ಬೆಂಗಳೂರು: ಶ್ರೀನಗರದಿಂದ ದೆಹಲಿಗೆ ಬರುತ್ತಿರುವ ವಿಮಾನದಲ್ಲಿ ಕುಳಿತಿರುವ ರಾಹುಲ್ ಗಾಂಧಿಯ ಮುಂದೆ ಕಾಶ್ಮೀರಿ ಮಹಿಳೆಯೊಬ್ಬರು ಕಣ್ಣೀರಿಡುತ್ತಿರುವ ವಿಡಿಯೊ ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು.
ಇದೀಗ ಅದೇ ವಿಡಿಯೊ ತಪ್ಪಾದ ವಿವರಣೆಯೊಂದಿಗೆಅಲ್ಲಿ ಮಹಿಳೆ ಹೇಳುತ್ತಿರುವ ವಿಷಯವನ್ನುತಿರುಚಿ ಎಡಿಟ್ ಮಾಡಿರುವ ವಿಡಿಯೊಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವಿಮಾನದಲ್ಲಿ ಕುಳಿತಿರುವ ರಾಹುಲ್‌ಗೆ ಕಾಶ್ಮೀರಿ ಜನರು ಹೇಳಿದ್ದು- ಮೋದಿ ನಮಗೆ ಒಳ್ಳೆಯದನ್ನೇ ಮಾಡುತ್ತಿದ್ದಾರೆ . ನೀವು ಕಾಶ್ಮೀರಕ್ಕೆ ಭೇಟಿ ನೀಡಿ ನಮಗೆ ಯಾಕೆ ತೊಂದರೆ ಕೊಡುತ್ತಿದ್ದೀರಿ. ದಯವಿಟ್ಟು ಹೊರಟು ಹೋಗಿ ಎಂಬ ವಿವರಣೆಯೊಂದಿಗೆ ತಿರುಚಿದ ವಿಡಿಯೊ ವೈರಲ್ ಆಗಿದೆ.
ವಿಡಿಯೊವನ್ನು ಗಮನವಿಟ್ಟು ಕೇಳಿದರೆಕಾಶ್ಮೀರದ ವಿಶೇಷಾಧಿಕಾರ ರದ್ದು ನಂತರ ಅಲ್ಲಿನ ಸ್ಥಿತಿಗತಿ ಬಗ್ಗೆ ಮಹಿಳೆ ಕಣ್ಣೀರಿಡುತ್ತಾ ರಾಹುಲ್‌ಗೆ ವಿವರಿಸುತ್ತಿರುವುದು ತಿಳಿಯುತ್ತದೆ.
ಮಹಿಳೆ ಹೇಳುತ್ತಿರುವ ವಿಷಯ ಫೇಸ್‌ಬುಕ್ ಪೋಸ್ಟ್‌ನಲ್ಲಿರುವ ವಿಡಿಯೊದಲ್ಲಿ ಸ್ಪಷ್ಟವಾಗಿ ಕೇಳುತ್ತಿದ್ದರೂ ಟ್ವಿಟರ್‌ನಲ್ಲಿ ಹರಿದಾಡುತ್ತಿರುವ ವಿಡಿಯೊದಲ್ಲಿ ದನಿ ಎಡಿಟ್ ಮಾಡಿರುವುದು ಗೊತ್ತಾಗುತ್ತದೆ.
ಇದನ್ನೂ ಓದಿ:ಕಾಶ್ಮೀರ ಭೇಟಿ: ಪ್ರತಿಪಕ್ಷ ನಿಯೋಗಕ್ಕೆ ಸಿಗದ ಅವಕಾಶ
ಫ್ಯಾಕ್ಟ್‌ಚೆಕ್
ವಿಮಾನದಲ್ಲಿ ಕುಳಿತಿರುವ ರಾಹುಲ್ ಗಾಂಧಿ ಮುಂದೆ ಕಾಶ್ಮೀರದ ಮಹಿಳೆಯೊಬ್ಬರು ಕಣ್ಣೀರಿಡುತ್ತಿರುವ ವಿಡಿಯೊವನ್ನು ಕಾಂಗ್ರೆಸ್ ಪಕ್ಷದ ನ್ಯಾಷನಲ್ ಮೀಡಿಯಾ ಕೋರ್ಡಿನೇಟರ್ ರಾಧಿಕಾ ಖೇರಾ 2019 ಆಗಸ್ಟ್ 24ರಂದು ಟ್ವೀಟಿಸಿದ್ದರು.
ವಿಡಿಯೊದಲ್ಲಿರುವ ಮಹಿಳೆ ರಾಹುಲ್ ಮುಂದೆ ಕಣ್ಣೀರಿಡುತ್ತಾ ಹೇಳಿದ್ದೇನು?
ಅವರು ತುಂಬಾ ಚಿಕ್ಕ ಮಕ್ಕಳು. ನಮಗೆ ಅವರನ್ನು ನೋಡಬೇಕು. 10ನೇ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳು ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಹೊರಗೆ ಹೋಗಿ ಅವರು ಇನ್ನೊಬ್ಬರನ್ನು ನೋಡಿದರೆ ಅವರನ್ನು ಬಂಧಿಸಲಾಗುತ್ತದೆ. ನನ್ನ ಸಹೋದರ ಹೃದ್ರೋಗಿ. ಮಕ್ಕಳನ್ನು ನೋಡುವುದಕ್ಕೋಸ್ಕರ ಅವರು ಮನೆಯಿಂದ ಹೊರಗಿಳಿದಿದ್ದರು. 10 ದಿನಗಳಾಯಿತು. ಅವರು ಎಲ್ಲಿದ್ದಾರೆ ಹೇಗಿದ್ದಾರೆ ಎಂಬುದರ ಬಗ್ಗೆ ಅವರ ಕುಟುಂಬಗಳಿಗೆ ಗೊತ್ತಿಲ್ಲ. ಪ್ರತಿಯೊಂದು ರೀತಿಯಲ್ಲಿಯೂ ನಮಗೆ ತೊಂದರೆ ನೀಡಲಾಗುತ್ತಿದೆ.
ರಾಹುಲ್ ಮುಂದೆ ಕಾಶ್ಮೀರಿ ಮಹಿಳೆ ಕಣ್ಣೀರಿಡುತ್ತಿರುವ ವಿಡಿಯೊ ಬಗ್ಗೆ ಹಲವಾರು ಮಾಧ್ಯಮಗಳು ಸುದ್ದಿ ಮಾಡಿದ್ದವು. ಕೆಲವು ದಿನಗಳ ಹಿಂದೆಯಷ್ಟೇ ಈ ವಿಡಿಯೊ ವೈರಲ್ ಆಗಿರುವುದರಿಂದ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೊ ತಿರುಚಿದ ವಿಡಿಯೊ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ನಿರ್ಬಂಧ: ವರದಿಗಾರಿಕೆಗೆ ಹೊಸ ದಾರಿ ಕಂಡುಕೊಂಡ ಪತ್ರಕರ್ತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.