ADVERTISEMENT

ಸಚಿನ್ ಮುಂಬೈ ಇಂಡಿಯನ್ಸ್ ತಂಡದ ಮೆಂಟರ್ ಸ್ಥಾನ ತೊರೆದಿದ್ದಾರೆ ಎಂಬುದು ನಿಜವಲ್ಲ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2023, 9:42 IST
Last Updated 20 ಡಿಸೆಂಬರ್ 2023, 9:42 IST
<div class="paragraphs"><p>ಸಚಿನ್‌ ತೆಂಡೂಲ್ಕರ್‌</p></div>

ಸಚಿನ್‌ ತೆಂಡೂಲ್ಕರ್‌

   

ಪಿಟಿಐ ಚಿತ್ರ

ರೋಹಿತ್‌ ಶರ್ಮಾ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿರುವ ಮುಂಬೈ ಇಂಡಿಯನ್ಸ್‌, ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ತಂಡದ ಹೊಣೆ ವಹಿಸಿಕೊಟ್ಟಿದೆ. ಫ್ರಾಂಚೈಸಿಯ ನಿರ್ಧಾರದ ವಿರುದ್ಧ ರೋಹಿತ್‌, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ, ಬ್ಯಾಟಿಂಗ್ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಅವರನ್ನೂ ಮುಂಬೈ ತಂಡದ ಮೆಂಟರ್‌ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ADVERTISEMENT

'ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದ ಮುಂಬೈ ಇಂಡಿಯನ್ಸ್‌, ಇದೀಗ ಸಚಿನ್‌ ತೆಂಡೂಲ್ಕರ್ ಅವರನ್ನೂ ಮೆಂಟರ್‌ ಸ್ಥಾನದಿಂದ ವಜಾ ಮಾಡಿದೆ' ಎಂದು ಬರೆಯಲಾದ ಹಲವು ಟ್ವೀಟ್‌ಗಳು ಹರಿದಾಡುತ್ತಿವೆ.

ಸಚಿನ್‌ ಅವರನ್ನು ವಜಾ ಮಾಡಲಾಗಿದೆ ಎಂಬ ಮಾಹಿತಿಯನ್ನೊಳಗೊಂಡ ಚಿತ್ರಗಳನ್ನು ಹಂಚಿಕೊಂಡಿರುವ ಕೆಲವರು, 'ರೋಹಿತ್‌ ಬದಲು ಹಾರ್ದಿಕ್‌ಗೆ ನಾಯಕತ್ವ ವಹಿಸುವುದು ಅಥವಾ ನಾಯಕತ್ವ ನೀಡುವುದಕ್ಕಾಗಿಯೇ ಅವರನ್ನು ಖರೀದಿಸುವುದು ಸಚಿನ್‌ಗೆ ಇಷ್ಟವಿರಲಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ' ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ಫ್ಯಾಕ್ಟ್‌ಚೆಕ್‌ ಮಾಡಿರುವ ಇಂಡಿಯಾ.ಕಾಂ (India.com), ಇದೊಂದು ಸುಳ್ಳು ಸುದ್ದಿ. ಸಚಿನ್‌ ಅವರು ಮುಂಬರುವ ಆವೃತ್ತಿಗಳಿಗೂ ಮುಂಬೈ ಇಂಡಿಯನ್ಸ್‌ ಜೊತೆಗೆ ಇರಲಿದ್ದಾರೆ ಎಂದು ವರದಿ ಮಾಡಿದೆ. ಐಪಿಎಲ್‌ನ ಮೊದಲ ಆವೃತ್ತಿ 2008ರಲ್ಲಿ ಆರಂಭವಾದಾಗಿನಿಂದಲೂ ಮುಂಬೈ ಜೊತೆಗೆ ಇರುವ ಸಚಿನ್‌, 2013ರ ವರೆಗೆ ತಂಡದಲ್ಲಿ ಆಡಿದ್ದರು.

ಮುಂಬೈ ಪರ 78 ಪಂದ್ಯಗಳಲ್ಲಿ ಆಡಿರುವ ಸಚಿನ್‌, 14 ಅರ್ಧಶತಕ ಹಾಗೂ ಒಂದು ಶತಕ ಸಹಿತ 2,334 ರನ್‌ ಗಳಿಸಿದ್ದಾರೆ.

ನಾಯಕನಾಗಿ ರೋಹಿತ್‌
2013ರಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡಿದ್ದ ರೋಹಿತ್, ಅದೇ ವರ್ಷ ತಮ್ಮ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ನಂತರ 2015, 2017, 2019 ಮತ್ತು 2020ರಲ್ಲಿಯೂ ಚಾಂಪಿಯನ್‌ ಸ್ಥಾನಕ್ಕೇರಿಸಿದ್ದರು.

ಹಾರ್ದಿಕ್‌ ‍ಗುಜರಾತ್‌ನಿಂದ ಮುಂಬೈಗೆ
ಹಾರ್ದಿಕ್‌ ‍ಪಾಂಡ್ಯ ಅವರು ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಕಳೆದ ಎರಡು ಆವೃತ್ತಿಗಳಲ್ಲಿ ಆಡಿದ್ದರು. ಚೊಚ್ಚಲ ಆವೃತ್ತಿಯಲ್ಲೇ (2022) ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಅವರು, 2023ರ ಆವೃತ್ತಿಯಲ್ಲೂ ಫೈನಲ್‌ಗೆ ಕರೆದೊಯ್ದಿದ್ದರು.

ಹೋದ ತಿಂಗಳಷ್ಟೇ ನಡೆದಿದ್ದ ಟ್ರೇಡ್‌ನಲ್ಲಿ ಮುಂಬೈ ತಂಡವು ಪಾಂಡ್ಯ ಅವರನ್ನು ಸೇರ್ಪಡೆ ಮಾಡಿಕೊಂಡಿದೆ. ಮಾತ್ರವಲ್ಲದೆ, ನಾಯಕತ್ವವನ್ನೂ ವಹಿಸಿಕೊಟ್ಟಿದೆ.

ಐಪಿಎಲ್‌ನಲ್ಲಿ ಈವರೆಗೆ 123 ಪಂದ್ಯಗಳಲ್ಲಿ ಆಡಿರುವ ಹಾರ್ದಿಕ್‌, 115 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿ 2,309 ರನ್ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿಯೂ ಮಿಂಚಿರುವ ಅವರು 81 ಇನಿಂಗ್ಸ್‌ಗಳಿಂದ 53 ವಿಕೆಟ್‌ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.