ADVERTISEMENT

ಯೋಗಿ ಸರ್ಕಾರ ‘ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿ ಮಾಡಿದೆ ಎಂಬುದು ಸುಳ್ಳು

ಪಿಟಿಐ
Published 14 ಜೂನ್ 2024, 4:36 IST
Last Updated 14 ಜೂನ್ 2024, 4:36 IST
   

‘ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕಾನೂನನ್ನು ಜಾರಿಗೆ ತರಲಾಗಿದೆ. ಎರಡಕ್ಕಿಂತ ಹೆಚ್ಚು ಮಕ್ಕಳು ಇರುವವರಿಗೆ ಸರ್ಕಾರಿ ಉದ್ಯೋಗ ಇಲ್ಲ, ಸರ್ಕಾರಿ ಸವಲತ್ತುಗಳೂ ಇಲ್ಲ. ಅಂತಹವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಂತೆಯೂ ಇಲ್ಲ. ಇನ್ನು ಮುಂದೆ ಓಲೈಕೆ ರಾಜಕಾರಣ ನಡೆಯುವುದಿಲ್ಲ. ಇನ್ನೇನ್ನಿದ್ದರೂ ಆ್ಯಕ್ಷನ್‌ ಮಾತ್ರ’ ಎಂಬ ಸಂದೇಶ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಇದು ಸುಳ್ಳು ಸುದ್ದಿ.

ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ರೂಪಿಸಲು ಉತ್ತರ ಪ್ರದೇಶ ಸರ್ಕಾರ 2021ರಲ್ಲೇ ಮುಂದಾಗಿತ್ತು. ಇದಕ್ಕಾಗಿ ‘ಉತ್ತರ ಪ್ರದೇಶ ಜನಸಂಖ್ಯಾ ನಿಯಂತ್ರಣ ಮಸೂದೆ’ಯ ಕರಡನ್ನೂ ರೂಪಿಸಿತ್ತು. ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಅಂತಹವರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಆ ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈವರೆಗೆ ಈ ಮಸೂದೆಯನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿಲ್ಲ. ವಿಧಾನಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆಯದೆ ಮತ್ತು ರಾಜ್ಯಪಾಲರ ಅಂಗೀಕಾರ ಪಡೆಯದೆ ಯಾವುದೇ ಮಸೂದೆ ಕಾಯ್ದೆಯಾಗುವುದಿಲ್ಲ. ಹೀಗಾಗಿ ಉತ್ತರ ಪ್ರದೇಶ ಸರ್ಕಾರ ಇಂತಹ ಒಂದು ಕಾನೂನನ್ನು ಜಾರಿಗೆ ತಂದಿದೆ ಎಂಬುದು ಸುಳ್ಳು ಸುದ್ದಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT