‘ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಆರೋಪದ ಮೇಲೆ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿದೆ. ಲೋಕಸಭೆಯಿಂದ ಹೊರಹೋಗಲು ನಿರಾಕರಿಸಿದ ಅವರನ್ನು ಪೊಲೀಸರು ಎಳೆದುಕೊಂಡು ಹೋದರು’ ಎಂಬ ವಿವರ ಇರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪೊಲೀಸರು ಮಹುವಾ ಅವರನ್ನು ಹೊತ್ತೊಯ್ಯುತ್ತಿರುವ ದೃಶ್ಯಗಳು ಆ ವಿಡಿಯೊದಲ್ಲಿದೆ. ಆದರೆ ವಿಡಿಯೊ ಜತೆಗೆ ಹಂಚಿಕೊಂಡಿರುವ ಮಾಹಿತಿಗೂ, ವಿಡಿಯೊಗೂ ಸಂಬಂಧವಿಲ್ಲ.
ಲೋಕಸಭೆಯಿಂದ ಮಹುವಾ ಅವರನ್ನು ಉಚ್ಚಾಟನೆ ಮಾಡಿದ್ದು ಇದೇ ಡಿಸೆಂಬರ್ 8ರಂದು. ಆಗ ಮಹುವಾ ಅವರೇ ಲೋಕಸಭೆಯಿಂದ ಹೊರನಡೆದು ಬಂದಿದ್ದರು. ಅವರನ್ನು ಪೊಲೀಸರು ಎಳೆದೊಯ್ದಿದ್ದರು ಎಂಬುದು ಸುಳ್ಳು. ಈ ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೊ ಹಳೆಯದ್ದು. ಇದೇ ಅಕ್ಟೋಬರ್ 4ರಂದು ದೆಹಲಿಯ ಕೃಷಿ ಭವನದ ಎದುರು ಮಹುವಾ ಅವರೂ ಸೇರಿ ಟಿಎಂಸಿಯ ಹಲವು ನಾಯಕರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆಗ ಪೊಲೀಸರು ಅವರನ್ನು ಎಳೆದೊಯ್ದಿದ್ದರು. ಆ ವಿಡಿಯೊವನ್ನೇ ಈಗ ಲೋಕಸಭೆಯಿಂದ ಮಹುವಾ ಅವರನ್ನು ಪೊಲೀಸರು ಎಳೆದೊಯ್ದರು ಎಂಬ ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ದಿ ಕ್ವಿಂಟ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.