ADVERTISEMENT

Fact Check| ನೀರಲ್ಲಿ ಮುಳುಗಿ ಮೃತಪಟ್ಟವರ ಮೇಲೆ ಉಪ್ಪು ಸುರಿದರೆ ಬದುಕುವರೇ?

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:30 IST
Last Updated 7 ಸೆಪ್ಟೆಂಬರ್ 2022, 19:30 IST
   

ಬಾಲಕನೊಬ್ಬನ ದೇಹದ ಮೇಲೆ ಉಪ್ಪಿನ ರಾಶಿ ಇರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಜತೆಯಲ್ಲಿ, ‘ನೀರಿನಲ್ಲಿ ಮುಳುಗಿ ಸತ್ತವರನ್ನು ಬದುಕಿಸುವ ವಿಧಾನವಿದು. ಅಂತಹವರ ದೇಹವನ್ನು 150 ಕೆ.ಜಿ.ಯಷ್ಟು ಉಪ್ಪಿನ ರಾಶಿಯಲ್ಲಿ ಮುಚ್ಚಿ, 3–4 ತಾಸು ಕಾಯಬೇಕು. ಮುಖ ಮಾತ್ರ ಕಾಣುವಂತಿರಬೇಕು. ಅವರ ದೇಹದಲ್ಲಿರುವ ನೀರನ್ನು ಉಪ್ಪು ಹೀರಿಕೊಳ್ಳುತ್ತದೆ. ಇದರಿಂದ ಆ ವ್ಯಕ್ತಿಗೆ ಪ್ರಜ್ಞೆ ಬರುತ್ತದೆ. ಆಗ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬಹುದು. ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರವೂ ಈ ಚಿಕಿತ್ಸೆ ನೀಡಿದರೆ ಅವರು ಬದುಕುಳಿಯುತ್ತಾರೆ’ ಎಂಬ ವಿವರ ನೀಡಲಾಗಿದೆ. ಫೇಸ್‌ಬುಕ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಈ ಪೋಸ್ಟ್‌ ಸಾವಿರಾರು ಸಂಖ್ಯೆಯಲ್ಲಿ ಹಂಚಿಕೆಯಾಗಿದೆ.

‘ಇದು ಸುಳ್ಳು ಸುದ್ದಿ’ ಎಂದು ಇಂಡಿಯಾ ಟುಡೇ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಮನುಷ್ಯನ ದೇಹದಿಂದ ನೀರನ್ನು ಉಪ್ಪು ಹೀರಿಕೊಳ್ಳುವುದಿಲ್ಲ. ನೀರಿನಲ್ಲಿ ಮುಳುಗಿ ಸತ್ತವರನ್ನು ಈ ರೀತಿ ಬದುಕಿಸಲು ಸಾಧ್ಯವಿಲ್ಲ. ಮಿದುಳು ಮತ್ತು ಹೃದಯ ಸಂಪೂರ್ಣ ನಿಷ್ಕ್ರಿಯವಾದ ನಂತರ ಯಾರನ್ನೂ ಬದುಕಿಸಲು ಸಾಧ್ಯವಿಲ್ಲ. ಹೀಗಾಗಿ ನೀರಿನಲ್ಲಿ ಮುಳಿಗಿದವರಿಗೆ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣವೇ ವೈದ್ಯರಲ್ಲಿಗೆ ಒಯ್ಯಬೇಕು. ಉಪ್ಪಿನ ರಾಶಿಯಲ್ಲಿ ಮುಚ್ಚಿ ಇಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಬದಲಿಗೆ, ಬದುಕುಳಿಯುವ ಸಾಧ್ಯತೆ ಇದ್ದವರೂ ಮೃತಪಡುವ ಅಪಾಯಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಈ ರೀತಿ ಮಾಡಿ ಇಬ್ಬರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ ನೀರಿನಲ್ಲಿ ಮುಳುಗಿ ಸತ್ತಿದ್ದ ಬಾಲಕನನ್ನು ಈ ರೀತಿ ಬದುಕಿಸುವ ಯತ್ನ ವಿಫಲವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT