ಮೊಲದ ಕಿವಿಗಳ ಹಾಗಿರುವ ಮಿಣುಕು ಹೆಡ್‌ಬ್ಯಾಂಡ್ ಹಾಕಿಕೊಂಡ ಮಕ್ಕಳು ಮತ್ತು ಯುವತಿಯರು ಎಂಜಿ ಮತ್ತು ಬ್ರಿಗೇಡ್ ರಸ್ತೆಗಳ ತುಂಬ ಓಡಾಡುತ್ತ ಹೊಸ ವರ್ಷದ ಸಂಭ್ರಮಾಚರಣೆಗೆ ವಿಶೇಷ ಕಳೆ ಕಟ್ಟಿದರು. ಎಲ್ಲೆಡೆ ಇವುಗಳನ್ನು ಮಾರಾಟ ಮಾಡುವ ಹುಡುಗರು ಭರ್ಜರಿ ವ್ಯಾಪಾರ ನಡೆಸಿದ್ದರು.
ಈ ಹೆಡ್‌ಬ್ಯಾಂಡ್‌ಗಳಲ್ಲಿ ಅಳವಡಿಸಿದ ಡಿಜಿಟಲ್ ಮಿಣುಕು ದೀಪಗಳು ವಿವಿಧ ಬಣ್ಣಗಳನ್ನು ಸೂಸಿ ಕಣ್ಮನ ಸೆಳೆದವು. ವಿಶೇಷ ಫ್ರೇಮ್ ಮತ್ತು ವಿಡಿಯೊ ಕವರೇಜ್‌ಗಾಗಿ ಫೊಟೊಗ್ರಾಫರ್/ವಿಡಿಯೊಗ್ರಾಫರ್‌ಗಳು ಷೋರೂಂಗಳ ಮೇಲ್ಛಾವಣಿ ಏರಿ ನಿಂತಿದ್ದರು. ಅವರ ಜೊತೆ ಉಸ್ತುವಾರಿಯಲ್ಲಿದ್ದ ಪೊಲೀಸರು ಕಾಣಿಸಿದರು.
ಸಂಭ್ರಮಾಚರಣೆಯಲ್ಲಿ ಸಿಳ್ಳೆ, ಕೇಕೆಗಳಿಗಿಂತ ಮಿಗಿಲಾದ ‘ಹೋ’ ಎನ್ನುವ ಕೂಗು ಎಲ್ಲೆಡೆ ಧ್ವನಿಸಿತು. ಹನ್ನೆರಡು ಗಂಟೆಯ ಹೊತ್ತಿಗೆ ಈ ಕೂಗು ತಾರಕಕ್ಕೇರಿತು. ಬಹುತೇಕ ಎಲ್ಲರ ಮೊಬೈಲ್‌ಗಳು ಜನಸಾಗರದ ದೃಶ್ಯವನ್ನು ಸೆರೆಹಿಡಿಯುತ್ತಿದ್ದವು. ಎಲ್ಲೆಡೆ ಡಿಜಿಟಲ್ ರೂಪದಲ್ಲಿ ಈ ಧರೆಯ ಮೇಲಿನ ಮಾಯಾಲೋಕ ಸೆರೆಯಾಗುತ್ತಿತ್ತು.
‘ಹ್ಯಾಪಿ ನ್ಯೂ ಇಯರ್’ ಶುಭಾಶಯ ಘೋಷವಾಕ್ಯದಂತೆ ಮೊಳಗಿತು. ಪರಸ್ಪರ ಶುಭಾಶಯ ವಿನಿಮಯದ ಬಳಿಕ ಮನೆಯತ್ತ ತೆರಳಲು ಮೆಟ್ರೊ ಸ್ಟೇಷನ್ ಮುಂದೆ ಭಾರಿ ಜನ ಸೇರಿದರು. ಪೊಲೀಸರು, ಮೆಟ್ರೊ ಸೆಕ್ಯುರಿಟಿ ಸಿಬ್ಬಂದಿ ಜನಜಂಗುಳಿಯನ್ನು ನಿಯಂತ್ರಿಸಲು ಪರದಾಡುವಂತಾಗಿತ್ತು. 2019 ಸರಿದು 2020 ಎಲ್ಲರ ಹೃನ್ಮನಗಳಿಗೆ ಸ್ಕ್ರೀನ್ ಸೇವರ್‌ನಂತೆ ಸೇರಿಕೊಂಡ ಕ್ಷಣ ರೋಮಾಂಚಕವಾಗಿತ್ತು.
***
**
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.