ಭಾರತದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿರುವ ಜೈನ ಸಮುದಾಯದವು ದೇಶದ ತೆರಿಗೆ ವ್ಯವಸ್ಥೆಗೆ ಶೇ 24ರಷ್ಟು ಕೊಡುಗೆ ನೀಡುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಸಿಎನ್‌ಬಿಸಿ ಇಂಡಿಯಾದ ಮಾಜಿ ಸಂಪಾದಕ ವರಿಂದರ್ ಬನ್ಸಾಲ್ ಅವರು 2022ರ ಸೆ.19ರಂದು ಟ್ವೀಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಜೈನ ಸಮುದಾಯವು ಶೇ 0.4ರಷ್ಟು ಪ್ರಮಾಣದಲ್ಲಿದ್ದರೂ, ದೇಶದ ಶೇ 28ರಷ್ಟು ಆಸ್ತಿಯನ್ನು ಹೊಂದಿದೆ ಎಂಬುದಾಗಿ ಕೆಲವರು ಟ್ವೀಟ್ ಮಾಡಿದ್ದಾರೆ. ಭಾರತದ ಷೇರು ದಲ್ಲಾಳಿಗಳಲ್ಲಿ ಜೈನರ ಪ್ರಮಾಣ ಶೇ 46ರಷ್ಟಿದೆ ಎಂಬುದಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ. ಆದರೆ, ತೆರಿಗೆಗೆ ಜೈನ ಸಮುದಾಯದ ಭಾರಿ ಕೊಡುಗೆ ವಿಚಾರ ಸುಳ್ಳು.
ದೇಶದ ತೆರಿಗೆ ವ್ಯವಸ್ಥೆಯಲ್ಲಿ ಧರ್ಮದ ಆಧಾರದಲ್ಲಿ ತೆರಿಗೆ ಸಂಗ್ರಹಿಸುವ ಹಾಗೂ ದಾಖಲಿಸುವ ಪದ್ಧತಿ ಇಲ್ಲ ಎಂದು ‘ದಿ ಲಾಜಿಕಲ್ ಇಂಡಿಯನ್’ ವೆಬ್‌ಸೈಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. 2011ರ ಜನಗಣತಿ ಪ್ರಕಾರ, ದೇಶದ ಜನಸಂಖ್ಯೆಯಲ್ಲಿ ಜೈನ ಸಮುದಾಯದವರ ಪ್ರಮಾಣ 0.4ರಷ್ಟಿದೆ. ಆದರೆ, ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಅವರು ಎಷ್ಟು ಪ್ರಮಾಣದ ತೆರಿಗೆ ಪಾವತಿಸಿದ್ದಾರೆ ಎಂಬುದರ ಉಲ್ಲೇಖ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರಕ್ಕೆ ಯಾವುದೇ ಆಧಾರ ಇಲ್ಲ ಎಂದು ವೆಬ್‌ಸೈಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.