ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದಕ್ಕಾಗಿ ಶ್ರೀನಗರದ ಸೌರಾದಲ್ಲಿ ಸಾವಿರಾರು ಜನರು ಪ್ರತಿಭಟನೆ ನಡೆಸಿದ್ದಾರೆ ಎಂದು ಬಿಬಿಸಿ ನ್ಯೂಸ್ ಆಗಸ್ಟ್ 10ರಂದು ವರದಿ ಪ್ರಕಟಿಸಿತ್ತು. ಪ್ರತಿಭಟನೆ ವೇಳೆ ಪೊಲೀಸರು ಗುಂಡು ಹಾರಾಟ ಮಾಡಿದ್ದಲ್ಲದೆ ಜನರ ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗ ಮಾಡಿತ್ತು ಎಂದು ಬಿಬಿಸಿ ವರದಿಯಲ್ಲಿತ್ತು.
ಆದರೆ ಈ ರೀತಿಯ ಪ್ರತಿಭಟನೆ ಅಲ್ಲಿ ನಡೆದೇ ಇಲ್ಲ ಎಂದು ಭಾರತ ಸರ್ಕಾರ ಹೇಳಿತ್ತು. ಇತ್ತ ಪ್ರತಿಭಟನಾಕಾರರ ಮೇಲೆ ಪೊಲೀಸ್ ಗುಂಡು ಹಾರಾಟ ನಡೆಸಿತ್ತು ಎಂದು ಬಿಬಿಸಿ ಪಂಬಾಬಿ ವರದಿ ಮಾಡಿದೆ.
ಕೇಂದ್ರ ಸರ್ಕಾರದ ವಿರುದ್ದ ಶ್ರೀನಗರದಲ್ಲಿ ಹಲವಾರು ಜನರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು ಎಂದು ಅಲ್ ಜಜೀರ ಕೂಡಾ ವರದಿ ಮಾಡಿತ್ತು.ಪ್ರತಿಭಟನಾಕಾರರ ಮೇಲೆ ಪೊಲೀಸ್ ಗುಂಡು ಹಾರಿಸಿದ್ದು, ಅಶ್ರುವಾಯ ಮತ್ತು ರಬ್ಬರ್ ಲೇಪಿತ ಸ್ಟೀಲ್ ಬುಲೆಟ್ ಬಳಸಲಾಗಿತ್ತು ಎಂದು ಈ ವರದಿಯಲ್ಲಿ ಹೇಳಲಾಗಿತ್ತು.
ರಾಯಿಟರ್ಸ್ ಸುದ್ದಿಸಂಸ್ಥೆಯ ಪ್ರಕಾರ 370ನೇ ವಿಧಿಯನ್ನು ದುರ್ಬಲಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಆಗಸ್ಟ್ 9ರಂದು ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 10,000 ಮಂದಿ ಭಾಗಿಯಾಗಿದ್ದರು.ಈ ಬಗ್ಗೆ ಪೊಲೀಸ್, ಅಧಿಕೃತ ಮೂಲ ಮತ್ತು ಪ್ರತ್ಯಕ್ಷದರ್ಶಿಗಳಲ್ಲಿ ಮಾತನಾಡಲಾಗಿದೆ ಎಂದು ಪ್ರಸ್ತುತ ಸುದ್ದಿಸಂಸ್ಥೆ ಹೇಳಿತ್ತು.
ಈ ವರದಿಗಳು ಪ್ರಕಟವಾದ ಕೂಡಲೇ ಈ ರೀತಿ 10,000 ಮಂದಿ ಶ್ರೀನಗರದಲ್ಲಿ ಪ್ರತಿಭಟನೆ ಮಾಡಿದ್ದಾರೆ ಎಂಬುದು ತಪ್ಪಾದ ವರದಿ, ಅಲ್ಲಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಕೆಲವೇ ಕೆಲವು ಜನ. 20 ಮಂದಿಗಿಂತ ಹೆಚ್ಚಿರಸಲಿಲ್ಲ ಎಂದು ಗೃಹ ಸಚಿವಾಲಯ ಹೇಳಿಕೆ ನೀಡಿತ್ತು.
ಇದೀಗ ಅಂದರೆ ಆಗಸ್ಟ್ 13ರಂದು ಗೃಹ ಸಚಿವಾಲಯ ಮಾಡಿದ ಟ್ವೀಟ್‌ನಲ್ಲಿ ಶ್ರೀನಗರದ ಸೌರಾದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆದಿತ್ತು ಎಂದಿದೆ.
ಬಿಬಿಸಿ ವರದಿ ತಪ್ಪು ಎಂದು ಹೇಳಿಕೆ ನೀಡಿದ ಮೂರನೇ ದಿನ ಗೃಹ ಸಚಿವಾಲಯ ಸೌರಾದಲ್ಲಿ ಪ್ರತಿಭಟನೆ ನಡೆದಿದೆ ಎಂಬ ವಿಷಯವನ್ನು ಒಪ್ಪಿಕೊಂಡಿದೆ.
ಇಷ್ಟೊತ್ತಿಗೆ ಶ್ರೀನಗರದಲ್ಲಿ ಪ್ರತಿಭಟನೆ ನಡೆದಿರುವುದರ ಬಗ್ಗೆ ಈ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಕಟಿಸಿವೆ ಎಂಬ ವಿಷಯ ರಿಪಬ್ಲಿಕ್ ಟಿವಿ, ಓಪ್‌ಇಂಡಿಯಾ ಮಾಧ್ಯಮಗಳಿಗೆ ಹಾಗೂನಿವೃತ್ತ ಮೇಜರ್ ಗೌರವ್ ಆರ್ಯ, ಮೋಹನ್ ದಾಸ್ ಪೈ, ಅಭಿಜಿತ್ ಮಿಶ್ರಾ ಮೊದಲಾದವರಿಗೆ ಬಿಸಿ ಬಿಸಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತ್ತು.
ಆದರೆ ತಾವು ತಮ್ಮ ವರದಿಯ ವಿಶ್ವಾಸರ್ಹತೆಗೆ ಬದ್ಧರಾಗಿದ್ದೇವೆ ಎಂದು ಬಿಬಿಸಿ ಟ್ವೀಟಿಸಿತ್ತು.
ಬಿಬಿಸಿ ವಿರುದ್ಧ ಟ್ವಿಟರ್‌ನಲ್ಲಿ ಟ್ವೀಟ್ ಆಕ್ರೋಶವೂ ಕಂಡುಬಂದಿತ್ತು.ಕೆಲವೊಬ್ಬರು ಆ ವಿಡಿಯೊ ಭಾರತದ್ದೇ ಅಲ್ಲ ಎಂದುವಾದಿಸಿದ್ದರು.
ಬಿಬಿಸಿ ವರದಿ ಬಗ್ಗೆ ಸರ್ಕಾರ ಮತ್ತು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡಿದ ಆರೋಪ ಹೀಗಿತ್ತು.
* ಶ್ರೀನಗರದಲ್ಲಿ ವ್ಯಾಪಕ ಪ್ರತಿಭಟನೆ ನಡೆದಿಲ್ಲ
*ರಸ್ತೆಯಲ್ಲಿ ಪ್ರತಿಭಟನೆಗಳು ನಡೆದಿದ್ದರೂ ಅದರಲ್ಲಿ 20 ಮಂದಿಗಿಂತ ಹೆಚ್ಚು ಜನರು ಭಾಗವಹಿಸಿರಲಿಲ್ಲ
*ತಪ್ಪಾದ ವರದಿ ಪ್ರಕಟಿಸಲಾಗಿದೆ.
*ಕಾಶ್ಮೀರದಲ್ಲಿನ ವಿಡಿಯೊ ದೃಶ್ಯಗಳಲ್ಲ
*ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಾಟ ನಡೆದಿಲ್ಲ.
ಬಿಬಿಸಿ, ಅಲ್ ಜಜೀರ ಮತ್ತು ರಾಯಿಟರ್ಸ್‌ನಲ್ಲಿ ಪ್ರಕಟವಾದ ಸುದ್ದಿಯ ಸತ್ಯಾಸತ್ಯತೆ ತಿಳಿಯಲುಆಲ್ಟ್ ನ್ಯೂಸ್ ನಡೆಸಿದ ಫ್ಯಾಕ್ಟ್‌ಚೆಕ್ ಹೀಗಿದೆ
1. ಸಮಯ ನೋಡಿ
ವಿಡಿಯೊದ ವಿವಿಧ ಫ್ರೇಮ್‌ಗಳನ್ನು ನೋಡಿದಾಗ ಪ್ರತಿಭಟನಾಕಾರರು ''Abrogation of Article 370 is not acceptable for us Jammu and Kashmir” ಎಂಬ ಪೋಸ್ಟರ್ ಹಿಡಿದಿರುವುದು ಕಾಣುತ್ತದೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದು. ಹಾಗಾಗಿ ಈ ವಿಡಿಯೊ ಹಳೇದು ಅಲ್ಲ, ಅಷ್ಟೇ ಅಲ್ಲದೆ, ಪ್ರತಿಭಟನೆ ನಡೆದಿದೆ ಎಂದು ಗೃಹ ಸಚಿವಾಲಯವೇ ಹೇಳಿದೆ.
2. ಪ್ರತಿಭಟನೆ ನಡೆದ ಸ್ಥಳ
ಕಾಶ್ಮೀರದಲ್ಲಿ ಪ್ರತಿಭಟನೆ ನಡೆದಿಲ್ಲ ಎಂಬ ವಾದ ಸಾಮಾಜಿಕ ಮಾಧ್ಯಮಗಳಲ್ಲಿ ಕೇಳಿ ಬಂದಿತ್ತು. ಇನ್ನು ಕೆಲವರು ಈ ಪ್ರತಿಭಟನೆ ನಡೆದಿದ್ದು ಭಾರತದಲ್ಲಿ ಅಲ್ಲ ಎಂದು ವಾದಿಸಿದ್ದರು. ಆದಾಗ್ಯೂ, ವಿಡಿಯೊದಲ್ಲಿರುವ ದೃಶ್ಯಗಳನ್ನು ನೋಡಿದರೆ ಅದು ಶ್ರೀನಗರದ್ದೇ ಎಂದು ಸಾಬೀತಾಗುತ್ತದೆ.
a)ಜೆನಾಬ್ ಸಾಹೇಬ್ ಮಸೀದಿ
ಬಿಬಿಸಿ ವಿಡಿಯೊ ದೃಶ್ಯದಲ್ಲಿ 1:31ರಿಂದ 1:57 ನಿಮಿಷ ಅವಧಿ ಮಧ್ಯೆ ಮಸೀದಿಯೊಂದು ಕಾಣಿಸುತ್ತದೆ.ಹಸಿರು ಗುಮ್ಮಟಇರುವ ಗೋಪುರದ ಎರಡೂ ಬದಿಗಳು ಹಸಿರು ಮತ್ತು ಬಿಳಿ ಬಣ್ಣದ ಪಟ್ಟಿ ಇರುವ ಇದೇ ಮಸೀದಿ ಅಲ್ ಜಜೀರಾ ವರದಿಯ ವಿಡಿಯೊದಲ್ಲಿ 0:27 ಮತ್ತು 0:36ನೇ ನಿಮಿಷ ಮಧ್ಯೆ ಕಾಣಿಸುತ್ತದೆ.
ಸೌರಾದಲ್ಲಿನ ಮಸೀದಿ ಬಗ್ಗೆ ಹುಡುಕಿದಾಗ ವಿಡಿಯೊದಲ್ಲಿ ಕಾಣಿಸುತ್ತಿರುವ ಮಸೀದಿ ಸೌರಾದ ಅಂಚಾರ್ ಎಂಬಲ್ಲಿರುವ ಜೆನಾಬ್ ಮಸೀದಿ ಆಗಿದೆ. ಇದೇ ಮಸೀದಿ ಅಲ್ ಜಜೀರಪ್ರಕಟಿಸಿದ ಇನ್ನೊಂದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
b). ರಮ್ಜಾನ್ ಮೆಮೊರಿಯಲ್ ಎಜ್ಯುಕೇಶನಲ್ ಟ್ರಸ್ಟ್
ಬಿಬಿಸಿ ವಿಡಿಯೊದ 0:57ನೇ ನಿಮಿಷದಲ್ಲಿ Ramzan Memorial ಎಂಬುದು ಕಾಣಿಸುತ್ತದೆ. ಇದು ಶ್ರೀನಗರದ ಸೌರಾದಲ್ಲಿರುವ ಶೈಕ್ಷಣಿಕ ಸಂಸ್ಥೆಯಾಗಿದೆ.
c). ನೈಸ್ ಬೇಕರಿ
ಬಿಬಿಸಿ ವಿಡಿಯೊದ 00:59 - 1:08 ನಿಮಿಷದ ಮಧ್ಯೆ ನೈಸ್ ಬೇಕರಿ ಬೋರ್ಡ್ ಕಾಣಿಸುತ್ತದೆ. ಈ ಬೇಕರಿ ಸೌರಾದಲ್ಲಿ ಶೇರ್ ಇ ಕಶ್ಮೀರ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (SKIMS) ಆಸ್ಪತ್ರೆಯ ಬಳಿ ಇದೆ.
3. ಈ ಮೂರು ಜಾಗಗಳು 2.5 ಕಿಮಿ ವ್ಯಾಪ್ತಿಯಲ್ಲಿದೆ
ಗೂಗಲ್ ಮ್ಯಾಪ್‌ನಲ್ಲಿ ನೋಡಿದರೆ ಮೇಲೆ ಹೇಳಿದ ಈ ಮೂರು ಸ್ಥಳಗಳು- ಜೆನಾಬ್ ಸಾಹೇಬ್ ಮಸೀದಿ, ರಮ್ಜಾನ್ ಮೆಮೊರಿಯಲ್ ಎಜ್ಯುಕೇಷನ್ ಮತ್ತು SKIMS ಆಸ್ಪತ್ರೆ ನಡೆದು ಹೋಗಬಹುದಾದ ದೂರದಲ್ಲಿವೆ.
4.Sharp Sight ಕಣ್ಣಿನ ಆಸ್ಪತ್ರೆ
ಬಿಬಿಸಿ ವಿಡಿಯೊದಲ್ಲಿ ಮೊದಲ ಕೆಲವು ಸೆಕೆಂಡುಗಳಲ್ಲಿ ಕಾಣಿಸುವ ದೃಶ್ಯವನ್ನು ಗಮನಿಸಿದರೆ, ಜನರು ವೇಗವಾಗಿ ಸಾಗುತ್ತಿರುವಾಗ ಹಿನ್ನೆಲೆಯಲ್ಲಿರುವ ಲ್ಯಾಂಪ್ ಪೋಸ್ಟ್‌ವೊಂದರಲ್ಲಿ ಬೋರ್ಡ್ (ಜಾಹೀರಾತು ಆಗಿರುವ ಸಾಧ್ಯತೆ ಇದೆ) ಕಾಣಿಸುತ್ತದೆ.ವಿಡಿಯೊ ಗುಣಮಟ್ಟ ಅಷ್ಟೊಂದು ಸರಿ ಇಲ್ಲದಿರುವ ಕಾರಣ ಆ ಬೋರ್ಡ್ ಸ್ಪಷ್ಟವಾಗಿ ಕಾಣಿಸುತ್ತಿಲ್ಲ.ಅದರ ಕೆಳಗಿರುವ ಫೋಟೊವೊಂದರಲ್ಲಿ Sharp Sight ಎಂದಿದೆ. ಇದು ಶ್ರೀನಗರದ ಚನ್‌ಪೊರದಲ್ಲಿರುವ ಕಣ್ಣಿನ ಆಸ್ಪತ್ರೆಯ ಹೆಸರು.
ಈ ಫ್ಯಾಕ್ಟ್‌ಚೆಕ್‌ನಿಂದ ತಿಳಿಯುವುದೇನೆಂದರೆ ಬಿಬಿಸಿ ಮತ್ತು ಅಲ್ ಜಜೀರ ಪ್ರಕಟಿಸಿದ ವಿಡಿಯೊ ಶ್ರೀನಗರ ಸೌರಾ ಪ್ರದೇಶದ್ದೇ ಆಗಿದೆ.
370ನೇ ವಿಧಿ ರದ್ದು ಎಂದು ಬರೆದಿರುವ ಬ್ಯಾನರ್, ಕೇಂದ್ರ ಸರ್ಕಾರ ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆಯದ್ದಾಗಿದೆ.
ಪ್ರತಿಭಟನೆಯಲ್ಲಿ 20ಕ್ಕಿಂತ ಹೆಚ್ಚು ಜನ ಇರಲಿಲ್ಲ ಎಂಬ ಗೃಹ ಸಚಿವಾಲಯದ ಹೇಳಿಕೆಯೂ ಸರಿಯಲ್ಲ. ಅಂದಹಾಗೆ ಅಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಬಿಬಿಸಿ ಹೇಳಿದ್ದರೂ ಈ ವಿಷಯವನ್ನು ದೃಢೀಕರಿಸಲು ಸಾಧ್ಯವಾಗಿಲ್ಲ. ಆದರೆ ಕಾಶ್ಮೀರದಲ್ಲಿ ಗುಂಡು ಹಾರಾಟ ನಡೆದಿದೆ ಎಂಬುದನ್ನು ಗೃಹ ಸಚಿವಾಲಯ ನಿರಾಕರಿಸುತ್ತಲೇ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.