ADVERTISEMENT

'ಸಂಭ್ರಮಾಚರಣೆ ಮಾಡ್ಬೇಡಿ'- ಕುಮಾರಸ್ವಾಮಿ ಹೇಳಿಕೆ ವಿಡಿಯೊ ತಿರುಚಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 15:05 IST
Last Updated 2 ಮಾರ್ಚ್ 2019, 15:05 IST
   

ಬೆಂಗಳೂರು:'ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆದರೆ ರಸ್ತೆಯಲ್ಲಿ ನಿಂತು ಸಿಹಿ ಹಂಚಿಕೊಡು ಇಲ್ಲ ವಿಜಯ ಪತಾಕೆ ಹಾರಿಸುವ ಮುಖಾಂತರ ನಾಡಿನ ಒಳಗೆ ಮತ್ತು ಮುಂದಿನ ದಿನಗಳಲ್ಲಿ ಎರಡು ಸಮಾಜಗಳ ಮಧ್ಯೆ ಒಂದು ಸಂಘರ್ಷಕ್ಕೆ ದಾರಿ ಮಾಡಿ ಕೊಟ್ಟು ಹಲವಾರು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ವಾತಾವರಣವನ್ನು ನಿಮ್ಮ ಸ್ವಾರ್ಥಕ್ಕಾಗಿ...' ಕುಮಾರಸ್ವಾಮಿ ಹೀಗೆ ಹೇಳುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪಾಕಿಸ್ತಾನಶುಕ್ರವಾರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಹಸ್ತಾಂತರ ಮಾಡಿದ ನಂತರ 29 ಸೆಕೆಂಡ್ ಅವಧಿಯ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ನೆಟಿಜನ್‍ಗಳು ಕುಮಾರಸ್ವಾಮಿ ವಿರುದ್ದ ಟೀಕಾ ಪ್ರಹಾರ ಮಾಡಿದ್ದಾರೆ.

ಶನಿವಾರ ಬೆಳಗ್ಗೆ ಈ ವಿಡಿಯೊವನ್ನು ಟ್ವೀಟ್ ಮಾಡಿದ ಕರ್ನಾಟಕ ಬಿಜೆಪಿ, ಪಾಕಿಸ್ತಾನದ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ್ದಕ್ಕೆ ಸಂಭ್ರಮಾಚರಣೆ ಮಾಡಿದರೆ ಅದು ಭಾರತದಲ್ಲಿರುವ ಎರಡು ಧರ್ಮಗಳ ನಡುವೆ ಸಂಘರ್ಷ ಉಂಟುಮಾಡುತ್ತದೆ ಎಂದು ಕುಮಾರಸ್ವಾಮಿ ಹೇಳುತ್ತಾರೆ.

ADVERTISEMENT

ಕುಮಾರಸ್ವಾಮಿ ಅವರೇ ನೀವು ಭಾರತದ ರಾಜ್ಯವೊಂದರ ಮುಖ್ಯಮಂತ್ರಿ ಪಾಕಿಸ್ತಾನದ್ದು ಅಲ್ಲ ಎಂದು ನೆನಪಿಸುತ್ತೇವೆ. ಈ ಹೇಳಿಕೆ ಮಹಾಘಟಬಂಧನದ ದೇಶ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದೆ.

ಹಲವಾರು ಬಿಜೆಪಿ ನಾಯಕರು ಇದೇ ವಿಡಿಯೊವನ್ನು ಶೇರ್ ಮಾಡಿ ಕುಮಾರಸ್ವಾಮಿ ಅವರನ್ನು ಟೀಕಿಸಿದ್ದಾರೆ.

ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರ ಫೇಸ್‍ಬುಕ್ ಪೋಸ್ಟ್ ಹೀಗಿದೆ.


ಸಿ.ಟಿ ರವಿ ಟ್ವೀಟ್
ಹಾಸನ ಮತ್ತು ಮಂಡ್ಯದ ಮುಖ್ಯಮಂತ್ರಿಯವರೇ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತ ಬಾಂಬ್ ದಾಳಿ ನಡೆಸಿದರೆ ಎರಡು ಸಮುದಾಯಗಳ ನಡುವೆ ಸಂಘರ್ಷವುಂಟಾಗುವುದಕ್ಕೆ ಯಾವುದೇ ಕಾರಣ ನನಗೆ ಕಾಣುತ್ತಿಲ್ಲ.ನೀವು ನಿಮ್ಮ ಮೈತ್ರಿ ಸರ್ಕಾರದ ಕಾಂಗ್ರೆಸ್‍ನವರಂತೆ ಧರ್ಮಗಳ ಹೆಸರು ಹೇಳಿ ಭಾರತೀಯರನ್ನುಯಾಕೆವಿಭಜನೆ ಮಾಡುತ್ತಿದ್ದೀರಿ?

ಶೋಭಾ ಕರಂದ್ಲಾಜೆ ಟ್ವೀಟ್
ಪಾಕಿಸ್ತಾನದಲ್ಲಿರುವ ಉಗ್ರರ ಮೇಲೆ ಬಾಂಬ್ ಹಾಕಿದ್ದಕ್ಕೆ ಭಾರತೀಯರು ಸಿಹಿ ಹಂಚಿ ಸಂಭ್ರಮಿಸುವುದು ಎರಡು ಸಮುದಾಯಗಳ ನಡುವೆ ಸಂಘರ್ಷವನ್ನುಂಟು ಮಾಡುತ್ತದೆ ಎಂದು ಎಚ್‍ಡಿಕೆ ಹೇಳುತ್ತಾರೆ.ಇದು ವೋಟ್ ಬ್ಯಾಂಕ್ ರಾಜಕೀಯ, ಮೋದಿ ಸರ್ಕಾರದ ವಿರುದ್ದ ದ್ವೇಷ ಇದೆ ಎಂದು ಇವರು ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆಯೇ?

ಕುಮಾರ ಸ್ವಾಮಿ ಟ್ವೀಟ್ ಪ್ರತಿಕ್ರಿಯೆ


ನನ್ನ ಹೇಳಿಕೆಯನ್ನು ತಿರುಚಿ ನಿಮಗೆ ಬೇಕಾದಂತೆ ತಿದ್ದಿ ಜನರನ್ನು ತಪ್ಪು ದಾರಿಗೆ ಎಳೆಯುವ ನಿಮ್ಮ ಕೃತ್ಯದ ಬಗ್ಗೆ ನಾಚಿಕೆಯಾಗಬೇಕು, ನನ್ನ ಭಾಷಣದಲ್ಲಿ ನಾನು ಪಾಕ್ ಮೇಲೆ ದಾಳಿ ಮಾಡಿದ್ದು ಸೇನಾಪಡೆ ಅಲ್ಲ, ಬಿಜೆಪಿಯವರು ಎಂಬಂತೆ ಬಿಜೆಪಿ ನಾಯಕರು ಉಡಾಫೆ ತೋರಿಸುತ್ತಿದ್ದಾರೆ ಎಂದಿದ್ದೆ .

ರಾಜಕೀಯ ಲಾಭಕ್ಕಾಗಿ ಈ ರೀತಿ ಹೇಳಿಕೆ ತಿರುಚುವುದು ಅಪಾಯಕಾರಿ.ನಮ್ಮ ಹೀರೋ ಅಭಿನಂದನ್ ಅವರ ಬಗ್ಗೆ ತಿರುಚಿದ ವಿಡಿಯೊ ಮಾಡುವ ಪಾಕಿಸ್ತಾನಿಗಳ ಕೃತ್ಯದಂತೆಯೇ ಇದೆ ನಿಮ್ಮ ಈ ಕೆಲಸ.ರಾಜಕೀಯ ಲಾಭಕ್ಕಾಗಿ ಬಿಜೆಪಿಯವರು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನಾನು ನನ್ನ ಭಾಷಣದಲ್ಲಿ ಹೇಳಿದ್ದೆ.

ನಾನು ಬಿಜೆಪಿ ವಿಚಾರಧಾರೆ ಬಗ್ಗೆ ಹೇಳಿದ್ದೇನೆಯೇ ಹೊರತು ಸೇನೆಯ ಕಾರ್ಯಾಚರಣೆ ಬಗ್ಗೆ ಅಲ್ಲ. ಅಲ್ಲಿ ತಿದ್ದಿರುವ ಮಾತುಗಳನ್ನು ನೀವು ನೋಡಿ.ನಮ್ಮ ನೆರೆ ರಾಷ್ಟ್ರದಂತೆಯೇ ನೀವು ಫೇಕ್ ನ್ಯೂಸ್ ತಜ್ಞರು ಎಂಬುದನ್ನು ಸಾಬೀತು ಪಡಿಸಿ ಬಿಟ್ಟಿರಿ.


ಇದಾದ ನಂತರ ತನ್ನ ಭಾಷಣದ ವಿಡಿಯೊವನ್ನು ಕುಮಾರಸ್ವಾಮಿ ಟ್ವೀಟಿಸಿದ್ದಾರೆ.2.20 ನಿಮಿಷ ಅವಧಿಯ ಈ ವಿಡಿಯೊದಲ್ಲಿ ಕುಮಾರಸ್ವಾಮಿ ಅವರು ಪಾಕಿಸ್ತಾನದ ಮೇಲೆ ಭಾರತ ಬಾಂಬ್ ದಾಳಿ ನಡೆಸಿದ್ದಕ್ಕೆ ಸಂಭ್ರಮಾಚರಣೆ ಮಾಡಿದರೆ ಅದು ಭಾರತದಲ್ಲಿರುವ ಎರಡು ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಯಾವ ಸಂದರ್ಭದಲ್ಲಿ ಹೇಳಿದರು ಎಂಬುದು ಸ್ಪಷ್ಟವಾಗಿ ಇದೆ.

ಫೆಬ್ರುವರಿ 28ರಂದು ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಮಾಡಿದ ಭಾಷಣ ಇದಾಗಿದೆ.

ಭಾಷಣದಲ್ಲಿ ಏನಿದೆ?

'ಜಮ್ಮು ಕಾಶ್ಮೀರದ ಗಡಿಗೆ ಓಪನ್ ಜೀಪ್‍ನಲ್ಲಿ ಹೋದ ಪ್ರಧಾನಿ ದೇವೇಗೌಡರು. ಅವರು ಪ್ರಧಾನಿಯಾಗಿದ್ದಾಗ ಈ ದೇಶದಲ್ಲಿ ಯಾವುದೇ ಒಂದು ಯೋಧರ ಕುಟುಂಬದ ಆ ತಾಯಂದಿರು ವಿಧವೆಯರಾಗಿಲ್ಲ.ಯಾವುದೇ ಒಂದು ಕುಟುಂಬದ ತಂದೆ ತಾಯಂದಿರು ಅನಾಥರಾಗಿರಲಿಲ್ಲ,ಯಾವುದೇ ಒಂದು ದಾಳಿ ಪ್ರಕರಣ ನಡೆದಿಲ್ಲ. ಆದರೆ ಇವತ್ತು ಯಾಕೆ ಇಂಥಾ ಪ್ರಕರಣಗಳು ಆಗುತ್ತಿವೆ? ಇದೆಲ್ಲವನ್ನೂ ತಾವು ತಾಳ್ಮೆಯಿಂದ ಯೋಚನೆ ಮಾಡಬೇಕು. ಒಂದು ಹಳ್ಳಿಯಿಂದ ಬಂದ ರೈತ ಕುಟುಂಬದ, ನೀವು ಬೆಳೆಸಿದಂಥಾ ಮಣ್ಣಿನ ಮಗ, ಕರ್ನಾಟಕದ ಒಬ್ಬ ಕನ್ನಡಿಗ ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಇಡೀದೇಶದಲ್ಲೇ ಒಂದು ಉತ್ತಮವಾದ ವಾತಾವರಣವನ್ನು ಅವರು ನಿರ್ಮಾಣ ಮಾಡಿದ್ದರು.ಇದು ಈ ನಾಡಿಗೆ ಕೊಟ್ಟಂತ ಕೊಡುಗೆ. ಆದರೆ ಇವತ್ತು ಪಾಕಿಸ್ತಾನ ಮತ್ತು ಇಂಡಿಯಾ ದೇಶದ ನಡುವೆ ನಡೆಯುವ ಈ ಸಂಘರ್ಷ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಹೇಳಲಿಕ್ಕೆ ಹೋಗುವುದಿಲ್ಲ.

ಪಾಪ ಬಿಜೆಪಿಯ ಸ್ನೇಹಿತರು ಪಾಕಿಸ್ತಾನಕ್ಕೆ ಹೋಗಿ ಉಗ್ರರ ಮೇಲೆ ಬಾಂಬ್ ಸಿಡಿಸಿದ್ದಾರೆ ಎನ್ನುವ ರೀತಿಯಲ್ಲಿ ರಸ್ತೆಯಲ್ಲಿ ನಿಂತು ಇಲ್ಲಿ ವಿಜಯ ಪತಾಕೆ ಹಾರಿಸುವ ಮುಖಾಂತರ ನಾಡಿನ ಒಳಗೆ ಮತ್ತು ಮುಂದಿನ ದಿನಗಳಲ್ಲಿ ಎರಡು ಸಮಾಜಗಳ ಮಧ್ಯೆ ಒಂದು ಸಂಘರ್ಷಕ್ಕೆ ದಾರಿ ಮಾಡಿ ಕೊಟ್ಟು ಹಲವಾರು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ವಾತಾವರಣವನ್ನು ನಿಮ್ಮಸ್ವಾರ್ಥಕ್ಕೆ ಇವತ್ತು ಬಳಸಿಕೊಳ್ಳುತ್ತಿದ್ದಾರೆ.ಇಂದಿರಾ ಗಾಂಧಿ ಕಾಲದಲ್ಲಿ ಪಾಕಿಸ್ತಾನ, ಚೀನಾದ ವಿರುದ್ಧ ಹೋರಾಟ ಮಾಡಿ ಜಯವನ್ನು ತಂದುಕೊಟ್ಟಿರಲಿಲ್ಲವೇ? ಇವತ್ತು ಬಿಜೆಪಿಯವರೇ ಈ ದೇಶಕ್ಕೆ ರಕ್ಷಣೆ ಕೊಡುವವರು ಬೇರೆ ಯಾರೂ ಕೊಡುವವರಲ್ಲ ಎಂಬ ರೀತಿಯಲ್ಲಿ ನಿಮ್ಮ ಒಂದು ಮುಗ್ಧ ಮನಸ್ಸನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.