ಮಸೀದಿಯೊಂದನ್ನು ಜೆಸಿಬಿಯಿಂದ ಕೆಡವಲಾಗುತ್ತಿರುವ ಹಾಗೂ ರಸ್ತೆಯಲ್ಲಿ ಹಲವು ವಾಹನಗಳು ನಿಂತಿರುವ ವಿಡಿಯೊವಿನ ಸ್ಕ್ರೀನ್‌ಶಾಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಉತ್ತರ ಪ್ರದೇಶದ ಸೈದಾಬಾದ್‌ನಲ್ಲಿ (ಪ್ರಯಾಗ್‌ರಾಜ್) ಮಸೀದಿಯೊಂದರ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿತ್ತು. ಯೋಗಿ ಆದಿತ್ಯನಾಥ ಅವರು ಇಡೀ ಮಸೀದಿಯನ್ನು ನೆಲಸಮಗೊಳಿಸಲು ಆದೇಶಿಸಿದರು. ಪಾಕಿಸ್ತಾನ ಧ್ವಜವನ್ನು ಕೆಳಗಿಸಿ ಎಂದು ಅವರು ಆದೇಶಿಸಬಹುದಿತ್ತು. ಆದರೆ, ಅವರು ಹಾಗೆ ಮಾಡಲಿಲ್ಲ. ದೇಶವಿರೋಧಿಗಳನ್ನು ಯೋಗಿ ಆದಿತ್ಯನಾಥ ಅವರು ಹೀಗೆಯೇ ನಡೆಸಿಕೊಳ್ಳುವುದು. ನಿಮ್ಮ ಧೈರ್ಯಕ್ಕೆ ಮೆಚ್ಚುಗೆ ಯೋಗಿಜೀ ಅವರೆ’ ಎಂದು ಹಲವರು ಸ್ಕ್ರೀನ್‌ಶಾಟ್‌ನೊಂದಿಗೆ ಬರಹವನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.
ಇಂಥದ್ದೇ ಸ್ಕ್ರೀನ್‌ಶಾಟ್‌ಗಳು ಹಾಗೂ ಇಂಥದ್ದೇ ಪೋಸ್ಟ್‌ಗಳು 2023ರ ಜನವರಿಯಲ್ಲಿಯೂ ಹರಿದಾಡಿದ್ದವು. ಇಲ್ಲಿ ಮಸೀದಿಯನ್ನು ನೆಲಸಮಗೊಳಿಸಲಾಗುತ್ತಿದೆ ನಿಜ. ಇದಕ್ಕೆ ಬೇರೆಯದೇ ಕಾರಣ ಇದೆ. ಪಶ್ಚಿಮ ಬಂಗಾಳದ ಹಲ್ದಿಯಾ ನಗರ ಹಾಗೂ ಪ್ರಯಾಗ್‌ರಾಜ್ ಅನ್ನು ಸಂಪರ್ಕಿಸುವ ಜಿಟಿ ರಸ್ತೆಯ ಅಗಲೀಕರಣ ಕಾರ್ಯಕ್ಕಾಗಿ ಮಸೀದಿಯನ್ನು ನೆಲಸಮಗೊಳಿಸಲಾಗಿತ್ತು. ಈ ವೇಳೆ ಮಸೀದಿ ಇರುವ ಪ್ರದೇಶದ ಸುತ್ತಲೂ ಬಿಗಿ ಭದ್ರತೆಯನ್ನು ನಿಯುಕ್ತಿಗೊಳಿಸಲಾಗಿತ್ತು. ನೆಲಸಮಗೊಳಿಸುವ ಬಗ್ಗೆ ಮಸೀದಿಗೆ ನೋಟಿಸ್ ಅನ್ನು ಮೊದಲೇ ನೀಡಲಾಗಿತ್ತು. ಈ ಕುರಿತು ‘ದೈನಿಕ್ ಭಾಸ್ಕರ್’ ಸೇರಿದಂತೆ ಹಲವು ಪತ್ರಿಕೆಗಳು ವರದಿಯನ್ನೂ ಮಾಡಿದ್ದವು. ಪೊಲೀಸರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ, ಮಸೀದಿಯಲ್ಲಿ ಹಾರಿಸಿದ್ದು ಪಾಕಿಸ್ತಾನದ ಧ್ವಜವಾಗಿರಲಿಲ್ಲ. ಅದು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಧಾರ್ಮಿಕ ಧ್ವಜವಾಗಿತ್ತು ಎಂದು ಬೂಮ್‌ಲೈವ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.