ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸದಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ, ಕ್ವಾಡ್ ನಾಯಕರ ಜೊತೆ ಸಭೆ ನಡೆಸಿದ್ದನ್ನು ಭಾರತದ ಮಾಧ್ಯಮಗಳು ವರದಿ ಮಾಡಿದವು. ಹಾಗೆಯೇ ಅಮೆರಿಕ ಪ್ರತಿಷ್ಠಿತ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯು ಸೆ. 26ರ ತನ್ನ ಇಡೀ ಮುಖಪುಟವನ್ನು ಮೋದಿ ಅವರಿಗೆ ಮೀಸಲಿಟ್ಟಿದೆ. ‘ಮೋದಿ ಅವರು ಈ ಭೂಮಿಯ ಕೊನೆಯ ಮತ್ತು ಅತ್ಯುತ್ತಮ ಭರವಸೆ’ ಎಂಬ ಹೆಡ್‌ಲೈನ್‌ನೊಂದಿಗೆ ಮೋದಿ ಅವರ ದೊಡ್ಡ ಚಿತ್ರವನ್ನು ಪ್ರಕಟಿಸಿದೆ ಎಂಬುದರ ಚಿತ್ರ ಮತ್ತು ವಿವರಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ನಲ್ಲಿರುವ ಕೆಲವು ಅಂಶಗಳು ಸಂದೇಹಾಸ್ಪದವಾಗಿವೆ. ಮುಖಪುಟದಲ್ಲಿ ‘ಸೆಪ್ಟೆಂಬರ್’ ಎಂಬುದರ ಸ್ಪೆಲ್ಲಿಂಗ್ ತಪ್ಪಾಗಿ ಬರೆಯಲಾಗಿದೆ. ಹೆಡ್‌ಲೈನ್‌ನಲ್ಲಿ ಬಳಸಿದ ಅಕ್ಷರದ ಸ್ವರೂಪ ಪತ್ರಿಕೆಯ ಎಂದಿನ ರೀತಿಯಲ್ಲಿಲ್ಲ. ಚಿತ್ರದ ಅಡಿಬರಹವು ನೂರು ವರ್ಷಗಳ ಇತಿಹಾಸ ಹೊಂದಿರುವ ಪತ್ರಿಕೆಗೆ ತಕ್ಕುದಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ತಂಡ ಅಭಿಪ್ರಾಯಪಟ್ಟಿದೆ. ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸೆ. 26ರ ಆವೃತ್ತಿಯನ್ನು ಪರಿಶೀಲಿಸಿದಾಗ, ವೈರಲ್ ಆಗಿರುವ ಚಿತ್ರದ ಯಾವ ಅಂಶವೂ ಪತ್ರಿಕೆಯ ಮುಖಪುಟದಲ್ಲಿ ಕಂಡುಬಂದಿಲ್ಲ. ಹೀಗಾಗಿ ಇದು ಕಿಡಿಗೇಡಿಗಳು ಫೋಟೊಶಾಪ್‌ನಲ್ಲಿ ಮಾಡಿದ ದುಷ್ಕೃತ್ಯ ಎಂದು ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.