ADVERTISEMENT

Fact Check: ಸಾವರ್ಕರ್‌ ಚಿತ್ರ ಆಸ್ಕರ್‌ಗೆ ಸಲ್ಲಿಕೆಯಾಗಿದೆ ಎನ್ನುವುದು ಸುಳ್ಳು

ಫ್ಯಾಕ್ಟ್ ಚೆಕ್
Published 30 ಸೆಪ್ಟೆಂಬರ್ 2024, 23:30 IST
Last Updated 30 ಸೆಪ್ಟೆಂಬರ್ 2024, 23:30 IST
   

ಈ ವರ್ಷದ ಮಾರ್ಚ್‌ ತಿಂಗಳಲ್ಲಿ ಬಿಡುಗಡೆಯಾದ ‘ಸ್ವಾತಂತ್ರ್ಯ ವೀರ ಸಾವರ್ಕರ್‌’ ಚಿತ್ರವು 2024ರ ಆಸ್ಕರ್‌ಗೆ ಅಧಿಕೃತವಾಗಿ ಭಾರತದಿಂದ ಸಲ್ಲಿಕೆಯಾಗಿದೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಈ ಚಿತ್ರದ ನಿರ್ಮಾಣ ಮಾಡಿದವರೇ, ‘ನಮ್ಮ ಚಿತ್ರ ‘ಸ್ವಾತಂತ್ರ್ಯ ವೀರ ಸಾವರ್ಕರ್‌’ ಅಧಿಕೃತವಾಗಿ ಆಸ್ಕರ್‌ಗೆ ಸಲ್ಲಿಕೆಯಾಗಿದೆ.  ಈ ಮೆಚ್ಚುಗೆಗಾಗಿ ಭಾರತೀಯ ಚಲನಚಿತ್ರ ಒಕ್ಕೂಟಕ್ಕೆ (ಎಫ್‌ಎಫ್‌ಐ) ಧನ್ಯವಾದ’ ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದರು. ಇದನ್ನು ಹಲವರು ಹಂಚಿಕೊಂಡಿದ್ದರು. ಮಾಧ್ಯಮಗಳೂ ವರದಿ ಮಾಡಿದ್ದವು. ಆದರೆ, ಇದು ವಾಸ್ತವ ಅಲ್ಲ. 

ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆಸ್ಕರ್‌–2024 ಎಂದು ಉಲ್ಲೇಖಿಸಲಾಗಿದೆ. 96ನೇ ಆವೃತ್ತಿಯ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಈ ವರ್ಷದ ಮಾರ್ಚ್‌ ತಿಂಗಳಲ್ಲೇ ನಡೆದಿದೆ. ಮುಂದಿನ ವರ್ಷದ (97ನೇ ಆವೃತ್ತಿ) ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ 2025ರ ಮಾರ್ಚ್‌ 2ರಂದು ನಡೆಯಲಿದೆ. ಹಾಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್‌ನಲ್ಲಿ ಯಾವುದೇ ಅರ್ಥ ಇಲ್ಲ. ಅದಲ್ಲದೇ,  2025ರ ಆಸ್ಕರ್‌ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೇಶನಗೊಂಡಿರುವ ಏಕೈಕ ಚಿತ್ರ ‘ಲಪಾತಾ ಲೇಡಿಸ್‌’.

ಸೆ.23ರಂದು ಎಫ್‌ಎಫ್‌ಐ ಇದನ್ನು ಘೋಷಿಸಿದೆ. ಎಫ್‌ಎಫ್‌ಐನಿಂದ ವೀರ ಸಾವರ್ಕರ್‌ ಚಿತ್ರ ಅಧಿಕೃತವಾಗಿ ಸಲ್ಲಿಕೆಯಾಗಿರುವ ವರದಿಗಳನ್ನು ಅದರ ಅಧ್ಯಕ್ಷ ರವಿ ಕೊಟ್ಟಕರ ಅವರು ನಿರಾಕರಿಸಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿರುವುದನ್ನು ಉಲ್ಲೇಖಿಸಿರುವ ಆಲ್ಟ್‌ ನ್ಯೂಸ್‌ ಫ್ಯಾಕ್ಟ್‌ ಚೆಕ್‌ ವರದಿಯು, ಚಿತ್ರ ತಂಡದ ಪೋಸ್ಟ್‌ ದಾರಿ ತಪ್ಪಿಸುವಂಥದ್ದು ಎಂದು ಹೇಳಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.