ಬಾಂಗ್ಲಾದೇಶದ ಪ್ರಖ್ಯಾತ ನಟಿ ನಜಿಫಾ ತುಷಿ ಅವರು ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ಯಾವ ಫತ್ವಾವೂ ನನ್ನ ಮನಸ್ಸನ್ನು ಬದಲಿಸಲಾರದು. ಹರಹರ ಮಹಾದೇವ’ ಎಂದು ತುಷಿ ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ. ಇಸ್ಲಾಂ ತೊರೆದ ಬಳಿಕ ಸನಾತನ ಧರ್ಮದಲ್ಲಿ ಧನ್ಯತೆ ಕಂಡಿದ್ದೇನೆ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಬಾಲಕಿಯೊಬ್ಬಳ ಜೊತೆಗೆ ಕಾಣಿಸಿಕೊಂಡಿರುವ ಅವರು ತಮ್ಮ ಹಣೆಗೆ ತಿಲಕ ಇಟ್ಟಿರುವುದು ಕಾಣುತ್ತದೆ. ಆದರೆ ಇದು ಸುಳ್ಳು ಸುದ್ದಿ.
ತುಷಿ ಅವರ ಹೆಸರಿನಲ್ಲಿ ಸೃಷ್ಟಿಸಲಾಗಿರುವ ನಕಲಿ ಟ್ವಿಟರ್ ಖಾತೆಯಲ್ಲಿ ಮತಾಂತರದ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ‘ಇಂಡಿಯಾ ಟುಡೇ’ ಜಾಲತಾಣ ವರದಿ ಮಾಡಿದೆ. ತುಷಿ ಅವರು ಟ್ವಿಟರ್ ಖಾತೆ ಹೊಂದಿಲ್ಲ. ಅವರು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಮಾತ್ರ ಬಳಸುತ್ತಿದ್ದಾರೆ. ಸ್ವತಃ ತುಷಿ ಅವರನ್ನು ಸಂಪರ್ಕಿಸಿದಾಗ, ಮತಾಂತರ ಆಗಿರುವ ಸುದ್ದಿಯನ್ನು ಅವರು ತಳ್ಳಿಹಾಕಿದ್ದಾರೆ. ತಾನು ಇಸ್ಲಾಂ ಧರ್ಮದಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಚಿತ್ರದಲ್ಲಿರುವ ಮಹಿಳೆಗೂ ಹಾಗೂ ತುಷಿ ಅವರ ನೈಜ ಚಿತ್ರದ ಚಹರೆಗೂ ಹೋಲಿಕೆಯಾಗುವುದಿಲ್ಲ ಎಂದು ಜಾಲತಾಣ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.