ADVERTISEMENT

ಬೆಂಗಳೂರಿನಲ್ಲಿ ಆಹಾರ ತ್ಯಾಜ್ಯದಿಂದ ಸಾವಯವ ಗೊಬ್ಬರ!

ಸುಬ್ರಹ್ಮಣ್ಯ ಎಚ್.ಎಂ
Published 11 ಅಕ್ಟೋಬರ್ 2019, 19:45 IST
Last Updated 11 ಅಕ್ಟೋಬರ್ 2019, 19:45 IST
ಒರಾಯನ್ ಮಾಲ್‌ನಲ್ಲಿ ಸಾವಯವ ಗೊಬ್ಬರ ತಯಾರಿಕೆ
ಒರಾಯನ್ ಮಾಲ್‌ನಲ್ಲಿ ಸಾವಯವ ಗೊಬ್ಬರ ತಯಾರಿಕೆ   

ನಗರದಲ್ಲಿ ಕಸ ವಿಂಗಡಣೆ ಮತ್ತು ವಿಲೇವಾರಿ ದೊಡ್ಡ ಸಮಸ್ಯೆ. ಇಲ್ಲಿನ ಐಷಾರಾಮಿ ಹೋಟೆಲ್, ರೆಸ್ಟೋರೆಂಟ್‌ಗಳು ಅಪಾರವಾದ ತ್ಯಾಜ್ಯವನ್ನು ಪರಿಸರಕ್ಕೆ ಸುರಿದು ಮಲಿನ ಮಾಡುತ್ತಿವೆ. ಇದಕ್ಕೆ ಪರ್ಯಾಯವಾಗಿ ಒರಾಯನ್ ಮಾಲ್ ಹೊಸ ಮಾರ್ಗ ಕಂಡುಕೊಂಡಿದೆ.

ಇಲ್ಲಿನ 30 ಹೋಟೆಲ್‌ಗಳಲ್ಲಿ ಉಳಿಯುವ ಹಸಿ ಮತ್ತು ಒಣ ಆಹಾರ ತ್ಯಾಜ್ಯವನ್ನು ಸಾವಯವ ಗೊಬ್ಬರವನ್ನಾಗಿ ತಯಾರಿಸುವ ಆರ್ಗಾನಿಕ್ ಬಯೋ ಕನ್ವರ್ಟರ್ ಘಟಕ ಇಲ್ಲಿದೆ. ನೆಲಮಾಳಿಗೆಯಲ್ಲಿರುವ ಈ ಘಟಕ ಪರಿಸರ ಮತ್ತು ರೈತ ಸ್ನೇಹಿಯಾಗಿ ಕೆಲಸ ಮಾಡುತ್ತದೆ. ಇಲ್ಲಿನ ಹೋಟೆಲ್‌ಗಳಲ್ಲಿ ಉಳಿಯುವ ಅನ್ನ, ಚಪಾತಿ, ಹಸಿ ತರಕಾರಿ, ಸಿಪ್ಪೆ, ಮಾಂಸದ ಖಾದ್ಯಗಳು ಸೇರಿದಂತೆ ಅಡುಗೆ ಬಳಕೆಯ ಎಲ್ಲ ತ್ಯಾಜ್ಯವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಿ ಕಡಿಮೆ ಬೆಲೆಗೆ ರೈತರಿಗೆ ಮಾರಾಟ ಮಾಡಲಾಗುತ್ತದೆ.

ಸರ್ಕಾರದ ಆದೇಶದಂತೆ ಪ್ರತಿ ಮಾಲ್‌ನಲ್ಲೂ ಸಾವಯವ ಗೊಬ್ಬರ ತಯಾರಿಸುವ ಘಟಕ ಇರಬೇಕೆಂಬ ನಿಯಮವಿದೆ. ಈ ನಿಟ್ಟಿನಲ್ಲಿ ಒರಾಯನ್‌ ಮಾಲ್‌ನಲ್ಲಿ 2013ರಿಂದ ಈ ಘಟಕ ಕಾರ್ಯ ನಿರ್ವಹಿಸುತ್ತಿದೆ. ‌ಆರೇಳು ಮಂದಿ ನುರಿತ ವೃತ್ತಿಪರರು ಈ ಗೊಬ್ಬರ ತಯಾರಿಸುವ ಪ್ರಕ್ರಿಯೆಯಲ್ಲಿ ದುಡಿಯುತ್ತಿದ್ದಾರೆ. ಪ್ರತಿದಿನ 150 ಕೆ.ಜಿಯಷ್ಟು ಹಸಿತ್ಯಾಜ್ಯ ಸಂಗ್ರಹಿಸಿ 75ಕೆ.ಜಿ ಗೊಬ್ಬರ‌ ಉತ್ಪಾದಿಸಲಾಗುತ್ತದೆ. ಹಸಿ ತ್ಯಾಜ್ಯದಿಂದ ಗೊಬ್ಬರವಾಗಿ ಪರಿವರ್ತಿಸುವ ಈ ಪ್ರಕ್ರಿಯೆ ಕಾಲಾವಧಿ ಹದಿನೈದು ದಿನ.

ADVERTISEMENT

ಸಾವಯವ ಗೊಬ್ಬರದಿಂದ ಹಲವು ಪೋಷಕಾಂಶ ಸಸ್ಯಗಳಿಗೆ ಸಿಗುತ್ತದೆ. ಸಾರಜನಕ, ರಂಜಕ ಮತ್ತು ‍ಪೊಟ್ಯಾಷಿಯಂ ಇತರ ಲಘು ಪೋಷಕಾಂಶಗಳೂ ತಕ್ಕಮಟ್ಟಿಗೆ ದೊರೆಯುತ್ತದೆ. ಮುಖ್ಯವಾಗಿ ಈ ಗೊಬ್ಬರ ಬಳಕೆಯಿಂದ ಮಣ್ಣಿನಲ್ಲಿ ಸತ್ವ ಉಳಿಯುವಂತೆ ಮಾಡಿ ಮಣ್ಣಿನ ರಚನೆಯೂ ಉತ್ತಮಗೊಳ್ಳುತ್ತದೆ. ಅಲ್ಲದೆ, ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ. ಪರಿಸರ ಕಾಳಜಿಯಿಂದ ಮಾಲ್‌ನಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಈ ಜಾಗೃತಿ ಎಲ್ಲಡೆ ಹಬ್ಬಲಿ ಎನ್ನುತ್ತಾರೆ ಮಾಲ್‌ನ ಹಿರಿಯ ವ್ಯವಸ್ಥಾಪಕ ಕಿಶೋರ್‌.

ತಿಂಗಳಿಗೆ ಒಂದು ಸಾವಿರದಿಂದ ಎರಡು ಸಾವಿರ ಕೆ.ಜಿಯಷ್ಟು ಗೊಬ್ಬರ ತಯಾರಿಸಲಾಗುತ್ತದೆ. ಖಾಸಗಿ ಏಜೆನ್ಸಿಯೊಂದರ ಮೂಲಕ ಈ ಗೊಬ್ಬರವನ್ನು ಮಂಡ್ಯ ಹಾಗೂ ಮೈಸೂರು ಭಾಗದ ರೈತರಿಗೆ ಮಾರಾಟ ಮಾಡಲಾಗುತ್ತದೆ. ಇದನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಪ್ರಮಾಣೀಕರಿಸಿದೆ.

ಆಹಾರ ತ್ಯಾಜ್ಯ ಬೀದಿಗೆ ಎಸೆಯುವುದರಿಂದ ವಿಷಕಾರಿ ವಸ್ತುಗಳಿಂದ ಪರಿಸರಕ್ಕೆ ಹಾನಿ ಆಗುತ್ತದೆ. ಪ್ರತಿ ನಗರ, ಪಟ್ಟಣಗಳಲ್ಲಿ ಸಮಸ್ಯೆಯಾಗಿರುವ ಘನತ್ಯಾಜ್ಯ ನಿರ್ವಹಣೆಗೆ ಇದು ಪರಿಹಾರ. ಜಾಗತಿಕ ತಾಪಮಾನ ತಡೆಗೆ ಅಮೂಲ್ಯ ಕಾಣಿಕೆ ಎನ್ನುತ್ತಾರೆ ಸಾವಯವ ಕೃಷಿ ತಜ್ಞರು.

ತಯಾರಿಕೆ ವಿಧಾನ ಹೇಗೆ ?

ಒರಾಯನ್‌ ಮಾಲ್‌ನಲ್ಲಿ ವ್ಯವಸ್ಥಿತವಾಗಿ ಸಾವಯವ ಗೊಬ್ಬರ ತಯಾರಿಸಲಾಗುತ್ತದೆ. ಇಲ್ಲಿ ಪ್ರತಿದಿನ ಸಂಗ್ರಹವಾಗುವ 150ಕೆ.ಜಿ ಆಹಾರ ತ್ಯಾಜ್ಯಕ್ಕೆ 150ಗ್ರಾಂ ಮರದ ಹೊಟ್ಟು, 150 ಗ್ರಾಂ ಬಯೋಕಲಂ (Bioculum –ಆಹಾರ ತ್ಯಾಜ್ಯ ಬಹುಬೇಗನೆ ಕರಗಿ ಸೂಕ್ಷ್ಮಾಣುಜೀವಿಗಳೊಂದಿಗೆ ಗೊಬ್ಬರವಾಗಲು ನೆರವಾಗುವ ರಾಸಾಯನಿಕ ಪದಾರ್ಥ), ವಾಸನೆ ತಡೆಗಟ್ಟಲು 150ಗ್ರಾಂ ಸ್ಯಾನಿಟಿರಿಟಿ ಬಳಸಿ ಪ್ಲಾಸ್ಟಿಕ್‌ ಟ್ರೇಗಳಲ್ಲಿ ಹತ್ತು ದಿನ ಹದಗೊಳಿಸಲಾಗುತ್ತದೆ. ಎರಡು – ಮೂರು ದಿನ ಒಣಗಿಸಿ ನಂತರ ಪ್ಯಾಕಿಂಗ್‌ ಪ್ರಕ್ರಿಯೆ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.