ಭಾರತೀಯ ವಿಜ್ಞಾನಿಗಳು ಗೋ ಮೂತ್ರದಲ್ಲಿ ಕಪ್ಪು ಶಿಲೀಂಧ್ರ ಪತ್ತೆ ಮಾಡಿದ್ದಾರೆ. ಸುಮಾರು 9,000 ಪ್ರಕರಣಗಳ ಮೇಲೆ ಅಧ್ಯಯನ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ ಎಂದಿರುವ ಬಿಬಿಸಿ ಸುದ್ದಿಯ ಸ್ಕ್ರೀನ್‌ಶಾಟ್ ವಾಟ್ಸ್‌ಆ್ಯಪ್ ಸೇರಿದಂತೆ ಹಲವು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡಿತ್ತು. ಸೌತಿಕ್ ಬಿಸ್ವಾಸ್ ಹೆಸರಿನಲ್ಲಿ ಸುದ್ದಿ ಪ್ರಕಟವಾಗಿರುವುದಾಗಿ ಬಿಂಬಿಸಲಾಗಿತ್ತು.
ಫೇಸ್ಬುಕ್‌ನಲ್ಲಿ ವೈರಲ್ ಆಗಿದ್ದ ಬಿಬಿಸಿಯ ಸ್ಕ್ರೀನ್‌ಶಾಟ್‌ಅನ್ನು ಪರಿಶೀಲಿಸಿದ 'ಆಲ್ಟ್ ನ್ಯೂಸ್' ತಿರುಚಲಾದ ಸುದ್ದಿ ಎಂದಿದೆ. 'ಗೂಗಲ್ ಸರ್ಚ್ ಮೂಲಕ ಬಿಬಿಸಿಯಲ್ಲಿ ಅಂತಹ ಸುದ್ದಿ ಬಂದಿದೆಯೇ ಎಂದು ಪರಿಶೀಲಿಸಿದೆವು. ಬಿಬಿಸಿ ವೆಬ್‌ಸೈಟ್‌ನಲ್ಲಿ ಅಂತಹ ಯಾವುದೇ ಸುದ್ದಿ ಪ್ರಕಟವಾಗಿಲ್ಲ ಎಂದು ತಿಳಿದುಬಂತು. ತಲೆಬರಹದಲ್ಲೂ ವ್ಯಾಕರಣ ದೋಷ ಕಂಡುಬಂದಿದ್ದು, ಅಂತಾರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮವೊಂದು ಇಂತಹ ತಪ್ಪನ್ನು ಮಾಡುವುದಿಲ್ಲ' ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಸಿ ವಕ್ತಾರ, 'ಇದು ಫೇಕ್ ಪೋಸ್ಟ್. ನಮ್ಮ ವೆಬ್‌ಸೈಟ್ bbc.com/newsಗೆ ಭೇಟಿ ನೀಡಿ ಪರಿಶೀಲಿಸಬೇಕಾಗಿ ಓದುಗರಲ್ಲಿ ವಿನಂತಿಸಿಕೊಳ್ಳುತ್ತೇವೆ' ಎಂದಿದ್ದಾರೆ.
ಮೇ 9ರಂದು ಕಪ್ಪು ಶಿಲೀಂಧ್ರದ ಬಗ್ಗೆ ಸೌತಿಕ್ ಬಿಸ್ವಾಸ್ ಬರೆದ ವದಿಯನ್ನು ಪ್ರಕಟಿಸಲಾಗಿದೆ. ಮ್ಯೂಕರ್ ಮೈಕೊಸಿಸ್ ಎಂಬುದು ಅಪರೂಪದ ಸೋಂಕು. ಈ ಶಿಲೀಂಧ್ರವು ಸಾಮಾನ್ಯವಾಗಿ ಮಣ್ಣು, ಗಿಡಗಳು, ಗೊಬ್ಬರ ಮತ್ತು ಕೊಳೆಯುತ್ತಿರುವ ಹಣ್ಣು, ತರಕಾರಿಗಳಲ್ಲಿ ಕಂಡುಬರುತ್ತದೆ. ಮ್ಯೂಕರ್ ಮೈಕೊಸಿಸ್‌ನಿಂದ ಸಾಯುತ್ತಿರುವವರ ಸಂಖ್ಯೆ ಶೇ.50 ಇದೆ ಎಂದು ವೈದ್ಯರು ನಂಬಿದ್ದಾರೆ. ಕೋವಿಡ್-19 ಗಂಭೀರ ಪ್ರಕರಣಗಳಲ್ಲಿ ಜೀವ ಉಳಿಸಲು ಸ್ಟಿರಾಯ್ಡ್ ಬಳಸಿದ್ದರಿಂದ ಕಪ್ಪು ಶಿಲೀಂಧರ ಸೋಂಕಿಗೆ ಕಾರಣವಾಗಿರುವ ಸಾಧ್ಯತೆ ಹೆಚ್ಚು ಎಂದು ವಿವರಿಸಲಾಗಿದೆ.
ಇತ್ತೀಚೆಗೆ ಬಿಜೆಪಿಯ ಹಲವು ನಾಯಕರು ಕೊರೊನಾ ಚಿಕಿತ್ಸೆಗೆ ಗೋಮೂತ್ರ ಅರ್ಕ ಪರಿಣಾಮಕಾರಿ ಎಂದು ಅವೈಜ್ಞಾನಿಕ ಔಷಧಿಗಳನ್ನು ಸಲಹೆ ನೀಡುವ ಮೂಲಕ ಟೀಕೆಗೆ ಒಳಗಾಗಿದ್ದರು. ಗೋ ಮೂತ್ರ ಅರ್ಕವು ಕೊರೊನಾ ವೈರಸ್ ಮತ್ತು ಶ್ವಾಸಕೋಶದ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂದು ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಹೇಳಿಕೆ ವಿಚಾರವಾಗಿ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗಿದ್ದವು. ಬೆನ್ನಲ್ಲೇ ಬಿಬಿಸಿಯಿಂದ ಬಂದಿದೆ ಎನ್ನಲಾದ ತಿರುಚಿದ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು. ಗೋಮೂತ್ರದಿಂದ ಕಪ್ಪು ಶಿಲೀಂಧ್ರ ಸೋಂಕು ತಗಲುತ್ತದೆ ಎಂದು ಬಿಂಬಿಸಿ ಸಾಮಾಜಿಕ ತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.
ಇತ್ತೀಚೆಗೆ ಬಿಜೆಪಿ ಶಾಸಕ ಸುರೇಂಧ್ರ ಸಿಂಗ್ ಕೂಡ ಗೋಮೂತ್ರದಿಂದ ಕೊರೊನಾ ನಿವಾರಣೆಯಾಗುತ್ತದೆ ಎಂದಿದ್ದರು. ಇದಕ್ಕೂ ಮೊದಲು ಪ್ರಜ್ಞಾ ಸಿಂಗ್ ಗೋಮೂತ್ರದಿಂದ ಕ್ಯಾನ್ಸರ್ ನಿವಾರಣೆಯಾಗುತ್ತದೆ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.