ADVERTISEMENT

Fact Check: ಖ್ಯಾತ ಹಾಸ್ಯ ನಟ ಟಿಕೂ ತಾಲ್ಸಾನಿಯಾ ಇಸ್ಲಾಂಗೆ ಕನ್ವರ್ಟ್ ಆಗಿಲ್ಲ

ಅವಿನಾಶ್ ಬಿ.
Published 17 ಫೆಬ್ರುವರಿ 2022, 10:38 IST
Last Updated 17 ಫೆಬ್ರುವರಿ 2022, 10:38 IST
   

ರಾಜಾ ಹಿಂದೂಸ್ತಾನೀ, ದಿಲ್ ಹೈ ಕಿ ಮಾನ್‌ತಾ ನಹೀಂ, ಇಷ್ಕ್ ಮುಂತಾದ 90ರ ದಶಕದ ಹತ್ತು ಹಲವು ಪ್ರಮುಖ ಹಿಟ್ ಫಿಲ್ಮ್‌ಗಳಲ್ಲಿ ಪ್ರಸಿದ್ಧಿಗೆ ಬಂದವರು ಬಾಲಿವುಡ್‌ನ ಖ್ಯಾತ ಹಾಸ್ಯನಟ ಟಿಕೂ ತಾಲ್ಸಾನಿಯಾ. ಸಂಜಯ್ ಲೀಲಾ ಭನ್ಸಾಲಿಯವರ ದೇವದಾಸ್ ಚಿತ್ರದಲ್ಲಿ ಧರ್ಮದಾಸ್ ಪಾತ್ರದ ಮೂಲಕವೂ ಅವರು ಗಮನ ಸೆಳೆದಿದ್ದರು. ಇತ್ತೀಚೆಗೆ ಹಂಬಲ್ ಪೊಲಿಟಿಶಿಯನ್ ನೋಗರಾಜ್ ವೆಬ್ ಸರಣಿಯಲ್ಲಿಯೂ ಅವರೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಟಿಕೂ ತಾಲ್ಸಾನಿಯಾ ಅವರು ಇಸ್ಲಾಂಗೆ ಮತಾಂತರವಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು, ಅದರ ಸತ್ಯಾಂಶ ಪರಿಶೀಲನೆಗೆ ಪ್ರಜಾವಾಣಿ ಪ್ರಯತ್ನಿಸಿ, ಯಶಸ್ಸು ಕಂಡಿದೆ.

ಏನಿದು ವೈರಲ್ ಆದ ವಿಚಾರ?
ಮುಸ್ಲಿಂ ಪೋಷಾಕಿನಲ್ಲಿ, ಉದ್ದನೆಯ ಗಡ್ಡ ಹಾಗೂ ಮುಸಲ್ಮಾನರ ಟೋಪಿ ಧರಿಸಿದ ಟಿಕೂ ಅವರ ಚಿತ್ರದ ಸಹಿತವಾಗಿ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದು, ಅವರು ಇಸ್ಲಾಂ ಮತವನ್ನು ಸ್ವೀಕರಿಸಿದ್ದಾರೆ ಎಂಬ ಅಡಿಬರಹವೂ ಇತ್ತು.

ಈ ಕುರಿತ ವಿಡಿಯೊದಲ್ಲಿ, ಮುಸಲ್ಮಾನ ಪೋಷಾಕಿನಲ್ಲಿದ್ದ ಟಿಕೂ ಅವರಲ್ಲಿ ಹುಡುಗಿಯೊಬ್ಬಳು 'ಚಾಚಾ, ಸಲಾಂ ಅಲೈಕುಂ' ಎನ್ನುತ್ತಾಳೆ. ಅದಕ್ಕೆ ಪ್ರತಿಯಾಗಿ ಅವರು, ವಾಲೈಕುಂ ಅಸ್ಸಲಾಂ ಎನ್ನುತ್ತಾರೆ. ಇದೇ ವಿಡಿಯೊ ನೋಡಿದ ಹಲವರು, ಟಿಕೂ ತಾಲ್ಸಾನಿಯಾ ಇಸ್ಲಾಂ ಮತವನ್ನು ಸ್ವೀಕರಿಸಿ ಮುಸಲ್ಮಾನರಾಗಿ ಬದಲಾಗಿದ್ದಾರೆ ಎಂಬರ್ಥದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ವಿಶೇಷವಾಗಿ ಪಾಕಿಸ್ತಾನಿ ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳು ಟ್ವಿಟರ್ ಮತ್ತಿತರ ಕಡೆಗಳಲ್ಲಿ ಉರ್ದು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ದವು. ವಿಶೇಷವಾಗಿ ಫೆ.12ರ ಸುಮಾರಿಗೆ ಪಾಕಿಸ್ತಾನದ ಮಂದಿ ಈ ವಿಷಯದ ಕುರಿತು ಹೆಚ್ಚು ಶೇರ್ ಮಾಡಿಕೊಂಡಿದ್ದರು. ಅವುಗಳ ಸ್ಕ್ರೀನ್ ಶಾಟ್‌ಗಳು ಈ ಕೆಳಗಿವೆ.

ಟಿಕೂ ತಾಲ್ಸಾನಿಯಾ ಮತಾಂತರವಾಗಿದ್ದಾರೆ ಎಂಬ ಪಾಕಿನ ಉರ್ದು ಪತ್ರಿಕೆಗಳ ಟ್ವೀಟ್
ಟಿಕೂ ತಾಲ್ಸಾನಿಯಾ ಮತಾಂತರವಾಗಿದ್ದಾರೆ ಎಂಬ ಪಾಕಿನ ಉರ್ದು ಪತ್ರಿಕೆಯ ಸುದ್ದಿ

ಫೇಸ್‌ಬುಕ್‌ನಲ್ಲಿಯೂ ಇಂಥದ್ದೊಂದು ವಿಚಾರ ಪೋಸ್ಟ್ ಆಗಿದೆ. ಲಿಂಕ್ ಇಲ್ಲಿದೆ.

ಸತ್ಯಾಂಶ ಪರಿಶೀಲನೆ
ಈ ವಿಷಯದ ಬಗ್ಗೆ ಇಂಟರ್ನೆಟ್‌ನಲ್ಲಿ ಜಾಲಾಡಿದಾಗ, ಮತಾಂತರ ಯಾವುದೇ ಸುದ್ದಿ ಮಾಧ್ಯಮಗಳಾಗಲೀ, ಅಧಿಕೃತ ಮಾಹಿತಿಯಾಗಲೀ ದೊರೆಯಲಿಲ್ಲ. ಅವರು ಪ್ರಖ್ಯಾತ ನಟನೂ ಆಗಿರುವುದರಿಂದ ಇದು ಖಂಡಿತಾ ಭಾರತದಲ್ಲಿ, ವಿಶೇಷವಾಗಿ ಉತ್ತರ-ಮಧ್ಯ ಭಾರತದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿರುತ್ತದೆ. ಅಂಥದ್ದೇನೂ ಕಂಡುಬರಲಿಲ್ಲ. ಯಾವುದೇ ಪ್ರಮುಖ ಮಾಧ್ಯಮಗಳೂ ಈ ವಿಷಯವನ್ನು ಪ್ರಕಟಿಸಿಲ್ಲ.

ಆದರೆ, ಈ ಸಂದರ್ಭ ದೊರೆತ ಒಂದು ವಿಡಿಯೊ ತುಣುಕಿನಲ್ಲಿ, ಟೀಕೂ ತಾಲ್ಸಾನಿಯಾ ಅವರು ನಾಟಕವೊಂದರ ಪಾತ್ರಧಾರಿಯಾಗಿ ಈ ಪೋಷಾಕು ಧರಿಸಿದ್ದರು ಎಂಬ ಕುರಿತು ಸುಳಿವು ದೊರೆಯಿತು. ಆಗ ಕಂಡುಬಂದ ವಿಡಿಯೊ ಲಿಂಕ್ ಇಲ್ಲಿದೆ.

ಇದನ್ನು ಫೆ.6ರಂದು ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಆದರೆ,ಅವರ ಹೊಸ ವೆಬ್ ಶೋ ಯಾವುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಲಿಲ್ಲ.

ಟಿಕೂ ತಾಲ್ಸಾನಿಯಾ ಅವರು ಮುಸಲ್ಮಾನ ಪೋಷಾಕಿನಲ್ಲಿ

ಈ ವಿಡಿಯೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ,ವಿಡಿಯೊ ಅಸಲಿ ಎಂಬುದು ಮನದಟ್ಟಾಯಿತು. ಅಂದರೆ ಈ ಭಾಗವನ್ನು ಯಾವುದೇ ರೀತಿ ಎಡಿಟ್ ಮಾಡಿದ್ದಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೆ, ಅವರು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ ಎಂಬ ವಿಷಯದ ಬಗ್ಗೆ ಸಂದೇಹವಿತ್ತು. ಟಿಕೂ ತಾಲ್ಸಾನಿಯಾ ಅವರ ಸೋಷಿಯಲ್ ಮೀಡಿಯಾ ಖಾತೆ ನೋಡಿದಾಗ, ಇಂಥದ್ದೇನೂ ಕಂಡುಬರಲಿಲ್ಲ.

ಹೀಗಾಗಿ, ಪ್ರಮುಖ ಫ್ಯಾಕ್ಟ್ ಚೆಕ್ (ಸತ್ಯ ಸುದ್ದಿ ಶೋಧಿಸುವ) ಸಂಸ್ಥೆ "ವಿಶ್ವಾಸ್ ನ್ಯೂಸ್" ನೆರವಿನಿಂದ ಟಿಕೂ ತಾಲ್ಸಾನಿಯಾ ಅವರನ್ನೇ ನೇರವಾಗಿ ಸಂಪರ್ಕಿಸಿ ಈ ವಿಷಯದ ಕುರಿತು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಲಾಯಿತು.

ಅವರು ಹೇಳಿದ್ದಿಷ್ಟು: ಹೌದು. ಈ ರೀತಿ ಚಿತ್ರ ವೈರಲ್ ಆಗಿದೆ. ಈ ಚಿತ್ರವು ಬಿಬಿಸಿಗಾಗಿ ನಡೆಸಿದ ಸರಣಿಯೊಂದಕ್ಕಾಗಿ ತೊಟ್ಟ ವೇಷವಷ್ಟೇ. ಮತಾಂತರ ಆಗಿದ್ದೇನೆಂಬುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದರು.

ಇದು ಶೀಘ್ರವೇ ಪ್ರಸಾರವಾಗಲಿರುವ ಬಿಬಿಸಿ ಶೋ ಒಂದಕ್ಕಾಗಿ ನಡೆದ ಶೂಟಿಂಗ್‌ನ ವಿಡಿಯೊ. ಒಂದು ಎಪಿಸೋಡ್‌ನಲ್ಲಿ ಟಿಕೂ ಅವರು ಮುಸ್ಲಿಂ ಪಾತ್ರವನ್ನು ನಿಭಾಯಿಸುತ್ತಾರೆ. ಈ ಕಾರಣಕ್ಕೆ ಈ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾರೆ. ಯಾರೋ ವಿಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದಾರೆ, ಅದು ವೈರಲ್ ಆಗಿದೆ. ಈ ಶೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ದೇಶದ ಪ್ರಮುಖ ಮಾಧ್ಯಮ ಸಂಸ್ಥೆಯಾದ ಆಜ್‌ತಕ್ ಸುದ್ದಿ ಸಂಸ್ಥೆಯು ಕೂಡ ವರದಿ ಮಾಡಿದೆ.

ಫಲಿತಾಂಶ: ದಾರಿತಪ್ಪಿಸುವ ಮಾಹಿತಿ
ಟಿಕೂ ತಾಲ್ಸಾನಿಯಾ ಅವರು ಮುಸಲ್ಮಾನ ಪೋಷಾಕಿನಲ್ಲಿ ಕಾಣಿಸಿಕೊಂಡಿದ್ದು ನಿಜ. ಇದು ಬಿಬಿಸಿಯ ವೆಬ್ ಶೋ ಒಂದಕ್ಕಾಗಿ ತೊಟ್ಟ ಪಾತ್ರವಾಗಿದೆ. ಆದರೆ ಟೀಕೂ ತಾಲ್ಸಾನಿಯಾ ಅವರು ಇಸ್ಲಾಂಗೆ ಮತಾಂತರವಾಗಿದ್ದಾರೆ ಎಂಬ ಅಂಶ ಸುಳ್ಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.