ಗಾಜಿನ ಆಯತಾಕಾರದ ಪೆಟ್ಟಿಗೆಯೊಳಗೆ ನೀರು ತುಂಬಿ ಪುಟ್ಟ, ಬಣ್ಣ ಬಣ್ಣದ ಮೀನುಗಳನ್ನು ಸಾಕುವುದು ಹಲವರ ಆಸಕ್ತಿ ಮತ್ತು ಅಭಿರುಚಿ.
ಇದು ಮನೆಯೊಳಗೊಂದು ಆಹ್ಲಾದಕರ ಮತ್ತು ಆರೋಗ್ಯಕರ ವಾತಾವರಣ ಸೃಷ್ಟಿಸುತ್ತದೆ. ಅಕ್ವೇರಿಯಂ ಯಾವ ಗಾತ್ರದ್ದೇ ಇರಲಿ. ಆದರೆ, ಅದರೊಳಗೊಂದು ಪುಟ್ಟ ಲೋಕವೇ ಇದೆ.
ಮರಳು, ಹೊಳಪು ಕಲ್ಲುಗಳು, ಜಲ ಸಸ್ಯಗಳು (ಕೆಲವೆಡೆ ಕೃತಕ ಸಸ್ಯಗಳೂ ಇರುತ್ತವೆ), ಬಣ್ಣದ ಮೀನುಗಳ ಜೊತೆ ನೀರಿನೊಳಗೆ ಈಜಾಡುವ ಸಾಹಸಿಗಳು, ಯಂತ್ರದ ಮೂಲಕ ಆಮ್ಲಜನಕ ಹಾಯಿಸಿದಾಗ ಸೃಷ್ಟಿಯಾಗುವ ಗುಳ್ಳೆಗಳು, ಚೆಂದದ ತಿಳಿಬೆಳಕು... ಹೀಗೆ ಅವರವರ ಅಭಿರುಚಿ, ಸಾಮರ್ಥ್ಯಕ್ಕೆ ತಕ್ಕಂತೆ ಮೀನು ತೊಟ್ಟಿ ರೂಪಿಸುವವರು ಇದ್ದಾರೆ.
ಯಾವ ಮೀನುಗಳು ಸೂಕ್ತ?
ಗಾತ್ರದ ದೃಷ್ಟಿಯಲ್ಲಿ ಗೋಲ್ಡ್‌ಫಿಷ್, ಗಪ್ಪಿ, ಕೊಯ್, ಆಸ್ಕರ್, ಬ್ಲ್ಯಾಕ್ ಟೈಗರ್ ಆಸ್ಕರ್ ಫಿಷ್, ಕಿಚ್ಲಿಡ್, ಗ್ರಾಸ್ ಕಾರ್ಪ್‌ಫಿಷ್, ವೈಟ್‌ಆ್ಯಂಡ್ ರೆಡ್ ಕ್ಯಾಪ್ ಫಿಷ್.... ಹೀಗೆ ಹತ್ತಾರು ಬಗೆಯ ಮೀನುಗಳಿವೆ.
ದೊಡ್ಡ ಮತ್ತು ಸಣ್ಣ ಗಾತ್ರದ ಮೀನುಗಳನ್ನು ಒಂದೇ ತೊಟ್ಟಿಯಲ್ಲಿ ಸಾಕುವಾಗ ಅವುಗಳ ಗುಣಸ್ವಭಾವಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಅವು ಸಹಬಾಳ್ವೆ ನಡೆಸುವಂತಿದ್ದರೆ ಮಾತ್ರ ಆಯ್ಕೆ ಮಾಡಬಹುದು. ಇಲ್ಲವಾದರೆ ಸಣ್ಣ ಗಾತ್ರದ ಮೀನುಗಳೇ ಉತ್ತಮ.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಿಗುವ ಕೆರೆ, ಹಳ್ಳದ ಮೀನುಗಳನ್ನು ಹಿಡಿದು ಪುಟ್ಟ ಅಕ್ವೇರಿಯಂಗಳಲ್ಲಿ, ಗಾಜಿನ ಪಾತ್ರೆಯಲ್ಲಿ ಸಾಕಿದವರೂ ಇದ್ದಾರೆ.
ಬೆಲೆ ಹೇಗೆ?
ಪ್ರತಿ ಮೀನಿನ ಬೆಲೆ ₹20ರಿಂದ ಆರಂಭವಾಗಿ ಸಾವಿರ ರೂಪಾಯಿಯವರೆಗೂ ಇರುವುದುಂಟು.
ಆಹಾರ: ಸಣ್ಣಗೆ ಕುಟ್ಟಿ ಕಾಳುಗಟ್ಟಿಸಿದ ಬಟಾಣಿ, ಗೋಧಿ ರವೆ ಹಾಕಬಹುದು. ಪೌಷ್ಟಿಕಾಂಶ ಮಿಶ್ರಿತ ಅಕ್ವೇರಿಯಂ ಮೀನುಗಳ ಆಹಾರ ಸಾಸಿವೆ ಗಾತ್ರದ ಕಾಳುಗಳ ರೂಪದಲ್ಲಿ ಸಿಗುತ್ತದೆ. ಅಗತ್ಯಕ್ಕೆ ತಕ್ಕಂತೆ ಬಳಸಬಹುದು.
ಅತಿಯಾಗಿ ಆಹಾರ ಸುರಿಯುವುದು ಅನಗತ್ಯ. ಏಕೆಂದರೆ ಒಮ್ಮೊಮ್ಮೆ ಈ ಆಹಾರವೇ ಕೊಳೆತು ಪಾಚಿಕಟ್ಟುವುದೂ ಇದೆ.
ಅಕ್ವೇರಿಯಂ ಶಬ್ದ ಬಂದದ್ದು ಹೀಗೆ
ಯೂರೋಪಿನ ಪರಿಸರವಾದಿ ಫಿಲಿಪ್ ಹೆನ್ರಿ ಗೋಸ್ ಅವರು ಈ ಶಬ್ದವನ್ನು ಬಳಕೆಗೆ ತಂದರು. ಲ್ಯಾಟಿನ್ ಭಾಷೆಯ ಅಕ್ವಾ(ನೀರು), ಏರಿಯಂ ಎಂದರೆ ಅದಕ್ಕೆ (ನೀರಿಗೆ) ಸಂಬಂಧಿಸಿದಸ್ಥಳ ಎಂದು ಅರ್ಥ. 1850ರಲ್ಲಿ ರಾಸಾಯನ ವಿಜ್ಞಾನಿ ರಾಬರ್ಟ್ ವಾರಿಂಗ್ಟನ್ ಅಕ್ವೇರಿಯಂ ಪರಿಕಲ್ಪನೆಯನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದರು. ಪುಟ್ಟ ಪೆಟ್ಟಿಗೆಯಲ್ಲಿ ಸಸ್ಯಗಳನ್ನು ಬೆಳೆಸಿ ಅವುಗಳ ಮೂಲಕಜಲಚರಗಳಿಗೆ ಆಮ್ಲಜನಕ ಒದಗಿಸುವುದು ಎಂದು ಅಕ್ವೇರಿಯಂನ್ನು ವ್ಯಾಖ್ಯಾನಿಸಿದರು. ಇಂಗ್ಲೆಂಡ್‌ನಲ್ಲಿ ಅಕ್ವೇರಿಯಂ ನಿರ್ಮಿಸುವ ಹವ್ಯಾಸವೂ ಬೆಳೆಯಿತು. ಗೋಸ್ ಅವರೇ ಇದನ್ನು ಬೆಳೆಸಿದರು.
1853ರಲ್ಲಿ ಲಂಡನ್ ಪ್ರಾಣಿ ಸಂಗ್ರಹಾಲಯದಲ್ಲಿ ಮೊದಲ ಸಾರ್ವಜನಿಕ ಅಕ್ವೇರಿಯಂನ್ನು ಸ್ಥಾಪಿಸಲಾಯಿತು. ಹಾಗೆ ನೋಡಿದರೆ ರೋಮನ್ನರ ಕಾಲದಲ್ಲಿಯೂ ಅಕ್ವೇರಿಯಂ ಪರಿಕಲ್ಪನೆ ಇತ್ತು. 19ನೇ ಶತಮಾನದಲ್ಲಿ ಚೀನಿಯರೂ ಕೂಡಾ ಚಿಕ್ಕ ಪಾತ್ರೆಗಳಲ್ಲಿ ಮೀನು ಸಾಕುತ್ತಿದ್ದರು ಎಂದೂ ಇತಿಹಾಸ ಹೇಳುತ್ತದೆ.
ನಿರ್ವಹಣೆ: ಸರಾಸರಿ ವಾರಕ್ಕೊಮ್ಮೆ ಅಥವಾ 10 ದಿನಗಳಿಗೊಮ್ಮೆ ನೀರನ್ನುಭಾಗಶಃ ಖಾಲಿ ಮಾಡಿ (ಮೀನುಗಳನ್ನು ನೀರು ತುಂಬಿದ ಬೇರೆ ಪಾತ್ರೆಯಲ್ಲಿ ಹಾಕಬೇಕು. ಈ ಮೀನುಗಳನ್ನು ಹಿಡಿಯಲು ಪುಟ್ಟ ಬಲೆಯೂ ಸಿಗುತ್ತದೆ. ಮೀನುಗಳಿಗೆ ಹಾನಿಯಾಗದಂತೆ ಹಿಡಿದು ಬೇರೆ ಪಾತ್ರೆಗೆ ಹಾಕಬೇಕು), ಗಾಜನ್ನು ಸ್ವಚ್ಛಗೊಳಿಸಬೇಕು. ಖಾಲಿಯಾದಷ್ಟು ಭಾಗಕ್ಕೆ ಹೊಸ ನೀರು ತುಂಬಬೇಕು.ಗಾಳಿ ಬೆಳಕಿನ ವ್ಯವಸ್ಥೆ ಪರಿಶೀಲಿಸಬೇಕು. ಮೀನುಗಳ ಆರೋಗ್ಯವನ್ನೂ ಗಮನಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.