‘ಕೋಡಂಗಿ ಆಯುಷ್ಮಾನ್ ಖುರಾನ ‘ದಿಲ್ ದಿಲ್ ಪಾಕಿಸ್ತಾನ’ ಎಂದು ಹಾಡು ಹೇಳುತ್ತಿದ್ದಾನೆ. ಇದೇ ವೇಳೆ ಪಾಕಿಸ್ತಾನಿಗರು ನಮ್ಮ ಸೈನಿಕರನ್ನು, ನಮ್ಮ ಮುಗ್ಧ ಜನರನ್ನು ಹತ್ಯೆ ಮಾಡುತ್ತಿದ್ದಾರೆ. ರಾಮಮಂದಿರದ ಕುರಿತು ಈತನಿಗೆ ತಲೆಬಿಸಿಯಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ಕಾರಣಕ್ಕೆ ನಾನು ಬಾಲಿವುಡ್ ಮಂದಿಯನ್ನು ನಂಬುವುದಿಲ್ಲ. ಹಣಕ್ಕಾಗಿ ಅವರು ತಮ್ಮ ತಾಯಿಯನ್ನೂ ಮಾರುತ್ತಾರೆ’ ಎಂದು @MrSinha ಎನ್ನುವ ಖಾತೆ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಇದೇ ಅಭಿಪ್ರಾಯವನ್ನು ಸಾವಿರಾರು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನ ಅವರು ವೇದಿಕೆಯೊಂದರಲ್ಲಿ ‘ದಿಲ್ ದಿಲ್ ಪಾಕಿಸ್ತಾನ’ ಎಂದು ಹಾಡಿರುವ ವಿಡಿಯೊವನ್ನು ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ನಟ ಹಾಡಿರುವುದನ್ನು ತಿರುಚಲಾದ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ರಿವರ್ಸ್ ಇಮೇಜ್‌ನಲ್ಲಿ ಹುಡುಕಿದಾಗ, ಯೂಟ್ಯೂಬ್‌ನಲ್ಲಿ ಈ ವಿಡಿಯೊ ಪೂರ್ಣವಾಗಿ ದೊರೆಯಿತು. ದುಬೈನಲ್ಲಿ 2017ರಲ್ಲಿ ನಡೆದ ಕಾರ್ಯಕ್ರಮದ ವಿಡಿಯೊ ಇದಾಗಿದೆ. ಕಾರ್ಯಕ್ರಮದ ವಿಡಿಯೊವನ್ನು ಆಯುಷ್ಮಾನ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿಯೂ ಹಂಚಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ಭಾರತದ ವಿವಿಧ ರಾಜ್ಯಗಳ ಜನರನ್ನು ಉದ್ದೇಶಿಸಿ, ಆಯುಷ್ಮಾನ್ ಅವರು ಪಂಜಾಬಿ ಹಾಡನ್ನು ಹಾಡಿದ್ದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ‘ದಿಲ್ ದಿಲ್ ಪಾಕಿಸ್ತಾನ’ ಹಾಡನ್ನು ಹಾಡಿದ್ದರು. ಹಲವು ಬಾಲಿವುಡ್ ಚಿತ್ರಗೀತೆಗಳನ್ನು ಹಾಡಿದ್ದರು. ಕೊನೆಯಲ್ಲಿ ‘ಚಕ್ ದೇ ಇಂಡಿಯಾ’ ಹಾಡನ್ನು ಹಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿದ್ದರು. ರಾಮಮಂದಿರ ಉದ್ಘಾಟನೆಗೆ ಆಯುಷ್ಮಾನ್ ಅವರನ್ನೂ ಆಹ್ವಾನಿಸಲಾಗಿತ್ತು. ಇತರ ಬಾಲಿವುಡ್ ನಟ–ನಟಿಯರೊಂದಿಗೆ ಅವರೂ ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಮಮಂದಿರ ಉದ್ಘಾಟನೆಯಿಂದ ಆಯುಷ್ಮಾನ್ ಅವರಿಗೆ ತಲೆಬಿಸಿಯಾಗಿ, ದಿಲ್ ದಿಲ್ ಪಾಕಿಸ್ತಾನ ಗೀತೆಯನ್ನು ಹಾಡಿದ್ದಾರೆ ಎಂಬುದು ಸುಳ್ಳು ಮಾಹಿತಿ ಎಂದು ‘ದಿ ಕ್ವಿಂಟ್’ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.