ಶ್ರೀ ಎಂಖ‌್ಯಾತಿಯಮುಮ್ತಾಜ್ ಅಲಿ ಖಾನ್ ಅವರು ಹುಟ್ಟಿದ್ದು, 1948ರಲ್ಲಿ ಕೇರಳದ ತಿರುವನಂತಪುರದಲ್ಲಿ.ಶಾಂತಿ, ಕೋಮು ಸೌಹಾರ್ದ, ಸಹಿಷ್ಣುತೆಯ ಮಂತ್ರ ಪಠಿಸುತ್ತ ಅಧ್ಯಾತ್ಮದ ಮಾರ್ಗದಲ್ಲಿ ಸಾಗುತ್ತಿರುವ ಅವರು ಸಮಾಜ ಸುಧಾರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನೆಲೆಸಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸತ್ಸಂಗ ಫೌಂಡೇಷನ್ ಮತ್ತು ಮಾನವ ಏಕತಾ ಮಿಷನ್ ಸ್ಥಾಪಿಸಿ ಅದರ ಮೂಲಕ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಅವರು, ಅಧ್ಯಾತ್ಮ ಮತ್ತು ಪ್ರಸ್ತುತ ಸಾಮಾಜಿಕ ಸನ್ನಿವೇಶ ಕುರಿತು ವಿವರಿಸಿದ್ದಾರೆ.
**
ಪ್ರಸ್ತುತ ಸನ್ನಿವೇಶದಲ್ಲಿ ಅಧ್ಯಾತ್ಮವನ್ನು ಹೇಗೆ ವಾಖ್ಯಾನಿಸುತ್ತೀರಿ?
ಅಧ್ಯಾತ್ಮಕ್ಕೆ ಗಡಿಗಳಿಲ್ಲ. ಧರ್ಮದ ಮಿತಿಯೂ ಅದಕ್ಕಿಲ್ಲ. ಧರ್ಮದ ಜತೆ ಅಧ್ಯಾತ್ಮವನ್ನು ಹೋಲಿಸುವುದು ಸರಿ ಅಲ್ಲ. ಧರ್ಮಕ್ಕೆ ಇದು ಅನ್ವಯಿಸುವುದೇ ಇಲ್ಲ. ಯಾವುದೇ ಧರ್ಮದವರು ಅಧ್ಯಾತ್ಮವನ್ನು ಪಾಲಿಸಬಹುದು. ಮಾನವನ ಉದ್ಧಾರಕ್ಕೆ ಅಧ್ಯಾತ್ಮ ಇದೆ.ಜಾತಿ ಹಂಗೂ ಅದಕ್ಕಿಲ್ಲ. ಶಾಂತಿ ಮತ್ತು ಸೌಹಾರ್ದತೆಗಾಗಿ ಅಧ್ಯಾತ್ಮ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನಾಲ್ಕುವರ್ಷಗಳ ಹಿಂದೆ ಪಾದಯಾತ್ರೆ ಕೈಗೊಂಡಿದ್ದೀರಿ. ಅದರ ಫಲಶ್ರುತಿ ಏನು? ಮತ್ತೆ ಪಾದಯಾತ್ರೆಯ ಯೋಜನೆ ಇದೆಯೇ?
ಜನರ ಮನದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯ ಬೀಜಗಳನ್ನು ಬಿತ್ತಿದ್ದೇವೆ. ಇದು ಫಲ ನೀಡಲು ಸ್ವಲ್ಪ ಸಮಯ ಬೇಕು. ಪಾದಯಾತ್ರೆ ಮೂಲಕ ಕಾಶ್ಮೀರಕ್ಕೆ ಹೋದಾಗ ಆತ್ಮೀಯ ಸ್ವಾಗತ ದೊರೆಯಿತು. ಜನರು ಸಕಾರಾತ್ಮಕ ಮನೋಭಾವದಿಂದ ಪ್ರತಿಕ್ರಿಯಿಸಿದರು. ಹೊಸ ಆಶಾಕಿರಣ ಅಲ್ಲಿ ಮೂಡಿದೆ. ಜನರ ಜತೆ ನಿರಂತರ ಮಾತುಕತೆ ಅಗತ್ಯವಿದೆ. ಹಾಗಂತ, ತಕ್ಷಣಕ್ಕೆ ಅಲ್ಲಿನ ಭದ್ರತಾ ಪಡೆಗಳನ್ನು ವಾಪಸ್ ಪಡೆಯಬೇಕು ಎಂದು ಹೇಳುತ್ತಿಲ್ಲ. ಭದ್ರತಾ ಪಡೆಗಳನ್ನು ಅಲ್ಲಿ ನಿಯೋಜಿಸಿರುವುದು ಸೂಕ್ತ. ಆದರೆ, ನಿರಂತರವಾಗಿ ಜನರ ಜತೆ ಮಾತುಕತೆ ನಡೆಸುವ ಪ್ರಯತ್ನಗಳು ನಡೆಯಬೇಕು. ಹಿಂಸಾಚಾರದ ಸನ್ನಿವೇಶದಲ್ಲಿ ಮಾತುಕತೆಗಳು ನಡೆಯುವುದು ಕಷ್ಟಸಾಧ್ಯವಾದರೂ ಕೈಚೆಲ್ಲಬಾರದು. ಅದಕ್ಕಾಗಿ ಸೌಹಾರ್ದಯುತ ವಾತಾವರಣ ಸೃಷ್ಟಿಸಬೇಕು.
ಇನ್ನೊಂದು ಪಾದಯಾತ್ರೆ ಕೈಗೊಳ್ಳಲು ಸಿದ್ಧನಿದ್ದೇನೆ. ನವದೆಹಲಿಯಿಂದ ಇಸ್ಲಾಮಾಬಾದ್‌ಗೆ ಪಾದಯಾತ್ರೆ ಕೈಗೊಳ್ಳಲು ಸಹ ಸಿದ್ಧ. ಗಡಿಯಲ್ಲಿ ಶಾಂತಿ ವಾತಾವರಣ ನೆಲೆಸುವುದಾದರೆ ಅದೊಂದು ಸಂತಸದ ಸಂಗತಿ.
ಯುವಕರು ಅಧ್ಯಾತ್ಮದತ್ತ ಒಲವು ತೋರುತ್ತಿದ್ದಾರೆಯೇ?
ಕೆಲವು ’ಗುರು’ಗಳ ನಡೆಯಿಂದಾಗಿ ಯುವಕರು ದೂರ ಸರಿದಿರಬಹುದು. ಈ ಗುರುಗಳ ಶೋಷಣೆಯಿಂದ ಬೇಸತ್ತು ಅಂತಹ ನಿರ್ಧಾರವನ್ನು ಕೈಗೊಂಡಿದ್ದಾರೆ. ಆದರೆ, ಬಹುತೇಕ ಯುವಕರು ಅಧ್ಯಾತ್ಮದತ್ತ ಒಲವು ಹೊಂದಿದ್ದಾರೆ. ನೈತಿಕತೆ ಜೀವನ ಸಾಧನೆಗೆ ಅಧ್ಯಾತ್ಮದ ಮಾರ್ಗ ಕಂಡುಕೊಂಡಿದ್ದಾರೆ. ಸತ್ಯದ ಮಾರ್ಗದಲ್ಲಿ ಜೀವನ ಸಾಗಿಸಲು, ಇನ್ನೊಬ್ಬರ ಜತೆ ಉತ್ತಮ ಬಾಂಧವ್ಯ ಹೊಂದುವುದೇ ಅಧ್ಯಾತ್ಮ. ಇಂತಹ ಮಾರ್ಗ ಅನುಸರಿಸಲು ಇಂದಿನ ಯುವಕರು ಉತ್ಸುಕರಾಗಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾಗಿದೆ ಅಷ್ಟೇ. ಯುವಕರಿಂದ ದೊರೆಯುತ್ತಿರುವ ಪ್ರತಿಕ್ರಿಯೆ ಅದ್ಭುತ. ಅವರಲ್ಲಿ ಸೃಜನಶೀಲ ಯೋಜನೆಗಳಿವೆ. ಗುರು ಯಾವಾಗಲು ಸದಾ ಶಿಷ್ಯನ ಜತೆ ಸರಳ ರೀತಿಯಲ್ಲಿ ಮಾತನಾಡುತ್ತಿರಬೇಕು. ಗುರು ಮತ್ತು ಶಿಷ್ಯನ ನಡುವೆ ಅಂತರ ಇರಬಾರದು. ಅದು ಕುಳಿತುಕೊಳ್ಳುವ ಜಾಗವೇ ಇರಬಹುದು. ಆಗ ಉತ್ತಮ ಸಂಪರ್ಕ ಮತ್ತು ಬೋಧನೆ ಸಾಧ್ಯ.
ಸಂತ, ಕವಿ ಕಬೀರಗೂ ನಿಮಗೂ ಯಾವ ರೀತಿ ಸಾಮ್ಯತೆ ಇದೆ?
ಕಬೀರ ಜತೆ ಹೋಲಿಸಬೇಡಿ. ಕಬೀರ ಸಹ ಮುಸ್ಲಿಮರಾಗಿದ್ದರು. ರಾಮನನ್ನು ದೇವರು ಎಂದು ಕರೆದವರು ಕಬೀರ. ನನ್ನ ಜೀವನವನ್ನು ಕೆಲವರು ಕಬೀರ ಜತೆ ಹೋಲಿಕೆ ಮಾಡುವವರಿದ್ದಾರೆ. ಅದರ ಅಗತ್ಯವಿಲ್ಲ ಎಂದು ಅನಿಸುತ್ತದೆ.
ನಿಮ್ಮ ಹೆಸರು ಕುತೂಹಲಕಾರಿಯಾಗಿದೆಯಲ್ಲ?
‘ಎಂ’ ಏನು ಸೂಚಿಸುತ್ತದೆ. ‘ಎಂ’ ಅಂದರೆ ಮನುಷ್ಯ, ಮಾನವತಾವಾದ. ಒಬ್ಬ ವ್ಯಕ್ತಿ ಕ್ರೈಸ್ತ ಧರ್ಮದಲ್ಲಿ ಜನಿಸಿ ಹಿಂದೂಗಳ ಮನೆಯಲ್ಲಿ ಬೆಳೆದರೆ ಆತನನ್ನು ಹರಿಕೃಷ್ಣ ಎಂದು ಕರೆಯಲಾಗುತ್ತದೆ. ಇಲ್ಲಿ ಕೇವಲ ಹೆಸರು ಮುಖ್ಯವಾಗುವುದಿಲ್ಲ. ಆತನ ನಡೆ, ಗುಣಧರ್ಮ ಮುಖ್ಯವಾಗುತ್ತದೆ. ಅಂತಿಮವಾಗಿ ನಾವೆಲ್ಲ ಮನುಷ್ಯರು. ಮನುಷ್ಯತ್ವದ ಮಹತ್ವ ಅರಿತುಕೊಂಡು ನಡೆದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು.
ಸತ್ಸಂಗ ಫೌಂಡೇಷನ್‌ನ ಉದ್ದೇಶಗಳೇನು?
ಸತ್ ಅಂದರೆ ಸತ್ಯ. ಸಂಗ ಅಂದರೆ ಗುಂಪು. ಕೆಲವು ಜನರು ಸೇರಿಕೊಂಡು ರಚಿಸಿರುವುದೇ ಒಂದು ಗುಂಪು. ಇಲ್ಲಿ ಸತ್ಯದ ಶೋಧನೆ ನಡೆಯುತ್ತಿದೆ. ಅದುವೇ ಸತ್ಸಂಗ. ಅದು ಯಾವುದೇ ಮಾರ್ಗದಲ್ಲಿ ಇರಬಹುದು. ಜತೆಗೆ, ‘ಮಾನವ’ ಸೇವೆಗಳನ್ನು ಕೈಗೊಳ್ಳುತ್ತೇವೆ. ಬುಡಕಟ್ಟು ಪ್ರದೇಶದ ಮಕ್ಕಳಿಗೆ ಉಚಿತವಾಗಿ ಶಾಲೆ ನಡೆಸಲಾಗುತ್ತಿದೆ. ಜತೆಗೆ, ಸಾಮಾಜಿಕ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದೇವೆ. ಕೋಮುಸೌಹಾರ್ದತೆಗೆ ಧಕ್ಕೆ ಬಂದಾಗ ಅಂತಹ ಸ್ಥಳಕ್ಕೆ ಸ್ವಯಂ ಸೇವಕರು ಜತೆ ತೆರಳಿ ಶಾಂತಿ ಸ್ಥಾಪಿಸುವ ಕೈಂಕರ್ಯವನ್ನು ಕೈಗೊಂಡಿದ್ದೇವೆ. ಒಟ್ಟಿನಲ್ಲಿ ಮಾನವೀಯತೆ, ಮಾನವತ್ವ ದೊಡ್ಡದು ಎನ್ನುವ ಸಂದೇಶ ಬೀರುವ ಪ್ರಯತ್ನ ಮಾಡುತ್ತಿದ್ದೇವೆ. ಜಗತ್ತಿನಾದ್ಯಂತ ಇದಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ.
ಒತ್ತಡದ ಜೀವನದಲ್ಲಿ ‘ಧ್ಯಾನ’ದ ಪಾತ್ರವೇನು?
ಗುಹೆ ಅಥವಾ ಕತ್ತಲೆ ಕೊಠಡಿಯಲ್ಲಿ ಗಂಭೀರವಾಗಿ ಕುಳಿತುಕೊಂಡು ಧ್ಯಾನಿಸುವುದು ಅಷ್ಟೇ ಧ್ಯಾನವಲ್ಲ. ಉತ್ತಮವಾದ ಜೀವನ ಸಾಗಿಸಲು ಅದೊಂದು ಮಾರ್ಗ. ಏಕಾಗ್ರತೆ ಸಾಧಿಸಲು ಅದು ಪರಿಹಾರ ಸೂಚಿಸುತ್ತದೆ. ಯಾವುದೇ ಸ್ಥಳದಲ್ಲಿಕುಳಿತು ಉಸಿರಾಟ ಗಮನಿಸಿದರೆ ಸಾಕು. ಅದುವೇ ಧ್ಯಾನ. ಹೀಗಾಗಿ, ಧ್ಯಾನಕ್ಕಾಗಿ ಕತ್ತಲೆ ಕೊಠಡಿ ಅಥವಾ ಗುಹೆ ಬೇಕಾಗಿಲ್ಲ. ಧ್ಯಾನದ ಬಗ್ಗೆ ಇತ್ತೀಚೆಗೆ ‘ಆನ್ ಮೆಡಿಟೇಷನ್’ ಎನ್ನುವ ಪುಸ್ತಕ ಬರೆದಿದ್ದೇನೆ. ಧ್ಯಾನದ ಮಹತ್ವವನ್ನು ಸರಳವಾಗಿ ಅದರಲ್ಲಿ ವಿವರಿಸಲಾಗಿದೆ. ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಪ್ರಧಾನ ಕಚೇರಿಗೆ ಪ್ರತಿ ವರ್ಷ ಭೇಟಿ ನೀಡುತ್ತೇನೆ. ಅಲ್ಲಿನ ಉದ್ಯೋಗಿಗಳಿಗೂ ಅಧ್ಯಾತ್ಮ ಮತ್ತು ಧ್ಯಾನದ ಬಗ್ಗೆ ಒಲವು ಇದೆ. ಅದು ಸುಲಭವಾಗಿದೆ.
ರಾಜಕೀಯ ಕ್ಷೇತ್ರದಲ್ಲಿ ಯಾವ ರೀತಿ ಬದಲಾವಣೆ ತರಬೇಕು?
ರಾಜಕೀಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ತೊಡಗಿಸಿಕೊಳ್ಳಬೇಕು. ರಾಜಕೀಯದಲ್ಲಿರುವವರು ಜವಾ ಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ರಾಜಕೀಯದಲ್ಲಿ ಭ್ರಷ್ಟಾಚಾರ ಹೊಸತಲ್ಲ. ಅದು ಮೊದಲಿನಿಂದಲೂ ಇದೆ. ಆದರೆ, ರಾಜಕೀಯದಲ್ಲಿರುವವರು ಸಾರ್ವಜನಿಕರಿಗೆ ಉತ್ತರದಾಯಿತ್ವವಾಗಿರಬೇಕು ಮತ್ತು ಉತ್ತಮ ನಡೆ ಇರಬೇಕು. ಜನರ ಜೀವನ ಸುಧಾರಿಸಲು ಜನಪ್ರತಿನಿಧಿ ಯಾಗಿರುತ್ತಾರೆ ಎನ್ನುವುದನ್ನು ಮರೆಯಬಾರದು. ಜನರಿಗೆ ಉತ್ತಮವಾದುದನ್ನು ಮಾಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.