‘ಪಶ್ಚಿಮ ಬಂಗಾಳದಲ್ಲಿ ಈಚೆಗೆ ನಡೆದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆ ನೇಮಕಾತಿಯಲ್ಲಿ ಬಹುತೇಕ ಮುಸ್ಲಿಮರೇ ಆಯ್ಕೆಯಾಗಿದ್ದಾರೆ. ಈ ಪಟ್ಟಿಯನ್ನು ನೋಡಿ, ಆಯ್ಕೆಯಾದ ಮೊದಲ 50 ಮಂದಿ ಮುಸ್ಲಿಮರೇ ಆಗಿದ್ದಾರೆ’ ಎಂಬ ವಿವರ ಇರುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಪೋಸ್ಟ್ ಜತೆಗೆ ಆಯ್ಕೆ ಪಟ್ಟಿಯನ್ನೂ ಹಂಚಿಕೊಳ್ಳಲಾಗಿದೆ. ‘
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಮಿನಿ ಪಾಕಿಸ್ತಾನವನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಹಿಂದೂಗಳಿಗೆ ಅಲ್ಲಿ ಉಳಿಗಾಲವಿಲ್ಲ’ ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು, ‘ಮಮತಾ ಬ್ಯಾನರ್ಜಿ ಅವರು ಇಲ್ಲಿ ಮಿನಿ ಬಾಂಗ್ಲಾದೇಶ ಸೃಷ್ಟಿಸಲು ಹೊರಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ಪೀಯೂಷ್ ಗೋಯೆಲ್ ಅವರು ಫೇಸ್‌ಬುಕ್‌ನಲ್ಲಿ ಫಾಲೊ ಮಾಡುತ್ತಿರುವ ಅತುಲ್ ಅಹುಜಾ ಅವರೂ ಈ ಇದನ್ನು ಟ್ವೀಟ್ ಮಾಡಿದ್ದಾರೆ.
ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. ‘ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಇರುವ ಚಿತ್ರದಲ್ಲೇ ಆಯ್ಕೆಪಟ್ಟಿಗೆ ಸಂಬಂಧಿಸಿದ ವಿವರ ಇದೆ. ಇದು ಒಬಿಸಿ-ಎ ಕ್ಯಾಟಗರಿಯಲ್ಲಿ (ಇತರೆ ಹಿಂದುಳಿದ ವರ್ಗ-ಎ ವರ್ಗ) ಆಯ್ಕೆಯಾದವರ ವಿವರ ಎಂದು ಆ ಪಟ್ಟಿಯ ಆರಂಭದಲ್ಲೇ ಸ್ಪಷ್ಟವಾಗಿ ನಮೂದಿಸಲಾಗಿದೆ. ಇದನ್ನು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ. ಈ ಆಯ್ಕೆ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗದಲ್ಲಿ 366, ಒಬಿಸಿ-ಎ ವರ್ಗದಲ್ಲಿ 112 ಮಂದಿ, ಒಬಿಸಿ-ಬಿ ವರ್ಗದಲ್ಲಿ 58 ಮಂದಿ, ಪರಿಶಿಷ್ಟ ಜಾತಿಯ 147 ಮತ್ತು ಪರಿಶಿಷ್ಟ ಪಂಗಡದ 40 ಮಂದಿ ಆಯ್ಕೆಯಾಗಿದ್ದಾರೆ. ಮುಸ್ಲಿಮರು ಒಬಿಸಿ-ಎ ವರ್ಗದಲ್ಲಿ ಆಯ್ಕೆಯಾಗಿದ್ದಾರೆ’ ಎಂದು ಆಲ್ಟ್‌ನ್ಯೂಸ್ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.