ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರು ಅವರ ಪೋಷಕರ ಜತೆ ಇದ್ದಾರೆ ಎನ್ನಲಾಗುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ಕಮಲಾ ಅವರ ಜತೆಯಲ್ಲಿ ಇರುವುದು ಅವರ ತಂದೆ ತಾಯಿ, ಅವರು ಕೂಡ ಕಪ್ಪು ವರ್ಣೀಯರು ಎಂದು ಪ್ರತಿಪಾದನೆ ಮಾಡಲಾಗುತ್ತಿದೆ. ಆದರೆ, ಅದು ಸುಳ್ಳು ಸುದ್ದಿ.
ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಈ ಚಿತ್ರವು ಆಗಸ್ಟ್ 2016ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರ ವೇಳೆ ತೆಗೆದದ್ದು ಎನ್ನುವುದು ತಿಳಿದುಬಂತು. ಭಾರತದಲ್ಲಿ ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ‘ಪ್ರಥಮ್’ ಎನ್ನುವ ಅಮೆರಿಕದ ಸರ್ಕಾರೇತರ ಸಂಸ್ಥೆ ದೇಣಿಗೆ ಸಂಗ್ರಹಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮ ಅದು. ಸಂಸ್ಥೆಯು ಆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿತ್ತು. ಚಿತ್ರದಲ್ಲಿ ಅವರ ಜತೆಗೆ ಇರುವವರು ‘ಪ್ರಥಮ್’ ಸಂಸ್ಥೆಯ ರೋಹಿಣಿ ಪರುಲೇಕರ್ ಮತ್ತು ಅವರ ಗಂಡ ಸುನೀಲ್ ಪರುಲೇಕರ್. ಕಮಲಾ ಅವರ ತಾಯಿ 2009ರಲ್ಲಿಯೇ ತೀರಿಕೊಂಡಿದ್ದಾರೆ. ಅವರು ದಕ್ಷಿಣ ಭಾರತ ಮೂಲದವರು. ಅವರ ತಂದೆ ಜಮೈಕಾದವರು. ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್. ಬೂಮ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.