ADVERTISEMENT

ಅಂದದ ಹೂವಿಗೆ ಚಂದದ ಹೂದಾನಿ

ಪವಿತ್ರಾ ಭಟ್
Published 21 ಏಪ್ರಿಲ್ 2023, 21:04 IST
Last Updated 21 ಏಪ್ರಿಲ್ 2023, 21:04 IST
   

ಹ‌ಬ್ಬ, ಶುಭ ಸಮಾರಂಭಗಳಲ್ಲಿ ಮನೆಯನ್ನು ಹೂವುಗಳಿಂದ ಅಲಂಕರಿಸುವುದು ಸಾಮಾನ್ಯ. ಆದರೆ ಸದಾ ಕಾಲ ಮನೆಯನ್ನು ಚೆಂದವಾಗಿರಿಸಿಕೊಳ್ಳುವುದು ಒಂದು ಕಲೆ. ಇದು ಖುಷಿಯನ್ನು ಇಮ್ಮಡಿಗೊಳಿಸಿ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸುತ್ತದೆ. ಅಲ್ಲದೆ ಮನೆಯ ಶೈಲಿ, ವಿನ್ಯಾಸ ವಿಭಿನ್ನವಾಗಿ ಕಾಣುವಂತೆ ಮಾಡುತ್ತದೆ.

ಮನೆಯನ್ನು ಹೂವಿನದಷ್ಟೇ ಅಲ್ಲ, ಮನೆಯಲ್ಲಿರುವ ಬೇಡದ ಅಥವಾ ತ್ಯಾಜ್ಯ ಎಂದು ಬಿಸಾಡುವ ವಸ್ತುಗಳಿಂದಲೂ ಅಲಂಕರಿಸಬಹುದು. ಹಾಗೆಂದು ಅದಕ್ಕೆ ನೀವೇನು ಹೆಚ್ಚು ಹಣ ವ್ಯಯಿಸಬೇಕೆಂದೂ ಇಲ್ಲ. ಕಡಿಮೆ ಖರ್ಚಿನಲ್ಲಿ ಹಳೆಯ ವಸ್ತುಗಳಿಗೆ ಹೊಸ ರೂಪ ಕೊಟ್ಟು, ಮನೆಯನ್ನು ಅಲಂಕರಿಸಲು ಸಾಧ್ಯವಿದೆ. ಇಂಥ ವಸ್ತುಗಳಿಂದ ಹೇಗೆಲ್ಲ ಮನೆಯ ಅಂದವನ್ನು ಹೆಚ್ಚಿಸಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.

ಅಡುಗೆ ಮನೆಯ ಹಳೆಯ ಪಾತ್ರೆಗಳು: ಸಾಮಾನ್ಯವಾಗಿ ಪಿಂಗಾಣಿ ಪಾತ್ರೆಗಳು ಒಡೆದು ಹೋಗುತ್ತವೆ. ಪ್ಲಾಸ್ಟಿಕ್‌ ಡಬ್ಬಿಗಳು ಬೇಡವಾಗುತ್ತವೆ. ಇವನ್ನೆಲ್ಲ ವಿಲೇವಾರಿ ಮಾಡುವುದು ಕಷ್ಟ. ಇಂಥ ವಸ್ತುಗಳನ್ನು ಬಳಸಿಕೊಂಡು, ಅವುಗಳಲ್ಲಿ ಹೂವುಗಳನ್ನಿಟ್ಟು ಟೇಬಲ್‌ ವಾಸ್‌ನಂತೆ ಬಳಸಬಹುದು. ಕಲೆಯ ಬಗ್ಗೆ ಆಸಕ್ತಿ ಇದ್ದರೆ, ಡಬ್ಬಿ, ಬಟ್ಟಲುಗಳ ಮೇಲೆ ಚಿತ್ತಾರ ಬಿಡಿಸಿ, ಅದರಲ್ಲಿ ಹೂವಿನ ಗಿಡಗಳನ್ನು ನೆಟ್ಟು, ಮನೆಯ ಕಿಟಕಿ ಬಳಿ ಅಥವಾ ಲಿವಿಂಗ್‌ ಏರಿಯಾಗಳಲ್ಲಿ ಅವುಗಳಲ್ಲಿ ಚೆಂದವಾಗಿ ಜೋಡಿಸಬಹುದು.

ADVERTISEMENT

ಹಳೆಯ ಶ್ಯಾಂಫೂ ಬಾಟಲಿಗಳು: ಎಲ್ಲರ ಮನೆಯಲ್ಲಿಯೂ ಶ್ಯಾಂಪೂ ಬಾಟಲಿಗಳು ಇದ್ದೇ ಇರುತ್ತವೆ. ಶ್ಯಾಂಪೂ ಖಾಲಿಯಾದ ಬಳಿಕ ಅವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ. ಅದನ್ನು ಸೆಣಬಿನ ಹಗ್ಗ ಅಥವಾ ರಟ್ಟಿನಿಂದ ಅಲಂಕರಿಸಿ. ನಂತರ ಅದಕ್ಕೆ ಒಂದೆರಡು ಸುಗಂಧ ಭರಿತ ಹೂವುಗಳನ್ನು ಹಾಕಿ, ಅಂದ ಹೆಚ್ಚಿಸಲು ಒಂದೆರಡು ಕೃತಕ ಹೂವುಗಳನ್ನು ಬಳಸಬಹುದು. ಇದು ಮನೆಗೆ ಡಿಫರೆಂಟ್‌ ಲುಕ್‌ ಜೊತೆಗೆ ಹೆಚ್ಚು ಖರ್ಚಿಲ್ಲದೆ ಮನೆಯನ್ನು ಸುಂದರವಾಗಿಸುತ್ತದೆ.

ಹಳೆಯ ಸೂಟ್‌ಕೇಸ್‌ಗಳು: ಮನೆಯಲ್ಲಿ ಮೂಲೆಸೇರಿರುವ ಸೂಟ್‌ಕೇಸ್‌ಗಳನ್ನು ಮನೆಯನ್ನು ಅಲಂಕರಿಸಲು ಬಳಸಿಕೊಳ್ಳಬಹುದು. ಬಾಲ್ಕನಿಗಳಲ್ಲಿ ಹಳೆಯ ಸೂಟ್‌ಕೇಸ್‌ಗಳನ್ನು ಇರಿಸಿ. ಅದಕ್ಕೆ ಕೊಂಚ ಮರಳು ಮಿಶ್ರಿತ ಮಣ್ಣು ಮತ್ತು ಸ್ವಲ್ಪ ಗೊಬ್ಬರ ಸೇರಿಸಿ ಹೂವಿನ ಗಿಡವನ್ನು ನೆಟ್ಟರೆ ಹಸಿರೆಲೆಗಳ ಜೊತೆಗೆ ಚೆಂದದ ಹೂವುಗಳು ಇಡೀ ಮನೆಗೆ ಹೊಸತನವನ್ನು ನೀಡಬಲ್ಲದು.

ಹೆಣೆದ ಹೂದಾನಿಗಳು: ಬಿದಿರು, ಪ್ಲಾಸ್ಟಿಕ್‌ ವಾಯರ್‌ ಬಳಸಿಕೊಂಡು ಚೆಂದದ ಹೂವುಗಳೊಂದಿಗೆ ಮನೆಯನ್ನು ಅಂದವಾಗಿಸಬಹುದು. ಪ್ಲಾಸ್ಟಿಕ್‌ ವಾಯರ್‌ಗಳನ್ನು ಸುಲಭದಲ್ಲಿ ಹೆಣೆಯಬಹುದು. ಹೂದಾನಿಗಳ ರೂಪದಲ್ಲಿ ಹೆಣೆದುಕೊಂಡರೆ (ನೀವು ಮಾರುಕಟ್ಟೆಯಿಂದಲೂ ತಂದುಕೊಳ್ಳಬಹುದು) ಅದರೊಳಗೆ ಹೂವು ಗಳನ್ನು ಇಟ್ಟು ಮನೆಯೊಳಗಿನ ಗೋಡೆಗೆ ಅಥವಾ ಬಾಗಿಲುಗಳ ಅಕ್ಕಪಕ್ಕದಲ್ಲಿ ತೂಗು ಹಾಕಬಹುದು.

ನೀರಿನ ಮಗ್‌ ಅಥವಾ ಕ್ಯಾನ್‌ಗಳು: ಪ್ಲಾಸ್ಟಿಕ್‌ ಕ್ಯಾನ್‌ ಅಥವಾ ಮಗ್‌ಗಳಿಗೆ ಸಣ್ಣ ರಂಧ್ರವಾದರೂ ನೀರು ಸೋರುತ್ತದೆ. ಹಾಗೆಂದು ಅದನ್ನು ಎಸೆಯಲು ಮನಸ್ಸಾಗುವುದೂ ಇಲ್ಲ. ಅಂತಹ ಸಂದರ್ಭಗಳಲ್ಲಿ ಅವಗಳನ್ನು ಚೆನ್ನಾಗಿ ತೊಳೆದು ಬಣ್ಣ ಹಚ್ಚಿ, ಕ್ರಿಯಾತ್ಮಕತೆಗೆ ತಕ್ಕಂತೆ ಚೆಂದದ ಡಿಸೈನ್‌ಗಳನ್ನು ಚಿತ್ರಿಸಿ. ನಂತರ ಅದರಲ್ಲಿ ಹೂವುಗಳನ್ನಿಟ್ಟು ಡೈನಿಂಗ್‌ ಟೇಬಲ್‌ಗಳ ಮೇಲೆ, ಟೀಪಾಯಿಗಳ ಮೇಲೆ, ಸ್ಟಡಿ ಟೇಬಲ್‌ಗಳ ಮೇಲೆ ಅಷ್ಟೇ ಯಾಕೆ ಅಡುಗೆ ಮನೆಯಲ್ಲೂ ಇರಿಸಿಕೊಳ್ಳಬಹುದು. ಇದರಿಂದ ಮನೆಗೆ ಹೊಸ ಲುಕ್‌ ಸಿಗುತ್ತದೆ.

ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು:

• ನಿಮಗೆ ಗೊತ್ತಾ ಮನೆಯನ್ನು ಹೀಗೆ ವಿಧ ವಿಧವಾಗಿ ಹೂವುಗಳಿಂದ ಅಲಂಕರಿಸುವುದರಿಂದ ಮಾನಸಿಕ ಆರೋಗ್ಯವನ್ನೂ ಉತ್ತಮವಾಗಿಸಿಕೊಳ್ಳಬಹುದು.

• ಮನೆಯನ್ನು ಹೂವುಗಳಿಂದ ಅಲಂಕರಿಸುವುದರಿಂದ ಹೊರಗಿನ ಕೆಟ್ಟ ವಾಸನೆ ಮನೆ ಪ್ರವೇಶಿಸದಂತೆ ತಡೆದು ಸದಾ ಕಾಲ ತಾಜಾತನದ ಅನುಭವ ನೀಡುತ್ತದೆ. ಲಘು ಪರಿಮಳವುಳ್ಳ ಹೂವುಗಳನ್ನು ಬಳಸುವುದರಿಂದ ಮನಸ್ಸಿಗೆ ಫ್ರೆಶ್‌ ಫೀಲ್‌ ನೀಡುತ್ತದೆ. ಒತ್ತಡವನ್ನೂ ನಿವಾರಿಸುತ್ತದೆ.

• ಮನೆಯಲ್ಲಿ ಹಸಿರು ಗಿಡಗಳು, ಹೂವುಗಳು ಇರುವುದರಿಂದ ಆಮ್ಲಜನಕದ ಪರಿಚಲನೆ ಸುಧಾರಿಸುತ್ತದೆ, ಮನೆಯಲ್ಲಿ ತಾಜಾ ಹೂವುಗಳು ಕೇವಲ ಆಲಂಕಾರಿಕವಲ್ಲ, ಇದು ಮನೆಯೊಳಗೆ ಹಿತವಾದ ಗಾಳಿ ಬರಲು ಸಹಾಯ ಮಾಡುತ್ತದೆ. ಮಾಲಿನ್ಯದ ಮಟ್ಟ ಹೆಚ್ಚು ಇರುವ ನಗರದಲ್ಲಿ ವಾಸಿಸುವಾಗ ಇದು ವಿಶೇಷವಾಗಿ ಸಹಾಯ ಮಾಡುತ್ತದೆ.

• ಬಣ್ಣ ಬಣ್ಣದ ತಾಜಾ ಹೂವುಗಳು ಮನಸ್ಸಿಗೆ ಖುಷಿಯನ್ನು ನೀಡುತ್ತದೆ. ಮಾನಸಿಕ ಸ್ಥಿರತೆ ಹೆಚ್ಚಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.