ADVERTISEMENT

ಗೃಹಾಲಂಕಾರ: ಗೋಡೆ ಅಲಂಕರಿಸಿ ಮನೆಯ ಅಂದ ಹೆಚ್ಚಿಸಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 23:30 IST
Last Updated 16 ಫೆಬ್ರುವರಿ 2024, 23:30 IST
   

ವಿಶೇಷ ಸಂದರ್ಭಗಳಲ್ಲಿ ಮನೆಯನ್ನು ಅಂದಗೊಳಿಸುವುದು ಸಹಜ. ಆದರೆ ಪ್ರತಿದಿನ ಮನೆಯನ್ನು ನಳನಳಿಸುವಂತೆ ಇಟ್ಟುಕೊಳ್ಳಬೇಕೆಂದರೆ ಗೋಡೆ ಅಲಂಕಾರ ಉತ್ತಮ ಆಯ್ಕೆ. ಅಂದವಾದ ಗೋಡೆಗಳು ಮನೆಯ ಸೌಂದರ್ಯ ಹೆಚ್ಚಿಸುವುದರ ಜತೆಗೆ ಮನಸ್ಸಿಗೂ ಆಹ್ಲಾದಕರವೆನಿಸುತ್ತವೆ. 

ಅರೇ ಗೋಡೆಯನ್ನು ಹೇಗೆ ಅಂದಗೊಳಿಸುವುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಹಲವು ವಿಧಾನಗಳಿವೆ. ವಾಲ್ ಡೆಕೋರ್‌ ಅಥವಾ ಗೋಡೆ ಅಲಂಕಾರ ಇತ್ತೀಚಿನ ದಿನಗಳಲ್ಲಿ ಟ್ರೆಂಡ್‌ನಂತಾಗಿದೆ. ಅದಕ್ಕಾಗಿ ಇಲ್ಲಿದೆ ನೋಡಿ ಸಿಂಪಲ್‌ ಐಡಿಯಾಗಳು

ಫೋಟೊ ಗ್ಯಾಲರಿ: ನಾವು ಕ್ಲಿಕ್ಕಿಸಿಕೊಳ್ಳುವ ಕೆಲವು ಫೋಟೊಗಳು ಅಚ್ಚುಮೆಚ್ಚಿನದ್ದಾಗಿರುತ್ತವೆ. ಅಂಥಹ ಫೋಟೊಗಳನ್ನು ಫ್ರೇಮ್‌ ಹಾಕಿಸಿ ಮನೆಯ ಗೋಡೆಗಳಿಗೆ ತೂಗು ಹಾಕಿದರೆ ಗೋಡೆಯ ಅಂದವನ್ನೂ ಹೆಚ್ಚಿಸಬಹುದು. ಪ್ರೀತಿ ಪಾತ್ರರೊಂದಿಗಿನ ಅಪರೂಪದ ಕ್ಷಣಗಳನ್ನು ಸದಾ ಹಸಿರಾಗಿಟ್ಟುಕೊಳ್ಳಬಹುದು.

ADVERTISEMENT

ಕ್ರಾಫ್ಟ್‌ಗಳು: ಕಸದಿಂದ ರಸ ಎನ್ನುವಂತೆ ಬೇಡವೆಂದು ಬಿಸಾಕಿದ ಬಾಟಲ್‌ಗಳು, ನ್ಯೂಸ್‌ ಪೇಪರ್‌ಗಳಿಂದ ಅಂದವಾದ ಕ್ರಾಫ್ಟ್‌ಗಳನ್ನು ಮಾಡಿ ಮನೆಯ ಗೋಡೆಗೆ ತೂಗುಹಾಕಬಹುದು. ಪೇಪರ್‌ನಲ್ಲಿ ಚಿಟ್ಟೆ, ಹೂವುಗಳು ಮಾಡಿ ಅಂಟಿಸಬಹುದು. ಜತೆಗೆ ಪ್ಲಾಸ್ಟಿಕ್‌ ಬಾಟಲ್‌, ಹಳೆಯ ಸಿ.ಡಿಗಳು, ಪೇಪರ್‌ ಕಪ್‌, ಪ್ಲಾಸ್ಟಿಕ್‌ ಸ್ಟ್ರಾಗಳಿಂದ ವಿಭಿನ್ನ ರೀತಿಯ ವಾಲ್‌ ಹ್ಯಾಂಗಿಂಗ್‌ಗಳನ್ನು ತಯಾರಿಸಿ ಗೋಡೆಗೆ ಹಾಕಿದರೆ ಗೋಡೆಯ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಬಹುದು.

ಹಸಿರು ಗಿಡಗಳು: ಅರೇ ಇದೇನಿದು ಮನೆಯ ಒಳಗೆ ಗಿಡಗಳನ್ನು ಇಡಬಹುದೇ ಎಂಬ ಸಂದೇಹ ಮೂಡಬಹುದು. ಹೌದು ಮನೆಯ ಒಳಗೆ ಇಡಬಹುದಾದ ಒಂದಷ್ಟು ಹಸಿರು ಗಿಡಗಳಿವೆ. ಅದರಲ್ಲಿ ಒಂದು ಏರ್‌ ಪ್ಲಾಂಟ್‌ಗಳು. ಇದನ್ನು ಗೋಡೆಗೆ ತೂಗುಹಾಕುವುದರಿಂದ ಮನೆಯನ್ನು ಚೆಂದಗೊಳಿಸಬಹುದು. ಈ ಸಸ್ಯಗಳಿಗೆ ವಾರಕ್ಕೊಮ್ಮೆ ನೀರು ಹಾಕಿದರೆ ಸಾಕಾಗುತ್ತದೆ. ಇದರ ಜತೆಗೆ ರಬ್ಬರ್‌ ಪ್ಲಾಂಟ್‌, ಪೀಸ್‌ ಲಿಲಿ, ರೋಜಾಮೇರಿ ಗಿಡ, ಸ್ಲೈಡರ್‌ ಪ್ಲಾಂಟ್‌ಗಳು ಗೋಡೆಯ ಅಂದವನ್ನು ಇಮ್ಮಡಿಗೊಳಿಸಿ ಮನೆಯ ಒಳಗೆ ಹಸಿರು ವಾತಾವರಣವನ್ನು ನಿರ್ಮಿಸುತ್ತವೆ.

ಪೇಂಟಿಂಗ್‌ಗಳು: ನೀವೇನಾದರೂ ಚಿತ್ರಕಲೆಯ ಪ್ರಿಯರಾಗಿದ್ದರೆ ಮನೆಯ ಗೋಡೆಗಳನ್ನು ಅಲಂಕರಿಸುವುದು ಸುಲಭ. ಕ್ಯಾನ್‌ವಾಸ್‌ ಪೇಂಟಿಂಗ್‌ಗಳು, ಮಂಡಲ ಆರ್ಟ್‌, ಪೆನ್ಸಿಲ್‌ ಆರ್ಟ್‌ಗಳು ಗೋಡೆಗಳಿಗೆ ಹೊಸತನವನ್ನು ನೀಡಬಲ್ಲದು. ನಿಮ್ಮ ಚಿತ್ರಕಲೆಯ ಹವ್ಯಾಸಕ್ಕೆ ನಿಮ್ಮ ಮನೆಯ ಗೋಡೆ ವೇದಿಕೆಯಾಗಬಲ್ಲದು.

ಲೈಟ್‌ ಹಾಗೂ ಲ್ಯಾಂಪ್‌ಗಳು: ಗೋಡೆಗಳಿಗೆ ಅಲ್ಲಲ್ಲಿ ಸ್ಟ್ರಿಂಟ್‌ ಲೈಟ್‌, ಲ್ಯಾಟರ್ನ್ಸ್‌ಗಳನ್ನು ಹಾಕುವುದರಿಂದ ಮನೆಗೆ ಸಾಂಪ್ರದಾಯಿಕ ಲುಕ್‌ ನೀಡಬಹುದು. ಇದರ ಜತೆ ಎಲ್‌ಇಡಿ ಬಲ್ಬ್‌ಗಳ ಸರ, ಪೇಪರ್‌ ಗೂಡು ದೀಪಗಳನ್ನು ಗೋಡೆಯ ಮೇಲೆ ತೂಗುಹಾಕಬಹುದು. ರಾತ್ರಿ ವೇಳೆಯಂತೂ ಇವು ಮನೆಯ ಸೊಬಗನ್ನು ಇಮ್ಮಡಿಗೊಳಿಸಬಲ್ಲದು.  v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.