ADVERTISEMENT

Fact Check: ನೆತನ್ಯಾಹು ಜೀವರಕ್ಷಣೆಗಾಗಿ ಓಡುತ್ತಿದ್ದಾರೆ ಎಂಬುದು ಸುಳ್ಳು

ಫ್ಯಾಕ್ಟ್ ಚೆಕ್
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
   

ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರು ಕಟ್ಟಡವೊಂದರ ಕಾರಿಡಾರ್‌ನಲ್ಲಿ ಓಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪ್ಯಾಲೆಸ್ಟೀನ್‌ನಲ್ಲಿ ಹಮಾಸ್‌ ಮತ್ತು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಖಂಡಿಸುತ್ತಿರುವ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು, ಹಿಜ್ಬುಲ್ಲಾದ ಮುಖ್ಯಸ್ಥ ನಸರುಲ್ಲಾ ಹಸನ್‌ನನ್ನು ಹತ್ಯೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಇರಾನ್‌ ಸೇನೆಯು ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದ ಸಂದರ್ಭಕ್ಕೆ ಈ ವಿಡಿಯೊವನ್ನು ತಳಕುಹಾಕುತ್ತಿದ್ದಾರೆ. ಈ ವಿಡಿಯೊ ತುಣುಕನ್ನು ‘ಎಕ್ಸ್‌’ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ಬಳಕೆದಾರರು, ‘ಇರಾನ್‌ ದಾಳಿಗೆ ಬೆದರಿದ ನೆತನ್ಯಾಹು ಜೀವರಕ್ಷಣೆಗಾಗಿ ಬಂಕರ್‌ ಕಡೆ ಓಡುತ್ತಿದ್ದಾರೆ’ ಎಂದು ಹೇಳುತ್ತಿದ್ದಾರೆ. ಆದರೆ, ಇದು ಸುಳ್ಳು.

ವಿಡಿಯೊವನ್ನು ಹಲವು ಕೀಫ್ರೇಮ್‌ಗಳಲ್ಲಿ ವಿಭಜಿಸಿ, ಗೂಗಲ್‌ ಲೆನ್ಸ್‌ ಮೂಲಕ ರಿವರ್ಸ್‌ ಇಮೇಜ್‌ ಹುಡುಕಾಟ ನಡೆಸಿದಾಗ, ಇಸ್ರೇಲ್‌ನ ನೌ 14 ಎಂಬ ಮಾಧ್ಯಮದಲ್ಲಿ 2021ರ ಡಿ.14ರಂದು ಪ್ರಕಟವಾದ ವರದಿ ಸಿಕ್ಕಿತು. ಆ ವರದಿಯೊಂದಿಗೆ ಈ ವಿಡಿಯೊ ತುಣುಕಿನ ಸ್ಕ್ರೀನ್‌ಶಾಟ್‌ ಕೂಡ ಇತ್ತು. ಹೀಬ್ರೂ ಭಾಷೆಯಲ್ಲಿದ್ದ ಈ ವರದಿಯ ಜೊತೆಗೆ ಬೆಂಜಮಿನ್‌ ನೆತನ್ಯಾಹು ಅವರು ‘ಎಕ್ಸ್‌’ ಖಾತೆಯಲ್ಲಿ ಮಾಡಿದ್ದ ಪೋಸ್ಟ್‌ ಇತ್ತು. ಆ ಪೋಸ್ಟ್‌ನಲ್ಲಿ ಅವರು ಇದೇ ವಿಡಿಯೊವನ್ನು ಪ್ರಕಟಿಸಿದ್ದರು. ಇಸ್ರೇಲ್‌ ಸಂಸತ್ತಿನ ಕಾರಿಡಾರಿನಲ್ಲಿ ಅವರು ಓಡುತ್ತಿರುವಾಗ ಈ ವಿಡಿಯೊ ಮಾಡಲಾಗಿದೆ. ಆಗ ಅವರು ಪ್ರಧಾನಿಯಾಗಿರಲಿಲ್ಲ. ವಿರೋಧ ಪಕ್ಷದ ನಾಯಕರಾಗಿದ್ದರು. ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿದಾಗ ಅದಕ್ಕೆ ಸಂಬಂಧಿಸಿದಂತೆ ಮತದಾನದಲ್ಲಿ ಭಾಗವಹಿಸುವುದಕ್ಕೆ ಅವರು ಓಡಿದ್ದರು. ನೆತನ್ಯಾಹು ಅವರು 2021ರ ಡಿಸೆಂಬರ್‌ 14ರಂದೇ ಈ ಟ್ವೀಟ್‌ ಮಾಡಿದ್ದರು ಎಂದು ಬೂಮ್‌ಲೈವ್‌ ಫ್ಯಾಕ್ಟ್‌ ಚೆಕ್‌ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT