ADVERTISEMENT

Fact Check | ನಾನು ಹಿಂದೂ ಸಮುದಾಯದ ದೊಡ್ಡ ಅಭಿಮಾನಿ ಎಂದು ಟ್ರಂಪ್ ಹೇಳಿಲ್ಲ

ಫ್ಯಾಕ್ಟ್ ಚೆಕ್
Published 11 ನವೆಂಬರ್ 2024, 2:11 IST
Last Updated 11 ನವೆಂಬರ್ 2024, 2:11 IST
   

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಮಣಿಸುವ ಮೂಲಕ ಡೊನಾಲ್ಡ್ ಟ್ರಂಪ್ ದಾಖಲೆ ನಿರ್ಮಿಸಿದ ನಂತರ ಅವರ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚುನಾವಣೆಯಲ್ಲಿ ಗೆದ್ದ ನಂತರ ಟ್ರಂಪ್ ಅವರು ‘ನಾನು ಹಿಂದೂ ಸಮುದಾಯದ ದೊಡ್ಡ ಅಭಿಮಾನಿ ಮತ್ತು ಭಾರತದ ದೊಡ್ಡ ಅಭಿಮಾನಿ’ ಎಂದು ಹೇಳಿದ್ದಾಗಿ ವಿಡಿಯೊ ಹಂಚಿಕೊಳ್ಳುತ್ತಿರುವವರು ಪ್ರತಿಪಾದಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

ವಿಡಿಯೊ ಅನ್ನು ಇನ್‌ವಿಡ್ ಟೂಲ್ ಸರ್ಚ್ ಮೂಲಕ ಮತ್ತು ಗೂಗಲ್ ಲೆನ್ಸ್ ಮೂಲಕ ಪರಿಶೀಲನೆಗೊಳಪಡಿಸಿದಾಗ, ಹಲವು ಕೀಫ್ರೇಮ್‌ಗಳು ಕಂಡುಬಂದವು. ಇದೇ ವಿಡಿಯೊ ಅನ್ನು ಹಲವರು ಹಂಚಿಕೊಂಡಿರುವುದು ತಿಳಿದುಬಂತು. ಕೀವರ್ಡ್ ಬಳಸಿ ಹುಡುಕಾಟ ನಡೆಸಿದಾಗ, ಇದು ಹಳೆಯ ವಿಡಿಯೊ ಎಂದು ಮಾಧ್ಯಮಗಳು ವರದಿ ಮಾಡಿರುವುದು ಕಂಡುಬಂತು. ಟ್ರಂಪ್ ಅವರ ಈ ಹೇಳಿಕೆಯು 2016ರ  ಅಕ್ಟೋಬರ್ 16ರಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಮತ್ತಷ್ಟು ಹುಡುಕಾಡಿದಾಗ, ಟ್ರಂಪ್ ಅವರ ಹೇಳಿಕೆ ಇರುವ ಪೂರ್ಣ ವಿಡಿಯೊ ಸಿಕ್ಕಿತು. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿದ್ದಾಗ ಧನಸಂಗ್ರಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ್ದ ವಿಡಿಯೊ ಅದು. ಹಳೆಯ ವಿಡಿಯೊ ಅನ್ನು ಸುಳ್ಳು ಪ್ರತಿಪಾದನೆಗಳೊಂದಿಗೆ ಈಗ ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪಿಟಿಐ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT