ಸಾಮಾನ್ಯವಾಗಿ ಶಾಲೆಗಳಲ್ಲಿ ರಾಜ್ಯದ ಭೂಪಟವನ್ನು ಹಿಡಿದು ಬೆಂಗಳೂರು ಇಲ್ಲಿದೆ, ಹಾವೇರಿ ಅಲ್ಲಿದೆ, ಬೀದರ್ ಮೇಲೆ ಇದೆ ಎಂದು ಬೋಧಿಸುವುದನ್ನು ನೋಡಿದ್ದೇವೆ. ಇಲ್ಲೊಂದು ಶಾಲೆಯಲ್ಲಿ ಜಿಲ್ಲೆಗಳನ್ನೇ ತಮ್ಮ ಶಾಲೆಗೆ ಕರೆಸಿಕೊಂಡಿದ್ದಾರೆ! ಇದು ಹೇಗೆ ಸಾಧ್ಯ ಎಂದು ಅಚ್ಚರಿ ಪಡಬೇಡಿ. ಬ್ಲುಮೂನ್ ಶಾಲೆ ಅದನ್ನು ಸಾಧ್ಯವಾಗಿಸಿದೆ.
ನವೆಂಬರ್ ತಿಂಗಳು ಕನ್ನಡ ಹಬ್ಬದ ತಿಂಗಳು. ನೆಲಮಂಗಲ ಸಮೀಪದ ನಂದರಾಮಯ್ಯನಪಾಳ್ಯದ ಬ್ಲುಮೂನ್ ಶಾಲೆಯಲ್ಲಿ ನವೆಂಬರ್ ತಿಂಗಳನ್ನು ‘ಕನ್ನಡ ಮಾಸ’ವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ದಿನವೂ ಕನ್ನಡದ ಇತಿಹಾಸ, ಪರಂಪರೆಯನ್ನು ಸಾರುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಈ ವರ್ಷ ವಿಶೇಷವಾಗಿ ರಾಜ್ಯದ ಎಲ್ಲ 30 ಜಿಲ್ಲೆಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದರ ಮೂಲಕ ರಾಜ್ಯದ ಇತಿಹಾಸ, ಸ್ಥಳಪುರಾಣ, ಮಹಿಮೆ, ಜಿಲ್ಲೆಯ ವಿಶೇಷತೆಗಳು, ಕೊಡುಗೆಗಳು ಹೀಗೆ ಸಮಗ್ರ ಮಾಹಿತಿಯನ್ನು ಇಲ್ಲಿ ಉಣಬಡಿಸಲಾಗುತ್ತಿದೆ. ಅದೂ ಪ್ರಾತ್ಯಕ್ಷಿಕೆ ಸಮೇತ. ಪ್ರತಿ ದಿನವೂ ಒಂದೊಂದು ಜಿಲ್ಲೆಯ ಕೋಟೆ, ದೇವಸ್ಥಾನ, ಸ್ಮಾರಕ, ಇತಿಹಾಸ ಪುರುಷರುಗಳ ಪ್ರತಿಕೃತಿಗಳನ್ನು ನಿರ್ಮಿಸಿ ಮಕ್ಕಳು ಮತ್ತು ವೀಕ್ಷಕರಿಗೆ ಆ ಜಿಲ್ಲೆಯ ಪ್ರವಾಸ ಮಾಡಿದ ಅನುಭವವನ್ನು ಕಟ್ಟಿಕೊಡುತ್ತಿದ್ದಾರೆ.
ಅದರಲ್ಲೂ ಚಿತ್ರದುರ್ಗವನ್ನು ಕಣ್ಮನ ಸೆಳೆಯುವ ರೀತಿಯಲ್ಲಿ ನಿರ್ಮಿಸಲಾಗಿತ್ತು. ಓಬವ್ವನ ಕಿಂಡಿ, ಕಾಮನ ಬಾಗಿಲು, ಏಳು ಸುತ್ತಿನ ಕೋಟೆ, ಏಕನಾಥೇಶ್ವರ ದೇವಾಲಯ, ಹಿಡಂಬೇಶ್ವರ ದೇವಾಲಯ, ಪವನ ವಿದ್ಯುತ್ ಘಟಕ, ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಹಳೆ ಮತ್ತು ಹೊಸ ಮುರುಘಾಮಠ, ವಾಣಿ ವಿಲಾಸ ಸಾಗರ ಪ್ರತಿಕೃತಿಗಳನ್ನು ಒಂದು ಸುತ್ತು ವೀಕ್ಷಿಸಿ ಬಂದರೆ ಚಿತ್ರದುರ್ಗಕ್ಕೆ ಹೋಗಿ ಬಂದ ಅನುಭವ. ಬೆಟ್ಟವನ್ನು ಸುಲಲಿತವಾಗಿ ಏರುವ, ಇಳಿಯುವ ಜ್ಯೋತಿರಾಜ್‌ರನ್ನು ಆಹ್ವಾನಿಸಿ ಪುರಸ್ಕರಿಸಿದ್ದು ಚಿತ್ರದುರ್ಗಕ್ಕೆ ಸಲ್ಲಿಸಿದ ಗೌರವವೇ ಆಗಿತ್ತು.
ಇಂದಿನ ಮಕ್ಕಳಲ್ಲಿ ನಮ್ಮ ಊರು, ತಾಲ್ಲೂಕು, ಜಿಲ್ಲೆಯ ಮಾಹಿತಿಯೇ ಇಲ್ಲದಂತಾಗಿದೆ, ನಮ್ಮ ರಾಜ್ಯದ ಸಮಗ್ರ ಚಿತ್ರಣವನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ನಮ್ಮ ಶ್ರೀಮಂತಿಕೆ ಮನದಟ್ಟು ಮಾಡಿ ಕನ್ನಡಾಭಿಮಾನ ಬೆಳೆಸುವುದು ನಮ್ಮ ಉದ್ದೇಶವಾಗಿದೆ.
- ಸಿ.ಎನ್.ಚಂದ್ರಶೇಖರ್, ಬ್ಲುಮೂನ್ ಶಾಲೆಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.