ADVERTISEMENT

ಹೀಗಿವೆ ಬೆಂಗಳೂರಿನ ನಮ್ಮ ರಸ್ತೆಗಳು!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
ರಾಮಮೂರ್ತಿ ನಗರದ ರಸ್ತೆಗಳಲ್ಲಿ ಗುಂಡಿಗಳಿಗೆ ಲೆಕ್ಕವಿಲ್ಲ
ರಾಮಮೂರ್ತಿ ನಗರದ ರಸ್ತೆಗಳಲ್ಲಿ ಗುಂಡಿಗಳಿಗೆ ಲೆಕ್ಕವಿಲ್ಲ   

ಮಳೆ ಸುರಿದಾಗೆಲ್ಲ ರಸ್ತೆಗಳ ಕಥೆಗಳು ಬಿಚ್ಚಿಕೊಳ್ಳುತ್ತವೆ. ಕಾಮಗಾರಿಯ ನಿಜ ದರ್ಶನ ಮಾಡಿಸುತ್ತವೆ. ಆದ, ಆಗಬಲ್ಲ ಅನಾಹುತಗಳನ್ನು ನೆನಪಿಸುತ್ತವೆ, ಎಚ್ಚರಿಸುತ್ತವೆ.

ಇನ್ನೇನು ಮಳೆಗಾಲ ಮುಗಿಯುತ್ತ ಬಂತು. ಆಗಾಗ ಮಳೆ ಸುರಿಯುವ ಸಾಧ್ಯತೆ ಇಲ್ಲವೆಂದೇನಿಲ್ಲ. ಚಳಿಗಾಲ ಹತ್ತಿರದಲ್ಲಿದೆ. ಜಲಮಂಡಳಿ ನೆಲ ಅಗೆದು ಪೈಪ್‌ಗಳನ್ನು ತುಂಬಿ ಮಣ್ಣೆಳೆದು ಹೋಗಿ ಕೆಲವೆಡೆ ತಿಂಗಳುಗಳು ಕಳೆದಿವೆ. ಇನ್ನು ಕೆಲವೆಡೆ ಕಾಮಗಾರಿ ಮುಂದುವರಿದಿದೆ. ಈ ನಡುವೆ ಗಣೇಶ ಚೌತಿಯೂ ಬಂದು ಹೋಯಿತು. ಆಗಿನಿಂದ ಆಗಾಗ ಸುರಿದ ಮಳೆಗೆ ರಸ್ತೆಗಳು ಹಾಳಾಗಿವೆ.

ಉದಾಹರಣೆಗೆ ರಾಮಮೂರ್ತಿ ನಗರಕ್ಕೆ ಸಮೀಪದ ರಿಂಗ್‌ರೋಡ್‌ ಸುತ್ತಮುತ್ತಲಿನ ಟಿ.ಸಿ. ಪಾಳ್ಯ ಮುಖ್ಯ ರಸ್ತೆ, ಹೊರಮಾವು ರಸ್ತೆ, ಎನ್‌ಆರ್‌ಐ ಲೇಔಟ್‌, ಚನ್ನಸಂದ್ರ, ಜಿಂಕೆ ತಿಮ್ಮನಹಳ್ಳಿ, ಮಾರಗೊಂಡನಹಳ್ಳಿ, ವಾರಾಣಸಿ ರಸ್ತೆ, ಕಲ್ಕೆರೆ ಇತ್ಯಾದಿ ಪ್ರದೇಶಗಳ ರಸ್ತೆಗಳು ಭಯ ಹುಟ್ಟಿಸುವಷ್ಟು ಕೆಟ್ಟು ಹೋಗಿವೆ. ಈ ಸ್ಥಿತಿ ಇಂದು ನಿನ್ನೆಯದಲ್ಲ. ಕೆ.ಆರ್‌. ಪುರಂ ಮತ್ತು ಮಹದೇವಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಈ ಎಲ್ಲ ಪ್ರದೇಶಗಳ ರಸ್ತೆಗಳು ಕಳೆದ ಮೂರ್ನಾಲ್ಕು ತಿಂಗಳಿಂದ ಇದೇ ಸ್ಥಿತಿಯಲ್ಲಿವೆ.

ADVERTISEMENT

‘ಮಹಿಳೆಯರು, ಮಕ್ಕಳು ಇಲ್ಲಿ ಓಡಾಡುವುದಾರೂ ಹೇಗೆ? ಶಾಲಾ ಮಕ್ಕಳ ಸ್ಕೂಲ್‌ ವ್ಯಾನ್‌ಗಳಂತೂ ತಂತಿ ಮೇಲೆ ನಡೆದ ಹಾಗೆ ಸಾಗುವುದನ್ನು ನೋಡಿದರೆ ಅವರು ಸುರಕ್ಷಿತವಾಗಿ ಸ್ಕೂಲ್‌ ಮುಟ್ಟುತ್ತಾರಾ ಎನ್ನುವ ಆತಂಕ ಮೂಡುತ್ತದೆ. ಮಳೆ ಬಂದರಂತೂ ಇನ್ನೂ ಫಜೀತಿ. ಟೂ ವ್ಹೀಲರ್ಸ್‌ ಸವಾರರು ಗಾಡಿ ಸ್ಕಿಡ್‌ ಆಗಿ ನೆಲ್ಲಕ್ಕೆ ಬೀಳುವುದು ಹೆಚ್ಚು. ಅಪಘಾತಗಳೂ ಸಂಭವಿಸುತ್ತವೆ. ಒಂದು ಎರಡು ಗುಂಡಿಗಳಾದರೆ ಓಕೆ. ಆದರೆ ರಸ್ತೆ ಉದ್ದಕ್ಕೂ ಗುಂಡಿಗಳೇ ಇದ್ದರೆ ವಾಹನಗಳು ಓಡಾಡುವುದು ಹೇಗೆ? ಇದನ್ನು ಸರಿಪಡಿಸಬೇಕಾದ್ದು ಯಾರು? ಇಲ್ಲಿ ಜನರು ಓಡಾಡುವುದೇ ದುಸ್ತರವಾಗಿದೆ. ಇದಕ್ಕೆಲ್ಲ ಯಾರು ಹೊಣೆ? ಸಂಬಂಧಪಟ್ಟವರು ಅತ್ಯಂತ ಶೀಘ್ರವಾಗಿ ರಸ್ತೆಗಳ ದುರಸ್ತಿ ಮಾಡಬೇಕು. ಚಳಿಗಾಲ ಬಂದಾಗ, ಬೀಸುವ ತಂಪು ಗಾಳಿಯಲ್ಲಿ ಒಣಗಿದ ರಸ್ತೆಯಿಂದ ಏಳುವ ದೂಳು ಸೇರಿ ಅನಾರೋಗ್ಯಕ್ಕೂ ಕಾರಣವಾಗಬಹುದು. ಈಗಲೇ ಬಿಬಿಎಂಪಿ ಎಚ್ಚೆತ್ತುಕೊಂಡರೆ ಒಳಿತು’ ಎನ್ನುತ್ತಾರೆಎನ್‌ಆರ್‌ಐ ಲೇಔಟ್‌ ನಿವಾಸಿ ರಾಜು ಘಾಟಗೆ.

ಥಣಿಸಂದ್ರ ಮುಖ್ಯ ರಸ್ತೆಯೂ ಅದ್ವಾನ

ಥಣಿಸಂದ್ರ ಮುಖ್ಯ ರಸ್ತೆಯುದ್ದಕ್ಕೂ ತಿಂಗಳುಗಳಿಂದ ಓಡಾಟವೇ ದುಸ್ತರವಾಗಿದೆ. ನಾಗವಾರ ಜಂಕ್ಷನ್‌ನಿಂದ ಶುರುವಾಗುವ ಈ ಸಮಸ್ಯೆ ಹೆಗಡೆ ನಗರ ಮತ್ತು ಕೋಗಿಲುವರೆಗೂ ನರಕ ಸದೃಶ್ಯ. ಹೆಗಡೆ ನಗರ, ಸಾರಾಯ್‌ ಪಾಳ್ಯ, ಅಶ್ವತ್ಥನಗರ, ಥಣಿಸಂದ್ರ, ನಾರಾಯಣಪುರ ಕ್ರಾಸ್‌ ರಸ್ತೆಗಳು ಜಲಮಂಡಳಿಯ ಅಗೆತದಿಂದ ಮತ್ತು ಆನಂತರದಲ್ಲಿ ಅದನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಏಳೆಂಟು ತಿಂಗಳಿಂದ ಅದ್ವಾನ ಸ್ಥಿತಿಯಲ್ಲಿಯೇ ಇವೆ.

‘ಮಳೆ ಸುರಿದಾಗ ಸಣ್ಣ ಕೆರೆಗಳ ಹಾಗೆ ಇಲ್ಲಿ ನೀರು ಜಮಾಯಿಸುತ್ತದೆ. ನಿರಂತರ ಮಳೆ ಸುರಿದರೆ ಪರಿಸ್ಥಿತಿ ಅಧೋಗತಿ. ಯುವಕರು, ಮಧ್ಯವಯಸ್ಕರು ಮತ್ತು ವೃದ್ಧರು ಬೆಳಗಿನ ಜಾವ ಫಜರ್‌ ನಮಾಜಿಗೆಂದು ಮಸೀದಿಗೆ ಓಡಾಡುತ್ತಾರೆ. ಬೆಳಗಿನ ಜಾವದಲ್ಲಿ ರಸ್ತೆ ಸರಿಯಾಗಿ ಕಾಣದಂಥ ಬೆಳಕಿನ ವ್ಯವಸ್ಥೆಯ ನಡುವೆ ಹೆಜ್ಜೆ ಹಾಕುವುದಾದರೂ ಹೇಗೆ ಸಾಬ್‌?’ ಎನ್ನುತ್ತಾರೆ ಎಲೆಕ್ಟ್ರಿಷಿಯನ್‌ ಮೌಲಾನಾ ಷರೀಫ್‌.

‘ಆಟೊ, ಕಾರು ಮತ್ತು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುವವರಿಗಂತೂ ತಲೆ ಬೇನೆಯಂತಾಗಿದೆ. ಒಂದೆರಡು ದಿನ ಅಥವಾ ವಾರಗಳು ಪರವಾಗಿಲ್ಲ. ಏಳೆಂಟು ತಿಂಗಳಿನಿಂದ ಇದೇ ಗೋಳಾದರೆ ಹೇಗೆ? ನಾವೆಲ್ಲ ತರಕಾರಿ, ಹಣ್ಣು ಮಾರಿಕೊಂಡು ಜೀವನ ಸಾಗಿಸುವವರು. ಈ ರಸ್ತೆಗಳಿಂದಾಗಿ ಜನರ ಓಡಾಟಕ್ಕೆ ಕಿರಿ ಕಿರಿ. ಇನ್ನು ನಮಗೆಲ್ಲಿಂದ ಗಿರಾಕಿಗಳು ಬರ್ತವೆ ಸ್ವಾಮಿ’ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳು.

ಬಿಬಿಎಂಪಿ ಆದಷ್ಟು ಬೇಗ ರಸ್ತೆ ರಿಪೇರಿಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಲಿ ಎನ್ನುವ ಒಕ್ಕೊರಲ ಬೇಡಿಕೆ ಇಲ್ಲಿನ ನಾಗರಿಕರದು.

ಮೆಟ್ರೊ ಟೀಂ

ಮೊಬೈಲ್‌ ಚಿತ್ರಗಳು: ದಿಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.