ಟಿ.ವಿ.ಯಲ್ಲಿ ಕ್ರಿಕೆಟ್ ಪಂದ್ಯವೊಂದನ್ನು ವೀಕ್ಷಿಸುತ್ತಿರುವ ವ್ಯಕ್ತಿಯೊಬ್ಬರು, ಇದ್ದಕ್ಕಿಂದ್ದಂತೆ ಟಿ.ವಿ.ಯನ್ನು ಒಡೆದು ಹಾಕುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಈಚೆಗೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ಸೋತಿದ್ದನ್ನು ಸಹಿಸಲಾಗದೆ, ಪಾಕಿಸ್ತಾನದ ಅಭಿಮಾನಿಯೊಬ್ಬರು ಟಿ.ವಿ.ಯನ್ನು ಒಡೆದು ಹಾಕಿದ್ದಾರೆ’ ಎಂದು ವಿಡಿಯೊಗೆ ವಿವರಣೆ ನೀಡಲಾಗಿದೆ. ಇದೊಂದು ಪಂದ್ಯ, ಸೋಲು–ಗೆಲುವನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಇದು ಸುಳ್ಳು ಸುದ್ದಿ.
ಇದು ತಪ್ಪಾದ ಮಾಹಿತಿ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ಈ ವಿಡಿಯೊ 2016ಕ್ಕೆ ಸಂಬಂಧಿಸಿದ್ದಾಗಿದೆ. 2016ರಲ್ಲಿ ನಡೆದಿದ್ದ ಯೂರೊ ಕಪ್ ಫುಟ್‌ಬಾಲ್ ಪಂದ್ಯಾವಳಿಯ ಪಂದ್ಯವೊಂದನ್ನು ವೀಕ್ಷಿಸುವ ವೇಳೆ, ಟರ್ಕಿಯ ಮನೆಯೊಂದರ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದ ವಿಡಿಯೊ ಇದು. ಪಂದ್ಯ ವೀಕ್ಷಣೆ ಸಂಬಂಧ ದಂಪತಿಯ ಮಧ್ಯೆ ಜಗಳವಾಗುತ್ತದೆ. ಪತಿ ಪಂದ್ಯ ವೀಕ್ಷಿಸುವಾಗ ಪತ್ನಿಯು ಟಿ.ವಿ.ಯನ್ನು ಪದೇ ಪದೇ ಆಫ್/ಆನ್ ಮಾಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಪತಿ ಟಿ.ವಿ.ಯನ್ನು ಒಡೆದುಹಾಕುತ್ತಾನೆ. ಮೂಲ ವಿಡಿಯೊ ಯುಟ್ಯೂಬ್‌ನಲ್ಲಿ (Turkish Fan Hidden Camera TV Prank (English Subtitles) EURO 2016) ಲಭ್ಯವಿದೆ. ಆದರೆ, ಮೂಲ ವಿಡಿಯೊದಲ್ಲಿ ಟಿ.ವಿ. ಪರದೆಯ ಮೇಲೆ ಫುಟ್‌ಬಾಲ್ ಪಂದ್ಯ ಪ್ರಸಾರವಾಗುತ್ತಿದೆ. ಪುಟ್‌ಬಾಲ್ ಪಂದ್ಯದ ಬದಲಿಗೆ ಕ್ರಿಕೆಟ್ ಪಂದ್ಯ ಪ್ರಸಾರವಾಗುತ್ತಿರುವಂತೆ ವಿಡಿಯೊವನ್ನು ತಿರುಚಲಾಗಿದೆ. ಆನಂತರ ತಪ್ಪು ಮಾಹಿತಿಯೊಂದಿಗೆ ಅದನ್ನು ಹಂಚಿಕೊಳ್ಳಲಾಗಿದೆ’ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.