ಕೋವಿಡ್–19 ಕಾಲದಲ್ಲಿ ಶುರುವಾದ ವರ್ಕ್ ಫ್ರಂ ಹೋಮ್ ಇನ್ನೂ ಕೆಲವು ಕಡೆ ಮುಂದುವರಿದಿದೆ. ಆ ಸಮಯದಲ್ಲಿ ಅನೇಕರು ತಮ್ಮ ಮನೆಗಳನ್ನೇ ಕಚೇರಿಯಾಗಿ ಮಾಡಿಕೊಂಡಿದ್ದರು. ಕೆಲವರು ಅದನ್ನು ಕಾಯಂಗೊಳಿಸಿಕೊಂಡಿದ್ದಾರೆ ಕೂಡ.
ಈಗಲೂ ಮನೆ ಕಮ್ ಆಫೀಸ್ ಸಂಸ್ಕೃತಿ ಮುಂದುವರಿದಿದೆ. ಮನೆಯಿಂದಲೇ ಕಚೇರಿ ಕೆಲಸ ಮಾಡುವ ದೃಷ್ಟಿಕೋನ ಇಟ್ಟುಕೊಂಡು ಮನೆ ನಿರ್ಮಾಣ ಮಾಡುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಕಚೇರಿಯಲ್ಲಿ ದೊರೆಯುವ ಅನುಕೂಲಗಳು–ಸೌಲಭ್ಯಗಳನ್ನು ಮನೆಗಳಲ್ಲೇ ನಿರೀಕ್ಷಿಸುತ್ತಿದ್ದಾರೆ. ಇತ್ತ ಮನೆಯ ಲಕ್ಷಣಗಳೂ ಇರುವ, ಅತ್ತ ಕಚೇರಿಯ ನೋಟವನ್ನೂ ಹೊಂದಿರುವ ಮನೆಗಳ ಅಗತ್ಯ ಈಗೀಗ ಹೆಚ್ಚಾಗುತ್ತಿದೆ.
ನವೀನ ಮಾದರಿ ಒಳಾಂಗಣ
ಮನೆಯ ಒಳಾಂಗಣ ಅಚ್ಚುಕಟ್ಟಾಗಿರಬೇಕು. ಅದರಲ್ಲೂ ದಿನದ ಹೆಚ್ಚಿನ ಸಮಯವನ್ನು ಕಳೆಯುವ ಕಚೇರಿ ಕೋಣೆಯ ವಿನ್ಯಾಸ ವಿನೂತನವಾಗಿರಬೇಕು. ಸರಿಯಾದ ಗಾಳಿ–ಬೆಳಕು ಅತ್ಯಗತ್ಯ. ಹೊರಗಿನಿಂದ ವಿಪರೀತ ಶಬ್ದ ಬರಬಾರದು, ಬಿಡುವಾದಾಗೊಮ್ಮೆ ಕಿಟಕಿಯಾಚೆ ದೂರಕ್ಕೆ ಕಣ್ಣು ಹಾಯಿಸಿದರೆ ತಂಪೆನಿಸಬೇಕು.... ಗೃಹ ಕಚೇರಿಯ ರೂಪುರೇಷೆಗಳು ಹೀಗೇ ಇರಬೇಕು ಎನ್ನುವ ಬಗ್ಗೆ ಹೊಸ ಗ್ರಾಹಕರು ಬಹಳ ನಿರ್ದಿಷ್ಟವಾಗಿದ್ದಾರೆ. ಕೆಲವರು ಇರುವ ಮನೆಯನ್ನೇ ಕಚೇರಿ–ಶಾಲೆಯ ಪಾತ್ರಗಳನ್ನೂ ಸರಿದೂಗಿಸಿಕೊಂಡು ಹೋಗುವಂತೆ ಮರು ವಿನ್ಯಾಸ ಮಾಡಿದರೆ, ಇನ್ನೂ ಕೆಲವರು ಹೊಸ ಮನೆಯ ಆಯ್ಕೆಯಲ್ಲಿ ಈ ರೂಪಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಕಚೇರಿಗಳೂ, ಶಾಲೆಗಳೂ ಮನೆಗೆ ಸ್ಥಳಾಂತರಗೊಂಡಿರುವ ಈ ಸಮಯದಲ್ಲಿ ಇದೊಂದು ಅನಿವಾರ್ಯ ಹೆಜ್ಜೆ ಕೂಡ ಹೌದು.
ಮನೆಯೊಂದು, ಪಾತ್ರ ಹಲವು
ಮನೆ ಎಂದರೆ ಮನೆಯಂತಿದ್ದರೆ ಸಾಲದು. ಈಗ ಮನೆಯ ಒಂದೊಂದು ಕೋಣೆಗಳನ್ನು ಒಂದೊಂದು ಕೆಲಸಗಳಿಗೆ ನಿಯೋಜಿಸಲಾಗುತ್ತದೆ. ಅವು ಮಕ್ಕಳ ಚಟುವಟಿಕೆಗೆ, ಉದ್ಯೋಗದಲ್ಲಿರುವ ತಂದೆ–ತಾಯಿಯ ಜೂಮ್ ಮೀಟಿಂಗ್, ಸೆಮಿನಾರ್‌ಗಳಿಗೆ ಹಾಗೂ ಕಚೇರಿ ಕೆಲಸಗಳಿಗೆ ಹೊಂದುವಂತಿರಬೇಕು. ಇವುಗಳ ಜೊತೆಗೆ ಮನೆಯಲ್ಲಿರುವ ಹಿರಿಯರಿಗೂ ಅವರದೇ ಆದ ವೈಯಕ್ತಿಕ ಜಾಗವೊಂದಿರಬೇಕು. ಒಟ್ಟಾರೆ ಒಬ್ಬರಿಗೊಬ್ಬರಿಗೆ ಕಿರಿಕಿರಿಯಾಗದಂತೆ ಮನೆಯನ್ನು ವಿನ್ಯಾಸಗಳಿಸಬೇಕು.
ಹೊರಾಂಗಣಕ್ಕೂ ಆದ್ಯತೆ
ಈ ಕಂಫರ್ಟ್ ಮನೆಯ ನಾಲ್ಕು ಗೋಡೆಗಳ ಒಳಗಿನ ಅನುಕೂಲಕ್ಕೆ–ಆರಾಮಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯ ಹೊರಗಿನ ವಾತಾವರಣಕ್ಕೂ ಅಷ್ಟೇ ಪ್ರಾಮುಖ್ಯ ಇದೆ. ಮನೆಯ ಅಥವಾ ಸಮುಚ್ಛಯದ ಸುತ್ತಮುತ್ತ ವ್ಯಾಯಾಮಕ್ಕೆ, ವಾಯುವಿಹಾರಕ್ಕೆ, ದೈಹಿಕ ಚಟುವಟಿಕೆಗೆ, ಕ್ರೀಡಾ ಸೌಲಭ್ಯಗಳು ಸೇರಿದಂತೆ ಸಾಕಷ್ಟು ಸ್ಥಳಾವಕಾಶ ಇರಬೇಕು ಎನ್ನುವುದು ಬಹುಮುಖ್ಯ ಬೇಡಿಕೆ. ಇವೆಲ್ಲ ಮನೆಯ ಆಯ್ಕೆಯಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ.
ಅಂತೆಯೇ, ಅನೇಕ ಡೆವಲಪರ್‌ಗಳು ಮಾರ್ಕೆಟಿಂಗ್‌ಗಿಂತ ಮುಖ್ಯವಾಗಿ ಈ ಎಲ್ಲಾ ಅಂಶಗಳನ್ನು ಹೊಂದಿರುವ ಉತ್ತಮ ವಿನ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಖರೀದಿದಾರರೂ ಸಹ ಅದೇ ದರದಲ್ಲಿ ಈ ಹೊಸ ನೋಟಗಳನ್ನು ಹೊಂದಿರುವ ಮನೆಗಳ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ವಿಲ್ಲಾ ಮತ್ತು ಅಪಾರ್ಟ್‌ಮೆಂಟ್ ವಿಭಾಗಗಳಲ್ಲಿ ಮನೆ ಕಟ್ಟುವಾಗ ಸಾಕಷ್ಟು ತೆರೆದ ಸ್ಥಳಗಳು, ವ್ಯಾಪಕವಾದ ಸೌಕರ್ಯಗಳು ಮತ್ತು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾದ ಒಳಾಂಗಣ ವಿನ್ಯಾಸಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.