವಾರರ ಮೇಲೆ ನಡೆದ ಸರ್ಜಿಕಲ್ ಸ್ಟ್ರೈಕ್ ಎಂದು ಬಣ್ಣಿಸಿದ್ದಾರೆ.
‘ಎಡವಿದ ತಪ್ಪಿಗೆ ಕಾಲೇ ಕತ್ತರಿಸುವ ಶಿಕ್ಷೆಯೇ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ಕಾನೂನು ಎಂಬ ಗುಮ್ಮ ಇರಬೇಕು. ಆ ಕಾನೂನು ದುಬಾರಿಯಾಗಬಾರದು. ಸಂಚಾರಿ ನಿಯಮ ಜಾರಿಯಾದ ನಂತರ ಸಂಚಾರ ಪೊಲೀಸರು ರಾಜಬೀದಿಗಳಲ್ಲಿ ಹಗಲು, ಇರುಳು ಎನ್ನದೆ ಕರ್ತವ್ಯಪ್ರಜ್ಞೆ ಮೆರೆಯುತ್ತಿರುವುದೇಕೆ’ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.