ಬಸವನಗುಡಿ ಸಮೀಪದ ಪೂರ್ಣಪ್ರಜ್ಞ ವಿದ್ಯಾಪೀಠ ಕೆಲವೇ ದಿನಗಳಲ್ಲಿ ಶ್ರದ್ಧಾ ಭಕ್ತಿಯ ಯಾತ್ರಾ ಕೇಂದ್ರವಾಗಲಿದೆ. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಬಡವರ ಬಗೆಗೆ ಹೊಂದಿದ್ದ ಪ್ರೀತಿಗೆ ಭಕ್ತರು ಮನಸೋತಿದ್ದಾರೆ. ಬೃಂದಾವನಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ನಗರದ ಬಸವನಗುಡಿ ಸಮೀಪದ ಮೂರೂವರೆ ಎಕರೆ ಪ್ರದೇಶದಲ್ಲಿ ಚಾಚಿಕೊಂಡಿರುವ ವಿದ್ಯಾಪೀಠ 63 ವರ್ಷಗಳ ಹಿಂದೆ ಸ್ವತಃ ಪೇಜಾವರ ಶ್ರೀಗಳು ಜೋಳಿಗೆ ಹಿಡಿದ ಭಿಕ್ಷೆ ಬೇಡಿ ಹಣ ಸಂಪಾದಿಸಿ ಖರೀದಿಸಿದ ಜಮೀನು. ಅಲ್ಲಿ ಸ್ಥಾಪನೆಯಾದ ಸಂಸ್ಕೃತ, ವೇದಾಂಗ, ವೇದಾಂತಗಳನ್ನು ಬೋಧಿಸುವಉಚಿತ ಶಿಕ್ಷಣದ ಗುರುಕುಲ ಇಂದಿಗೂ ನಡೆಯುತ್ತಿದೆ. 53 ಮಂದಿ ಅಧ್ಯಾಪಕರು ಹಾಗೂ 362 ಮಂದಿ ವಿದ್ಯಾರ್ಥಿಗಳು ಇಲ್ಲಿ ಅಪ್ಪಟ ಗುರುಕುಲ ಮಾದರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.
ಬೃಂದಾವನದ ಮಹಿಮೆ: ಪೇಜಾವರ ಶ್ರೀಗಳು 15 ವರ್ಷಗಳಿಂದಲೂ ಹೇಳುತ್ತ ಬಂದ ಒಂದು ವಿಚಾರ ಎಂದರೆ ತಮ್ಮನ್ನು ವಿದ್ಯಾಪೀಠದ ಆವರಣದಲ್ಲೇ ಬೃಂದಾವನಸ್ಥರನ್ನಾಗಿ ಮಾಡಬೇಕು ಎಂಬುದು. ಆದರೆ ಉಡುಪಿ ಮಠ ಮತ್ತು ವಿದ್ಯಾಪೀಠದ ಆವರಣದಿಂದ ಈ ವಿಷಯ ಹೊರಗೆ ಬಂದುದು ಕಡಿಮೆ. ಕಳೆದ ಭಾನುವಾರ (ಡಿ.29) ಬೆಳಿಗ್ಗೆ ಶ್ರೀಗಳು ಇಹತ್ಯಾಗ ಮಾಡಿದಾಗ ಅವರ ಬೃಂದಾವನ ನಿರ್ಮಾಣವಾಗುವುದು ಬೆಂಗಳೂರಿನಲ್ಲಿ ಎಂಬ ಸುದ್ದಿ ಪ್ರಸಾರವಾಯಿತು.
ಯಾತ್ರಾ ತಾಣ: ಪೂರ್ಣಪ್ರಜ್ಞ ವಿದ್ಯಾಪೀಠ 65 ವರ್ಷಗಳ ಹಿಂದೆಕಾಡಿನ ಸ್ಥಳವಾಗಿತ್ತಂತೆ. ಒಂದು ಕೊಠಡಿ ಬಿಟ್ಟರೆ ಅಲ್ಲಿ ಬೇರೇನೂ ಇರಲಿಲ್ಲವಂತೆ. ಅಲ್ಲಿ ಕೃಷ್ಣನ ದೇಗುಲ, ಪಾಠಶಾಲೆ, ವಿದ್ಯಾರ್ಥಿಗಳ ಹಾಸ್ಟೆಲ್, ಸಭಾಂಗಣ, ಸಂಶೋಧನಾ ಕೇಂದ್ರ, ಅಧ್ಯಾಪಕರ ವಸತಿಗೃಹಗಳೆಲ್ಲ ನಿರ್ಮಾಣವಾದುದು ಹಂತ ಹಂತವಾಗಿ. ಈಗ ವಿದ್ಯಾಪೀಠ ನಗರದ ಬಹುತೇಕ ಹೃದಯಭಾಗದಲ್ಲೇ ಇದ್ದರೂ ಅದು ಹೆಚ್ಚು ಸದ್ದು ಮಾಡಿದ್ದು ಇಲ್ಲ. ಬಿಳಿ ಪಂಚೆ, ಶಾಲು ಹೊದ್ದ ವಿದ್ಯಾರ್ಥಿಗಳು ಅತ್ತಿಂದಿತ್ತ ಓಡಾಡುವುದು ಬಿಟ್ಟರೆ ಅಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಅಷ್ಟಾಗಿ ಗಮನ ಹರಿಸುತ್ತಿದ್ದವರು ಇಲ್ಲ. ಪೇಜಾವರ ಶ್ರೀಗಳು ಹೆಚ್ಚಾಗಿ ಇಲ್ಲೇ ಇರುತ್ತಿದ್ದರೂ, ಪ್ರಮುಖ ಕಾರ್ಯಕ್ರಮಗಳ ಹೊರತು ಅವರು ಸಹ ವಿದ್ಯಾಪೀಠಕ್ಕೆ ಜನರನ್ನು ಸೆಳೆಯುತ್ತಿದ್ದುದು ಕಡಿಮೆಯೇ. ಆದರೆ ಯಾವಾಗ ಪೇಜಾವರ ಶ್ರೀಗಳ ಬೃಂದಾವನ ನಿರ್ಮಾಣವಾಯಿತೋ, ವಿದ್ಯಾಪೀಠದ ಚಹರೆಯೇ ಬದಲಾಗಿದೆ. ನಿತ್ಯ ಸಾವಿರಾರು ಜನ ಇಲ್ಲಿಗೆ ಬರುತ್ತಿದ್ದು, ಪೂರ್ಣ ಪ್ರಮಾಣದ ಯಾತ್ರಾ ಕೇಂದ್ರವಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಕಾಣಿಸಿವೆ.
ಕ್ಷೇತ್ರವಾದರೂ ಸಂತೋಷ...
‘ಪೇಜಾವರ ಶ್ರೀಗಳೇ ಕಟ್ಟಿ ಬೆಳೆಸಿದ ಗುರುಕುಲ ಇದು. ಅವರ ಕೊನೆಯ ಇಚ್ಛೆಯಂತೆ ಇಲ್ಲೇ ಅವರು ಇದೀಗ ಬೃಂದಾವನಸ್ಥರಾಗಿದ್ದಾರೆ. ಅವರ ಕಾರಣಕ್ಕೆ ವಿದ್ಯಾಪೀಠ ಮುಂದಿನ ದಿನಗಳಲ್ಲಿ ಯಾತ್ರಾ ಕೇಂದ್ರವಾದರೂ ಸಂತೋಷ. ಭಕ್ತರಿಗೆ ಬೇಕಾದ ಅಗತ್ಯ ಸೌಲಭ್ಯ ಒದಗಿಸುವ ಕೆಲಸ ಇಲ್ಲಿ ನಡೆಯಲಿದೆ. ಆದರೆ ಗುರುಗಳ ಇಚ್ಛೆಯಂತೆ ಇಲ್ಲಿ ವೇದ ಪಾರಾಯಣದ ಶಬ್ದವಂತೂ ನಿರಂತರ.ಯಜ್ಞೋಪವೀತ ಧಾರಣೆ ಮಾಡಿದ ಹಾಗೂ ಕಲಿಯುವ ಆಸಕ್ತಿಯಿಂದ ಬರುವಯಾವೊಬ್ಬ ವಿದ್ಯಾರ್ಥಿಗೂ ಇಲ್ಲಿ ಅವಕಾಶ ಇಲ್ಲ ಎಂದು ಹೇಳುವುದಿಲ್ಲ’ ಎಂದು ಪ್ರಾಂಶುಪಾಲ ಡಾ.ಎಚ್.ಸತ್ಯನಾರಾಯಣ ಆಚಾರ್ಯ ಹೇಳುತ್ತಾರೆ.
ವಿದ್ವಾನ್ ಇಲ್ಲಿನ ಶ್ರೇಷ್ಠ ಪದವಿ
ವಿದ್ಯಾರ್ಥಿಗಳಿಗೆ ಇಲ್ಲಿ ಎಲ್ಲವೂ ಉಚಿತ. ನಗರದ ಮಧ್ಯ ಭಾಗದಲ್ಲಿ ಇದ್ದರೂ ಇವರಿಗೆ ಮೊಬೈಲ್, ಟಿವಿ ಸಂಪರ್ಕ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಆದರೆ ಆಟ, ಊಟ, ತಿಂಡಿ, ನಿದ್ದೆಗೆ ತೊಂದರೆಯೇ ಇಲ್ಲ. ಸತತ 11 ವರ್ಷ ವ್ಯಾಸಂಗ ಮಾಡಿದ ಬಳಿಕ ಸ್ವಾಮೀಜಿ ಅವರ ಜತೆಗೆ ಎರಡು ವರ್ಷ ತಿರುಗಾಟ ಮಾಡಿದರೆ ಇಲ್ಲಿನ ವ್ಯಾಸಂಗ ಮುಗಿಯಿತು ಎಂದರ್ಥ. ಮೊದಲ ನಾಲ್ಕು ವರ್ಷ ಸಂಸ್ಕೃತ ಅಧ್ಯಯನ, ಬಳಿಕ ಶಾಸ್ತ್ರ, ಮೀಮಾಂಸೆ, ಜ್ಯೋತಿಷ, ವಿಜ್ಞಾನ, ಕಲೆ, ಗಣಿತ, ಕಂಪ್ಯೂಟರ್ ಕೋರ್ಸ್‌ಗಳೆಲ್ಲ ನಡೆಯುತ್ತವೆ. ಈ ವಿದ್ಯಾಪೀಠ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಒಳಪಟ್ಟಿದ್ದು, ಬಿ.ಎ, ಎಂ.ಎ ಪದವಿಗಳೂ ಲಭಿಸುತ್ತವೆ. 4 ವರ್ಷದ ಆರಂಭಿಕ ಸಂಸ್ಕೃತ ಅಧ್ಯಯನದ ಬಳಿಕ 2 ವರ್ಷದ ಕಾವ್ಯ, 2 ವರ್ಷದ ಸಾಹಿತ್ಯ, 3 ವರ್ಷದ ಬಿಎ, ಎರಡು ವರ್ಷದ ಎಂ.ಎ ವ್ಯಾಸಂಗ ನಡೆಯುತ್ತದೆ. ಎಂಎಗೆ ವಿದ್ವದುತ್ತಮ, ಪಿಎಚ್‌ಡಿ ಸರಿಸಮನಾದ ವಿದ್ವಾನ್ ಪದವಿ ಇಲ್ಲಿ ಲಭಿಸುತ್ತದೆ.
ಮಂತ್ರಾಲಯದಂತೆ ಪ್ರಸಿದ್ಧವಾಗಲಿದೆ
ವಿದ್ಯಾಪೀಠದ ಕೃಷ್ಣ ದೇವಾಲಯದಲ್ಲಿ ಕೃಷ್ಣನ ಜತೆಗೆ ದುರ್ಗೆ, ಮುಖ್ಯಪ್ರಾಣ, ಗಣಪತಿ, ಶೇಷ, ರುದ್ರ, ನವಗ್ರಹ, ಮಧ್ವಾಚಾರ್ಯ, ವಾದಿರಾಜ ಹಾಗೂ ರಾಘವೇಂದ್ರರ ಗುಡಿಗಳಿವೆ. ಪೇಜಾವರ ಶ್ರೀಗಳು ಮತ್ತು ಅವರ ವಿದ್ಯಾಗುರು ವಿದ್ಯಾಮಾನ್ಯರ ಬೃಂದಾವನಗಳು ಈ ದೇವಸ್ಥಾನದೊಳಗೆಯೇ ನಿರ್ಮಾಣವಾಗಲಿದ್ದು, ಇನ್ನೊಂದು ವರ್ಷದಲ್ಲಿ ಮಂತ್ರಾಲಯದಂತೆ ಪ್ರಸಿದ್ಧ ಕ್ಷೇತ್ರವಾಗಿ ಬದಲಾಗಲಿದೆ.
***
ಪೇಜಾವರ ಶ್ರೀಗಳು ಏನೆಂದು 13 ವರ್ಷ ಅವರಿಂದ ಪಾಠ ಕಲಿತ ನನಗೆ ಗೊತ್ತಿದೆ. ಅವರ ಬೃಂದಾವನ ಇಲ್ಲಿದೆ, ಇನ್ನು ವಿದ್ಯಾಪೀಠದ ಮಹಿಮೆ ಜಗದಗಲ ವ್ಯಾಪಿಸಲಿದೆ
- ಸುದರ್ಶನ, ಅಧ್ಯಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.