ADVERTISEMENT

ಫ್ಯಾಕ್ಟ್ ಚೆಕ್: ಗೋವಾದಲ್ಲಿ ಹಡಗು ಮುಳುಗಿ ಹಲವರ ಸಾವು ಎನ್ನುವುದು ಸುಳ್ಳು ಸುದ್ದಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 0:12 IST
Last Updated 14 ಅಕ್ಟೋಬರ್ 2024, 0:12 IST
Goa Boat
Goa Boat   

ಜನರಿಂದ ಕಿಕ್ಕಿರಿದಿರುವ ಹಡಗೊಂದು ನೀರಿನಲ್ಲಿ ಮುಳುಗುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಗೋವಾದಲ್ಲಿ ಸಂಭವಿಸಿರುವ ದುರಂತ ಎಂದೂ, ಅವಘಡದಲ್ಲಿ 23 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 64 ಮಂದಿ ಕಣ್ಮರೆಯಾಗಿದ್ದಾರೆ; 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲಾಣಗಳ ಬಳಕೆದಾರರು ವಿಡಿಯೊ ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ಈ ಬಗ್ಗೆ ಕೀವರ್ಡ್ ಸರ್ಚ್ ಮಾಡಿದಾಗ, ಗೋವಾದ ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯೊಂದು ಸಿಕ್ಕಿತು. ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಗೋವಾಕ್ಕೆ ಸಂಬಂಧಿಸಿದ್ದಲ್ಲ, ಆಫ್ರಿಕಾದ ಕಾಂಗೊ ಗಣರಾಜ್ಯದ್ದು’ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಜತೆಗೆ, ಇಂಥ ವಿಡಿಯೊ ಅನ್ನು ಪರಿಶೀಲನೆ ಮಾಡದೇ ಯಾರೂ ಹಂಚಿಕೊಳ್ಳಬಾರದು ಎಂದೂ ತಾಕೀತು ಮಾಡಿದ್ದಾರೆ. ಇದೇ ವಿಡಿಯೊ ಅನ್ನು ಅಸೋಸಿಯೇಟೆಡ್ ಪ್ರೆಸ್ (ಎಪಿ) ಅಕ್ಟೋಬರ್ 4ರಂದು ಯು ಟ್ಯೂಬ್‌ನಲ್ಲಿ ಹಂಚಿಕೊಂಡಿದ್ದು, ಕಾಂಗೊದಲ್ಲಿ ಹಡಗು ಮುಳುಗಿದ ಘಟನೆ ನಡೆದಿದ್ದು, 78 ಮಂದಿ ಮೃತರಾಗಿದ್ದಾರೆ ಎಂದು ಉಲ್ಲೇಖಿಸಿದೆ. ಹಡಗಿನಲ್ಲಿ 278 ಮಂದಿ ಪ್ರಯಾಣಿಸುತ್ತಿದ್ದರು ಎಂದೂ ವರದಿಯಲ್ಲಿ ತಿಳಿಸಲಾಗಿದೆ. ಆಫ್ರಿಕಾದ ಕಾಂಗೊದಲ್ಲಿ ನಡೆದ ಘಟನೆಯನ್ನು ಗೋವಾದಲ್ಲಿ ನಡೆದಿದೆ ಎಂದು ಕೆಲವರು ಸುಳ್ಳು ಹರಡುತ್ತಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT