ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಹೇಗಿತ್ತು?
ಐದು ವರ್ಷಗಳಿಂದ ಮುಂಬೈನ ಹಮ್ ಸಫರ್ ಸಂಸ್ಥೆಯು ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ. ನಾನು ನಡೆಸಿಕೊಡುವ ಎಲ್ಲಾ ಕಾರ್ಯಕ್ರಮಗಳನ್ನು ಅವರಿಗೆ ಕಳುಹಿಸಿಕೊಟ್ಟಿದ್ದೆ. ಅದರಲ್ಲಿ ‘ಯಾರಿವರು?’ ಕಾರ್ಯಕ್ರಮವನ್ನು ಗುರುತಿಸಿ ಅತ್ಯುತ್ತಮ ಕಾರ್ಯಕ್ರಮ ಎಂದು ಪ್ರಶಸ್ತಿ ನೀಡಿದೆ.
‘ಯಾರಿವರು?’ ಕಾರ್ಯಕ್ರಮದ ಬಗ್ಗೆ ಹೇಳಿ
ತೃತೀಯ ಲಿಂಗಿ ಸಮುದಾಯದ ವಿಭಿನ್ನ ಕೆಲಸಗಳನ್ನು ಈ ಕಾರ್ಯಕ್ರಮದ ಮೂಲಕ ಗುರುತಿಸಲಾಗುತ್ತಿದೆ. ಜನ ನೀಡುತ್ತಿರುವ ಪ್ರೋತ್ಸಾಹದಿಂದ ಸ್ವಂತ ಉದ್ಯೋಗದಲ್ಲಿ ತೊಡಗಿಕೊಳ್ಳಲು ಮುಂದಾಗುತ್ತಿದ್ದಾರೆ. ತೃತಿಯ ಲಿಂಗಿಗಳೆಂದರೆ ಕೇವಲ ಭಿಕ್ಷಾಟನೆ ಮಾಡುವುದು. ಲೈಂಗಿಕ ವೃತ್ತಿಯಲ್ಲಿ ತೊಡಗುವುದಷ್ಟೆ ಅಲ್ಲ. ವಿವಿಧ ರಂಗಗಳಲ್ಲಿ ತೊಡಗಿಸಿಕೊಂಡ ತೃತೀಯ ಲಿಂಗಿಗಳನ್ನು ಗುರುತಿಸಲಾಗುತ್ತಿದೆ.
ಈ ಪ್ರಶಸ್ತಿ ಸಿಕ್ಕ ಕ್ಷಣ?
ಈ ಪ್ರಶಸ್ತಿ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಪ್ರಶಸ್ತಿ ಸಮಾರಂಭದಲ್ಲಿ ಮೂರು ಸಾವಿರ ಜನ ಇದ್ದರು. ‘ಯಾರಿವರು?’ ಕಾರ್ಯಕ್ರಮದ ಒಂದು ತುಣಕನ್ನು ತೋರಿಸಲಾಯಿತು. ಭಾಗವಹಿಸಿದವರೆಲ್ಲೂ ಪ್ರಶಂಸೆಯ ಮಾತುಗಳನ್ನಾಡಿದರು. ಈ ಸಮುದಾಯಕ್ಕೆ ಆದರ್ಶ ವ್ಯಕ್ತಿ ಎಂದು ಬಣ್ಣಿಸಿದರು ಕೆಲಸದಲ್ಲಿ ನಿಷ್ಠೆ ಇದ್ದರೆ ಪ್ರತಿಫಲ ತಾನಾಗಿಯೇ ದೊರೆಯುವುದು, ತಡವಾಡರೂ ತಾಳ್ಮೆಯಿಂದ ಇದ್ದರೆ ಫಲ ದೊರೆಯುತ್ತದೆ. ಈ ಪ್ರಶಸ್ತಿ ಸಿಕ್ಕಿದ್ದು ನನಗೆ ಇನ್ನೂ ಉತ್ತಮ ಕಾರ್ಯಕ್ರಮ ಮಾಡಬೇಕೆಂಬ ಉತ್ಸಾಹ ಇಮ್ಮಡಿಯಾಗಿದೆ.
ಪ್ರಶಸ್ತಿಗಳು?
2018ರಲ್ಲಿ ‘ಯಾರಿವರು?’ ಕಾರ್ಯಕ್ರಮಕ್ಕೆ ‘ಗೋಲ್ಡನ್ ಅವಾರ್ಡ್‘ ಪ್ರಶಸ್ತಿಯನ್ನು ರೇಡಿಯೋ ಕಾನೆಕ್ಸ್ ಸಂಸ್ಥೆ ಮುಂಬೈನಲ್ಲಿ ನೀಡಿತ್ತು. ಸುವರ್ಣ ರಾಜ್ಯ ಪ್ರಶಸ್ತಿ, ಯುವ ಸಾಧಕಿ ಪ್ರಶಸ್ತಿ, ನಮ್ಮ ಬೆಂಗಳೂರು ಪ್ರಶಸ್ತಿ, 2018ರ ಮಹಿಳಾ ಸಾಧಕಿ ಪ್ರಶಸ್ತಿಯು ಸಾಲು ಮರದ ತಿಮ್ಮಕ ಅವರೊಂದಿಗೆ ಸಿಕ್ಕಿತ್ತು. ಮೊದಲ ತೃತೀಯ ಲಿಂಗಿ ರೇಡಿಯೋ ಜಾಕಿ ಎಂದು ‘ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ನನ್ನ ಹೆಸರು ಸೇರಿಕೊಂಡಿತು. ನನ್ನ ಸಾಧಾನೆಯ ಹಾದಿ ಗುರುತಿಸಿ ವಿವಿಧ ಸಂಸ್ಥೆಗಳು 25ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.
ಸಿನಿಮಾ ಪಯಣ?
‘ಜಯನಗರ 4ನೇ ಬ್ಲಾಕ್’ ಕಿರುಚಿತ್ರವನ್ನು ಧನಂಜಯ ಅವರೊಂದಿಗೆ ಮಾಡಿದ್ದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಅನೇಕ ಕಿರು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಸೌಮ್ಯ, ಏಮಾಮ, ನೀನ್ ಗಂಡ್ಸ ಹೆಂಗ್ಸ, ಅವ್ನಿ, ಸಿದ್ಧಿ ಸೀರೆ ಹೀಗೆ ಅನೇಕ ಕಿರುಚಿತ್ರಗಳಲ್ಲಿ ನಟಿಸಿದ್ದೇನೆ. ಧಾರವಾಹಿಗಳಲ್ಲಿಯೂ ನಟಿಸುವ ಅವಕಾಶ ಬರುತ್ತಿವೆ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದೇನೆ.
ಹಿಂದಿನ ಮತ್ತು ಈಗಿನ ಜೀವನಕ್ಕೆ ವ್ಯತ್ಯಾಸ?
ಅಜಗಜಾಂತರ ವ್ಯತ್ಯಾಸವಿದೆ. ಮೊದಲು ನನ್ನನ್ನು ನೋಡುತ್ತಿದ್ದ ರೀತಿಯೇ ಬೇರೆ ಇತ್ತು. ನಾನು ರೆಡಿಯೋ ಜಾಕಿ ಎಂದು ಗುರುತಿಸಿಕೊಂಡ ನಂತರ ನನ್ನನ್ನು ಗೌರವಿಸುತ್ತಾರೆ, ಎಲ್ಲಿ ಹೋದರು ಗುರುತಿಸಿ ಮಾತನಾಡುತ್ತಾರೆ. ನನ್ನನ್ನು ಯಾರೂ ಪ್ರತ್ಯೇಕಿಸಿ ನೋಡುವುದಿಲ್ಲ, ಅವರಲ್ಲಿ ಒಬ್ಬಳೆಂದು ಭಾವಿಸುತ್ತಾರೆ. ಇದೆಲ್ಲವನ್ನು ನೋಡಿದರೆ ತೃತೀಯ ಲಿಂಗಿಗಳೆಂದರೆ ಅವರಿಗಿದ್ದ ಮನೋಭಾವವನ್ನು ಬದಲಾಯಿಸಿದ್ದೇವೆ ಎನ್ನುವ ಹೆಮ್ಮೆ ಇದೆ.
ಆರ್.ಜೆ. ಹಂಬಲ ಹುಟ್ಟಿದ್ದು ಯಾವಾಗ?
ಮೊದಲು ನಾನು ಎರಡು ವರ್ಷ ಸರ್ಕಾರೆತರ ಸಂಸ್ಥೆಯಲ್ಲಿ (ಎನ್‌ಜಿಒ) ಕೆಲಸ ಮಾಡುತ್ತಿದ್ದೆ. 2010ರಲ್ಲಿ ಸಮುದಾಯ ರೇಡಿಯೋದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಮೊದಲು ‘ಯಾರಿವರು?’ ಕಾರ್ಯಕ್ರಮದಲ್ಲಿ ಕುಟುಂಬದಿಂದ ಹೊರ ಬಂದ ತೃತೀಯ ಲಿಂಗಿಗಳು ಎದುರಿಸುವ ಸಮಸ್ಯೆ, ಸಮಾಜದಲ್ಲಿ ಸ್ಥಾನಮಾನ, ಪೊಲೀಸರಿಂದ ಮತ್ತು ಜನರಿಂದ ದೌರ್ಜನ್ಯಗಳ ಕುರಿತು ಕಾರ್ಯಕ್ರಮ ಮಾಡಿದೆ. ಅವರ ಆರೋಗ್ಯ, ಸಂಗಾತಿಗಳು, ದೊರಕಬೇಕಾದ ಸೌಲಭ್ಯಗಳು ಹೀಗೆ ವಿವಿಧ ರೀತಿಯಲ್ಲಿ ಕಾರ್ಯಕ್ರಮ ನಡೆಸಿಕೊಡಲು ಪ್ರಾರಂಭಿಸಿದೆ. ತ್ಯಾಜ್ಯ ಸಂಗ್ರಹಿಸುವವರು, ಲೈಂಗಿಕ ಕಾರ್ಯಕರ್ತರು ಹೀಗೆ ಅನೇಕ ಸಮುದಾಯದ ನೋವು–ನಲಿವು, ಸೌಲಭ್ಯಗಳ ಬಗ್ಗೆ ತಿಳಿಸಿಕೊಡುತ್ತಿದ್ದೇನೆ.
ನಿಮ್ಮ ಸಲಹೆ ಏನು?
ನಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ನಮ್ಮ ಕರ್ತವ್ಯವನ್ನು ನಿರ್ವಹಿಸಿಕೊಂಡು ಹೋದರೆ ಯಶಸ್ಸು ಸಿಗುತ್ತದೆ. ಬದುಕುವ ರೀತಿಯಲ್ಲಿ ನಮಗೆ ಗೌರವ ಸಿಗುತ್ತೆ. ಸಿಕ್ಕ ಬದುಕನ್ನು ಚೆಂದವಾಗಿ ಬದುಕೋಣ, ಉತ್ತಮ ಕೆಲಸಗಳನ್ನು ಮಾಡೋಣ, ಜಗದ ಕಣ್ಣು ತೆರೆಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.