‘ಗುಬ್ಬಿ ತಾಲ್ಲೂಕು ದೊಡ್ಡಗುಣಿ ಬಳಿ ಇರುವ ತಗ್ಗಿಹಳ್ಳಿ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡ ವಿಚಿತ್ರ ಪ್ರಾಣಿ. ಈ ಸೃಷ್ಟಿಯಲ್ಲಿ ಇನ್ನೂ ಏನೇನಿದೆಯೋ ಬಲ್ಲವರಾರು’ ಎಂಬಂತಹ ಪೋಸ್ಟ್ ಕಳೆದ ಮೂರು ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹುಲ್ಲು ಪ್ರದೇಶದಲ್ಲಿ ಬೆಟ್ಟದಿಂದ ಇಳಿಯುತ್ತಿರುವ ಪ್ರಾಣಿಯ 17 ಸೆಕೆಂಡಿನ ವಿಡಿಯೊವನ್ನು ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ಈ ವಿಡಿಯೊದಲ್ಲಿರುವ ಪ್ರಾಣಿಯ ಹೆಸರು ಜೈಂಟ್ ಆ್ಯಂಟ್‌ಈಟರ್. ಇದು ಸವನ್ನಾ ಹುಲ್ಲುಗಾವಲು ಪ್ರದೇಶದಲ್ಲಿ ಕಾಣಸಿಗುತ್ತದೆ. ಜೊತೆಗೆ, ಮೆಕ್ಸಿಕೊದ ದಕ್ಷಿಣ ಭಾಗದಲ್ಲಿರುವ ಕಾಡುಗಳಲ್ಲಿ, ಬ್ರೆಜಿಲ್‌ನ ಪೆರುಗ್ವೆ ಹಾಗೂ ಅರ್ಜೆಂಟೀನಾದ ಉತ್ತರ ಭಾಗದ ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಇರುವೆ, ಗೊದ್ದಗಳಂತಹ ಕೀಟಗಳನ್ನು ತಿಂದು ಈ ಪ್ರಾಣಿ ಜೀವಿಸುತ್ತದೆ. ಈ ಪ್ರಾಣಿಯ ನಾಲಿಗೆಯು 24 ಇಂಚು ಉದ್ದದ ಇರುತ್ತದೆ. ನಾಲಿಗೆಯಲ್ಲಿನ ಜೊಲ್ಲಿಗೆ ಕೀಟಗಳು ಅಂಟಿಕೊಳ್ಳುತ್ತವೆ. ಭಾರತದಲ್ಲಿ ಕಾಣಸಿಗುವ ಚಿಪ್ಪುಹಂದಿ ಜಾತಿಗೆ ಈ ಪ್ರಾಣಿಯು ಸೇರುತ್ತದೆ. ‘ಪೋಸ್ಟ್‌ನಲ್ಲಿ ಹೇಳಿರುವಂತೆ ಈ ಪ್ರಾಣಿಯು ಭಾರತದಲ್ಲಿ ಎಲ್ಲಿಯೂ ಇಲ್ಲ. ಇದೊಂದು ಸುಳ್ಳು ಸುದ್ದಿ’ ಎಂದು ತುಮಕೂರಿನ ಅರಣ್ಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.