ADVERTISEMENT

ಕೃತಕ ಹೃದಯ, 155 ದಿನ ಬದುಕುಳಿದ ಮಹಿಳೆ- ಬೆಂಗಳೂರು ವೈದ್ಯರ ಸಾಧನೆ !

ಸೆ.29 ವಿಶ್ವ ಹೃದಯ ದಿನ

ಮಾನಸ ಬಿ.ಆರ್‌
Published 29 ಸೆಪ್ಟೆಂಬರ್ 2019, 19:45 IST
Last Updated 29 ಸೆಪ್ಟೆಂಬರ್ 2019, 19:45 IST
ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿರುವ ಮಹಿಳೆ
ಹೃದಯ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿರುವ ಮಹಿಳೆ   

ಇದ್ದಕ್ಕಿದ್ದಂತೆ ಕುಸಿದುಬಿದ್ದ 42 ವರ್ಷದ ಆಶಾ ಅವರನ್ನು ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಹೃದಯ ಸ್ತಂಭನಕ್ಕೆ ಒಳಗಾಗಿದ್ದ ಅವರು ಗಂಭೀರ ಸ್ಥಿತಿಯಲ್ಲಿದ್ದರು. ಕೃತಕ ಉಸಿರಾಟ ವ್ಯವಸ್ಥೆ ನೀಡಲಾಯಿತು. ಆದರೂ ಅವರ ಸ್ಥಿತಿ ಸುಧಾರಿಸಲಿಲ್ಲ. ಹೃದಯ ಕಸಿ ಮಾಡುವುದನ್ನು ಬಿಟ್ಟರೆ ವೈದ್ಯರಿಗೆ ಬೇರೆ ಮಾರ್ಗಗಳು ಕಾಣಲಿಲ್ಲ.

ಹೃದಯ ಕಸಿ ಮಾಡಬೇಕಾದರೆ ‘ಒ’ ಪಾಸಿಟಿವ್‌ ಬ್ಲಡ್‌ ಗ್ರೂಪ್‌ ಹೊಂದಿರುವ ಹೃದಯ ದಾನಿ ಸಿಗಬೇಕು. ಇದಕ್ಕಾಗಿ ಕಡಿಮೆ ಎಂದರೆ 6 ತಿಂಗಳು ಕಾಯಲೇಬೇಕು. ಅಲ್ಲಿಯವರೆಗೂ ರೋಗಿ ಬದುಕಿರುವುದಾದರೂ ಹೇಗೆ? ಎಂಬ ಪ್ರಶ್ನೆ ಕುಟುಂಬದವರನ್ನು ಕಾಡಿತು. ಇಂತಹ ಪರಿಸ್ಥಿತಿಯಲ್ಲಿ ವೈದ್ಯರು ದಿಟ್ಟ ಹೆಜ್ಜೆ ಇಟ್ಟರು. ಕೃತಕ ಹೃದಯ ಯಂತ್ರವನ್ನು (ಬಿಐವಿಎಡಿ–ಬೈವೆಂಟ್ರಿಕ್ಯುಲರ್‌ ಅಸಿಸ್ಟ್‌ ಡಿವೈಸ್‌) ಅಳವಡಿಸುವ ತೀರ್ಮಾನಕ್ಕೆ ಬರಲಾಯಿತು. ಆದರೆ ಇದು ಎಷ್ಟು ದಿನ ಸಾಧ್ಯ ಎಂಬ ಪ್ರಶ್ನೆಯೂ ಅವರ ಮುಂದಿತ್ತು.

ಭಾರತದಲ್ಲಿ ರೋಗಿಯೊಬ್ಬರು ಗರಿಷ್ಠ 65 ದಿನ ಕೃತಕ ಹೃದಯ ಯಂತ್ರದ ಸಹಾಯದಲ್ಲಿ ಬದುಕಿದ್ದ ಉದಾಹರಣೆ ಇದೆ. ಆದರೆ ಈ ಪ್ರಕರಣದಲ್ಲಿ ಅಷ್ಟು ಬೇಗ ಹೃದಯ ದಾನಿಗಳು ಸಿಗುವ ಲಕ್ಷಣಗಳು ಇರಲಿಲ್ಲ. ಕೃತಕ ಹೃದಯದ ನೆರವು, ಕುಟುಂಬದವರು ಹಾಗೂ ವೈದ್ಯರ ಸಹಾಯದಿಂದ ಆಶಾ 155 ದಿನ ಬದುಕುಳಿದರು.ನಂತರ ಹೃದಯ ದಾನಿಯೊಬ್ಬರು ಸಿಕ್ಕರು. ಯಶಸ್ವಿಯಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ADVERTISEMENT

ಕೃತಕ ಹೃದಯದ ಸಹಾಯದಿಂದ ರೋಗಿಯೊಬ್ಬರು ಇಷ್ಟು ದೀರ್ಘ ಅವಧಿ ಬದುಕಿರುವ ಭಾರತದ ಮೊದಲ ಪ್ರಕರಣ ಇದಾಗಿದೆ ಎನ್ನುತ್ತಾರೆವಿಕ್ರಂ ಆಸ್ಪತ್ರೆಯ ವೈದ್ಯರು.

‘ನಾನು ಈ ಚಿಕಿತ್ಸೆಗಾಗಿ ₹75 ಲಕ್ಷ ಖರ್ಚು ಮಾಡಿದ್ದೇನೆ. ಹೃದಯ ಕಸಿಗಾಗಿ ನೋಂದಣಿ ಮಾಡಿಕೊಂಡು ಆರು ತಿಂಗಳು ಕಾದೆವು. ಈ ಅವಧಿ ನನ್ನ ಪತ್ನಿಯ ಜೀವನದಲ್ಲಿ ಅಮೂಲ್ಯವಾದದ್ದು. ಇಷ್ಟು ದಿನ ಆಕೆ ಬದಕಿರಲು ಹಣಕ್ಕಿಂತ ಹೆಚ್ಚಾಗಿ ವೈದ್ಯರ ಶ್ರಮ ಕಾರಣ. 155 ದಿನ ಆಕೆಗೆ ಸೋಂಕು ತಗುಲದಂತೆ ಶ್ರಮವಹಿಸಿ ನೋಡಿಕೊಳ್ಳಬೇಕಾಯಿತು’ ಎಂದು ಆಶಾ ಅವರ ಪತಿ ಆನಂದ ಮೂರ್ತಿ ಹೇಳಿದರು.

ಹೃದ್ರೋಗಗಳಿಗೆ ವಿಶೇಷ ಘಟಕ

ಹೃದ್ರೋಗಗಳಿಗೆ ತುರ್ತು ಸಂದರ್ಭಗಳಲ್ಲಿ ಸುಧಾರಿತ ಚಿಕಿತ್ಸೆಗೆ ತಕ್ಷಣ ನೀಡುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ಒಳಗೊಂಡ ವಿಶೇಷ ಘಟಕ ‘ಹಾರ್ಟ್ ಫ್ಯೇಲುವರ್‌ ಕ್ಲಿನಿಕ್‌@ವಿಕ್ರಂ ಆರಂಭಿಸಿದ್ದೇವೆ ಎಂದುವಿಕ್ರಂ ಆಸ್ಪತ್ರೆವ್ಯವಸ್ಥಾಪಕ ನಿರ್ದೇಶಕಡಾ. ಸೋಮೇಶ್‌ ಮಿತ್ತಲ್‌ ಹೇಳುತ್ತಾರೆ.

ಸವಾಲಿನ ಪ್ರಕರಣ

ಈ ಪ್ರಕರಣ ಆರಂಭದಿಂದಲೂ ಸವಾಲಿನದಾಗಿತ್ತು. ಅವರ ಹೃದಯ ಕಾರ್ಯನಿರ್ವಹಣೆ (ಪಂಪಿಂಗ್‌) ದುರ್ಬಲವಾಗಿತ್ತು. ಹೃದಯ ಬಡಿತ ಕೂಡ ಅಸ್ವಾಭಾವಿಕವಾಗಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ವೆಂಟ್ರಿಕ್ಯುಲರ್‌ ಟ್ಯಾಚಿಕಾರ್ಡಿಯಾ’ ಎಂದು ಕರೆಯುತ್ತೇವೆ. ‘ಸರ್ಸೊಇಡೊಸಿಸ್‌’ ಸಮಸ್ಯೆಯಿಂದಾಗಿ ಅವರು ಕೆಲವೇ ತಿಂಗಳಲ್ಲಿ ದೈನಂದಿನ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗದೇ ಗಂಭೀರ ಸ್ಥಿತಿಗೆ ತಲುಪಿದರು. ಇದಕ್ಕೆ ಹೃದಯ ಕಸಿಯೊಂದೇ ಪರಿಹಾರವಾಗಿತ್ತು ಎನ್ನುತ್ತಾರೆವೈದ್ಯಕೀಯ ನಿರ್ದೇಶಕ ಡಾ.ಪಿ.ರಂಗನಾಥ್‌ ಹೇಳುತ್ತಾರೆ.

ಹತ್ತಾರು ಮೆಟ್ಟಿಲು ಹತ್ತುತ್ತಾರೆ

ರೋಗಿಯ ಹೃದಯದಲ್ಲಿನ ಎಡ ಮತ್ತು ಬಲಭಾಗದ ಪಂಪಿಂಗ್ ಚೇಂಬರ್‌ ದುರ್ಬಲವಾಗಿದ್ದವು. ಆದ್ದರಿಂದ ಕೃತಕ ಹೃದಯ ಬೆಂಬಲ ಅನಿವಾರ್ಯವಾಗಿತ್ತು. ಈಗ ಹೃದಯ ಕಸಿ ಮಾಡಿದ ಬಳಿಕ ಅವರು ಆರೋಗ್ಯವಾಗಿದ್ದಾರೆ. ಈಗ ಅವರು ಮೂರು ಅಂತಸ್ತಿನ ಕಟ್ಟಡವನ್ನು ಒಬ್ಬರೇ ಹತ್ತುತ್ತಾರೆ. ಈ ಪ್ರಕರಣದಲ್ಲಿ ಹಣ ಮಾತ್ರ ಕೆಲಸ ಮಾಡಿಲ್ಲ. ರೋಗಿಯ ಮನೋಬಲ ಹಾಗೂ ಅವರ ಕುಟುಂಬದವರ ಶ್ರಮದಿಂದ ಮಾತ್ರ ಇದೆಲ್ಲಾ ಸಾಧ್ಯವಾಗಿದೆ’ ಎಂದು ಕಾರ್ಡಿಯಕ್‌ ಸರ್ಜನ್‌ ಡಾ.ವಿ.ನರೇಂದ್ರ ಹೇಳಿದರು.

ಪ್ರತಿಕ್ರಿಯೆ ಉತ್ತಮವಾಗಿತ್ತು

ಆರಂಭಿಕ ಚಿಕಿತ್ಸೆಗೆ ಆಶಾ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಹೃದಯ ವೈಫಲ್ಯಕ್ಕೆ ಒಳಗಾದರು. ಅವರನ್ನು ರಕ್ಷಿಸಲು ಬೇರೆ ದಾರಿಗಳಿಲ್ಲ. ಹೃದಯ ಸ್ತಂಭನ ಭಾರತದಲ್ಲಿ ಶೇ 1ರಿಂದ 2ರಷ್ಟು ಜನರನ್ನು ಕಾಡುತ್ತಿದೆ. ಇದು ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂದುಡಾ.ಪಿ.ಪದ್ಮಕುಮಾರ್‌ ಹೇಳುತ್ತಾರೆ.

ವೈಫಲ್ಯ ತಡೆಗಟ್ಟಬಹುದು

ಪ್ರಾರಂಭಿಕ ಹಂತದಲ್ಲಿ ಪತ್ತೆಯಾದರೆ ಹೃದಯ ವೈಫಲ್ಯವನ್ನು ಪತ್ತೆ ಮಾಡಬಹುದು. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಬೇಕಾಗುತ್ತದೆ. ಸೂಕ್ತ ಚಿಕಿತ್ಸೆ ನೀಡಬೇಕು. ಉನ್ನತ ಮಟ್ಟದ ನಿರ್ವಹಣೆಯಿಂದ ತಡೆಗಟ್ಟಲು ಸಾಧ್ಯವಿದೆ ಎಂಬುದುಡಾ.ಗಿರೀಶ್‌ ಗೋಡಬೋಲೆ ಅವರ ಅಭಿಪ್ರಾಯ.

ಪ್ರಮುಖ ಪಾತ್ರ

ಹೃದ್ರೋಗಿಗಳಿಗೆ ಸೂಕ್ತ ಮತ್ತು ಸುಧಾರಿತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರಂಭಿಸಲಾಗಿರುವ ಹಾರ್ಟ್‌ ಫೇಲ್ಯುವರ್‌ ಕ್ಲಿನಿಕ್‌ ಮುಂದಿನ ದಿನಗಳಲ್ಲಿ ಬಹಳಷ್ಟು ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದೊಂದು ಶ್ಲಾಘನೀಯ ಕೆಲಸ ಎಂದುಡಾ. ರಾಘವೇಂದ್ರ ಬಾಳಿಗಾ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.