ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಖುಷಿಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆೆ.
ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನೆ ಮೈತ್ರಿಕೂಟ ಸರ್ಕಾರ ರಚಿಸಲು ಸಿದ್ಧವಾಗಿದ್ದು, ಹರಿಯಾಣದಲ್ಲಿ ಸರ್ಕಾರ ರಚನೆ ಬಗ್ಗೆ ಬಿಜೆಪಿ ಸಿದ್ಧತೆ ನಡೆಸುತ್ತಿದೆ.
ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಗುರುವಾರ ಸಂಜೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.
ಹರಿಯಾಣದ ಜನರು ನಮ್ಮನ್ನು ಆಶೀರ್ವದಿಸಿದ್ದಕ್ಕಾಗಿ ಧನ್ಯವಾದಗಳು. ರಾಜ್ಯದ ಅಭಿವೃದ್ಧಿಗಾಗಿ ನಾನು ಅದೇ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸಲಿದ್ದೇನೆ.ಹರಿಯಾಣ ಬಿಜೆಪಿ ಕಾರ್ಯಕರ್ತರ ಪರಿಶ್ರಮವನ್ನು ನಾನು ಶ್ಲಾಘಿಸುತ್ತೇನೆ ಎಂದು ಮೋದಿ ಟ್ಟೀಟಿಸಿದ್ದಾರೆ.
ಇನ್ನೊಂದು ಟ್ವೀಟ್‌ನಲ್ಲಿ ಮಹಾರಾಷ್ಟ್ರದ ಜನರು ಬಹಳ ಪ್ರೀತಿಯಿಂದ ನಮ್ಮನ್ನು ಹರಸಿದ್ದಾರೆ. ಮತ್ತೊಮ್ಮೆ ನಮಗೆ ಜನ ಬೆಂಬಲ ಸಿಕ್ಕಿದ್ದಕ್ಕೆ ಆಭಾರಿ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಮ್ಮ ಕೆಲಸ ಮುಂದುವರಿಯುತ್ತದೆ. ಗೆಲುವಿಗಾಗಿ ಕೆಲಸ ಮಾಡಿದ ಬಿಜೆಪಿ ಮತ್ತು ಶಿವಸೇನೆಯ ಕಾರ್ಯಕರ್ತರಿಗೆ ಮತ್ತು ನಮ್ಮ ಎನ್‌ಡಿಎ ಕುಟುಂಬಕ್ಕೆ ನನ್ನ ನಮನಗಳು ಎಂದಿದ್ದಾರೆ.
ಹರಿಯಾಣದಲ್ಲಿ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಬಗ್ಗೆ ಸುಳಿವು ನೀಡಿದ ಅಮಿತ್ ಶಾ, ಕಳೆದ 5 ವರ್ಷ ಕೇಂದ್ರದಲ್ಲಿ ಮೋದಿ ನೇತೃತ್ವದಡಿಯಲ್ಲಿ ಖಟ್ಟರ್ ಸರ್ಕಾರ ಜನಸೇವೆ ಮಾಡಿದೆ. ನಮ್ಮನ್ನು ಬೃಹತ್ ಪಕ್ಷವನ್ನಾಗಿ ಮಾಡಿ ಜನರ ಸೇವೆಗೆ ಮತ್ತೊಮ್ಮೆ ಅವಕಾಶ ನೀಡಿರುವ ಜನರಿಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.