ದೆಹಲಿಯ ಶಾಹೀನ್‌ಬಾಗ್ ಸುತ್ತ ಬಾಂಗ್ಲಾದೇಶಿ ನುಸುಳುಕೋರರು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಶ್ವಿನಿ ಉಪಾಧ್ಯಾಯ ಸೇರಿ ಬಿಜೆಪಿಯ ಹಲವು ಮುಖಂಡರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ದೆಹಲಿ ಸರ್ಕಾರದ ಕುರಿತು ಜನಾಭಿಪ್ರಾಯ ಸಂಗ್ರಹಿಸುತ್ತಿದ್ದ ವರದಿಗಾರರೊಬ್ಬರು ಮಸೀದಿಯಿಂದ ಹೊರಬರುತ್ತಿದ್ದ ಕೆಲವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಕೆಲವರು ತಮಗೆ ಹಿಂದಿ ಬರುವುದಿಲ್ಲ, ತಾವು ಬಾಂಗ್ಲಾದೇಶೀಯರು ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ರೋಹಿಂಗ್ಯಾ ಸಮುದಾಯದ ನುಸುಳುಕೋರರು ದೆಹಲಿಯಲ್ಲಿ ನಿರ್ಭೀತಿಯಿಂದ ಓಡಾಡಿಕೊಂಡಿದ್ದಾರೆ ಎಂಬ ವಿವರಣೆಯನ್ನು ಈ ವಿಡಿಯೊ ಜೊತೆ ನೀಡಲಾಗಿದೆ.
ಈ ವಿಡಿಯೊವನ್ನು ತಪ್ಪಾಗಿ ಬಿಂಬಿಸಲಾಗಿದೆ. ಈ ವಿಡಿಯೊದಲ್ಲಿ ಇರುವವರು ಬಾಂಗ್ಲಾದೇಶಿಯರು ಹೌದು. ಆದರೆ ಅವರು ನುಸುಳುಕೋರರಲ್ಲ ಎಂದು ಆಲ್ಟ್ ನ್ಯೂಸ್ ವೇದಿಕೆ ವರದಿ ಮಾಡಿದೆ. ವಿಡಿಯೊದಲ್ಲಿ ಇರುವ ಬಾಂಗ್ಲಾದೇಶೀಯರನ್ನು ಖುದ್ದಾಗಿ ಭೇಟಿ ಮಾಡಿ, ಅವರು ದೆಹಲಿಗೆ ಬಂದಿರುವ ಉದ್ದೇಶದ ಕುರಿತು ಮಾಹಿತಿ ಪಡೆದಿರುವುದಾಗಿ ಆಲ್ಟ್‌ನ್ಯೂಸ್ ಹೇಳಿದೆ. ಬಾಂಗ್ಲಾದೇಶದಲ್ಲಿ ಮಾಲ್ಟಾ ದೇಶಕ್ಕೆ ವೀಸಾ ನೀಡುವ ವ್ಯವಸ್ಥೆ ಇಲ್ಲ. ಹಾಗಾಗಿ ಕೆಲ ಬಾಂಗ್ಲಾದೇಶೀಯರು ಮಾಲ್ಟಾ ವೀಸಾ ಪಡೆಯಲು ದೆಹಲಿಗೆ ಬಂದಿದ್ದಾರೆ. ಶಾಹೀನ್‌ಬಾಗ್‌ನ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ತಾವು ರೋಹಿಂಗ್ಯಾ ಸಮುದಾಯದವರಲ್ಲ ಎಂದು ಖುದ್ದು ಅವರೇ ತಿಳಿಸಿದ್ದಾರೆ ಎಂದು ಆಲ್ಟ್ ನ್ಯೂಸ್ ವರದಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.