ಉತ್ತಮ ಗುಣಮಟ್ಟ ಹಾಗೂ ಸೌಲಭ್ಯವುಳ್ಳ ರಸ್ತೆ, ಫುಟ್‌ಪಾತ್, ನೆಲದಡಿಯ ಪೈಪ್‌ಲೈನ್ ಹಾಗೂ ಕೇಬಲ್ ಮಾರ್ಗ ಹೊಂದಿರುವ ‘ಟೆಂಡರ್ ಶ್ಯೂರ್’ ರಸ್ತೆಗಳು ಬೆಂಗಳೂರಿಗೆ ಮೆರುಗು ತಂದಿವೆ. ದುಬಾರಿ ವೆಚ್ಚದ್ದಾದರೂ, ಗುಣಮಟ್ಟದಲ್ಲಿ ಈ ರಸ್ತೆಗಳು ಅಂತರರಾಷ್ಟ್ರೀಯ ಮಾನದಂಡ ಹೊಂದಿವೆ ಎಂಬ ಉದ್ದೇಶದಿಂದ ನಗರದಲ್ಲಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿತ್ತು. ಆದರೆ ಸುಸಜ್ಜಿತವಾಗಿ ಇರಬೇಕಿದ್ದಈ ಪಾದಚಾರಿ ಮಾರ್ಗಗಳು ನಿರ್ವಹಣೆ ವಿಚಾರದಲ್ಲಿ ಸೋತಿವೆ.
ನಗರದ ಕೆಲವು ಟೆಂಡರ್‌ಶ್ಯೂರ್ ರಸ್ತೆಗಳ ಫುಟ್‌ಪಾತ್‌ನ ಸ್ಲ್ಯಾಬ್‌ಗಳು ಕುಸಿದಿದ್ದರೆ, ಕೆಲವೆಡೆ ಕಿತ್ತುಬಂದಿವೆ. ಈ ಮಾದರಿಯ ಬಹುತೇಕ ರಸ್ತೆಗಳ ಕೆಲವು ಭಾಗಗಳು ಕಸ ಸುರಿಯುವ ತಾಣಗಳಾಗಿವೆ. ನೀರು ಸರಾಗವಾಗಿ ಹರಿಯುವ ಬದಲು, ಗುಣಮಟ್ಟದ ರಸ್ತೆ ಮೇಲೆಯೇ ನಿಲ್ಲುವ ನಿದರ್ಶನಗಳು ಕಂಡುಬಂದಿವೆ. ಪಾರ್ಕಿಂಗ್ ಜಾಗವೂ ಆಗಿ ಮಾರ್ಪಾಡಾಗಿವೆ.
ವಿಠಲ್ ಮಲ್ಯ ರಸ್ತೆ
ಮಲ್ಯ ಆಸ್ಪತ್ರೆ ಎದುರಿನ ಫುಟ್‌ಪಾತ್ ಅಕ್ಷರಶಃ ಪಾರ್ಕಿಂಗ್ ತಾಣವಾಗಿ ಮಾರ್ಪಟ್ಟಿದೆ. ಪಾದಚಾರಿ ಮಾರ್ಗ ದಲ್ಲಿ ಬೈಕ್‌ಗಳನ್ನು ಸಾಲಾಗಿ ನಿಲ್ಲಿಸಲಾಗಿದೆ. ಕಾರುಗಳನ್ನು ಫುಟ್‌ಪಾತ್ ಮೇಲೆಯೇ ರಾಜಾರೋಷವಾಗಿ ನಿಲ್ಲಿಸಲಾಗಿದೆ. ಕಾರುಗಳು ಅಡ್ಡ ಇರುವುದರಿಂದ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗಿಳಿದು ನಡೆದು ಹೋಗಬೇಕಾದ ಪರಿಸ್ಥಿತಿ ಇದೆ.ಇಲ್ಲಿನ ಸೇಂಟ್ ಜೋಸೆಫ್ ಕಾಲೇಜು ಮುಂದಿನ ಮಾರ್ಗವು ವಾಹನ ನಿಲುಗಡೆ ತಾಣವನ್ನೂ ನಾಚಿಸುವಂತಿದ್ದು, ಅಚ್ಚುಕಟ್ಟಾಗಿ ವಾಹನಗಳನ್ನು ನಿಲ್ಲಿಸಲಾಗಿದೆ. ಇದು ಅಧಿಕೃತ ಪಾರ್ಕಿಂಗ್ ತಾಣವೇನೋ ಎಂಬ ಭಾವನೆ ಬರುವುದು ಸಹಜ. ಇಲ್ಲಿ ಪಾರ್ಕಿಂಗ್ ಮಾಡಿರುವುದು ಅನಧಿಕೃತ ಎನ್ನುತ್ತಾರೆ ಸಮೀಪದ ವೃತ್ತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಚಾರಿ ಪೊಲೀಸ್.ಈ ಮಾರ್ಗದ ಫುಟ್‌ಪಾತ್‌ನಲ್ಲಿ ನೀರು ನಿಲ್ಲುವ, ಕಸ ಸುರಿದ, ಚಪ್ಪಡಿ ಕಲ್ಲು ಎದ್ದುಬಂದಿರುವ ದೃಶ್ಯಗಳು ಕಾಣಸಿಗುತ್ತವೆ.
ಕನ್ನಿಂಗ್‌ಹ್ಯಾಮ್ ರಸ್ತೆ
ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿ ಟೆಂಡರ್ ಶ್ಯೂರ್ ರಸ್ತೆಯ ಫುಟ್‌ಪಾತ್‌ನಲ್ಲಿ ಅವ್ಯವಸ್ಥೆಗಳಿಗೆ ಇನ್ನೊಂದಿಷ್ಟು ಪುರಾವೆಗಳು ಸಿಗುತ್ತವೆ. ಇಲ್ಲಿನ ಸಿಗ್ಮಾ ಮಾಲ್ ಮುಂದಿನ ಫುಟ್‌ಪಾತ್‌ನ ಕಲ್ಲುಗಳು ನೆಲಕ್ಕೆ ಕುಸಿದು ಪಾದಚಾರಿ ಮಾರ್ಗದ ಅಂದಗೆಡಿಸಿವೆ. ದಾರಿಹೋಕರು ಎಡವಿಬಿದ್ದ ಉದಾಹರಣೆಗೂ ಇವೆ. ಇಲ್ಲಿನ ಬಸ್‌ಸ್ಟಾಪ್‌ನಲ್ಲಿ ಹೊರತುಪಡಿಸಿದರೆ, ಬೇರೆಲ್ಲೂ ಕಸದ ಬುಟ್ಟಿಗಳು ಕಾಣಸಿಗುವುದಿಲ್ಲ. ಹೀಗಾಗಿ ಜನರು ಫುಟ್‌ಪಾತ್ ಮೇಲೆಯೇ ಕಸ ಎಸೆಯುತ್ತಾರೆ. ಅಂಗಡಿ ಹಾಗೂ ಹೋಟೆಲ್‌ನವರು ಕಸದ ಚೀಲಗಳನ್ನು ಇಲ್ಲಿ ಇರಿಸಿ ಹೋಗುತ್ತಾರೆ. ರಸ್ತೆಯ ಮತ್ತೊಂದು ಪಾರ್ಶ್ವದಲ್ಲಿ ಕಟ್ಟಡವೊಂದರ ಕಾಮಗಾರಿ ನಡೆಯುತ್ತಿದ್ದು, ಅದಕ್ಕೆ ಸಂಬಂಧಿಸಿದ ಮರಳು ಹಾಗೂ ಸಿಮೆಂಟ್ ಚೀಲಗಳನ್ನು ಫುಟ್‌ಪಾತ್ ಮೇಲೆಯೇ ಹಾಕಲಾಗಿದೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ‘ಹೀಗೆ ಮಾಡಿದರೆ ಜನರಿಗೆ ಓಡಾಡಲು ತೊಂದರೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದರೆ, ‘ಹಾಗೇನೂ ತೊಂದರೆಯಾಗುತ್ತಿಲ್ಲ’ ಎಂದು ಆತ ಉತ್ತರಿಸಿದ.
ಮೊನ್ನೆ ಸುರಿದ ಮಳೆಯಿಂದ ರಸ್ತೆಯಲ್ಲೇ ನೀರು ನಿಂತು ಸಂಚಾರಕ್ಕೆ ಕೊಂಚ ಅಡಚಣೆಯಾಗಿತ್ತು ಎಂದು ಪಾದಚಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಮಳೆ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡಿದ್ದರೂ ಅದು ಅಚ್ಚಕಟ್ಟಾಗಿ ಇಲ್ಲ ಎನ್ನುತ್ತಾರೆ ಅವರು. ಇಲ್ಲಿನ ಚಾಯ್‌ಪಾಯಿಂಟ್ ಹಾಗೂ ಅದರ ಎದುರಿನ ಭಾಗದ ಪಾದಚಾರಿ ಮಾರ್ಗಗಳಲ್ಲಿ ಬೈಕ್‌ಗಳನ್ನು ನಿಲ್ಲಿಸುವ ಪರಿಪಾಠವೂ ಬೆಳೆದಿದೆ. ಸಂಜೆಯಾದರೆ ಪಾನಿಪುರಿ ಮಾರುವ ಅಂಗಡಿಯೂ ಪ್ರತ್ಯಕ್ಷವಾಗುತ್ತದೆ.
ಚರ್ಚ್‌ಸ್ಟ್ರೀಟ್
ನಗರದ ಪ್ರತಿಷ್ಠಿತ ರಸ್ತೆಗಳಲ್ಲಿ ಒಂದಾದ ಚರ್ಚ್‌ಸ್ಟ್ರೀಟ್‌ನಲ್ಲಿ ಸಾಕಷ್ಟು ವಿಳಂಬದ ಬಳಿಕ ಟೆಂಡರ್‌ಶ್ಯೂರ್ ರಸ್ತೆ ನಿರ್ಮಾಣವಾಗಿತ್ತು. ರಸ್ತೆಯ ಗುಣಮಟ್ಟದ ಬಗ್ಗೆ ತಕರಾರಿಲ್ಲ. ಆದರೆ ಫುಟ್‌ಪಾತ್ ನಿರ್ವಹಣೆ ಕಳಪೆ ಎನ್ನುತ್ತಾರೆ ಸ್ಥಳೀಯರು. ಇಲ್ಲಿ ಕಸ ಸಂಗ್ರಹಣೆಗೆ ದೊಡ್ಡ ಪ್ಲಾಸ್ಟಿಕ್ ಬುಟ್ಟಿಗಳನ್ನು ಇರಿಸಲಾಗಿದೆ. ಈ ಪೈಕಿ ನಾಲ್ಕೈದು ಬುಟ್ಟಿಗಳು ಈಗಾಗಲೇ ಒಡೆದುಹೋಗಿವೆ. ಕೆಲವು ಬಿರುಕುಬಿಟ್ಟಿವೆ. ಮಳೆ ನೀರು ಹರಿದುಹೋಗಲು ನಿರ್ಮಿಸಿರುವ ಜಾಲರಿಯೊಳಗೆ ನೀರು ಹರಿಯದೇ ರಸ್ತೆಯಲ್ಲೇ ನಿಂತಿದ್ದ ದೃಶ್ಯರಸ್ತೆಯ ಒಂದು ಕಡೆ ಕಂಡುಬಂದಿತು. ಒಂದು ಕಡೆಯಂತೂ ನೆಲದಿಂದ ನಾಲ್ಕು ರಾಡ್‌ಗಳು ಹೊರಚಾಚಿಕೊಂಡಿದ್ದು, ಪಾದಚಾರಿಗಳಿಗೆ ಅಪಾಯ ಒಡ್ಡಲು ಕಾದುಕುಳಿತಿವೆ. ಡಕ್ಟ್‌ಗಳ ಮೇಲೆ ಇರಿಸಿರುವ ದೊಡ್ಡ ಸ್ಲ್ಯಾಬ್‌ಗಳು ನೆಲದಿಂದ ಮೇಲೆ ಬಂದಿದ್ದು, ದಾರಿಹೋಕರು ಎಡುವಿಬಿದ್ದರೂ ಅಚ್ಚರಿಯಿಲ್ಲ.
ಇಲ್ಲೆಲ್ಲಾ ಅವ್ಯವಸ್ಥೆ
ಟೆಂಡರ್ ಶ್ಯೂರ್ ರಸ್ತೆಗಳ ಪೈಕಿ ಚಿನ್ನಸ್ವಾಮಿ ಸ್ಟೇಡಿಯಂ ಎದುರಿನ ರಸ್ತೆಯ (ಕಬ್ಬನ್‌ಪಾರ್ಕ್) ಫುಟ್‌ಪಾತ್ ಮೇಲೆ ಕಡಿದ ಮರಗಳ ರೆಂಬೆಕೊಂಬೆಗಳನ್ನು ಹಾಗೆಯೇ ಒಟ್ಟುಹಾಕಲಾಗಿದೆ. ಇದೇ ಮಾರ್ಗದಲ್ಲ ಸ್ವಲ್ಪ ಮುಂದೆ ಸಾಗಿದರೆ ಸಾಕಷ್ಟು ಉದ್ದದ ನಾಲ್ಕೈದು ಕಬ್ಬಿಣದ ಪೈಪ್‌ಗಳನ್ನು ಫುಟ್‌ಪಾತ್ ಮೇಲೆ ಇಡಲಾಗಿದೆ.ಎಂ.ಜಿ. ರಸ್ತೆಯ ಒಂದೆರೆಡು ಕಡೆ ಫುಟ್‌ಪಾತ್ ಸ್ಲ್ಯಾಬ್‌ಗಳು ನೆಲದಿಂದ ಹೊರಗಡೆ ಬಂದಿವೆ. ಜಯನಗರದ 11ನೇ ಕ್ರಾಸ್‌ನಲ್ಲಿ ಪಾದಚಾರಿ ಮಾರ್ಗಗಳಲ್ಲಿ ಕಸದ ರಾಶಿ ಮತ್ತು ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳು ರಾಶಿ ಬಿದ್ದಿವೆ. ಇದರಿಂದಾಗಿ ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಯಲ್ಲೇ ಸಾಗಬೇಕಾದ ಸ್ಥಿತಿ ಇದೆ. ‘ಜನರಿಗೆ ಮನವರಿಕೆ ಮಾಡಲಾಗಿದೆ. ಜಯನಗರದಲ್ಲಿ ಹಾಕಿರುವ ಕಸದ ರಾಶಿಯನ್ನು ತೆರವುಗೊಳಿಸುವಂತೆ ವಾರ್ಡ್ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ) ಕೆ.ಟಿ.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.
ಕೋಟ್ಯಂತರ ರೂಪಾಯಿ ವೆಚ್ಚದ ಮಾರ್ಗದಲ್ಲಿ ಕಸ, ಕಟ್ಟಡ ತ್ಯಾಜ್ಯ ಸುರಿಯುವ, ವಾಹನಗಳನ್ನು ಪಾರ್ಕ್ ಮಾಡುವ ಪ್ರವೃತ್ತಿ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಜನರು ನಡೆದಾಡಲು ಅಡ್ಡಿಪಡಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ಪಾದಚಾರಿಗಳ ಒತ್ತಾಯ.
ಏನಿದರ ವಿಶೇಷ?
ಭವಿಷ್ಯದಲ್ಲಿ ಯಾವ ಕಾರಣಕ್ಕೂ ರಸ್ತೆಗಳನ್ನು ಅಗೆಯದಂತೆ ರೂಪಿಸಿರುವ ವ್ಯವಸ್ಥೆಯೇ ಟೆಂಡರ್ ಶ್ಯೂರ್.ಈ ಯೋಜನೆಯನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಅನುಷ್ಠಾನಗೊಳಿಸಲು ಐದು ವರ್ಷಗಳಿಗೂ ಹಿಂದೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿತ್ತು.ಈ ಯೋಜನೆ ಅನುಷ್ಠಾನಕ್ಕೆ ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ನಡುವಿನ ಸಮನ್ವಯ ಅತಿಮುಖ್ಯ.
ರೆಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಕನ್ನಿಂಗ್‌ಹ್ಯಾಮ್ ರಸ್ತೆ, ವಿಠಲ್ ಮಲ್ಯ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಮಿಷನರೇಟ್, ಮ್ಯೂಸಿಯಂ ರಸ್ತೆ,ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ರಾಜಭವನ ರಸ್ತೆ, ಕೆ.ಎಚ್. ರಸ್ತೆ, ಜೆ.ಸಿ. ರಸ್ತೆ,ಮೋದಿ ಆಸ್ಪತ್ರೆ ರಸ್ತೆ, ಸಿದ್ದಯ್ಯ ಪುರಾಣಿಕ ರಸ್ತೆ, ಕೆ.ಜಿ. ರಸ್ತೆ, ನೃಪತುಂಗ ರಸ್ತೆ ಮತ್ತು ಜಯನಗರ 11ನೇ ಮುಖ್ಯ ರಸ್ತೆಗಳನ್ನು ಈ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿದೆ. ಒಟ್ಟು 50 ರಸ್ತೆಗಳು ಪಟ್ಟಿಯಲ್ಲಿವೆ.
ಅಂತರರಾಷ್ಟ್ರೀಯ ಗುಣಮಟ್ಟದ ವ್ಯವಸ್ಥೆ ಇಲ್ಲಿದೆ. ಕುಡಿಯುವ ನೀರಿನ ಕೊಳವೆ, ಒಳಚರಂಡಿ ಮಾರ್ಗ, ಬೆಸ್ಕಾಂ ಸಂಪರ್ಕ ಜಾಲ, ಒಎಫ್‌ಸಿ, ಬೀದಿದೀಪ, ಸಿಗ್ನಲ್ ದೀಪ, ಸಿಸಿ ಟಿ.ವಿ ಕೇಬಲ್, ಗ್ಯಾಸ್ ಸಂಪರ್ಕ ಜಾಲ ಎಲ್ಲದಕ್ಕೂ ರಸ್ತೆ ಬದಿಯಲ್ಲಿ ಯುಟಿಲಿಟಿ ಡಕ್ಟ್ (ನೆಲದಡಿ ಮಾರ್ಗ) ವ್ಯವಸ್ಥೆ ರೂಪಿಸಲಾಗಿದೆ.ಸಮಸ್ಯೆ ಇದ್ದಲ್ಲಿ ಡಕ್ಟ್‌ಗಳನ್ನು ತೆರೆದು ದುರಸ್ತಿ ಮಾಡಬಹುದು.ಮಳೆನೀರು ಯಾವುದೇ ಅಡೆತಡೆ ಇಲ್ಲದಂತೆ ಹರಿದು ಹೋಗುವಂತೆ ಯೋಜನೆ ರೂಪಿಸಲಾಗಿದೆ.ಪಾದಚಾರಿಗಳಿಗೆ ವಿಶಾಲವಾದ ಫುಟ್‌ಪಾತ್ ಸೌಲಭ್ಯ, ಸೈಕಲ್‌ಗಳಿಗೆ ಪ್ರತ್ಯೇಕ ಮಾರ್ಗ, ವಾಹನಗಳಿಗೆ ಸುಸಜ್ಜಿತ ರಸ್ತೆ ಇಲ್ಲಿನ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.