ADVERTISEMENT

ಮಳೆರಾಯ ಸಿದ್ಧವಾಗುತ್ತಿದ್ದಾನೆ... ಪಾಲಿಕೆ?

ಪ್ರವೀಣ ಕುಮಾರ್ ಪಿ.ವಿ.
Published 4 ಮೇ 2019, 19:49 IST
Last Updated 4 ಮೇ 2019, 19:49 IST
   

ಬೆಂಗಳೂರು: ಹೊಳೆಯಂತಾಗುವ ರಸ್ತೆಗಳು, ತಗ್ಗುಪ್ರದೇಶಗಳೆಲ್ಲ ಜಲಾವೃತವಾಗಿ ನೀರು ತುಂಬಿಕೊಳ್ಳುವ ಮನೆಗಳು, ಕೊಚ್ಚೆ ತುಂಬಿಕೊಂಡು ನೀರನ್ನು ಹರಿಸಲು ಒಲ್ಲೆ ಎಂದು ರಚ್ಚೆ ತೆಗೆಯುವ ರಾಜಕಾಲುವೆಗಳು, ಮರಗಳು ಹಾಗೂ ಅವುಗಳ ಕೊಂಬೆಗಳು ಉರುಳಿ ಬಿದ್ದು ಸಂಭವಿಸುವ ಸಾವು ನೋವುಗಳು...

ಒಂದೇ ಸಮನೆ ಮಳೆ ಸುರಿದಾಗಲೆಲ್ಲಾ ನಗರದಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿ ಇದು. ಹಾಗಾಗಿಯೇ ಇತ್ತೀಚೆಗೆ ಮಳೆ ಶುರುವಾದಾಗಲೆಲ್ಲಾ ಜನರ ಎದೆ ಢವಗುಟ್ಟಲು ಶುರುವಾಗುತ್ತದೆ.

ನಾಲ್ಕೈದು ವರ್ಷಗಳಲ್ಲಿ ಮಳೆಯ ಸ್ವರೂಪ ಬದಲಾಗಿದೆ. ನಿರ್ದಿಷ್ಟ ಕಡೆ ಎಡೆಬಿಡದೆ ಸುರಿಯುವ ವರ್ಷಧಾರೆ ಕೆಲವೇ ನಿಮಿಷಗಳಲ್ಲಿ ಭಾರಿ ಅನಾಹುತಗಳನ್ನು ಸೃಷ್ಟಿಸುತ್ತಿದೆ. ಒಂದು ಅರ್ಧ ಗಂಟೆ ಮಳೆ ಸುರಿದರೂ ಸಾಕು, ಅರೆ ಗಳಿಗೆಯಲ್ಲೇ ನರಕಸದೃಶ ವಾತಾವರಣ ನಿರ್ಮಾಣವಾಗುತ್ತದೆ.

ADVERTISEMENT

ಈ ವರ್ಷ ಇನ್ನೂ ಮುಂಗಾರು ದಾಂಗುಡಿ ಇಟ್ಟಿಲ್ಲ. ನಗರಾಡಳಿತ ಮಳೆಗಾಲದ ಅವಾಂತರಗಳನ್ನು ಎದುರಿಸಲು ಎಷ್ಟರಮಟ್ಟಿಗೆ ಸನ್ನದ್ಧವಾಗಿದೆ ಎಂಬುದನ್ನುಒಂದೆರಡು ಗಂಟೆಗಳ ಕಾಲ ಸುರಿದ ಮುಂಗಾರು ಪೂರ್ವ ಮಳೆಯೇ ಬಟಾಬಯಲು ಮಾಡಿದೆ.

ಬಿರುಬಿಸಿಲಿನ ಏಪ್ರಿಲ್‌ನಲ್ಲಿ ಸುರಿದ ಮಳೆಯೇ ಮೂರು ಜೀವಗಳನ್ನು ಬಲಿ ಪಡೆದಿದೆ. ಮಳೆ ಅನಾಹುತಗಳಿಗೆ ಕಾರಣಗಳೇನು ಎಂದು ಹುಡುಕ ಹೊರಟರೆ ವ್ಯವಸ್ಥೆಯಲ್ಲಿರುವ ಲೋಪಗಳು ಎದ್ದು ಕಾಣಿಸುತ್ತವೆ. ಮನಸೋ ಇಚ್ಛೆ ನಡೆದಿರುವ ನಗರೀಕರಣ, ವಿಪರೀತ ಕಾಂಕ್ರಿಟೀಕರಣದಿಂದ ಮಳೆನೀರನ್ನು ಭೂಮಿಯೊಳಗೆ ಇಂಗಿಸುವ ಅವಕಾಶಗಳನ್ನೆಲ್ಲ ಕಳೆದುಕೊಂಡಿದ್ದೇವೆ. ನೀರಿನ ಸಹಜ ಹರಿವಿನ ವ್ಯವಸ್ಥೆ ಹದಗೆಟ್ಟಿದೆ. ರಾಜಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ಇರುವ ಅಡೆತಡೆಗಳು ಮಳೆ ಸೃಷ್ಟಿಸುವ ಅವಾಂತರಗಳು ಹೆಚ್ಚಲು ಕಾರಣವಾಗುತ್ತಿವೆ.

ರಾಜಕಾಲುವೆಗಳಲ್ಲಿ ಹೂಳು ತುಂಬಿದೆ. ಒಳಚರಂಡಿಯಲ್ಲಿ ಮಾತ್ರ ಹರಿಯಬೇಕಾದ ಕೊಳಚೆ ನೀರು, ಯಾವ ಸಂಸ್ಕರಣೆಗೂ ಒಳಗಾಗದೆ ನೇರವಾಗಿ ಮಳೆನೀರು ಕಾಲುವೆಗಳನ್ನು ಸೇರುತ್ತಿದೆ. ಕೊಳಚೆ ನೀರಿನಲ್ಲಿರುವ ಹೇರಳ ‘ಪೋಷಕಾಂಶ’ಗಳನ್ನು ಹೀರಿಕೊಂಡು ಗಿಡಗಂಟಿಗಳು ಹುಲುಸಾಗಿ ಬೆಳೆಯುತ್ತಿವೆ. ಇನ್ನು ಕೆಲವೆಡೆ ಕೊಳವೆಗಳು, ಕೇಬಲ್‌ಗಳು ರಾಜಕಾಲುವೆಗೆ ಅಡ್ಡಲಾಗಿ ಹಾದುಹೋಗಿವೆ. ಪ್ಲಾಸ್ಟಿಕ್‌ ಚೀಲಗಳು, ಬಟ್ಟೆ ಚೂರು ಮತ್ತಿತರ ಕಸಕಡ್ಡಿಗಳು ಈ ಗಿಡಗಂಟಿಗಳಲ್ಲಿ ಹಾಗೂ ಕೊಳವೆಗಳಲ್ಲಿ ಸಿಲುಕಿ 'ಕೃತಕ ಒಡ್ಡು'ಗಳನ್ನು ಸೃಷ್ಟಿಸುತ್ತಿವೆ. ನೀರಿನ ಹರಿವಿಗೂ ಇದು ತಡೆಯೊಡ್ಡುತ್ತಿದೆ.

ರಾಜಕಾಲುವೆಗೆ ಕಸ ಎಸೆಯುವುದು ನಗರದ ಜನ ಪಾಲಿಸಿಕೊಂಡು ಬರುತ್ತಿರುವ ಬಲು ಕೆಟ್ಟ ಪರಿಪಾಠ. ಕಾಲುವೆ ಪಕ್ಕ ಆಳೆತ್ತರತಡೆಬೇಲಿ ನಿರ್ಮಿಸುವ ಮೂಲಕ ಈ ಹಾವಳಿಗೆ ಕಡಿವಾಣ ಹಾಕಿದ್ದೇವೆ ಎಂದು ಪಾಲಿಕೆ ಹೇಳಿಕೊಳ್ಳುತ್ತಿದೆ. ಆದರೆ, ತಡೆ ಬೇಲಿಯನ್ನೂ ಹರಿದು, ಅದರೊಳಗೆ ತೂರಿ ಕಾಲುವೆ ಒಡಲಿಗೆ ಕಸ ಸೇರಿಸುವ ನಿಸ್ಸೀಮರೂ ನಮ್ಮಲ್ಲಿದ್ದಾರೆ. ನೀರಿನೊಂದಿಗೆ ಸೇರಿಕೊಳ್ಳುವ ಕಸದ ರಾಶಿ ಮಳೆಗಾಲದ ಪ್ರವಾಹ ಸೃಷ್ಟಿಗೂ ಕಾರಣವಾಗುತ್ತಿದೆ.

ಅನೇಕ ಕಡೆ ಕಟ್ಟಡ ನಿರ್ಮಾಣಕ್ಕಾಗಿ ಕಾಲುವೆಗಳನ್ನೇ ಸ್ಥಳಾಂತರಿಸಲಾಗಿದೆ. ನೇರವಾಗಿ ಹಾದು ಹೋಗಬೇಕಾದ ಕಾಲುವೆಗಳು ಇದರಿಂದ ಓರೆಕೋರೆಯಾಗಿ ಸಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.ರಾಜಕಾಲುವೆಗಳನ್ನೇ ಕಾಂಕ್ರೀಟ್‌ನಿಂದ ಮುಚ್ಚಿ ಅದರ ಮೇಲೆಯೇ ಕಟ್ಟಡಗಳನ್ನು ನಿರ್ಮಿಸಿರುವ ಕಡೆ ಮಳೆ ನೀರಿನ ಸಹಜ ಹರಿವಿನ ದಾರಿಯೇ ಬದಲಾಗಿದೆ. ಹಲವೆಡೆ ರಾಜಕಾಲುವೆಯ ಒಡಲೊಳಗೇ ಒಳಚರಂಡಿಗಳೂ ಹಾದುಹೋಗಿವೆ. ಕಾಲುವೆ ಮಧ್ಯೆಯೆ ಗುಪ್ಪೆಗಳಂತೆಎದ್ದುನಿಂತಿರುವ ಮ್ಯಾನ್‌ಹೋಲ್‌ಗಳು ನೀರಿನ ಸಹಜ ಹರಿವಿಗೆ ತೊಡಕು ಉಂಟು ಮಾಡುತ್ತಿವೆ.

2016ರಲ್ಲಿ ಭಾರಿ ಮಳೆಯಾದಾಗ ನಗರದ ದಕ್ಷಿಣ ಭಾಗದಲ್ಲಿ ಮಡಿವಾಳ ಕೆರೆಯ ಜಲಾನಯನ ಪ್ರದೇಶವೂ ಸೇರಿದಂತೆ ಬಹುತೇಕ ಕಡೆ ಪ್ರವಾಹ ಸೃಷ್ಟಿಯಾಗಿತ್ತು. ನಗರದ ಜನಜೀವನವನ್ನು 10 ದಿನಗಳಿಗೂ ಅಧಿಕ ಕಾಲ ಅಸ್ತವ್ಯಸ್ತಗೊಳಿಸಿದ ಈ ಪ್ರವಾಹದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿತು.

ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ‘ಆರಂಭ ಶೂರತ್ವ’ ಎನಿಸಿಕೊಂಡಿತೇ ವಿನಃ ಮಳೆ ಅನಾಹುತಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವ್ಯವಸ್ಥೆ ಕೊನೆಗೂ ರೂಪುಗೊಳ್ಳಲೇ ಇಲ್ಲ. ಚಿತ್ರ ನಟ ದರ್ಶನ್‌, ಆಗಿನ ಸಚಿವರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರಂತಹ ಪ್ರಭಾವಿ ವ್ಯಕ್ತಿಗಳ ಕಟ್ಟಡಗಳೇ ತೆರವು ಕಾರ್ಯಾಚರಣೆಗೆ ‘ತಡೆ’ಯಾಗಿ ಪರಿಣಮಿಸಿದವು. ಮನೆಗಳನ್ನು ಕಳೆದುಕೊಂಡಿದ್ದು ಕಾನೂನು ಹೋರಾಟ ನಡೆಸುವಷ್ಟು ಪ್ರಬಲರಲ್ಲದ, ವಶೀಲಿ ಬಾಜಿ ನಡೆಸಲಾಗದ ಬಡವರು ಮಾತ್ರ. ತೆರವು ಕಾರ್ಯವೂಕ್ರಮೇಣ ನಿಂತೇ ಹೋಯಿತು. ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ದಾಖಲಾದ ಕ್ರಿಮಿನಲ್‌ ಮೊಕದ್ದಮೆಗಳು ಬಿ–ವರದಿಯೊಂದಿಗೆ ಪರ್ಯಾವಸಾನಗೊಂಡವು.

ಸ್ವಚ್ಛಗೊಳ್ಳದ ಚರಂಡಿ: ಮಳೆ ನೀರನ್ನು ರಾಜಕಾಲುವೆ ಸೇರಲು ನೆರವಾಗುವ ರಸ್ತೆ ಪಕ್ಕದ ಚರಂಡಿಗಳಲ್ಲಿ ಹೂಳು ತುಂಬಿರುವುದು ಮತ್ತೊಂದು ಸಮಸ್ಯೆ. ಈ ಚರಂಡಿಗಳು ಕಸ–ಕಶ್ಮಲಗಳನ್ನೆಸೆಯುವ ತೊಟ್ಟಿಗಳಂತಾಗಿ ಬಿಟ್ಟಿವೆ. ಚಪ್ಪಡಿ ಕಲ್ಲು ಅಥವಾ ಕಾಂಕ್ರೀಟ್‌ ಹಲಗೆಗಳಿಂದ ಮುಚ್ಚಿರುವ ಈ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯುವ ಸ್ಥಿತಿ ಇಲ್ಲ. ರಸ್ತೆಗಳು ಹೊಳೆಯಂತಾಗುವುದಕ್ಕೆ ಈ ಚರಂಡಿ ಕಟ್ಟಿಕೊಳ್ಳುವುದು ಕಾರಣ.

ಚರಂಡಿ ಕಟ್ಟಿಕೊಳ್ಳುವುದನ್ನು ತಪ್ಪಿಸಬೇಕಾದರೆ, ಮಳೆಗಾಲಕ್ಕೆ ಮುನ್ನವೇ ಈ ಚರಂಡಿಗಳನ್ನು ಹಾಗೂ ಮೋರಿಗಳನ್ನು ಸ್ವಚ್ಛಗೊಳಿಸಬೇಕು. ಆದರೆ ಆ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಚರಂಡಿಗಳ ಹೂಳು ತೆಗೆಯುತ್ತಾರೆ. ಅದನ್ನು ಅಲ್ಲೇ ಬಿಟ್ಟಿರುತ್ತಾರೆ. ಸಣ್ಣ ಮಳೆ ಬಂದರೂ ಅದು ಕೆಸರಿನ ರೂಪದಲ್ಲಿ ಮತ್ತೆ ಚರಂಡಿಯ ಒಡಲನ್ನೇ ಸೇರುತ್ತದೆ.

ರೋಗಗ್ರಸ್ತ ಮರಗಳಿಂದ ಅಪಾಯ: ಒಣಗಿರುವ ಮರಗಳು, ಟೊಳ್ಳಾಗಿರುವ ಮರಗಳು, ಭಾರ ಹೆಚ್ಚಾಗಿ ಬಾಗಿರುವ ಹಾಗೂ ಒಣಗಿದ ಕೊಂಬೆಗಳು ಮಳೆಗಾಲದಲ್ಲಿ ಜೀವಹಾನಿಗೆ ಕಾರಣವಾಗುತ್ತಿವೆ. ಮಿನರ್ವ ವೃತ್ತ ಸಮೀಪ 2017ರ ಸೆಪ್ಟೆಂಬರ್‌ನಲ್ಲಿ ಮರವೊಂದು ಉರುಳಿ ಬಿದ್ದು ದಂಪತಿ ಸಮೇತ ಮೂವರು ಮೃತಪಟ್ಟ ಘಟನೆಯ ಕರಾಳ ನೆನಪು ಇನ್ನೂ ಹಸಿಯಾಗಿಯೇ ಇದೆ.

ಅರಣ್ಯ ವಿಭಾಗದ ಸಿಬ್ಬಂದಿ ರೋಗಗ್ರಸ್ತ ಮರಗಳನ್ನು ಮಳೆಗಾಲಕ್ಕೆ ಮುನ್ನವೇ ತೆರವುಗೊಳಿಸಿ, ಅಪಾಯದ ಸ್ಥಿತಿಯಲ್ಲಿರುವ ಕೊಂಬೆಗಳನ್ನು ಕತ್ತರಿಸಿದರೆ ಮಳೆಗಾಲದಲ್ಲಿ ಪ್ರಾಣಹಾನಿಯನ್ನು ತಡೆಯಬಹುದು. ಆದರೆ, ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

‘ನಾವು ಇತಿಮಿತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ವಲಯ ಅರಣ್ಯಾಧಿಕಾರಿ ಹುದ್ದೆಗಳೆಲ್ಲ ಖಾಲಿಯಿವೆ. 28 ವಿಧಾನಸಭಾ ಕ್ಷೇತ್ರಗಳಿಗೆ 21 ತುರ್ತು ಸ್ಪಂದನಾ ತಂಡಗಳು ಮಾತ್ರ ಇವೆ. 7 ಹೆಚ್ಚುವರಿ ತಂಡಗಳನ್ನು ರಚಿಸಲು ಆಯುಕ್ತರು ಸಮ್ಮತಿ ನೀಡಿದ್ದಾರೆ. ಶೀಘ್ರವೇ ಟೆಂಡರ್‌ ಕರೆಯುತ್ತೇವೆ’ ಎನ್ನುತ್ತಾರೆ ಪಾಲಿಕೆ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚೊಳರಾಜಪ್ಪ.

ಬಲಿ ಪಡೆಯುವ ರಸ್ತೆ ಗುಂಡಿಗಳು: ಮಳೆ ಬಿದ್ದೊಡನೆ ನಗರದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುವುದು ಇನ್ನೊಂದು ಪ್ರಮುಖ ಸಮಸ್ಯೆ. ನೀರಿನಿಂದ ಆವೃತವಾಗುವ ಗುಂಡಿಗಳು ದ್ವಿಚಕ್ರ ವಾಹನ ಸವಾರರ ಸಾವಿಗೂ ಕಾರಣವಾಗುತ್ತಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್‌ 2018ರ ಅಕ್ಟೋಬರ್‌ನಲ್ಲಿ ಪಾಲಿಕೆ ಆಡಳಿತವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ರಸ್ತೆಗುಂಡಿಗಳನ್ನು ಮುಚ್ಚಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಅಷ್ಟೇ ಅಲ್ಲ, ನಗರದಲ್ಲಿ ಎಲ್ಲೆಲ್ಲಿ ಎಷ್ಟು ರಸ್ತೆಗುಂಡಿಗಳಿವೆ, ಎಷ್ಟನ್ನು ಮುಚ್ಚಲಾಗಿದೆ ಎಂಬ ವಿವರಗಳನ್ನೂ ಪಾಲಿಕೆ ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳುವ ಪರಿಪಾಠ ಆರಂಭಿಸಿದ್ದರು.

ಬೆಸ್ಕಾಂ, ಜಲಮಂಡಳಿ, ಬಿಬಿಎಂಪಿ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಎಷ್ಟೊ ಕಡೆ ಕಾಮಗಾರಿಗಳು ವಿಳಂಬವಾಗುತ್ತಿವೆ. ಅರ್ಧಂಬರ್ಧ ಕಾಮಗಾರಿಗಳಿಂದಾಗಿಯೇ ಮಳೆಗಾಲದ ಸಮಸ್ಯೆಗಳು ಮತ್ತಷ್ಟು ಉಲ್ಬಣಿಸುತ್ತವೆ.

ಪ್ರತಿವರ್ಷವೂ ಮಳೆ ಬಂದ ಬಳಿಕವೇ ‘ಯುದ್ಧಕಾಲದ ಶಸ್ತ್ರಾಭ್ಯಾಸ’ ಶುರುವಾಗುತ್ತದೆ. ಮಳೆ ಕಡಿಮೆ ಆಗುತ್ತಿದ್ದಂತೆಯೇ ಜನ ಹಾಗೂ ಆಡಳಿತ ಯಂತ್ರ ಸಮಸ್ಯೆಗಳನ್ನೆಲ್ಲ ಮರೆತೇ ಬಿಡುತ್ತಾರೆ. ಮತ್ತೆ ಎಚ್ಚೆತ್ತುಕೊಳ್ಳುವುದು ಮಗದೊಂದು ಸಮಸ್ಯೆ ಧುತ್ತೆಂದು ಎದುರಾದಾಗ. ಈ ಮನಸ್ಥಿತಿಗೆ ಮೊದಲು ಇತಿಶ್ರೀ ಹಾಡಬೇಕು. ನಗರಾಡಳಿತದ ಹೊಣೆಗಳನ್ನು ಹಂಚಿಕೊಂಡಿರುವ ವಿವಿಧ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಅರ್ಧಕ್ಕರ್ಧ ಸಮಸ್ಯೆಗಳು ಶೀಘ್ರ ಬಗೆಹರಿಯುತ್ತವೆ.

ಮಳೆಗಾಲದಲ್ಲಿ ಎದುರಾಗುವ ಒಂದೊಂದು ಸಮಸ್ಯೆಯೂ ಪಾಠವಾಗದಿದ್ದರೆ ಇನ್ನು 10ವರ್ಷ ಕಳೆದರೂ ಸಮಸ್ಯೆ ಹೀಗೆಯೇ ಇರುತ್ತದೆ.

2,515 ಕಡೆಗಳಲ್ಲಿ ಒತ್ತುವರಿ ತೆರವಾಗಿದ್ದು 499 ಮಾತ್ರ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2,515 ಕಡೆ ರಾಜಕಾಲುವೆ ಒತ್ತುವರಿ ಆಗಿರುವುದನ್ನು ಗುರುತಿಸಲಾಗಿದೆ. ಇದರಲ್ಲಿ 2016ರಿಂದ 2019ರವರೆಗೆ 479 ಒತ್ತುವರಿಗಳನ್ನು ಮಾತ್ರ ತೆರವುಗೊಳಿಸಲಾಗಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಪಾಲಿಕೆಯ ವಕೀಲರು ಹೈಕೋರ್ಟ್‌ಗೆ ಈ ಕುರಿತು ಮಾಹಿತಿ ಸಲ್ಲಿಸಿದ್ದಾರೆ.

1,637 ಒತ್ತುವರಿಗಳ ಸರ್ವೆ ಕಾರ್ಯ ನಡೆಸಬೇಕಿದೆ. ಒಟ್ಟಾರೆ 450 ಒತ್ತುವರಿಗಳ ಸರ್ವೆ ಕಾರ್ಯ ಪೂರ್ಣಗೊಂಡಿದೆ. 399 ಒತ್ತುವರಿ ತೆರವುಗೊಳಿಸಲು ಗುರುತಿಸಲಾಗಿದೆ.

18 ಕೆರೆಗಳು ಹೂಳುಮುಕ್ತ

18 ಕೆರೆಗಳಹೂಳನ್ನು ಸಂಪೂರ್ಣ ತೆಗೆದು ಅಭಿವೃದ್ಧಿಪಡಿಸಲಾಗಿದೆ. ಮಳೆನೀರು ಸಂಗ್ರಹಿಸಲು ಕ್ರಮಕೈಗೊಳ್ಳಲಾಗಿದೆ. 74 ಕೆರೆಗಳ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿದೆ. 31 ಕೆರೆಗಳ ನಿರ್ವಹಣೆಗೆ ಟೆಂಡರ್ ಕೆರೆಯಲಾಗಿದೆ. ತಮ್ಮ ಸುಪರ್ದಿಯಲ್ಲಿರುವ ಎಲ್ಲಾ ಕೆರೆಗಳ ಒಳಹರಿವು ಕಾಲುವೆಗಳನ್ನು ಮತ್ತು ಕೋಡಿಗಳನ್ನು ಸ್ವಚ್ಛಗೊಳಿಸಲಾಗಿದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಸಿಡಿಲು ಮುನ್ಸೂಚನೆಗೆ ಆ್ಯಪ್‌

ಕೆಎಸ್ಎನ್ಎಂಡಿಸಿಯು ಸಿಡಿಲು ಆಂಡ್ರಾಯ್ಡ್ ಆ್ಯಪ್‍ ಅಭಿವೃದ್ಧಿಪಡಿಸಿದೆ. ಮಿಂಚು ಮತ್ತು ಸಿಡಿಲು ಮುನ್ಸೂಚನೆ ಮತ್ತು ಮಳೆ ಪ್ರಮಾಣ ಮತ್ತು ಮಳೆನೀರು ವ್ಯಾಪಿಸುವ ಪ್ರಮಾಣವನ್ನು ಗಮನಿಸಬಹುದು.

ಖಾಸಗಿ ಹೆಗಲಿಗೆ ಹೊಣೆ ವರ್ಗ

ಇದೇ ಮೊದಲ ಬಾರಿ ರಾಜಕಾಲುವೆಗಳ ಸಮಗ್ರ ನಿರ್ವಹಣೆಯ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. 440 ಕಿ.ಮೀ ಉದ್ದದ ರಾಜಕಾಲುವೆಗಳ ವಾರ್ಷಿಕ ನಿರ್ವಹಣೆಯನ್ನು ‘ಯೋಗ’ ಕಂಪನಿ ₹36.65 ಲಕ್ಷಕ್ಕೆ ಗುತ್ತಿಗೆ ಪಡೆದಿದೆ. ಈ ಕಂಪನಿ ಮೂರು ವರ್ಷ ರಾಜಕಾಲುವೆಗಳ ನಿರ್ವಹಣೆ ಮಾಡಬೇಕಿದೆ.

ರಾಜಕಾಲುವೆ ಆಸುಪಾಸಿನಲ್ಲಿ ಪ್ರವಾಹ ಉಂಟಾದರೆ, ಪಾಲಿಕೆಯು ಕಂಪನಿಯನ್ನೇ ಹೊಣೆ ಮಾಡಲಿದೆ. ಕೋರಮಂಗಲ–ಚಲ್ಲಘಟ್ಟ ಕಣಿವೆ ಪ್ರದೇಶಗಳಲ್ಲಿ ಪ್ರವಾಹ ಉಂಟಾದರೆ ಕಂಪನಿಗೆ ₹ 9 ಲಕ್ಷ ದಂಡ ವಿಧಿಸಲಿದೆ. ಇತರ ಕಡೆ ವಲಯವೊಂದಕ್ಕೆ ಪ್ರತಿದಿನ ₹ 1 ಲಕ್ಷ ದಂಡ ವಿಧಿಸಲಿದೆ.

‘ಪ್ರವಾಹ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಕಂಪನಿಗೆ ಸೂಚಿಸಿದ್ದೇವೆ. ನಿತ್ಯ 8 ರೊಬೋಟಿಕ್‌ ಯಂತ್ರಗಳು, 15 ಟ್ರಕ್‌ಗಳು ಮತ್ತು 880 ಕಾರ್ಮಿಕರನ್ನು ಬಳಸಿ ಕಾಲುವೆ ನಿರ್ವಹಣೆ ಮಾಡಬೇಕಿದೆ’ ಎಂದು ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತುರ್ತು ಸಂದರ್ಭದಲ್ಲಿ ರಾಜಕಾಲುವೆಗಳ ನಿರ್ವಹಣೆಗೆಂದೇ ಪಾಲಿಕೆ ವತಿಯಿಂದ 1 ಹಿಟಾಚಿ ಯಂತ್ರ, ಹೂಳು ಸಾಗಿಸಲು 2 ಟ್ರಕ್‌ಗಳು ಖರೀದಿಸಲಾಗಿದೆ. 156 ಕಾರ್ಮಿಕರು ಮತ್ತು ಸಲಕರಣೆಗಳೊಂದಿಗೆ ಸಜ್ಜಾಗಿದ್ದಾರೆ’ ಎಂದರು.

ನಗರದ 842 ಕಿ.ಮೀ ರಾಜಕಾಲುವೆ ಬಿಬಿಎಂಪಿ ವ್ಯಾಪ್ತಿಗೆ ಒಳಪಡುತ್ತದೆ. ಈಗಾಗಲೇ 389 ಕಿ.ಮೀ ರಾಜಕಾಲುವೆಗೆ ತಡೆಗೋಡೆ ನಿರ್ಮಿಸಲಾಗಿದೆ. ಇನ್ನೂ 150 ಕಿ.ಮೀ ಉದ್ದದಷ್ಟು ತಡೆಗೋಡೆ ನಿರ್ಮಿಸುವ ಕಾರ್ಯ ಬಾಕಿ ಇದೆ.

15 ನಿಮಿಷಕ್ಕೊಮ್ಮೆ ಮಳೆ ಮಾಹಿತಿ: ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರವು ಬಿಬಿಎಂಪಿ ವ್ಯಾಪ್ತಿಯಲ್ಲಿ 10 ಕಡೆ ಮಳೆ ಮಾಪನ ಯಂತ್ರಗಳನ್ನು (ರೈನ್‌ ಗೇಜ್‌) ಅಳವಡಿಸಿದೆ. ಇವುಗಳಿಂದ ಪ್ರತಿ 15 ನಿಮಿಷಗಳಿಗೆ ಮಾಹಿತಿ ಲಭ್ಯವಾಗುತ್ತದೆ. ಇದನ್ನು ಆಧರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಪಾಲಿಕೆ ಸಿದ್ಧತೆ ನಡೆಸಿದೆ.

25 ಕಡೆ ಸೆನ್ಸರ್‌: ‘ಮಳೆನೀರು ಕಾಲುವೆಗಳಲ್ಲಿ ನೀರಿನ ಮಟ್ಟವನ್ನು ಅಳೆಯುವ ಸಲುವಾಗಿ 25 ಕಡೆ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇವುಗಳಿಂದಲೂ ಅಪಾಯದ ಮುನ್ಸೂಚನೆ ಸಿಗುತ್ತದೆ.

ಇದರ ಆಧಾರದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ತುರ್ತಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಅನಾಹುತ ಆಗದಂತೆ ನೋಡಿಕೊಳ್ಳಬೇಕು’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ನಗರದ ದೊಡ್ಡ ಬಿಕ್ಕಟ್ಟು ‘ಪ್ರವಾಹ’

ಪ್ರತಿ ಮಳೆಗಾಲದಲ್ಲೂ ಒಂದಿಲ್ಲ ಒಂದು ಕಡೆ ಪ್ರವಾಹ ಕಾಣಿಸಿಕೊಳ್ಳುತ್ತಿರುವುದು ನಗರದ ದೊಡ್ಡ ಬಿಕ್ಕಟ್ಟು. ಇದಕ್ಕೆ ಹಲವಾರು ಕಾರಣಗಳಿವೆ.

ಕೆರೆಗಳಲ್ಲಿ ಹೂಳು ತುಂಬಿರುವುದು, ರಾಜಕಾಲುವೆಗಳ ನೈಸರ್ಗಿಕ ಜಾಲ ಛಿದ್ರವಾಗಿರುವುದು, ತಳವನ್ನು ಕಾಂಕ್ರೀಟೀಕರಣಗೊಳಿಸಿ ನೀರು ಇಂಗದಂತೆ ರಾಜಕಾಲುವೆಗಳನ್ನು ವಿನ್ಯಾಸಗೊಳಿಸಿರುವುದು ಪಟ್ಟಿ ಮಾಡಬಹುದಾದ ಪ್ರಮುಖ ಕಾರಣಗಳು.

ಕಾಂಕ್ರಿಟ್ ತಳವನ್ನು ಹೊಂದಿದ ಕಾಲುವೆಗಳಲ್ಲಿ ಮಳೆ ನೀರು ಒಂದೇ ಸಮನೆ ಕೆರೆಗಳತ್ತ ಹರಿಯುತ್ತದೆ. ನೀರು ಹರಿವಿನ ವೇಗ ನಿಯಂತ್ರಿಸುವ ಮೂಲಕ ಅದು ನಿಧಾನವಾಗಿ ತಗ್ಗುಪ್ರದೇಶ ಸೇರುವಂತೆ ಬೇಕು. ನೀರು ಇಂಗುವುದಕ್ಕೂ ಅವಕಾಶ ಮಾಡಿಕೊಡಬೇಕು. ಕೆರೆಗಳಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ರಾಜಕಾಲುವೆ ಒತ್ತುವರಿಯಾಗಿವೆ. ಕೆಲವೆಡೆ ಕಣ್ಮರೆಯೇ ಆಗಿದೆ. ಒತ್ತುವರಿ ತೆರವುಗೊಳಿಸಿಕೆರೆ, ಕಾಲುವೆಗಳ ಹೂಳು ತೆಗೆಸುವ ಕಾರ್ಯವನ್ನು ಸಮರ್ಪಕವಾಗಿ ಮಾಡಿದರೆ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಬಹುದು.

ಒಂದು ಕೆರೆ ತುಂಬಿದಾಗ ಹೆಚ್ಚುವರಿ ನೀರು ಕೋಡಿ ಹರಿದು ರಾಜಕಾಲುವೆ ಮೂಲಕ ಇನ್ನೊಂದು ಜಲಮೂಲವನ್ನು ಸೇರುವ ಜಾಲ ನಗರದಲ್ಲಿದೆ. ಆದರೆ, ಹೆಚ್ಚುವರಿ ನೀರು ಇನ್ನೊಂದು ಕೆರೆಯ ಒಡಲು ಸೇರುವ ಬದಲು ಅಕ್ಕಪಕ್ಕದ ತಗ್ಗು ಪ್ರದೇಶಗಲಿಗೆ ವ್ಯಾಪಿಸುತ್ತಿರುವುದರಿಂದಾಗಿ ಪ್ರವಾಹ
ಕಾಣಿಸಿಕೊಳ್ಳುತ್ತಿದೆ.

ಬೆರಳೆಣಿಕೆಯ ಕಾಲುವೆಗಳನ್ನು ಸರಿಪಡಿಸಿ ಎಲ್ಲವನ್ನೂ ಸರಿಪಡಿಸಿದ್ದೇವೆ ಎಂದರೆ ಆಗದು. ಇಡೀ ಕಣಿವೆ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಲೋಪಗಳನ್ನು ಸರಿಪಡಿಸಬೇಕು.

ಈಗಿರುವ ಸಮಸ್ಯೆಗಳ ನಡುವೆಯೂ ಪ್ರವಾಹ ತಡೆಯುವ ರೀತಿಯಲ್ಲಿ ಕಾಲುವೆ ವಿನ್ಯಾಸ ಮಾರ್ಪಾಡು ಮಾಡಲು ಸಾಧ್ಯವಿದೆ. ಮೊದಲು ರಾಜಕಾಲುವೆ ಜಾಲವನ್ನುತಗ್ಗು–ದಿಣ್ಣೆಗಳಿಗೆ ಅನುಗುಣವಾಗಿ ಆದಷ್ಟು ಮೂಲಸ್ವರೂಪಕ್ಕೆ ತರಬೇಕು. ನಗರದ ರಾಜಕಾಲುವೆಗಳನ್ನು ಗಂಟೆಗೆ ಗರಿಷ್ಠ 75 ಮಿ.ಮೀ ಮಳೆ ಬೀಳುವ ಸನ್ನಿವೇಶವನ್ನು ಆಧರಿಸಿ ವಿನ್ಯಾಸಲಾಗಿದೆ. ಆದರೆ, 10 ವರ್ಷಗಳಲ್ಲಿ ಹವಾಮಾನ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಇತ್ತೀಚೆಗೆ ಗಂಟೆಗೆ ಗರಿಷ್ಠ 120 ಮಿ.ಮೀ. ಮಳೆಯಾಗುತ್ತಿದೆ. ಹಾಗಾಗಿ ಹಳೆಯ ಕಾಲದ ಕಾಲುವೆಗಳ ಸಾಮರ್ಥ್ಯ ಸಾಲುವುದಿಲ್ಲ. ಕೆರೆ– ಕಾಲುವೆಗಳಿಗೆ ಮೀಸಲು ಪ್ರದೇಶ ಉಳಿಸಿಕೊಂಡರೆ ಸಾಲದು. ರಾಸಾಯನಿಕ ಪೋಷಕಾಂಶಗಳು ಜಲಮೂಲವನ್ನು ಸೇರುವುದನ್ನು ಅವು ತಡೆಯಬೇಕು. ನೀರಿನ ಹರಿವಿಗೆ ವೇಗಕ್ಕೆ ಕಡಿವಾಣ ಹಾಕುವಂತಿರಬೇಕು.

ಮಳೆ ನೀರಿನ ಸಮಸ್ಯೆಯೂ ಕಸದ ಸಮಸ್ಯೆಯಂತೆಯೇ. ನೀರನ್ನು ಇನ್ನೊಂದು ಪ್ರದೇಶಕ್ಕೆ ಹರಿಯಲು ಬಿಡದೆ ಆಯಾ ಪ್ರದೇಶದಲ್ಲೇ ಇಂಗಿಸುವ ಅಥವಾ ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಪರಿಹಾರ ಕ್ರಮ ಕಂಡುಕೊಳ್ಳಬೇಕು. ಅದು ಇನ್ನೊಂದು ಸ್ಥಳಕ್ಕೆ ಹರಿದು ಹೋಗುವಂತಹ ವ್ಯವಸ್ಥೆ ರೂಪಿಸಿದರೆ ಸಮಸ್ಯೆ ಹೆಚ್ಚು. ಆಮೂಲಾಗ್ರ ಪರಿಹಾರೋಪಾಯಗಳಿಂದ ಮಾತ್ರ ಪ್ರವಾಹ ಸಮಸ್ಯೆಗೆ ಅಂತ್ಯ ಹಾಡಲು ಸಾಧ್ಯ. ಆದರೆ, ಇಂತಹ ಪ್ರಯತ್ನಗಳು ಎಲ್ಲೂ ಕಾಣಿಸುತ್ತಿಲ್ಲ.

ವಿ.ರವಿಚಂದರ್‌,ನಗರ ಯೋಜನಾ ತಜ್ಞ

ರಸ್ತೆ ಪಕ್ಕದ ಮರಗಳು ಬೀಳುವುದೇಕೆ?

ನಗರದಲ್ಲಿ ಮಳೆ ನೀರು ಚರಂಡಿ ನಿರ್ಮಿಸಲು, ಕೇಬಲ್‌ ಅಥವಾ ಕೊಳವೆ ಮಾರ್ಗ ಅಳವಡಿಸಲು ಈ ಮರಗಳ ಬೇರುಗಳನ್ನು ಕತ್ತರಿಸಲಾಗುತ್ತದೆ. ಇದರಿಂದಾಗಿ ದುರ್ಬಲವಾಗುವ ಮರಗಳು ಜೋರಾಗಿ ಗಾಳಿ ಬೀಸಿದಾಗ ಉರುಳುತ್ತವೆ.

ಮರಗಳ ಬುಡಕ್ಕೂ ಕಾಂಕ್ರಿಟ್‌ ಹಾಕಿ ನೀರು ಇಂಗದಂತೆ ತಡೆಯುತ್ತಾರೆ. ಇಂತಹ ಮರಗಳ ಬೇರುಗಳು ದುರ್ಬಲವಾಗಿರುತ್ತವೆ. ಗಾಳಿ ಮಳೆಗೆ ಅವು ಉರುಳುವ ಅಪಾಯ ಹೆಚ್ಚು.

ನಗರಗಳಲ್ಲಿ ಮನಬಂದಂತೆ ಸಸಿಗಳನ್ನು ಬೆಳೆಸುವುದು ಸಲ್ಲ. ವಿಶಾಲವಾಗಿ ಬೆಳೆಯುವಂತಹ ಮಳೆ ಮರದ ಜಾತಿಯ ಸಸ್ಯಗಳನ್ನು ದೊಡ್ಡ ರಸ್ತೆ ಪಕ್ಕದಲ್ಲಿ ಮಾತ್ರ ಬೆಳೆಸಬಹುದು. ಸಣ್ಣ ರಸ್ತೆಗಳ ಬಳಿ ಬೆಟ್ಟದೆ ಹುಣಸೆ, ಗುಲ್‌ಮೊಹರ್‌ನಂತಹ ಮರಗಳು ಸೂಕ್ತ.

ವಿಜಯ್‌ ನಿಶಾಂತ್‌,ಸಸ್ಯ ವೈದ್ಯ

ನಗರದಲ್ಲಿ ಪ್ರವಾಹ ಕಾಣಿಸಿಕೊಳ್ಳಲು ಕಾರಣಗಳೇನು?

ನಗರ ಅಂಶಗಳು

* ನೈಸರ್ಗಿಕ ಕಾಲುವೆ ಹಾಗೂ ಭೂಪ್ರದೇಶ ವ್ಯವಸ್ಥೆಯ ಮೂಲಸ್ವರೂಪಕ್ಕೆ ಧಕ್ಕೆ ಉಂಟಾಗಿರುವುದು
*ಭೂಪ್ರದೇಶದ ಸಹಜ ವ್ಯವಸ್ಥೆಯ ಮಾರ್ಪಾಡಿನಿಂದಾಗಿ ಮಳೆನೀರು ಕಾಲುವೆ ಮೂಲಸೌಕರ್ಯ ಅನಗತ್ಯ ಹೆಚ್ಚಳ
*ಮಳೆನೀರು ಕಾಲುವೆ ಮೂಲಕ ಸೌಕರ್ಯ (ರಾಜಕಾಲುವೆಯ ಮೂಲವಿನ್ಯಾಸವನ್ನು ಬದಲಾಯಿಸಿರುವುದು)

ಪ್ರಾದೇಶಿಕ ಅಂಶಗಳು

* ನಿರ್ದಿಷ್ಟ ಅವಧಿಯಲ್ಲಿ ಬೀಳುವ ಮಳೆ ಪ್ರಮಾಣ ಹೆಚ್ಚಳವಾಗಿದೆ
*ದಿನದಲ್ಲಿ ಅಥವಾ ಒಂದು ಗಂಟೆಯಲ್ಲಿ ಸುರಿಯುವ ಮಳೆಯ ಪ್ರಮಾಣ ಹೆಚ್ಚುತ್ತಿದೆ

ಸ್ಥಳೀಯ ಅಂಶಗಳು

* ಭೂಮಿಯ ಮೇಲ್ಮೈ ಮಾರ್ಪಾಡಾಗಿದೆ.
*ನೈಸರ್ಗಿಕ ಹಳ್ಳಗಳನ್ನು ಮುಚ್ಚಲಾಗಿದೆ
*ಕೆರೆ, ಕಾಲುವೆಗಳಲ್ಲಿ ಹೂಳು ತುಂಬಿ ಅವುಗಳ ಸಾಮರ್ಥ್ಯ ಕುಸಿದಿದೆ
*ರಾಜಕಾಲುವೆಗಳ ನಿರಂತರತೆಯನ್ನು ಉಳಿಸಿಕೊಂಡಿಲ್ಲ
* ಕೆರೆಗಳ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆ ಆಗಿದೆ
*ದ್ರವ ತ್ಯಾಜ್ಯ ಸೇರಿ ಕೆರೆಗಳ ಸಾಮರ್ಥ್ಯ ಕುಸಿದಿದೆ
*ಭೂಮಿಯೊಳಗೆ ನೀರು ಇಂಗುವ ಪ್ರಮಾಣ ಕುಸಿತವಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.