ADVERTISEMENT

ಸಜ್ಜಾಗಿದೆ ‘ವೀರಗಲ್ಲು’!

​ಪ್ರಜಾವಾಣಿ ವಾರ್ತೆ
Published 14 ಜುಲೈ 2019, 19:45 IST
Last Updated 14 ಜುಲೈ 2019, 19:45 IST
   

ದೇವನಹಳ್ಳಿ ಬಳಿಯ ಕೊಯಿರಾ ಗ್ರಾಮದ ಕಲ್ಲುಗಣಿಯಿಂದ ತಂದಿರುವ 78 ಅಡಿ ಎತ್ತರದ ಬೃಹತ್‌ ಏಕಶಿಲಾ ವೀರಗಲ್ಲು ಇನ್ನೇನು ಕೆಲವೇ ದಿನಗಳಲ್ಲಿ ರಾಷ್ಟ್ರೀಯ ಸೈನಿಕರ ಸ್ಮಾರಕ ಉದ್ಯಾನದ ನಡುವೆ ತಲೆ ಎತ್ತಿ ನಿಲ್ಲಲಿದೆ.

ಇದರೊಂದಿಗೆ ಎಂಟು ವರ್ಷದಿಂದ ಬೆಂಗಳೂರಿಗರ ಕಾತುರದಿಂದ ಎದುರು ನೋಡುತ್ತಿದ್ದ ಕ್ಷಣಗಳು ಮುಹೂರ್ತ ಕೊನೆಗೂ ಕೂಡಿ ಬಂದಂತಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಏಕಶಿಲಾ ಸೈನಿಕರ ಸ್ಮಾರಕ ಸ್ಥಾಪನೆಯಾಗಿ ಎಂಟು ವರ್ಷಗಳಾಗಬೇಕಿತ್ತು!

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) 2011ರಲ್ಲಿಯೇ ವೀರಗಲ್ಲು ಸ್ಥಾಪನೆಗೆ ಮುಹೂರ್ತ ನಿಗದಿ ಮಾಡಿತ್ತು. ಆದರೆ, ಕಾರಣಾಂತರಗಳಿಂದ ಮುಂದೂಡುತ್ತಲೇ ಬರಲಾಗಿತ್ತು. ಅಂತಿಮವಾಗಿ ಈಗ ಕಾಲ ಕೂಡಿ ಬಂದಿದೆ.

ADVERTISEMENT

ಕೆಲವು ದಿನಗಳ ಹಿಂದೆ ವಿಶ್ವನಾಥಪುರದ ಚಪ್ಪರಕಲ್ಲು ಬಳಿಯ ಕೊಯಿರಾ ಗ್ರಾಮದ ಕಲ್ಲುಗಣಿಯಿಂದ 450 ಟನ್‌ ತೂಕದ ವೀರಗಲ್ಲು ಹೊತ್ತು ತಂದ 240 ಗಾಲಿಗಳ ಬೃಹತ್‌ ಲಾರಿ ನೆಹರೂ ತಾರಾಲಯದ ಎದುರಿಗಿರುವ ಸೈನಿಕರ ಸ್ಮಾರಕ ಉದ್ಯಾನದ ಹೊರಗೆ ಠಿಕಾಣಿ ಹೂಡಿದೆ.

ವೀರಗಲ್ಲಿಗೆ ವಿಘ್ನ

ಬೃಹತ್ ಏಕಶಿಲೆಯ ಪಯಣ ಅಂದುಕೊಂಡಷ್ಟು ಸುಲಭವಾಗಿರ ಲಿಲ್ಲ.ಜೂನ್‌ 6ರಂದು ಕೊಯಿರಾ ಗ್ರಾಮದಿಂದ ಬೆಂಗಳೂರಿಗೆ ತರುವ ದಾರಿಯಲ್ಲಿ ಹಲವು ವಿಘ್ನಗಳು ಎದುರಾದವು. ಲಾರಿಗೆ ಹೆಬ್ಬಾಳದ ಮೇಲು ಸೇತುವೆ (ಫ್ಲೈ ಓವರ್‌) ಬಳಿ ಮೊದಲ ವಿಘ್ನ ಎದುರಾಗಿತ್ತು. ಇದರಿಂದ ಕೆಲವು ದಿನ ವೀರಗಲ್ಲು ಹೊತ್ತ ಲಾರಿ ಎಸ್ಟೀಮ್‌ ಮಾಲ್ ಎದುಗಡೆ ನಿಲ್ಲುವಂತಾಗಿತ್ತು.

ಕೊನೆಗೆ ಫ್ಲೈ ಓವರ್‌ ಕೆಳಗಿನ ರಸ್ತೆ ಅಗೆದು ಸಮತಟ್ಟುಗೊಳಿಸಿ ಅಲ್ಲಿಂದ ಅದನ್ನು ಸಾಗಿಸಬೇಕಾದರೆ ಟ್ರಾಫಿಕ್‌ ಪೊಲೀಸರು ಮತ್ತು ಅಧಿಕಾರಿಗಳಿಗೆ ಸಾಕುಬೇಕಾಯಿತು. ಗಂಗಾನಗರ ಮ್ಯಾಜಿಕ್‌ ಬಾಕ್ಸ್ ಮತ್ತು ಕಾವೇರಿ ಥಿಯೇಟರ್‌ ಮ್ಯಾಜಿಕ್‌ ಬಾಕ್ಸ್‌ ದಾಟಿಕೊಂಡು ಉದ್ಯಾನಕ್ಕೆ ಬರುವುದು ಸವಾಲಿನ ಕೆಲಸವಾಗಿತ್ತು.

37 ಕಿ.ಮೀ ಸಾಗಲು 15 ದಿನ!

ಕೊಯಿರಾ ಗ್ರಾಮದಿಂದ ಸೈನಿಕರ ಸ್ಮಾರಕ ಉದ್ಯಾನ ತಲುಪಲು 37 ಕಿ.ಮೀ ದೂರ ಕ್ರಮಿಸಲು ಲಾರಿಗೆ 15 ದಿನಗಳೇ ಬೇಕಾದವು. ಗುಜರಾತ್‌ನ ಅಹಮದಾಬಾದ್‌ ಮೂಲದ ತಪನ್‌ ಮತ್ತು ಜಿಗ್ನೇಶ್‌ ಮಾಲಿಕತ್ವದ ‘ನಬ್ರೋಸ್‌ ಟ್ರಾನ್ಸ್‌ಪೋರ್ಟ್ ಪ್ರೈವೇಟ್‌ ಲಿಮಿಟೆಡ್‌ ಕಂಪನಿ’ಗೆ ವೀರಗಲ್ಲು ಸಾಗಿಸುವ ಗುತ್ತಿಗೆ ನೀಡಲಾಗಿತ್ತು. ಕಂಪನಿಯು ಇಷ್ಟು ದೊಡ್ಡ ಶಿಲೆಯನ್ನು ಸಾಗಿಸಲು 240 ಗಾಲಿಗಳ ಲಾರಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿ, ತಂದಿತ್ತು.

ಈ ಲಾರಿಯನ್ನು ಸುರಕ್ಷಿತವಾಗಿ ದಡ ಸೇರಿಸಲುಪಾಳಿಯ ಮೇಲೆ ಮೂವರು ಚಾಲಕರು ಶ್ರಮಿಸಿದ್ದಾರೆ. ಅಹಮದಾಬಾದ್‌ ಮತ್ತು ಮುಂಬೈನಿಂದ ಬಂದಿದ್ದ ನಿವಾರ್ಹಕರು ಎರಡು ವಾಹನಗಳಲ್ಲಿ ಲಾರಿಗೆ ಬೆಂಗಾವಲಾಗಿದ್ದರು.ಮೂವರು ಚಾಲಕರು, ಮೂವರು ನಿರ್ವಾಹಕರು ಮತ್ತು ಆರು ಜನ ಸಹಾಯಕರು ಸೇರಿದಂತೆ 15 ಸಿಬ್ಬಂದಿ ಇದಕ್ಕಾಗಿ ಕೆಲಸ ಮಾಡಿದ್ದಾರೆ ಎಂದು ಅಹಮದಾಬಾದ್‌ನ ಮಖನ್‌ಲಾಲ್‌ ಮಲ್ಲಾ ‘ಮೆಟ್ರೊ’ ಜತೆ ಅನುಭವ ಹಂಚಿಕೊಂಡರು.

ಹೈಡ್ರಾಲಿಕ್‌ ತಂತ್ರಜ್ಞಾನದ ನೆರವು

ಉದ್ಯಾನದಲ್ಲಿ ಸೈನಿಕರ ಸ್ಮಾರಕದಲ್ಲಿ ವೀರಗಲ್ಲು ನಿಲ್ಲಿಸಲು ಸಿದ್ಧತೆಗಳು ಮುಗಿದಿವೆ. ಭೂಮಿಯಲ್ಲಿ ದೊಡ್ಡ ಹೊಂಡ ತೆಗೆಯಲಾಗಿದೆ. ಅದರಲ್ಲಿಯೇ ಶಿಲೆಯನ್ನು ಅನಾವರಣಗೊಳಿಸಲಾಗುತ್ತದೆ. ಗುತ್ತಿಗೆದಾರರಿಗೆ ಸಮಸ್ಯೆ ಇರುವುದು ಶೀಲೆಯನ್ನು ಎತ್ತಿ ನಿಲ್ಲಿಸುವಲ್ಲಿ.

ಇದಕ್ಕಾಗಿ ಕಂಪನಿ ಹೈಡ್ರಾಲಿಕ್‌ ತಂತ್ರಜ್ಞಾನದ ಮೊರೆ ಹೋಗಿದೆ. ಮುಂಬೈ ಮತ್ತು ಅಹಮದಾಬಾದ್‌ನಿಂದ ಬೃಹತ್‌ ಹೈಡ್ರಾಲಿಕ್‌ ಲಿಫ್ಟ್‌, ಕ್ರೇನ್‌ ಮತ್ತಿತರ ಯಂತ್ರಗಳನ್ನು ತಂದಿದೆ.

ಲಾರಿಯಲ್ಲಿರುವ ವೀರಗಲ್ಲನ್ನು ಹೈಡ್ರಾಲಿಕ್‌ ಯಂತ್ರಗಳ ನೆರವಿನಿಂದ ನಿಗದಿ ಮಾಡಿದ ಸ್ಥಳದಲ್ಲಿ ಸುರಕ್ಷಿತವಾಗಿ ನಿಲ್ಲಿಸುವ ಯೋಜನೆ ರೂಪಿಸಿದೆ. ಹತ್ತಾರು ಕ್ರೇನ್‌ಗಳ ಸಹಾಯದಿಂದ ವೀರಗಲ್ಲನ್ನು ಎತ್ತಿ ಉದ್ಯಾನದೊಳಗಿನ ನಿಗದಿತ ಸ್ಥಳಕ್ಕೆ ತರಲಾಗುತ್ತದೆ.

ಶಿಲೆಯನ್ನು ಹೊರಗಿನಿಂದ ಗಟ್ಟಿಯಾಗಿ ಹಿಡಿದು ನಿಲ್ಲಿಸಲು ಕಬ್ಬಿಣ ಕಂಬಗಳ ಚೌಕಟ್ಟನ್ನು ಮೊದಲು ನಿರ್ಮಿಸಬೇಕಾಗಿದೆ. ಈ ಚೌಕಟ್ಟಿಗೆ ‘ಜೆ’ ಸ್ಟ್ರಕ್ಚರ್‌ ಎಂದು ಹೆಸರು. ಚೌಕಟ್ಟಿಗೆ ಅಳವಡಿಸಲಾಗಿರುವ ಬೃಹತ್‌ ಹೈಡ್ರಾಲಿಕ್‌ ಜಾಕ್‌ ನೆರವಿನಿಂದ ಕಲ್ಲನ್ನು ನೇರವಾಗಿ ನಿಲ್ಲಿಸಲಾಗುತ್ತದೆ. ಈ ಹೈಡ್ರಾಲಿಕ್‌ ಜಾಕ್‌ ಸಾವಿರ ಟನ್‌ ಎತ್ತುವ ಸಾಮರ್ಥ್ಯ ಹೊಂದಿದೆ ಎಂದು ಸ್ಥಳದಲ್ಲಿದ್ದ ನಬ್ರೋಸ್‌ ಕಂಪನಿ ಸಿಬ್ಬಂದಿ ಮಾಹಿತಿ ನೀಡಿದರು.

ಸ್ವಾತಂತ್ರ್ಯ ದಿನಾಚರಣೆಗೆ ಮುಹೂರ್ತ?

ಶಿಲೆಯನ್ನು ನಿಲ್ಲಿಸಲು ಕನಿಷ್ಠ 15–20 ದಿನ ಬೇಕಾಗಬಹುದು. ಎಲ್ಲವೂ ನಮ್ಮ ಪೂರ್ವ ಯೋಜನೆಯಂತೆ ನಡೆದರೆ ಆಗಸ್ಟ್‌ 15ರ ವೇಳೆಗೆ ವೀರಗಲ್ಲು ಉದ್ಯಾನದಲ್ಲಿ ಸ್ಥಾಪನೆಯಾಗಲಿದೆ ಎಂದು ಕಂಪನಿ ಸಿಬ್ಬಂದಿ ತಿಳಿಸಿದರು. ಸ್ಮಾರಕದಲ್ಲಿ 22,600 ವೀರ ಹುತಾತ್ಮ ಯೋಧರ ಹೆಸರು ಕೆತ್ತಲಾಗಿದೆ.

ವೀರಗಲ್ಲು ಇತಿಹಾಸ

2011ರ ಜನವರಿ ಹೊತ್ತಿಗೆ ವೀರಗಲ್ಲು ಸ್ಥಾಪಿಸುವ ಉದ್ದೇಶದಿಂದ ಬಿಡಿಎ2010ರಲ್ಲಿ ಬೀದರ್‌ನ ಶಿಲ್ಪಿ ಅಶೋಕ್‌ ಗುಡಿಗಾರ (ಶಿವಮೊಗ್ಗ ಮೂಲದವರು) ಅವರೊಂದಿಗೆ ಒಪ್ಪಂದ ಮಾಡಿಕೊಂಡಿತ್ತು.

ಮೂಲ ಒಪ್ಪಂದದ ಪ್ರಕಾರ ಏಕಶಿಲಾ ವೀರಗಲ್ಲು 88 ಅಡಿ ಎತ್ತರ, 650 ಟನ್‌ ಭಾರ ಮತ್ತು 18 ಅಡಿ ಅಗಲವಿರಬೇಕಿತ್ತು. ಕಾರಣಾಂತರಗಳಿಂದ ಕೆಲಸ ವಿಳಂಬವಾಗುತ್ತಾ ಸಾಗಿತು. ದೊಡ್ಡ ಶೀಲೆಯನ್ನು ಸಾಗಿಸುವುದು ಹೇಗೆ ಎಂಬ ಚಿಂತೆ ಬಿಡಿಎ ಎಂಜಿನಿಯರ್‌ಗಳನ್ನು ಕಾಡತೊಡಗಿತ್ತು. ಇದಕ್ಕಾಗಿಯೇ ಗುಜರಾತ್‌ ಮೂಲದ ನೆಬ್ರೊ ಕಂಪನಿ ಜತೆ ಬಿಡಿಎ 2013ರಲ್ಲಿ ಒಪ್ಪಂದ ಮಾಡಿಕೊಂಡಿತ್ತು.

ಸೈನಿಕರ ಸ್ಮಾರಕ ಉದ್ಯಾನ ತಲುಪಿದ ನಂತರ ಗುತ್ತಿಗೆದಾರರು 20 ದಿನಗಳಲ್ಲಿ ಶಿಲೆಯನ್ನು ಸ್ಥಾಪಿಸುವುದಾಗಿ ಒಪ್ಪಂದದಲ್ಲಿ ಹೇಳಿದ್ದಾರೆ. ಆದರೆ, ಈ ಕೆಲಸ ಅವರು ಅಂದುಕೊಂಡಷ್ಟು ಸುಲಭವಾಗಿಲ್ಲ.ತಾಂತ್ರಿಕ ಕಾರಣಗಳಿಂದ ಕೆಲಸ ವಿಳಂಬವಾಗುತ್ತಿದೆ. 20–25 ದಿನಗಳ ಒಳಗಾಗಿ ಈ ಕೆಲಸ ಮುಗಿಸುವ ವಿಶ್ವಾಸ ಗುತ್ತಿಗೆದಾರರಿಗಿದೆ.

ಸೈನಿಕರ ಮಕ್ಕಳು ಸೇರಿಕೊಂಡು ರಚಿಸಿಕೊಂಡಿಡ ‘ಫೌಜಿ ಕಿಡ್ಸ್‌’ ಎಂಬ ಸಂಘಟನೆಯು ಆದಷ್ಟು ಶೀಘ್ರ ವೀರಗಲ್ಲು ಸ್ಥಾಪಿಸುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿತ್ತು.

ವೀರಗಲ್ಲು ವಿಶೇಷತೆ

ಎತ್ತರ: 78 ಅಡಿ

ತೂಕ: 450 ಟನ್‌

ವೆಚ್ಚ: ₹1 ಕೋಟಿ

ವಾಹನದ ವೈಶಿಷ್ಟ್ಯತೆ

ಗಾಲಿಗಳು: 240

ಸಾಮರ್ಥ್ಯ: 1,000 ಟನ್‌ ಸಾಗಿಸುವ ಸಾಮರ್ಥ್ಯ

ಸಾಗಣೆ ವೆಚ್ಚ: ₹5.46 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.