ADVERTISEMENT

ಸರ್ಕಾರಿ ಜಮೀನು ಒತ್ತುವರಿ ತೆರವು

ಪೂರ್ವ ತಾಲ್ಲೂಕಿನ ವಿವಿಧೆಡೆ 6 ಎಕರೆ ಒತ್ತುವರಿ * ನಾಪತ್ತೆಯಾದ ಮಾಲೀಕರು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2018, 19:45 IST
Last Updated 25 ಆಗಸ್ಟ್ 2018, 19:45 IST
ಬಾಣಸವಾಡಿಯಲ್ಲಿ ಜಿಲ್ಲಾಧಿಕಾರಿ ಎಂ.ಬಿ.ವಿಜಯಶಂಕರ್‌ ನೇತೃತ್ವದಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯ ನಡೆಯಿತು
ಬಾಣಸವಾಡಿಯಲ್ಲಿ ಜಿಲ್ಲಾಧಿಕಾರಿ ಎಂ.ಬಿ.ವಿಜಯಶಂಕರ್‌ ನೇತೃತ್ವದಲ್ಲಿ ಶನಿವಾರ ಒತ್ತುವರಿ ತೆರವು ಕಾರ್ಯ ನಡೆಯಿತು   

ಬೆಂಗಳೂರು: ಪೂರ್ವ ತಾಲ್ಲೂಕು ವ್ಯಾಪ್ತಿಯ ವಿವಿಧ ಪ್ರದೇಶದಲ್ಲಿ ಮಾಡಲಾದ ಒತ್ತುವರಿಯನ್ನು ನಗರದ ಜಿಲ್ಲಾಧಿಕಾರಿ ಎಂ.ಬಿ.ವಿಜಯಶಂಕರ್‌ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಲಾಯಿತು.

ಸಿದ್ದಾಪುರ, ಬಾಣಸವಾಡಿ, ಹಿರಂಡಹಳ್ಳಿ ಮತ್ತು ನಾಗೊಂಡನಹಳ್ಳಿ ಪ್ರದೇಶಗಳಲ್ಲಿ ಒಟ್ಟು 6.10 ಎಕರೆ ತೆರವು ಕಾರ್ಯ ನಡೆದಿದೆ.

ಸಿದ್ದಾಪುರದ ಸರ್ವೇ ನಂ 15ರ ಮುಫತ್‌ ಕಾವಲು ಪ್ರದೇಶದಲ್ಲಿ ಆದರ್ಶ ಡೆವಲಪರ್ಸ್‌ ಸಂಸ್ಥೆ ಒಂದು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿತ್ತು. ಈ ಪ್ರದೇಶವನ್ನು ಕಟ್ಟಡ ತ್ಯಾಜ್ಯ ಹಾಕಲು ಹಾಗೂ ವಾಹನ ನಿಲ್ಲಿಸಲು ಬಳಸಲಾಗಿತ್ತು.

ADVERTISEMENT

ಬಾಣಸವಾಡಿಯ ಸರ್ವೇ ನಂ. 7ರ ಗುಂಡು ತೋಪು ಪ್ರದೇಶದಲ್ಲಿ 10 ಗುಂಟೆ ಪ್ರದೇಶವನ್ನು ಕೃಷ್ಣಪ್ಪ ಎಂಬುವವರು ಒತ್ತುವರಿ ಮಾಡಿಕೊಂಡಿದ್ದರು. ಬಳಿಕ ನಕಲಿ ದಾಖಲೆ ಸೃಷ್ಟಿಸಿ ಈ ಪ್ರದೇಶವನ್ನು ರಾಮಕೃಷ್ಣ ಎಂಬುವವರಿಗೆ ಗುತ್ತಿಗೆಗೆ ನೀಡಿದ್ದರು. ರಾಮಕೃಷ್ಣ ಅವರು ಪುಟ್ಟ ಕಟ್ಟಡ ಹಾಗೂ ಶೆಡ್‌ ನಿರ್ಮಿಸಿ ಗ್ರಾನೈಟ್‌ ಉದ್ಯಮಿಗಳಿಗೆ ಬಾಡಿಗೆಗೆ ನೀಡಿದ್ದರು. ದಾಳಿಯ ಸುಳಿವರಿತ ಗ್ರಾನೈಟ್‌ ಉದ್ಯಮಿಗಳು ಶುಕ್ರವಾರ ರಾತ್ರಿಯೇ ತಮ್ಮ ಸಾಮಗ್ರಿಗಳನ್ನು ತೆರವು ಮಾಡಿಕೊಂಡು ಹೋಗಿದ್ದರು. ಒತ್ತುವರಿ ಮಾಡಿಕೊಂಡವರು ಮತ್ತು ಬಾಡಿಗೆಗೆ ನೀಡಿದವರ ಬಗ್ಗೆ ಮಾಹಿತಿ ಸಿಕ್ಕಿಲ್ಲ ಎಂದು ದಾಳಿಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಹೇಳಿದರು.

ಹಿರಂಡಹಳ್ಳಿಯ ಸರ್ವೇ ನಂ. 39ರಲ್ಲಿ ನಾಲ್ಕು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿದ್ದ ಆದೂರು ಮುರಳಿ ಎಂಬುವವರು ತೋಟ ನಿರ್ಮಿಸಿದ್ದರು. ನಾಗೊಂಡನಹಳ್ಳಿಯಲ್ಲಿ ಡಿ.ನಾರಾಯಣಪ್ಪ ಅವರು ಸರ್ವೇ ನಂ 120ರ ಒಂದು ಎಕರೆ ಗೋಮಾಳ ಪ್ರದೇಶದಲ್ಲಿ ನೀಲಗಿರಿ ತೋಪು ನಿರ್ಮಿಸಿದ್ದರು.

ಒತ್ತುವರಿ ಪ್ರದೇಶದಲ್ಲಿ ಮಾಡಲಾಗಿದ್ದ ನಿರ್ಮಾಣಗಳನ್ನು ತೆರವುಗೊಳಿಸಲಾಗಿದೆ. ಯಾವುದೇ ಪ್ರತಿರೋಧ ಎದುರಾಗಿಲ್ಲ. ಒತ್ತುವರಿದಾರರೂ ನಾಪತ್ತೆಯಾಗಿದ್ದಾರೆ. ಈ ಪ್ರದೇಶಗಳ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಸರ್ಕಾರದ ಜಾಗ ಎಂದು ಫಲಕ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೆಂಗಳೂರು ಉತ್ತರ ವಿಭಾಗದ ಉಪವಿಭಾಗಾಧಿಕಾರಿ ಎಲ್‌.ಸಿ.ನಾಗರಾಜ್‌ ಕಾರ್ಯಾಚರಣೆ ವೇಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.