ಮನುಷ್ಯನ ಅತ್ಯಂತ ನಂಬುಗೆಯ ಪ್ರಾಣಿ ಎನಿಸಿಕೊಂಡಿರುವ ‘ಶ್ವಾನ’ಗಳು ಭಾನುವಾರ ತಮ್ಮ ಒಡೆಯರೊಂದಿಗೆಕಬ್ಬನ್ ಪಾರ್ಕ್‌ನ ದಿ ವೀಕೆಂಡ್ ಡಾಗ್ ಪಾರ್ಕ್‌ನಲ್ಲಿ ಹೆಜ್ಜೆ ಹಾಕಿದವು. ಆ ಮೂಲಕ ಸೂರಿಲ್ಲದ ತಮ್ಮ ಸ್ನೇಹಿತರನ್ನು ದತ್ತು ತೆಗೆದುಕೊಳ್ಳುವ ಅಗತ್ಯ ಮತ್ತು ಅವುಗಳ ಕಲ್ಯಾಣದ ಮಹತ್ವವನ್ನು ಸಾರಿ ಹೇಳಿದವು.
ಸುಮಾರು ಎಪ್ಪತ್ತು ಮಂದಿ ತಮ್ಮ ನೆಚ್ಚಿನ ಸಾಕುಪ್ರಾಣಿಗಳೊಂದಿಗೆ ಬೆಂಗಳೂರು ಮಿಡ್‌ನೈಟ್ ಮ್ಯಾರಾಥಾನ್‌ನ ಪೆಟ್–ಎ–ಥಾನ್‌ನಲ್ಲಿ ಭಾಗವಹಿ ಸಿದ್ದರು. ಪ್ರಾಣಿಗಳ ಬಗ್ಗೆ ಸಹಾನುಭೂತಿ ಮತ್ತು ಅವುಗಳ ಕಲ್ಯಾಣದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಈ ಕಾರ್ಯಕ್ರಮವನ್ನುಕಬ್ಬನ್ ಪಾರ್ಕ್ ಕೇನೈನ್ಸ್ ಉಸ್ತುವಾರಿಯ ಡಾಗ್ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದು ರೋಟರಿ ಬೆಂಗಳೂರು ಐಟಿ ಕಾರಿಡಾರ್ (ಆರ್‌ಬಿಐಟಿಸಿ) ಆರಂಭಿಸಿದ ಒಂದು ಅಭಿಯಾನ. ಕೆಟಿಪಿಒ ವೈಟ್‌ಫೀಲ್ಡ್‌ನಲ್ಲಿ ಡಿ.7ರಂದು ನಡೆಯಲಿರುವ ಬೆಂಗಳೂರು ಮಿಡ್‌ನೈಟ್ ಮ್ಯಾರಾಥಾನ್‌ನ ಪೂರ್ವಭಾವಿ ಕಾರ್ಯಕ್ರಮ ಇದಾಗಿದೆ.
ಭಾನುವಾರದ ಹಿತವಾದ ಬಿಸಿಲಿನಲ್ಲಿ ಹಸಿರು ಹುಲ್ಲು ಹಾಸುಗೆಯ ಮೇಲೆ ತಮ್ಮ ಬದುಕಿನ ಹಕ್ಕುಗಳಿಗಾಗಿ ಹೆಜ್ಜೆ ಹಾಕುವುದರ ಜೊತೆಗೆ ತಮ್ಮ ಹೊಸ ಸ್ನೇಹಿತರನ್ನು ಕಂಡ ಈ ಪ್ರಾಣಿಗಳು ಪುಳಕಿತಗೊಂಡಂತಿದ್ದವು. ನಗರದ ಇತರ ವಿವಿಧ ಜಾತಿಯ ಶ್ವಾನಗಳನ್ನು ಕಂಡು ಪೆಟ್–ಎ–ಥಾನ್‌ನಲ್ಲಿ ಭಾಗವಹಿಸಿದ ಸಾಕುಪ್ರಾಣಿಗಳ ಮಾಲೀಕರು ಕೂಡ ಖುಷಿಪಟ್ಟರು. ವಿವಿಧ ತಳಿಯ ಹಲವು ರೂಪ ಮತ್ತು ಆಕಾರದ ಶ್ವಾನಗಳು ಭಾಗವಹಿಸಿದ್ದವು. ಪಗ್ಸ್, ಐರಿಶ್ ಸೆಟರ್, ಲೆಬ್ರಡಾರ್, ಗೋಲ್ಡನ್ ರೆಟ್ರೀವರ್ಸ್, ಬಾಕ್ಸರ್ ಅಲ್ಲದೇ ಭಾರತೀಯ ಮೂಲದ ವಿವಿಧ ತಳಿಯ ಶ್ವಾನಗಳು ಇಲ್ಲಿ ಕಂಡುಬಂದವು.
ಇಡೀ ಪ್ರದೇಶದಲ್ಲಿ ಈ ಶ್ವಾನಗಳದ್ದೇ ಕಲರವ. ಅನ್ಯ ತಳಿಯ ಶ್ವಾನಗಳೊಂದಿಗೆ ಬೆರೆತ ಖುಷಿಯಲ್ಲಿ ಇವುಗಳ ಕೂಗಾಟ, ತುಂಟಾಟ ಸಾಕುಪ್ರಾಣಿಗಳ ಮಾಲೀಕರು ಮತ್ತು ಪ್ರಾಣಿ ಪ್ರಿಯರನ್ನು ಮುದಗೊಳಿಸಿದವು.
ಸಮಾನ ಮನಸ್ಕ ಪ್ರಾಣಿಪ್ರಿಯರು ತಮ್ಮ ಸಾಕುಪ್ರಾಣಿಗಳ ವಿವರಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ಇದೊಂದು ರೀತಿಯಲ್ಲಿ ಪ್ರಾಣಿಗಳ ಕ್ಷೇಮಾಭಿವೃದ್ಧಿ ಮತ್ತು ಕಾಳಜಿಯ ನೆಲೆಯಲ್ಲಿ ಪರಸ್ಪರ ಕೊಡು ಕೊಳ್ಳುವಿಕೆಯ ಅವಕಾಶವೂ ಆಗಿತ್ತು.
‘ಈ ಕಾರ್ಯಕ್ರಮ ಕೇವಲ ಮೋಜಿನ ಸಂಗತಿ ಅಷ್ಟೇ ಆಗಿರಲಿಲ್ಲ. ನನ್ನ ನಾಯಿಯನ್ನು ಇಲ್ಲಿಗೆ ಕರೆತಂದಿದ್ದು ನನಗೆ ಖುಷಿ ಕೊಟ್ಟಿತು. ಪೆಟ್–ಎ–ಥಾನ್‌ನಲ್ಲಿ ಭಾಗವಹಿಸಿದ್ದರಿಂದ ಸಂತಸವಾಯಿತು. ಕಾರ್ಯಕ್ರಮದ ಸಂಘಟಕರು ಅಭಿನಂದನಾರ್ಹರು’ ಎಂದು ಪೆಟ್–ಎ–ಥಾನ್‌ನಲ್ಲಿ ಭಾಗವಹಿಸಿದ್ದ ಸತ್ಯಮೂರ್ತಿ ಹೇಳಿದರು.
ಮಾಹಿತಿಗೆ: www.midnightmarathon.in
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.