ADVERTISEMENT

PV Web Exclusive: ಒಳಾಂಗಣ ವಿನ್ಯಾಸ, ಆಪ್ತತೆಯ ನಿವಾಸ

ಸ್ಮಿತಾ ಶಿರೂರ
Published 26 ಜನವರಿ 2021, 7:31 IST
Last Updated 26 ಜನವರಿ 2021, 7:31 IST
ಲಿವಿಂಗ್‌ ರೂಂ ವಿನ್ಯಾಸ. (ಐ ಸ್ಟಾಕ್‌ ಇಮೇಜಸ್‌)
ಲಿವಿಂಗ್‌ ರೂಂ ವಿನ್ಯಾಸ. (ಐ ಸ್ಟಾಕ್‌ ಇಮೇಜಸ್‌)   

ವಾಸಿಸುವ ಮನೆ, ಕೆಲಸ ಮಾಡುವ ಕಚೇರಿ, ಊಟ ಮಾಡಲು ಹೋಗುವ ಹೋಟೆಲ್‌, ರೆಸ್ಟೋರೆಂಟ್‌.. ಹೀಗೆ ಕಟ್ಟಡಗಳು ಆಪ್ತತೆ ಒದಗಿಸಬೇಕೆಂದರೆ ಅಲ್ಲಿ ಒಳಾಂಗಣ ವಿನ್ಯಾಸ ಪ್ರಮುಖ ಪಾತ್ರ ವಹಿಸುತ್ತದೆ. ದೇಶದಲ್ಲಿ ಈಗ ಒಳಾಂಗಣ ವಿನ್ಯಾಸ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ.

ಹೆಚ್ಚಿನವರು ತಮ್ಮ ಮನೆ ಸುವ್ಯವಸ್ಥಿತ, ಸುರಕ್ಷಿತ, ಗಾಳಿ–ಬೆಳಕು ಆಡುವಂತಿರಲಿ ಎಂದು ಬಯಸುತ್ತಾರೆ. ಹೀಗಾಗಿ ಮನೆ ಕಟ್ಟಿಸುವಾಗ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯ ನೀಡುತ್ತಾರೆ. ಜಾಗ ಚಿಕ್ಕದಾದರೆ ಅದನ್ನು ಸೂಕ್ತವಾಗಿ ಬಳಸಿಕೊಳ್ಳುವುದು ಹೇಗೆ ಎಂಬ ಉಪಾಯವನ್ನೂ ಒಳಾಂಗಣ ವಿನ್ಯಾಸ ಒದಗಿಸುತ್ತದೆ. ಮನೆಯ ಒಳ–ಹೊರ ವಾತಾವರಣ ಸುಂದರವಾಗಿದ್ದರೆ ಮನಸ್ಸೂ ಪ್ರಫುಲ್ಲಗೊಳ್ಳುತ್ತದೆ.

ಉತ್ತಮವಾಗಿ ವಿನ್ಯಾಸ ಮಾಡಿದ ಕಟ್ಟಡಗಳಿಂದಾಗಿ ಮನೆಗೆ ಕ್ರಿಯಾತ್ಮಕತೆ ಮೂಡುತ್ತದೆ. ಇಲ್ಲಿ ಕಡಿಮೆ ಜಾಗವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯ. ಮನೆ, ಸೂಪರ್‌ ಮಾರ್ಕೆಟ್‌, ಕಚೇರಿ, ಮಾಲ್‌, ಕಂಪನಿ, ಕಾಫಿ ಶಾಪ್‌, ರೆಸ್ಟೋರೆಂಟ್‌... ಹೀಗೆ ಯಾವುದೇ ಕಟ್ಟಡವಿರಲಿ, ಅಲ್ಲಿ ಒಳಾಂಗಣ ವಿನ್ಯಾಸ ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲಿ ಬಳಸುವ ಬಣ್ಣ, ಸಾಮಗ್ರಿ, ಪೀಠೋಪಕರಣ, ನೆಲಹಾಸು, ಲೈಟಿಂಗ್‌ಗಳಿಂದ ಹಿಡಿದು ಗೋಡೆಯ ಮೇಲೆ ಹಾಕುವ ಪೇಂಟಿಂಗ್‌ ಸಹ ಮಹತ್ವದ್ದಾಗಿ ಪರಿಗಣಿತವಾಗುತ್ತಿದೆ.

ADVERTISEMENT

ದೆಹಲಿ, ಮುಂಬೈ, ಬೆಂಗಳೂರಿನಂಥ ಬೃಹತ್ ನಗರಗಳಿಗೆ ಸೀಮಿತವಾಗಿದ್ದ ‘ಒಳಾಂಗಣ ವಿನ್ಯಾಸ’ದ ಪರಿಧಿ ಈಗ ಚಿಕ್ಕ ನಗರಗಳಿಗೂ ವಿಸ್ತರಿಸಿದೆ. ಕಾರಣ ಜನರ ಜೀವನ ಶೈಲಿ ಬದಲಾಗಿರುವುದು. ಕಲಾಪ್ರೇಮಿ ಜನರು ತಾವು ಇರುವ ಮನೆಯೂ ಕಲಾತ್ಮಕವಾಗಿರಲಿ ಎಂದು ಬಯಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಎನ್ನುವುದು ಎಲ್ಲವೂ ಎಲ್ಲರಿಗೂ ಎಟಕುವಂತೆ ಮಾಡಿರುವುದರಿಂದ ಒಳಾಂಗಣ ವಿನ್ಯಾಸದ ಕಲ್ಪನೆ ಈಗ ಸಾಮಾನ್ಯ ಜನರಲ್ಲೂ ಮೂಡಿದೆ. ಮನೆ ಕಟ್ಟಿಸುವಾಗ ಪ್ರತಿ ಸಾಮಗ್ರಿ ಖರೀದಿಸುವಾಗಲೂ ನೂರಾರು ವಿನ್ಯಾಸ ಪರಿಶೀಲಿಸುವ ರೂಢಿ ಬಂದಿದೆ.

ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್‌ ಹೌಸ್‌ ಕಲ್ಪನೆಗಳು ದೇಶದಲ್ಲಿ ಮನೆ ನಿರ್ಮಾಣದ ಆಲೋಚನೆಗಳನ್ನು ಬದಲಾಯಿಸಿವೆ. ದೇಶವು ನಿರ್ಮಾಣ ಕ್ಷೇತ್ರದಲ್ಲಿ ಜಗತ್ತಿನ 3ನೇ ಅತಿದೊಡ್ಡ ರಾಷ್ಟ್ರವಾಗುವ ಹಂತದಲ್ಲಿದೆ. ಖೋರಾ ಡಾಟ್‌ ಕಾಮ್‌ ಪ್ರಕಾರ 2030ರೊಳಗೆ ದೇಶದಲ್ಲಿ 1,10,00,000 ಮನೆಗಳು ನಿರ್ಮಾಣವಾಗುವ ಅಂದಾಜು ಇದೆ. ಹೀಗಾಗಿ ಒಳಾಂಗಣ ವಿನ್ಯಾಸದ ಬೇಡಿಕೆಯೂ ವಿಸ್ತರಿಸಲಿದೆ. ಈ ಕ್ಷೇತ್ರದ ವಹಿವಾಟು, ಉದ್ಯೋಗಾವಕಾಶಗಳೂ ಹೆಚ್ಚಳವಾಗುವ ನಿರೀಕ್ಷೆಯಿದೆ. ಜನರ ಜೀವನ ಶೈಲಿ ಬದಲಾಗಿರುವುದರಿಂದ, ಆದಾಯದ ಮಟ್ಟ ಹೆಚ್ಚಳದಿಂದ ಹಾಗೂ ಕೊಳ್ಳುವಿಕೆಯ ಹೆಚ್ಚಳದಿಂದಾಗಿ ಒಳಾಂಗಣ ವಿನ್ಯಾಸಕ್ಕೆ ಹಣ ತೊಡಗಿಸಲು ಹೆಚ್ಚಿನವರು ಮುಂದಾಗುತ್ತಿದ್ದಾರೆ ಎನ್ನುವುದು ಈ ಕ್ಷೇತ್ರ ಪರಿಣತರ ಹೇಳಿಕೆ.

ಕಲೆ ಹಾಗೂ ವಿಜ್ಞಾನ ಎರಡೂ ಸೇರಿದ ಕ್ಷೇತ್ರವಾಗಿರುವ ಒಳಾಂಗಣ ವಿನ್ಯಾಸವು ಜೀವನದ ಪದ್ಧತಿಯನ್ನು ಸುಧಾರಿಸುವುದಲ್ಲದೇ ಕ್ರಿಯಾತ್ಮಕತೆ ಉಂಟುಮಾಡುತ್ತದೆ ಎನ್ನುವುದು ತಜ್ಞರ ಅಭಿಮತ.

ಸುರಕ್ಷತೆಯ ದೃಷ್ಟಿಯಿಂದಲೂ ಒಳಾಂಗಣ ವಿನ್ಯಾಸ ಮಹತ್ವ ಪಡೆದಿದೆ. ಒಂಟಿಯಾಗಿ ಬದುಕುವ ಮಹಿಳೆಯರು, ಒಂಟಿ ವೃದ್ಧರು ಇರುವ ಮನೆಗಳಿಗೆ ಸುರಕ್ಷತೆಯ ದೃಷ್ಟಿಯಿಂದ ವಿಶೇಷ ಒಳಾಂಗಣ ಹಾಗೂ ಹೊರಾಂಗಣ ವಿನ್ಯಾಸ ಮಾಡಲಾಗುತ್ತದೆ. ವೃದ್ಧರಿಗೆ ಸುಲಭವಾಗಿ ಓಡಾಡಲು ಅನುಕೂಲವಾಗುವ ನೆಲಹಾಸು, ಅಡುಗೆ ಮಾಡಿಕೊಳ್ಳಲು ಸೂಕ್ತ ಸಾಮಗ್ರಿಗಳನ್ನು ಒಳಾಂಗಣ ವಿನ್ಯಾಸಗಾರರು ಗುರುತಿಸುತ್ತಾರೆ. ಹೆಚ್ಚು ತಂತ್ರಜ್ಞಾನ ಸ್ನೇಹಿ ವಿನ್ಯಾಸಗಳನ್ನು ಮನೆಗಳಲ್ಲಿ ಅಳವಡಿಸಿದರೆ ನಿತ್ಯದ ಕೆಲಸಗಳನ್ನೂ ಸುಲಭವಾಗಿ ಇವರು ಮಾಡಿಕೊಳ್ಳಬಹುದು.

ಗೋಡೆಚಿತ್ರಗಳು, ಪೀಠೋಪಕರಣ, ವಿನ್ಯಾಸ ಭರಿತ ನೆಲಹಾಸು, ತೂಗು ದೀಪಗಳು, ಪ್ರದರ್ಶನ ಸಾಮಗ್ರಿಗಳು, ಗಾಳಿ–ಬೆಳಕು ಬರಲು ಅನುಕೂಲವಾಗುವ ಕಿಟಕಿಗಳು... ಹೀಗೆ ನೂರಾರು ವಿನ್ಯಾಸಗಳನ್ನು ಪರಿಶೀಲಿಸಲು ತಂತ್ರಜ್ಞಾನವು ಈ ಕ್ಷೇತ್ರಕ್ಕೆ ವರವಾಗಿದೆ. ಮನೆಯ ಒಳ–ಹೊರಗೆ ಅಂತಿಮ ರೂಪ ಹೇಗೆ ಇರಲಿದೆ ಎಂಬುದನ್ನು ಗ್ರಾಹಕರು ನಿಖರವಾಗಿ ನೋಡಲು ಇದರಲ್ಲಿ ಸಾಧ್ಯ.

ಮನೆ ಕಟ್ಟಿಸುವಾಗ ಹಲವರಿಗೆ ಹೀಗೆಯೇ ಇರಬೇಕೆ ಎಂಬ ಪರಿಕಲ್ಪನೆ ಮನಸ್ಸಿನಲ್ಲಿ ಮೊದಲೇ ಇರುತ್ತದೆ. ಇನ್ನಷ್ಟು ಮಂದಿಗೆ ಮನೆ ಚೆನ್ನಾಗಿ ಕಾಣಬೇಕು. ಆದರೆ, ಹೇಗೆ ಮಾಡಿಸುವುದು ಎಂಬ ಸ್ಪಷ್ಟ ಚಿತ್ರಣ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಒಳಾಂಗಣ ವಿನ್ಯಾಸಗಾರರ ಸಹಾಯ ಪಡೆಯಬಹುದು.

ಸೂಕ್ತ ಜೋಡಣೆ ಅಗತ್ಯ:

‘ನೆಮ್ಮದಿಯ ಜೀವನ ಬೇಕೆಂದರೆ ನಾವು ವಾಸಿಸುವ ಮನೆಯು ವ್ಯವಸ್ಥಿತವಾಗಿರಬೇಕು. ಪೀಠೋಪಕರಣ, ಗೋಡೆಯ ಬಣ್ಣ, ಪರದೆಗಳು, ಅಡುಗೆಮನೆ ಹೀಗೆ ಎಲ್ಲ ವಸ್ತು ವೈವಿಧ್ಯಗಳು ಒಂದು ಸೂಕ್ತ ಕ್ರಮದಲ್ಲಿ ಜೋಡಣೆಯಾದಾಗಲೇ ಇದು ಸಾಧ್ಯ. ಸದ್ಯ ಸಮಕಾಲೀನ ಒಳಾಂಗಣ ವಿನ್ಯಾಸಕ್ಕೆ ಮಹತ್ವ ಲಭಿಸಿದೆ’ ಎಂದು ದಾವಣಗೆರೆಯ ‘ಪಿವಿ ಝೋನ್‌ ಕನ್‌ಸ್ಟ್ರಕ್ಷನ್ಸ್‌’ನ ಎಂಜಿನಿಯರ್‌ ಎಸ್‌.ಎಸ್‌. ಸುಧೀಂದ್ರಬಾಬು ವಿವರಿಸುತ್ತಾರೆ.

‘ತಮ್ಮ ಮನೆ ಇನ್ನೊಬ್ಬರ ಮನೆಯಂತೆ ಇರಬಾರದು. ಭಿನ್ನವಾಗಿ, ಆಕರ್ಷಕವಾಗಿ ಕಾಣಬೇಕು ಎಂದು ಜನ ಬಯಸುತ್ತಾರೆ. ಹೀಗಾಗಿ ಒಳಾಂಗಣ–ಹೊರಾಂಗಣ ವಿನ್ಯಾಸಕ್ಕೆ ಹೊಸ ವಸ್ತು ವೈವಿಧ್ಯ ಜೋಡಿಸುವುದು ಎಂಜಿನಿಯರ್‌ ಹಾಗೂ ಒಳಾಂಗಣ ವಿನ್ಯಾಸಗಾರರಿಗೆ ಅನಿವಾರ್ಯ. ಜನರ ಅಭಿಲಾಷೆಗೆ ಅನುಸಾರವಾಗಿ ನವನವೀನ ಕಟ್ಟಡ ಸಾಮಗ್ರಿ, ಒಳಾಂಗಣ ವಿನ್ಯಾಸದ ವಸ್ತುಗಳೂ ಸಹ ಹೊಸದಾಗಿ ಮಾರುಕಟ್ಟೆಗೆ ಬರುತ್ತಲೇ ಇವೆ’ ಎಂದು ಅವರು ವಿವರಿಸಿದರು.

‘ಪರಿಸರಸ್ನೇಹಿ ಮನೆಯಂಥ ಎಕ್ಸ್‌ಕ್ಲೂಸಿವ್‌ ವಿನ್ಯಾಸ ಮಾಡಲು ಖರ್ಚು ಹೆಚ್ಚಾಗುತ್ತದೆ. ಹೀಗಾಗಿ ಇಂಥ ವಿಶೇಷಗಳು ಅಪರೂಪ. ಈಚೆಗೆ 3ಕ್ಕಿಂತ ಹೆಚ್ಚು ಬೆಡ್‌ರೂಮ್‌ಗಳಿರುವ ಮನೆಯಾದರೆ ಲೈಬ್ರರಿ ಹಾಗೂ ಸ್ಟಡಿ ರೂಂ ನಿರ್ಮಿಸುವ ಹೊಸ ರೂಢಿ ಆರಂಭವಾಗಿದೆ’ ಎಂದು ಸುಧೀಂದ್ರಬಾಬು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.